ಮೃದು ಸ್ವಭಾವದ ಸತಿಗೆ ಕಡು ಕೋಪಿಯಾದ ಪತಿ
ಸದುಗುಣದ ಗಂಡನಿಗೆ ಪೆಂಡಿರತಿ ಧೂರ್ತೆ
ಇದುವರೆಗೆ ಕಾಣೆನೈ ಅನ್ಯೋನ್ಯ ದಾಂಪತ್ಯ
ಇದು ಯಾವ ಶಾಪವೈ- || ಪ್ರತ್ಯಗಾತ್ಮ ||
ಬಾಳು ಹಾಳೆನಬೇಡ, ಬೀಳುಗೆಳೆಯಲು ಬೇಡ
ಬಾಳು ಹಸನಾಗಿಸುವ ಕಜ್ಜವನು ಮಾಡು
ಬಾಳಿನೊಳು ನಂಬಿಕೆಯ ಕಳೆದುಕೊಳ್ಳಲು ಬೇಡ
ಬಾಳು ಬಂಗಾರವೈ- || ಪ್ರತ್ಯಗಾತ್ಮ ||
ಕಲೆಗಾಗಿ ಕಲೆಯೆಂದು ತಿಳಿದವರು ಹೇಳುವರು
ಕಲೆಯು ಜೀವನಕಾಗಿ ನೋಡು ಕಣ್ತೆರೆದು
ಕಲೆಯು ಜೀವನಕಾಗಿ ಜೀವನವು ಕಲೆಗಾಗಿ
ಕಲೆ ಬಿಟ್ಟು ಬೇರಿಲ್ಲ- || ಪ್ರತ್ಯಗಾತ್ಮ ||
ಬೆಕ್ಕು ಕಣ್ ಮುಚ್ಚುವುದು ಇಲಿಯ ಹಿಡಿಯಲಿಕೆಂದು
ಕೊಕ್ಕರೆಯ ಧ್ಯಾನವದು ಕೊಳೆ ಮೀನಿಗಾಗಿ
ಪಕ್ಕೆಯಲಿ ಇರಿಯುವರು ಹೊಂಚು ಹಾಕುತ ಖಳರು
ಠಕ್ಕ ಜನರೇ ಹಾಗೆ- || ಪ್ರತ್ಯಗಾತ್ಮ ||
ಎನ್. ಶಿವರಾಮಯ್ಯ ‘ನೇನಂಶಿ’