ಪರಾಭವ ಭಾವನಾ – 17 ಯತಿರಾಜ್ ವೀರಾಂಬುಧಿ

ಹಿಂದಿನ ಸಂಚಿಕೆಯಿಂದ…
ಡ್ರೈವರ್ ರೂಪದಲ್ಲಿದ್ದ ಶ್ಯಾಮ್ ಗೆ ಅಪ್ರಮೇಯನನ್ನು ಕೊಲ್ಲಲು ಶಾರ್ಪ್ ಶೂಟರ್ ಆಗಮಿಸಿರುವ ಸುದ್ದಿ ಕಳವಳನ್ನುಂಟು ಮಾಡಿತ್ತು. ಆದರಿಂದ ಪುಣೆ ಗೆ ತಾನು ಬರುವೆನು ಎಂದು ಅಪ್ರಮೇಯನ ಜೊತೆಯಲ್ಲೇ ಹೊರಟ. ಮುಂದೆ…

ಹದಿನೇಳು–

ರಸ್ತೆಯ ಮೇಲೆ ಕಾರೋಡುತ್ತಿತ್ತು. ಅಪ್ಪುವಿನ ಮನಸ್ಸು ಈಗ ಬಹಳವೇ ಶಾಂತವಾಗಿತ್ತು.

ಸಾಯಲು ಸಿದ್ಧನಾದ ಮೇಲೆ ಬೇರೆಲ್ಲವೂ ಗೌಣವಾಗಿಬಿಡುವುದೆಂಬ ವಿಷಯ ಅವನಿಗೆ ತಿಳಿದಿತ್ತು.

ನೆನ್ನೆ ಡ್ರೈವರ್‌ ಶ್ಯಾಮ್‌ ಬಳಿ ವಾಸಾಂಸಿ ಜೀರ್ಣಾನಿ ಶ್ಲೋಕವನ್ನು ಹೇಳಿದ ಮೇಲೆ ಅವನ ಮನಸ್ಸಿನಲ್ಲಿ ಜಾತಸ್ಯ ಹಿ ಧ್ರುವೋ ಮೃತ್ಯುಃ| ಧ್ರುವಂ ಜನ್ಮ ಮೃತಸ್ಯ ಚ||

ತಸ್ಮಾದಪರಿಹಾರ್ಯೇsರ್ಥೇ ನ ತ್ವಂ ಶೋಚಿತುಮರ್ಹಸಿ||

ಈ ಭೂಲೋಕದಲ್ಲಿ ಹುಟ್ಟಿದವನಿಗೆ ಸಾವು ಖಚಿತ, ಸತ್ತವನಿಗೆ ಮತ್ತೆ ಹುಟ್ಟುವಿಕೆ ನಿಶ್ಚಿತ.
ಮಾನವ ಎಷ್ಟೇ ವರ್ಷ ಬದುಕಿದರೂ ಎಷ್ಟೇ ವರ್ಷ ಆರೋಗ್ಯದಿಂದ ಇದ್ದರೂ ಸಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.  ಹಾಗಿರುವಾಗ ಅದಕ್ಕಾಗಿ ಯಾರೂ ಮರುಗಬಾರದು. ಆತ್ಮನನ್ನು ಹುಟ್ಟುವವನು ಮತ್ತು ಸಾಯುವವನು ಎಂದುಕೊಂಡರೆ ಅದು ತನ್ನ ಅಜ್ಞಾನವನ್ನು ಒಪ್ಪಿಕೊಂಡಂತೆ. ಕೃಷ್ಣ ಹೇಳಿರುವುದೇನು? ದುಃಖಿಸುವುದು ದಡ್ಡತನ, ನಗುವುವು ವಿವೇಕ. ಆದ್ದರಿಂದ ಸದಾ ನಗುತ್ತಾ ಇರು ಎಂದಿದ್ದಾನೆ ಗೀತಾಚಾರ‍್ಯ.

ಬಂದದ್ದೆಲ್ಲಾ ಬರಲಿ, ಆ ಗೋವಿಂದನ ಕರುಣೆಯೊಂದಿರಲಿ ಎಂದುಕೊಂಡ ಅಪ್ರಮೇಯ.

ದಾರಿಯಲ್ಲಿ ಕಂಡಿತೊಂದು ಗುಡಿ. ಮನಸ್ಸಿಗೆ ಬಹಳ ಮುದವಾಯಿತು.

