ಅಮ್ಮನು ಮಾಡುವ ಅನ್ನೆ ಸೊಪ್ಪಿನ ಮಜ್ಜಿಗೆ ಸಾರನ್ನು ನೆನೆದರೆ ಈಗಲೂ ಬಾಯಲ್ಲಿ ನೀರೂರಿಸುತ್ತದೆ. ಚಳಿಗಾಲಕ್ಕೆ ಸವಿಯಲು ಅತ್ಯಂತ ರುಚಿಕರವಾದ ಖಾದ್ಯ. ಅಷ್ಟೇ ಅಲ್ಲದೆ ಅನ್ನೆ ಸೊಪ್ಪಿನಿಂದ ಮಾಡಿದ ಪಲ್ಯ ಸಾರು ಇತ್ಯಾದಿಗಳು ನಾಲಿಗೆಗೆ ಮುದವನ್ನು ನೀಡುತ್ತದೆ.
ಅನ್ನೆ ಸೊಪ್ಪು ಬಹಳ ವಿಶೇಷವಾದದ್ದು ಏಕೆಂದರೆ ಹೊಲದಲ್ಲಿ ಅಲ್ಲಲ್ಲಿ ಬೆಳೆಯುವ ಸಸ್ಯವಾಗಿದೆ. “ಐಪೊಮೊಯಿ ಅಕ್ವಾಟಿಕಾ” (Ipomoea Aquatica) ಎಂಬ ವೈಜ್ಞಾನಿಕ ಹೆಸರುಳ್ಳ ಉಭಯಚರ ಸಸ್ಯವಾಗಿದ್ದು ಇದನ್ನು ಆಂಗ್ಲ ಭಾಷೆಯಲ್ಲಿ “ವಾಟರ್ ಸ್ಪಿನಾಚ್” (Water Spinach) ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗಿ ಕಂಡು ಬರುವ ಈ ಸಸ್ಯವು ಭಾರತದ ಮಾರುಕಟ್ಟೆಯಲ್ಲಿ ದೊರಕುವುದು ಬಹಳ ವಿರಳ.
ತೇವಾಂಶದಿಂದ ಕೂಡಿದ ನೆಲದಲ್ಲಿ ಬೆಳೆಯುವ ಈ ಸಸ್ಯವು ಹಳ್ಳಿ ಜನರಿಗೆ ಚಿರಪರಿಚಿತವಾದದ್ದು. 2 – 3 ಮೀಟರ್ ಉದ್ದ ಬೆಳೆಯುವ ಈ ಸಸ್ಯದ ಎಲೆಗಳು ತುಂಬೆ ಎಲೆಗಳಂತೆ ಅಗಲ ಕಡಿಮೆ ಹಾಗು ಉದ್ದವಾಗಿ ಬೆಳೆಯುತ್ತದೆ. ಬಿಳಿಯ ಹೂಗಳಿಂದ ಕೂಡಿದ ಸಸ್ಯದ ಬೀಜಗಳು ಉದುರಿ ಮತ್ತೆ ಮಳೆಗಾಲಕ್ಕೆ ಚಿಗುರೊಡೆಯುತ್ತವೆ.
ಅನ್ನೆ ಸೊಪ್ಪನ್ನು ಸಿಂಗಾಪುರ, ಮಲೇಷಿಯಾ, ದೇಶಗಳಲ್ಲಿ ಮೀನಿನ ಜೊತೆ ಖಾದ್ಯ ಮಾಡಲು ಮತ್ತು ಫ್ರೈಡ್ ರೈಸ್ ಮಾಡಲು ಉಪಯೋಗಿಸಲಾಗುತ್ತದೆ. ಪಲವತ್ತಾದ ಭೂಮಿಯಲ್ಲಿ ಬೆಳೆಯುವ ಕಾರಣ ಇದರಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಸೋಡಿಯಂ, ಮ್ಯಾಗ್ನಿಷಿಯಂ ನಂತಹ ಬಹಳಷ್ಟು ಪೌಷ್ಟಿಕಾಂಶಗಳು ತುಂಬಿರುತ್ತದೆ.
ಅನ್ನೆ ಸೊಪ್ಪಿನಲ್ಲಿ ಹೆಚ್ಚಾಗಿ ವಿಟಮಿನ್ ‘ಎ’ ಹಾಗು ವಿಟಮಿನ್ ‘ಸಿ’ ಸಿಗುವುದರಿಂದ ಕಣ್ಣು, ಮೆದುಳು, ಹಾಗೂ ಚರ್ಮದ ಆರೋಗ್ಯವನ್ನು ವೃದ್ಧಿಸಬಲ್ಲದು. ದೇಹದಲ್ಲಿ ಸೇರಿರುವ ಕೊಬ್ಬನ್ನು ಕರಗಿಸಿ ತೂಕವನ್ನು ಇಳಿಸಲು ಬಹಳ ಸಹಕಾರಿ. ಲಿವರ್ ಕಾಯಿಲೆಗಳು ಹಾಗೂ ಜಾಂಡಿಸ್ ನಂತಹ ಖಾಯಿಲೆ ಉಳ್ಳವರು ಸೇವಿಸುತ್ತಾ ಬಂದರೆ ಕ್ರಮೇಣ ರೋಗ ಲಕ್ಷಣಗಳು ದೂರಾಗುತ್ತದೆ.
ಅಜೀರ್ಣ, ಮೂಲವ್ಯಾದಿಗಳನ್ನು ಗುಣಪಡಿಸುವುದಕ್ಕೆ ಕಾರಣವೆಂದರೆ ಇದರಲ್ಲಿರುವ ಹೇರಳವಾದ ನಾರಿನ ಅಂಶ (fibre), ರಕ್ತಹೀನತೆಯುಳ್ಳವರಿಗಂತೂ ಅತಿ ಉಪಯುಕ್ತ. ಕ್ಯಾನ್ಸರ್ ನಂತಹ ಖಾಯಿಲೆಗಳಿಂದ ನಮ್ಮನ್ನು ಸಂರಕ್ಷಿಸುವುದಲ್ಲದೆ ಹೃದಯ ಸಂಬಂಧಿ ರೋಗಗಳನ್ನು ಗುಣಪಡಿಸಬಲ್ಲದು.
ಮತ್ತೇಕೆ ತಡ, ಅನನ್ಯ ಕೊಡುಗೆಗಳುಳ್ಳ ಅನ್ನೆ ಸೊಪ್ಪನ್ನು ತರುವ ನೆಪ ಮಾಡಿಯಾದರೂ ಹಳ್ಳಿಗಳತ್ತ ದಾರಿ ಬೆಳಸಿ, ಹಳ್ಳಿಯ ಸೊಬಗನ್ನು ಕಣ್ತುಂಬಿಕೊಳ್ಳೋಣ.
ಶಿಲ್ಪ
1 Comment
👌