ರಾಜೇಂದ್ರ ಕಾರಂತರ ಮೊದಲ ನಾಟಕ ‘ಸಂಜೆ ಹಾಡು’
ಕನ್ನಡದ ಹಿರಿಯ ಹಾಗೂ ಸಕ್ರಿಯ ರಂಗಕರ್ಮಿ ರಾಜೇಂದ್ರ ಕಾರಂತರ ಮೊಟ್ಟ ಮೊದಲ ರಚನೆಯ ‘ಸಂಜೆ ಹಾಡು’. ‘ಚಿತ್ತಾರ’ ತಂಡದಲ್ಲಿ ಅಲ್ಲದೇ ‘ವ್ಯಾಸ್ಪ್’ ತಂಡದವರು ಈ ನಾಟಕವನ್ನು ಪ್ರದರ್ಶಿಸಿದ್ದಾರೆ. ಇಲ್ಲಿಯವರೆಗೂ ಈ ನಾಟಕವು ಸುಮಾರು ಅರವತ್ತು ಪ್ರದರ್ಶನಗಳನ್ನು ಕಂಡಿವೆ.
ಈ ನಾಟಕದಲ್ಲಿ ಕಾರಂತರು ಹಿರಿಯ ವ್ಯಕ್ತಿಯಾಗಿ ಅಭಿನಯಿಸುತ್ತಾರೆ. ಕಾರಂತರ ಸಂಭಾಷಣೆಯ ವೈಖರಿ ಹಾಗೂ ಅಮೋಘ ನಟನೆಯನ್ನು ಅವರ ನಾಟಕಗಳನ್ನು ನೋಡಿದವರಿಗಷ್ಟೇ ಅನುಭವ ಆಗಿರುತ್ತದೆ. ಈ ಕಾರಂತರ ಜತೆಗೆ ‘ಭಜರಂಗಿ’ ಚಿತ್ರದಲ್ಲಿ ನಟಿಸಿ ಖ್ಯಾತರಾದ ಸೌರವ್ ಲೋಕೇಶ್ ಅವರು ಮಗನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಾಗಾಗಿ ಈ ನಾಟಕದಲ್ಲಿ ಘಟಾನುಘಟಿಗಳ ಅಭಿನಯದ ಜುಗಲ್ಬಂದಿಯೇ ನಡೆದಿತ್ತು.
ಈ ನಾಟಕಕ್ಕೊಂದು ದೊಡ್ಡ ಇತಿಹಾಸವೇ ಇದೆ.
ಕಾರಂತರು ಇಲ್ಲಿಯವರೆಗೂ 61 ನಾಟಕಗಳನ್ನು ಬರೆದಿದ್ದಾರೆ. ಆದರೆ ಈ ‘ಸಂಜೆ ಹಾಡು’ ಕಾರಂತರ ಮೊದಲ ನಾಟಕವಾಗಿದೆ. ಈ ನಾಟಕಕ್ಕೀಗ 36 ವರ್ಷಗಳು! ಅಷ್ಟೇ ಅಲ್ಲದೇ ಈ ನಾಟಕದ ಕಥಾ ಹಂದರವು ಇಂದಿಗೂ ಪ್ರಸ್ತುತವಾಗಿದೆ ಎನ್ನುವುದು ಈ ನಾಟಕದ ವಿಶೇಷ. ಕೂಡು ಕುಟುಂಬಗಳು ನಿಧಾನವಾಗಿ ಒಡೆದು ಬೇರಾಗುತ್ತಿವೆ. ಹಾಗಾಗಿ ಈ ನಾಟಕದ ಪಾತ್ರಧಾರಿಯಾದ ಸದಾಶಿವರಾಯರುಗಳೇ ಈಗಲೂ ಎಲ್ಲೆಲ್ಲೂ ಕಾಣಿಸುತ್ತಿದ್ದಾರೆ ಎನ್ನಬಹುದು! 1986 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯು ನಾಟಕ ರಚನೆಯ ಸ್ಪರ್ಧೆಯನ್ನು ಏರ್ಪಡಿಸಿತ್ತು. ಆ ಸ್ಪರ್ಧೆಗಾಗಿ ಕಾರಂತರು ಈ ‘ಸಂಜೆ ಹಾಡು’ ನಾಟಕವನ್ನು ಬರೆದರು. ಆಗ ಈ ನಾಟಕಕ್ಕೆ ಮೆಚ್ಚುಗೆಯ ಪ್ರಶಂಸೆ ಲಭಿಸಿತ್ತು. ಆದರೆ ಈ ಸ್ಪರ್ಧೆಯ ತೀರ್ಪುಗಾರರಲ್ಲೊಬ್ಬರಾದ ಖ್ಯಾತ ಬರಹಗಾರ ವೈಎನ್ಕೆ ಅವರು ಒಮ್ಮೆ ಕಾರಂತರನ್ನು ಭೇಟಿಯಾದಾಗ ‘ನಿಮ್ಮ ನಾಟಕ ನನಗೆ ತುಂಬಾ ನಾಟಕ ಇಷ್ಟವಾಯ್ತು. ಅದಕ್ಕೆ ಬಹುಮಾನವೂ ಸಿಗಬೇಕಿತ್ತು’ ಎಂದು ಹೇಳಿದ್ರಂತೆ! ವೈಎನ್ಕೆ ಅವರ ಈ ಮಾತುಗಳು ಕಾರಂತರಲ್ಲಿ ಅಚ್ಚರಿಯನ್ನು ಉಂಟು ಮಾಡಿತ್ತು!