ಅದೊಂದು ಶ್ರೀಕೃಷ್ಣನ ಗುಡಿ. ಬಹುಶಃ ಬಹಳ ಹಳೆಯ ಕಾಲದ್ದು ಅದು. ಹೆಚ್ಚು ಜನರು ಕೂಡ ಕಾಣಿಸಲಿಲ್ಲ.

ಆದರೆ ಅಪ್ರಮೇಯ ಕಾರಿನಿಂದಿಳಿದೊಡನೆ ಅವನ ಕಾವಿ ವೇಷ ಕಂಡು ಅಲ್ಲಿಯೇ ಇದ್ದ ಅರಳಿಕಟ್ಟೆಯ ಮೇಲೆ ಕುಳಿತಿದ್ದ ಕೆಲವು ಜನರು ಟಕ್ಕನೆ ಅವರ ಕುಟುಂಬ, ಬಂಧುಮಿತ್ರರಿಗೆ ಮೊಬೈಲ್‌ ಕರೆ ಮಾಡಿದರು.

ದಿನವೂ ನಡೆಯುವಂತಹ ಕಾರ್ಯಕ್ರಮವಲ್ಲ ಅದು. ಏಕೆಂದರೆ ಆ ದೇವಸ್ಥಾನವನ್ನು ದರ್ಶನ ಮಾಡಲು ಬರುವ ಹೊರಗಿನ ಜನರು ಕಡಿಮೆ. ಬಂದ ಪುರುಷರೆಲ್ಲಾ ಪ್ಯಾಂಟು, ಷರಟು ಧರಿಸಿದವರೇ. ದೇವಸ್ಥಾನದ ಎದುರಿನ ಅರಳೀಕಟ್ಟೆಯ ಪಕ್ಕದಲ್ಲಿ ಮಾರಲ್ಪಡುವ ಹಣ್ಣು, ಹಣ್ಣಿನ ರಸಕ್ಕಾಗಿ ಬರುವ ಜನರವರು.

ಆದರೆ ಇಂದು ಒಬ್ಬ ಪರಿವ್ರಾಜಕ ಬಂದಿದ್ದಾರೆ. ನೋಡಲು ಇನ್ನೂ ಸಣ್ಣ ಪ್ರಾಯದವರು. ಜೊತೆಗೆ ಒಂದು ದೈವೀಕ ಕಳೆ ಇದೆ ಅವರ ಮುಖದಲ್ಲಿ.

ಅಪ್ರಮೇಯ ಒಳಗೆ ಹೋಗಿ ಗರ್ಭಗುಡಿಯಲ್ಲಿದ್ದ ಮೂರ್ತಿಯನ್ನು ಕಂಡು ಭ್ರಮಾಧೀನನಾದ. ಅವನಿಗೆ ದಕ್ಷಿಣದ ಊತುಕ್ಕಾಡುವಿನಲ್ಲಿ ಒಂದು ಮೂರ್ತಿ ಇದೆ ಎಂದು ತಿಳಿದಿತ್ತು. ಆದರೆ ಉತ್ತರ ಭಾರತದಲ್ಲಿ ಕಾಳಿಂಗ ಮರ್ದನದ ಮೂರ್ತಿ!

ಅವನ ಕಣ್ಣುಗಳು ಧನ್ಯವಾದಂತೆ ಅನಿಸಿತು. ತನಗಾಗಿಯೇ ಇಂದು ಈ ಮೂರ್ತಿ ಇಲ್ಲಿದೆಯೇ ಎಂಬ ವಿಚಿತ್ರ ಆಲೋಚನೆಯೂ ಅವನಿಗೆ ಬಂದಿತು.

ಸ್ವಲ್ಪ ಹೊತ್ತು ಧ್ಯಾನಸ್ಥನಾದ.

ನಂತರ ಅಲ್ಲಿಯೇ ಇದ್ದ ಪುಟ್ಟ ಹಜಾರದಲ್ಲಿ ಕುಳಿತು “ಆಡಿದನೋ ರಂಗ ಅದ್ಭುತದಿಂದಲಿ ಕಾಳಿಂಗನ ಫಣೆಯಲಿ ಆಡಿದನೋ ರಂಗ… ಪಾಡಿದವರಿಗೇ ಬೇಡಿದ ವರಗಳ ನೀಡುತಲಿ ದಯ ಮಾಡುತಲಿ ನಲಿದಾಡುತಲಿ ಬೆಣ್ಣೆ ಬೇಡುತಲೀ ಕೃಷ್ಣ ಆಡಿದನೋ ರಂಗ” ಎಂದು ಆರಭಿ ರಾಗದಲ್ಲಿ ಮಧುರವಾಗಿ ಹಾಡಿದ.

ಅಷ್ಟು ಹೊತ್ತಿಗೆ ಅಲ್ಲಿ ಬಂದು ಸೇರಿದ್ದ ಭಕ್ತಾದಿಗಳು “ಸ್ವಾಮೀ, ಈ ಭಾಷೆ ಯಾವುದು? ನಾವು ಕೇಳಿಲ್ಲ” ಎಂದರು.

“ಇದು ಕನ್ನಡ ಭಾಷೆ. ನಿಮ್ಮಲ್ಲಿ ತುಲಸೀದಾಸ್‌ ಇದ್ದ ಹಾಗೆ ನಮ್ಮಲ್ಲಿ ಪುರಂದರ ದಾಸ ಇದ್ದರು” ಎಂದ ತಕ್ಷಣ ಒಬ್ಬ “ಫಂಡರಾಪುರದಲ್ಲಿ ಇರುವ ವಿಠಲನ ಬಗ್ಗೆ ಅಲ್ವಾ ಈ ಹಾಡು?” ಎಂದ.

ಮುಗುಳ್ನಕ್ಕ ಅಪ್ಪು “ಹೌದು, ಪುರಂದರದಾಸರು ಅಲ್ಲಿನವರೇ. ಆದರೆ ಅವರ ಕಾರ್ಯಕ್ಷೇತ್ರ ಕರ್ನಾಟಕ” ಎಂದ.

ನಂತರ “ನಿಮ್ಮ ಈ ದೇವರ ವಿಗ್ರಹ ಏನು ಹೇಳುತ್ತದೆ ನೋಡಿ. ಇದಕ್ಕೆ ಏಳು ಹೆಡೆಗಳಿವೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ ಮತ್ತು ಅಹಂ ಎಂಬ ಏಳು ಹೆಡೆಗಳಿವು. ಇವು ಮನುಷ್ಯನಲ್ಲಿ ಹೆಚ್ಚಾದಷ್ಟೂ ಅವನು ತಪ್ಪುಗಳನ್ನು ಮಾಡುತ್ತಾ ಹೋಗುತ್ತಾನೆ. ಒಮ್ಮೆ ಆ ತಪ್ಪುಗಳು ಹೆಚ್ಚಾದರೆ ಮತ್ತೆ ಹಿಂದಕ್ಕೆ ತಿರುಗಿ ಬರಲು ಕಷ್ಟವಿದೆ. ಅದಕ್ಕೇ ನಾವು ನಮ್ಮ ಈ ಏಳು ಶತ್ರುಗಳನ್ನು ಅರಿಯಬೇಕು. ಸಂಸ್ಕೃತದಲ್ಲಿ ಅರಿ ಎಂದರೆ ಶತ್ರು ಎಂಬ ಅರ್ಥವಿದೆ. ಒಮ್ಮೆ ಇವನ್ನು ಅರಿತು ಇವುಗಳ ಮೇಲೆ ನಿಯಂತ್ರಣ ಸಾಗಿಸಬೇಕು. ಇನ್ನು ದೇವದೇವನ ಕೈಯಲ್ಲಿ ಕಾಳಿಂಗನ ಬಾಲವಿದೆ. ಅದೇ ಭಯ. ಅದನ್ನು ನಾವು ಬೇರು ಸಹಿತ ಕಿತ್ತು ಬಿಸಾಡಬೇಕು. ದೇವರ ಭಯ ಬಿಟ್ಟರೆ ನಾವು ಯಾವ ಮನುಷ್ಯರಿಗೂ ಹೆದರಬೇಕಿಲ್ಲ” ಎಂದ ಅಪ್ರಮೇಯ.

ಕೊರಮ ಶಿಷ್ಯ ಅವನ ಪಕ್ಕದಲ್ಲಿಯೇ ತಾಳ ಹಿಡಿದು ಕೂತಿದ್ದವನು ಹಾಗಾದರೆ ಅಪ್ಪು ಸ್ವಾಮಿಗೆ ಭಯವಿಲ್ಲವಾ? ನಾಯಕ್‌ನ ಕಡೆಯ ಕೊಲೆಗಾರ ಬಂದಾಗ ಏನು ಮಾಡಬಹುದು?