ಈ ನಾಟಕವು ರಚನೆಯಾಗಲು ಒಂದೂ ಕಾರಣವೂ ಇತ್ತು.
ಕಾರಂತರು ಒಮ್ಮೆ ನಾಟಕದ ಸಲುವಾಗಿ ಧರ್ಮಸ್ಥಳಕ್ಕೆ ಹೋಗಿದ್ದರಂತೆ. ಅಲ್ಲಿ ಮಂಗಳೂರಿನ ಮೂಲದ ಒಬ್ಬ ಹಿರಿಯ ವ್ಯಕ್ತಿಯೊಬ್ಬರ ಪರಿಚಯವಾಯ್ತು. ಅಲ್ಲದೇ ಅವರ ಮನೆಯಲ್ಲೂ ಉಳಿದು ಕೊಳ್ಳುವ ಸಂದರ್ಭವೂ ಒದಗಿ ಬಂದಿತ್ತು. ಕಾರಂತರು ಅವರ ಮನೆಯಲ್ಲಿ ಉಳಿದುಕೊಂಡಿದ್ದಾಗ ಆ ಹಿರಿಯ ವ್ಯಕ್ತಿಯು ಕಾರಂತರಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದರಂತೆ. ಆ ಹಿರಿಯರಿಗೆ ಮಕ್ಕಳಿರಲಿಲ್ಲ! 24 ವರ್ಷದ ವಯಸ್ಸಿನ ಕಾರಂತರಿಗೆ ಈ ಹಿರಿಯ ವ್ಯಕ್ತಿಯು ಹೇಳಿಕೊಂಡಿದ್ದ ಮನದಾಳ ಮಾತುಗಳು ತೀವ್ರವಾಗಿ ಕಾಡಿತ್ತಂತೆ. ಎಂದೂ ಮನೆಯಿಂದ ಹೊರಗೇ ಹೋಗದಿದ್ದ ಕಾರಂತರಿಗೆ ಈ ಹಿರಿಯ ವ್ಯಕ್ತಿಯ ಭೇಟಿ ಹಾಗೂ ಅವರು ಹಂಚಿಕೊಂಡ ಅವರ ಮನದ ನೋವು ಗಾಢವಾಗಿ ಮನದಲ್ಲೇ ಕಾಡಿತ್ತಂತೆ. ಅದೇ ಈ `ಸಂಜೆ ಹಾಡು’ ನಾಟಕ ರಚನೆಗೆ ಮೂಲ ಕಾರಣವೂ ಆಯ್ತು ಎಂಬುದು ಕಾರಂತರ ಮಾತು.
1987 ರಲ್ಲಿ ‘ಯುವರಂಗ’ ಸ್ಪರ್ಧೆಯಲ್ಲಿ ಹಲವಾರು ಶ್ರೀಮಂತ ಪ್ರಯೋಗಗಳ ಹಾಗೂ ಸುಮಾರು ಐವತ್ತು ನಾಟಕಗಳ ಮಧ್ಯೆ ಈ ‘ಸಂಜೆ ಹಾಡು’ ನಾಟಕಕ್ಕೆ ಎರಡನೇ ಬಹುಮಾನವೂ ಹಾಗೂ ಕಾರಂತರ ನಟನೆಗೆ ‘ಶ್ರೇಷ್ಠ ನಟ’ ಪ್ರಶಸ್ತಿಯು ಸಿಕ್ಕಿತ್ತು. ಅಲ್ಲದೇ ಈ ಸ್ಪರ್ಧೆಯ ತೀರ್ಪುಗಾರರಲ್ಲೊಬ್ಬರಾದ ಪ್ರಕಾಶ ಕಂಬತ್ತಳ್ಳಿ ಅವರು ಕಾರಂತರನ್ನು ಎಪ್ಪತ್ತು ವರ್ಷದ ವ್ಯಕ್ತಿಯೇ ಎಂದು ನಂಬಿದ್ದರಂತೆ! ಆ ದಿನಗಳಲ್ಲಿ ಈ ನಾಟಕದಲ್ಲಿ ‘ಸುಜು’ ಪಾತ್ರದಲ್ಲಿ ಅಭಿನಯಿಸುತ್ತಿದ್ದ ವೆಂಕಿಯು ಅದ್ಭುತ ನಟ ಹಾಗೂ ಅಪಾರ ಪ್ರತಿಭಾವಂತ. ಆದರೆ ಆತ ಈಗಿಲ್ಲ ಎಂಬುವುದೇ ನೋವಿನ ಸಂಗತಿ ಎನ್ನುತ್ತಾರೆ ಕಾರಂತರು.