ಈಗೆಲ್ಲಾ ಸ್ವಾಮಿಗಳ ಲಗೇಜನ್ನು ಮುಟ್ಟುವ ಅವಕಾಶವೂ ಸಿಕ್ಕದಾಗಿತ್ತು. ತಾನೆಲ್ಲಿ ಒಂಟಿಯಾಗಿದ್ದರೂ ಈ ಡ್ರೈವರ್‌ ಶ್ಯಾಮ್‌ ಯಾವುದೋ ಒಂದು ನೆಪದಲ್ಲಿ ಹಿಂದೆ ಬಂದುಬಿಡುತ್ತಿದ್ದ.

ಅವನು ಬರುತ್ತಿದ್ದ ಶೈಲಿ ಹೇಗಿರುತ್ತಿದ್ದೆಂದರೆ ಅವನು ಬೇಕೆಂದೇ ಬರುವನೋ ಅಥವಾ ಅವನಿಗೆ ನಿಜವಾಗಿಯೂ ತಾನು ಮೂರ್ತಿಗಳನ್ನು ಹುಡುಕುವಾಗಲೇ ಕೆಲಸವಿತ್ತೋ ತಿಳಿದಾಗಿತ್ತು.

“ಸ್ವಾಮೀ, ನೀವು ಕೃಷ್ಣನ ಬಗ್ಗೆ ಏನಾದರೂ ಹೇಳಿ” ಎಂದಳು ಒಬ್ಬಾಕೆ.

“ನಿಮಗೆ ಗೊತ್ತೇ? ಒಂದು ಸಲ ರುಕ್ಮಿಣಿಯೊಂದಿಗೆ ಒಂದು ಪೈಪೋಟಿಗೆ ಬಿದ್ದು ಶ್ರೀಕೃಷ್ಣನನ್ನು ತುಲಾಭಾರದಲ್ಲಿ ಗೆದ್ದುಕೊಳ್ಳಲು ಪ್ರಯತ್ನಿಸುತ್ತಾಳೆ ಶ್ರೀಕೃಷ್ಣನ ಮತ್ತೊಬ್ಬ ಹೆಂಡತಿ ಸತ್ಯಭಾಮ. ದೇವದೇವನನ್ನು ತೂಕ ಹಾಕುವುದೆಂದರೆ ಸಾಮಾನ್ಯವಾದ ಮಾತೇನು? ಸತ್ಯಭಾಮ ತನ್ನೆಲ್ಲಾ ಒಡವೆ ಚಿನ್ನ ನಾಣ್ಯಗಳನ್ನು ಹಾಕಿದರೂ ಶ್ರೀಕೃಷ್ಣನ ತಕ್ಕಡಿ ಮೇಲೇರುವುದಿಲ್ಲ. ಈ ಸ್ಪರ್ಧೆಗೆ ದೇವರ್ಷಿ ನಾರದರು ನ್ಯಾಯಾಧೀಶರಾಗಿರುತ್ತಾರೆ. ಯಾವಾಗ ಸತ್ಯಭಾಮೆಗೆ ಶ್ರೀಕೃಷ್ಣನನ್ನು ಕೊಳ್ಳಲು ಸಾಧ್ಯವಿಲ್ಲವೋ ಆಗ ಅವನನ್ನು ಮಾರಲು ಮಾರುಕಟ್ಟೆಗೆ ಒಯ್ಯುತ್ತಾರೆ. ಎಂತಹ ಸುಂದರ ಸನ್ನಿವೇಶ ಅಲ್ಲವೇ?” ಎಂದು ನಕ್ಕ.

ಜನರು ಅವನನ್ನೇ ನೋಡಿ ತಲೆದೂಗಿದರು.

“ನಿಮಗೆ ಮೀರಾಬಾಯಿ ಗೊತ್ತಲ್ಲವೇ? ಆಕೆ ಕೃಷ್ಣನ ಮಹಾಭಕ್ತೆ. ಆಕೆಗೆ ಮದುವೆಯಾಗಿದ್ದರೂ ಸದಾ ಕೃಷ್ಣಧ್ಯಾನ ಮಾಡುತ್ತಿರುತ್ತಾಳೆ. ಆಕೆಯ ಹಾಡುಗಳಲ್ಲಿ ಗಿರಿಧರ  ಗೋಪಾಲ ಎಂದಿರುತ್ತದೆ. ಆಕೆ ಬರೆದಿರುವ ಹಾಡು ಕೇಳಿ” ಎಂದು ತುಲಸೀದಾಸ್‌ಗೆ ಹಾಡೆಂದ.

“ಮೈನೇ ಲೀನೋ ಗೋವಿಂದಾ ಮೋಲ್‌ ಮಾಈ ರೀ, ಮೈನೇ ಲೀನೋ ಗೋವಿಂದಾ ಮೋಲ್” ಎಂದು ಹಾಡಿ ನಿಲ್ಲಿಸಿದ.

ಅಪ್ಪು ಅದನ್ನು ವಿವರಿಸುತ್ತಾ, “ನಾನು ಗೋವಿಂದನನ್ನು ತೂಕ ಹಾಕಲು ಹೊರಟೆ” ಎಂದ.

ನಂತರ ತುಲಸೀದಾಸ್‌ “ಕೋಈ ಕಹೆ ಸಸ್ತೋ ಕೋಈ ಕಹೆ ಮಹೆಂಗೆ, ಮೈನೆ ಲೀನೋ ತರಾಜೂ ತೋಲ್… ಮಾಈ ರೀ…” ಎಂದು ಹಾಡಿದ.

“ಎಲ್ಲಾದರೂ ದೇವರ ತೂಕ ಮಾಡಲು ಸಾಧ್ಯವೇ? ಕೆಲವರು ಅವನು ಬಹಳ ಅಗ್ಗ ಎಂದರು. ಮತ್ಯಾರೋ ಬಹಳ ದುಬಾರಿ ಎಂದರು. ನಾನಂತೂ ತಕ್ಕಡಿಯಲ್ಲಿ ತೂಕ ಹಾಕುವೆ” ಅಪ್ರಮೇಯ ನಕ್ಕ.

“ಕೋಈ ಕಹೇ ಕಾರೋ, ಕೋಈ ಕಹೆ ಗೋರೋ, ಮೈನೆ ಲೀನೋ ಅಮೋಲಕ್‌ ಮೋಲ್”‌

“ಇವನು ಶ್ಯಾಮನೋ, ಇಲ್ಲ ಶ್ವೇತವರ್ಣನೋ ಒಟ್ಟಿನಲ್ಲಿ ಇವನು ಅಮೂಲ್ಯ”

“ಮೀರಾ ಕೆ ಪ್ರಭು ಗಿರಿಧರ ನಾಗರ, ವೋ ತೋ ಆವತ್‌ ಪ್ರೇಮ್‌ ಕೇ ಮೋಲ್”‌ ಎಂದು ಹಾಡಿದ ತುಲಸೀದಾಸ.

“ಮೀರಾಳ ಪ್ರಭು ಗಿರಿಧರ ನಾಗರನು ಎಂದಿಗೂ ಪ್ರೇಮದ ತೂಕದವನು” ಎಂದ ಅಪ್ರಮೇಯ. “ಕನ್ನಡದಲ್ಲಿ ಒಂದು ದಾಸರ ಪದವಿದೆ. ಜಗದೋದ್ಧಾರನ ಆಡಿಸಿದಳೆಶೋದೆ ಎಂದು. ಅದರಲ್ಲಿ ಒಂದು ಸಾಲಿದೆ. ಅನೋರಣೀಯನ ಮಹತೋ ಮಹೀಯನ ಎಂದು. ಅಂದರೆ ಎಣಿಸಲಾಗದವನು, ಅತ್ಯಂತ ಮಹಿಮೆಯವನು ಎಂದು. ಅವನನ್ನು ಅಳೆಯಲು ಯಾರಿಗೆ ಸಾಧ್ಯ? ತೂಕ ಹಾಕಲು ಸಾಧ್ಯವೇ ಇಲ್ಲದವನು ಗಿರಿಧರ” ಎಂದು ಮುಗಿಸಿದಾಗ ಒಬ್ಬ ಭಕ್ತೆ “ಹಾಗಾದರೆ ಅವನನ್ನು ತೂಕ ಹಾಕಲು ಸಾಧ್ಯ ಯಾರಿಗೂ ಆಗಲಿಲ್ವೇ ಸ್ವಾಮೀ?” ಎಂದು ಕೇಳಿದಳು.

ಮುಗುಳ್ನಗುತ್ತಾ “ಇದೆ ಒಂದು ವಸ್ತು. ಅದು ಭಕ್ತಿ. ರುಕ್ಮಿಣಿ ಒಂದು ತುಳಸೀದಳ ಹಾಕಿದೊಡನೆ ಕೃಷ್ಣ ಕೂತಿದ್ದ ತಕ್ಕಡಿಯ ತಟ್ಟೆ ಮೇಲಕ್ಕೆ ಹೋಯಿತು” ಎಂದ ಅಪ್ರಮೇಯ.