1990 ರ ದಶಕದಲ್ಲಿ ಬರೀ ಶೈಲೀಕೃತ ನಾಟಕಗಳು, ಜೊತೆಗೆ ‘ಜೋಕುಮಾರಸ್ವಾಮಿ’ ಹಾಗೂ ‘ಉದ್ಭವ’ಗಳಂತಹ ನಾಟಕಗಳು ಮೋಡಿ ಮಾಡಿತ್ತು. ಆಗಿನ್ನೂ ಟೀವಿ ಸೀರಿಯಲ್ ಗಳು ಆರಂಭವಾಗಿರದ ಸಂದರ್ಭ ಅದಾಗಿತ್ತು. ಇಂತಹ ಕಾಲದಲ್ಲಿ ಸಂಜೆ ಹಾಡು, ಗೂಡು, ಸಾವು, ತಂದೆ, ತಂತಿ, ದೋಣಿ, ಬದುಕಿಲ್ಲದವನ ಭಾವಗೀತೆಗಳಂತಹ ಭಾವನಾತ್ಮಕ ನಾಟಕಗಳು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ದೋಚಿದ್ದು ಆಶ್ಚರ್ಯದ ವಿಷಯವೇನಾಗಿರಲಿಲ್ಲ! ಇದರ ಹಿಂದೆ ಕಾರಂತರ ಕ್ರಿಯಾತ್ಮಕತೆ, ಆಲೋಚನೆ, ಬರಹ ಹಾಗೂ ನಾಟಕ ರಚನಾ ತಂತ್ರವೇ ಮುಖ್ಯ ಕಾರಣವೆನ್ನುವುದು ಇಲ್ಲಿ ಉಲ್ಲೇಖಾರ್ಹ.
ಕಾರಂತರ ಗೆಳೆಯ ಸೋಮಶೇಖರ ಅವರ ಒತ್ತಾಸೆಯಿಂದ ನಟರಾಜ್ ಅವರು ತಮ್ಮ ಪ್ರತಿಭಾ ಪ್ರಕಾಶನದ ಮೂಲಕ ಈ ನಾಟಕವನ್ನು ಪುಸ್ತಕ ರೂಪದಲ್ಲಿ ಪ್ರಕಟಸಿದ್ದಾರೆ.
2010 ರಲ್ಲಿ ‘ವ್ಯಾಸ್ಪ್’ ಮೂಲಕ ರಂಗಶ್ರೀ ಸ್ಪರ್ಧೆಯಲ್ಲಿ ಪ್ರದರ್ಶನ ಕಂಡ ಈ ‘ಸಂಜೆ ಹಾಡು’ ಮೊದಲ ಬಹುಮಾನ ಪಡೆದಿತ್ತು. ಅಲ್ಲಿಂದಾಚೆಗೆ ಹೆಚ್ಚೆಚ್ಚು ಪ್ರದರ್ಶನಗಳಾಗಿದ್ದು ಕನ್ನಡಿಗರ ಮನವನ್ನು ಆದ್ರಗೊಳಿಸಿದೆ. ಕಾರಂತರ ಇಂತಹ ಹಲವಾರು ನಾಟಕಗಳು ಕನ್ನಡ ರಂಗಭೂಮಿಯನ್ನು ಶ್ರೀಮಂತಗೊಳಿಸುತ್ತಿವೆ ಎನ್ನಲ್ಲಡ್ಡಿಯಿಲ್ಲ.
ಈ ದಿನಮಾನದಲ್ಲಿ ಕರೋನಾದ ಹಾವಳಿಯಿಂದ ಕನ್ನಡದ ರಂಗಭೂಮಿಯು ಸೊರಗಿದೆ. ರಂಗಭೂಮಿಯನ್ನೇ ನಂಬಿದವರಿಗೆ ಹಾಗೂ ನಟನೆಯನ್ನೇ ಜೀವನವನ್ನು ಮಾಡಿಕೊಂಡವರಿಗೆ ಈ ಕಾಲವು ಪೂರಕವಾಗಿಲ್ಲ. ಆದಷ್ಟು ಬೇಗ ಈ ಕರೋನವು ನಮ್ಮಿಂದ ದೂರಾಗಲಿ ಕನ್ನಡ ರಂಗಭೂಮಿಯ ಇಂತಹ ಹಲವಾರು ಉತ್ತಮ ನಾಟಕಗಳನ್ನು ನೋಡುವ ಅವಕಾಶವು ರಂಗಪ್ರೇಮಿಗಳಿಗೆ ದೊರಕಲೆಂದು ಆಶಿಸೋಣ.
ತುಂಕೂರ್ ಸಂಕೇತ್
1 Comment
ಚೆಂದಾದ ಆಕರ್ಷಕ ಬರೆವಣಿಗೆ