“ಅಬ್ಬಾ…” ಎಂದು ಕೈ ಮುಗಿದಳು ಆಕೆ.

“ಎಲ್ಲ ಸಾಧನವಿದ್ದು ತುಳಸಿ ಇಲ್ಲದ ಪೂಜೆ ಒಲ್ಲನೋ ಹರಿ ಕೊಳ್ಳನೋ” ಎಂದು ಹಾಡಿ ಅದನ್ನು ವಿವರಿಸಿದ ಅಪ್ರಮೇಯ.

“ಅಂದರೆ ಕೃಷ್ಣನನ್ನು ಮಾತ್ರವೇ ಪೂಜೆ ಮಾಡಿದ್ದಾ ಮೀರಾ?” ಎಂದ ಮತ್ತೊಬ್ಬ. ಅವನು ರಾಮಭಕ್ತ ಎಂದೇಕೋ ಅನಿಸಿತು ಅಪ್ರಮೇಯನಿಗೆ.

“ರಾಮ ಕೃಷ್ಣ ಎರಡೂ ನಾರಾಯಣನ ಪೂರ್ಣಾವತಾರಗಳು. ದುಷ್ಟ ಶಿಕ್ಷಣ ಶಿಷ್ಟ ರಕ್ಷಣಕ್ಕೆ ಭೂಮಿಯ ಮೇಲೆ ಅವತಾರಗಳವು” ಎಂದವನು ಕನಕದಾಸ್‌ನನ್ನು ಕರೆದು ಅವನಿಗೆ ಕಿವಿಯಲ್ಲಿ ಏನೋ ಹೇಳಿದ.

ನಂತರ ಸಭಿಕರತ್ತ ತಿರುಗಿ “ಇದು ಯಾರ ರಚನೆ ಹೇಳಿ ನೋಡೋಣ!” ಎಂದು ನಗೆ ಬೀರಿದ.

ಕನಕದಾಸ ಹಾಡತೊಡಗಿದ.

“ಪಾಯೋ ಜೀ ಮೈನೆ ರಾಮ ರತನ ಧನ ಪಾಯೋ

ವಸ್ತು ಅಮೋಲಿಕ್‌ ದೀ ಮೆರೆ ಸತಗುರು

ಕೃಪಾ ಕರ ಅಪನಾಯೋ

ಜನ್ಮ್‌ ಜನ್ಮ್‌ ಕೀ ಪೂಂಜೀ ಪಾಈ

ಜಗ ಮೇ ಸಬೀ ಖುಮಾಯೋ

ಸತ ಕೀ ನಾವ ಖೇವಟಿಯಾ ಸನಗುರು

ಭವಸಾಗರ ತರವಯೋ

ಪಾಯೋ ಜೀ ಮೈನೆ…” ಎಂದು ಹಾಡಿ ಮುಗಿಸಿದ.

“ಇದು ಯಾರ ರಚನೆ ಸ್ವಾಮೀಜೀ?” ಎಂದು ಕೇಳಿದ ಪ್ರಶ್ನೆ ಕೇಳಿದಾತ.

“ಇದು ಕೂಡ ಸಂತ ಮೀರಾಬಾಯಿಯ ರಚನೆಯೇ” ಎಂದು ಹಸನ್ಮುಖ ಬೀರಿದ ಅಪ್ರಮೇಯ.

“ಅವನು ಲೆಕ್ಕಕ್ಕೆ ಸಿಗದವನು ಎಂದಿರಲ್ಲಾ ಅದಕ್ಕೆ ಉದಾಹರಣೆ ಇದೆಯಾ?” ಕೇಳಿದನೊಬ್ಬ.

“ನಾರದರು ಒಮ್ಮೆ ಕೃಷ್ಣನ ಮನೆಗೆ ಬಂದು ಕೃಷ್ಣಾ ನೀನು ಹೇಗೆ ನಿನ್ನ ಹದಿನಾರು ಸಾವಿರದ ಎಂಟು ಜನ ಪತ್ನಿಯರೊಂದಿಗೆ ನಿಭಾಯಿಸುತ್ತೀ?   ಎಂದು ಕೇಳಿದರಂತೆ. ಶ್ರೀಕೃಷ್ಣ ಅಲ್ಲಿಯೇ ಉಯ್ಯಾಲೆಯ ಮೇಲೆ ತೂಗುತ್ತಾ ಕುಳಿತಿದ್ದವನು ನಾರದರೇ ಎಲ್ಲ ಮನೆಗೂ ಒಮ್ಮೆ ಹೋಗಿ ಬನ್ನಿ ಎಂದನಂತೆ. ನಾರದರು ಮೊದಲ ಮನೆಗೆ ಹೋದರು. ಅಲ್ಲಿ ಕೃಷ್ಣ ಪತ್ನಿಯೊಂದಿಗೆ ಪಗಡೆ ಆಡುತ್ತಿದ್ದ. ಎರಡನೆ ಮನೆಗೆ ಹೋದಾಗ ಅಲ್ಲಿ ಮಕ್ಕಳೊಂದಿಗೆ ಆಡುತ್ತಿದ್ದ. ಮೂರನೆಯ ಮನೆಯಲ್ಲಿ ತಾನೇ ಅಡುಗೆ ಮಾಡುತ್ತಿದ್ದ. ಹೀಗೇ ಪ್ರತಿಯೊಂದು ಮನೆಗೂ ಹೋಗಿ ಆಯಾಸಗೊಂಡು ಮರಳಿ ಬಂದ ನಾರದರಿಗೆ ಉಯ್ಯಾಲೆಯ ಮೇಲೆ ತೂಗುತ್ತಿದ್ದ ಶ್ರೀಕೃಷ್ಣ ಕಂಡನಂತೆ. ಇದು ಅವನು ಲೆಕ್ಕಕ್ಕೆ ಸಿಗದಿರುವುದಕ್ಕೆ ಒಂದು ಒಳ್ಳೆಯ ಉದಾಹರಣೆ” ಎಂದು ಹೇಳಿ “ವಸುದೇವದೇವಂ ಕಂಸ ಚಾಣೂರ ಮರ್ದನಂ ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ” ಎಂದು ಮಂಗಳ ಹಾಡಿದ. ಎಲ್ಲ ಸಭಿಕರೂ ಎದ್ದು ನಿಂತವರು ಹತ್ತಿರ ಬಂದು ಅಪ್ರಮೇಯನ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು.

ಅಪ್ರಮೇಯನನ್ನೊಂದು ಧನ್ಯತಾಭಾವ ಆವರಿಸಿಕೊಂಡಿತ್ತು ಈ ಪ್ರವಚನ ಮುಗಿದ ಮೇಲೆ. ಏಕೆಂದರೆ ಅವನಿಗೆ ತನ್ನ ಜೀವನದ ಸಾರ್ಥಕ್ಯ ಈ ದೇವದೇವನ ಗುಣಗಾನವನ್ನು ಪಸರಿಸುವುದರಲ್ಲಿದೆ ಎಂಬ ಸತ್ಯ ಅರ್ಥವಾಗಿತ್ತು.

ನೀಲಂ ಮತ್ತು ಫಿಲಿಪ್‌ ಕಾರಿನಲ್ಲಿ ಇವರು ಇರುವೆಡೆಗೆ ಬರುತ್ತಲೇ ಇದ್ದರು. ಅಪ್ರಮೇಯನ ಕಳ್ಳ ಶಿಷ್ಯ ತನ್ನ ಮೊಬೈಲ್‌ನಲ್ಲಿ ಜಿಪಿಎಸ್‌ ಆನ್‌ ಮಾಡಿ ಲೊಕೇಶನ್‌ ಶೇರ್‌ ಮಾಡಿದ್ದ.

ಆದರೆ ಡ್ರೈವರ್‌ ಶ್ಯಾಮ್‌ಗೆ ಇದರ ಸುಳಿವು ಸಿಕ್ಕಿಬಿಟ್ಟಿತ್ತು.

ಅದಕ್ಕೇ ಅವನು ಅಪ್ಪುವನ್ನು ಅಲ್ಲಿಂದ ಹೊರಡಿಸಿಬಿಟ್ಟ. ಅವನಿಗೆ ಗೊತ್ತು ಆ ಶಾರ್ಪ್‌ ಶೂಟರ್‌ ತಮ್ಮ ಬೆನ್ನಟ್ಟುವನೆಂದು.

ಶ್ಯಾಮ್‌ ಒಂದು ಧರ್ಮ ಸಂಕಟಕ್ಕೆ ಸಿಲುಕಿದ್ದ. ಅಪ್ರಮೇಯನನ್ನು ಅವಸರಿಸಿ ಅವನನ್ನು ನೋಯಿಸುವ ಇಚ್ಛೆ ಅವನಿಗಿರಲಿಲ್ಲ. ಆದರೆ ಅವರು ಎಷ್ಟು ಬೇಗ ದೆಹಲಿ ಸೇರಿದರೆ ಅಷ್ಟು ಒಳ್ಳೆಯದೆಂಬುದು ಅವನಿಗೆ ತಿಳಿದಿತ್ತು. ಏಕೆಂದರೆ ಅಲ್ಲಿ ಅವನು ಅಪ್ರಮೇಯನಿಗೆ ಭದ್ರತೆ ಒದಗಿಸಬಹುದೆಂದು ತಿಳಿದಿತ್ತು.

ಅಪ್ರಮೇಯನಿಗೆ ಈಗ ಬೇಕಾಗಿದ್ದುದು ಇನ್ನೂ ಕೆಲವು ದೇವಾಲಯಗಳ ಭೇಟಿ. ಅದಕ್ಕೇ ಶ್ಯಾಮ್‌ ಅವರ ಮಾರ್ಗವು ದೆಹಲಿಯತ್ತಲೇ ಹೋಗುವಂತೆ ನೋಡಿಕೊಂಡಿದ್ದ.

ಆದರೆ ಇಲ್ಲಿ ತನಗೆ ಯಾರು ಸಹಾಯ ಮಾಡಬಹುದು? ಒಬ್ಬ ಕಳ್ಳ ಶಿಷ್ಯ ನೆರವು ನೀಡಲಾರ. ಇನ್ನುಳಿದವರಲ್ಲಿ ಯಾರು ಎಷ್ಟು ನಂಬಿಕೆಗೆ ಅರ್ಹರು? ಅದನ್ನವನು ನಿರ್ಧರಿಸಲಾರದಾಗಿದ್ದ.

ಅಂದರೆ ಈಗ ಅಪ್ರಮೇಯ ಸ್ವಾಮಿಯ ಜೀವ ರಕ್ಷಣೆ ತನ್ನ ಕೈಯಲ್ಲಿದೆ. ಕೆಲವು ನಿಮಿಷ ಆಲೋಚಿಸಿ ಒಂದು ನಿರ್ಧಾರಕ್ಕೆ ಬಂದ.

ಅವನ ಕಾರಿನ ಡಿಕ್ಕಿ ತೆರೆದ. ಮೇಲಿದ್ದ ಉಳಿದವರ ಲಗೇಜು ತೆಗೆದ. ಅದರ ಕೆಳಗಿದ್ದ ಸ್ಪೇರ್‌ ಟಯರ್‌ ತೆಗೆದು ನೆಲದ ಮೇಲಿಟ್ಟ. ಟಯರ್‌ ಇದ್ದ ಜಾಗದ ಕೆಳಗೆ ಒಂದು ರಬ್ಬರ್‌ ಮ್ಯಾಟ್‌ ಇತ್ತು.

ಅದನ್ನು ತೆಗೆಯುವ ಮೊದಲು ಸುತ್ತಲೂ ನೋಡಿದ. ಅವನೊಬ್ಬನೇ ಇರುವನೆಂದು ಖಾತ್ರಿ ಮಾಡಿಕೊಂಡು ಅಲ್ಲಿಂದ ಕೆಲವು ವಸ್ತುಗಳನ್ನು ಹೊರತೆಗೆದು ಅಲ್ಲೇ ಇದ್ದ ಉದ್ದನೆಯ ಚೀಲದಲ್ಲಿ ತುಂಬಿಕೊಂಡ. ಆ ಚೀಲದಲ್ಲಿದ್ದುದು ಎರಡು ಪಿಸ್ತಲ್‌ಗಳು, ಕೆಲವು ಗ್ರೆನೇಡ್‌ಗಳು, ಸ್ಮೋಕ್‌ ಬಾಂಬ್ಸ್‌!

ʼಈಗ ಬಾ ಫಿಲಿಪ್!‌ ನಿನ್ನನ್ನು ಎದುರಿಸಲು ನಾನು ಸಿದ್ಧʼ ಎಂದುಕೊಂಡ ಶ್ಯಾಮ್…!

ಮುಂದಿನ ವಾರಕ್ಕೆ…

ಯತಿರಾಜ್ ವೀರಾಂಬುಧಿ

Related post

Leave a Reply

Your email address will not be published. Required fields are marked *