ಕಿಸ್ಮಾಯೋ ಪ್ರಯಾಣ – 2
ಮಾನವನ ದೈನಂದಿನ ಬದುಕೊಂದು ನಿರಂತರ ಅನಿಶ್ಚಿತತೆಯ ನಿಕ್ಷೇಪ! ಹೌದಲ್ಲವೇ? ನಾವು ಏನೆಲ್ಲ ಎಷ್ಟೆಲ್ಲ ಯೋಚಿಸಿ, ತಿಂಗಳಿಗೂ ಮಿಕ್ಕಿದ ಯೋಜನೆ ರೂಪಿಸಿಕೊಂಡು ಖುಷಿಯಿಂದ ಸ್ನೇಹಿತನ ಮನೆಯತ್ತ ಹೊರಟಿದ್ದು; ಆದರೆ ಆದದ್ದು ಏನು ಮತ್ತು ಎಂಥದ್ದು!
ಕಿಸ್ಮಾಯೋ ಎಂಬ ಅಂದಿನ ಆ ಕೊಂಪೆ, ಒಂದು ಅರ್ಥದಲ್ಲಿ ಭಗವಂತನೇ ತೊರೆದ (ಗಾಡ್ ಫರ್ಸೇಕನ್) ಊರು. ವಾಸ್ತವದಲ್ಲಿ ವೈದ್ಯಕೀಯ ತುರ್ತು ಸ್ಥಿತಿಯ ರೋಗಿಗಳಿಗೆ, ಅಂದಿನ ಇಡೀ ಆ ದೇಶವೇ ಉತ್ತಮವಾಗಿರಲಿಲ್ಲ ಎಂದರದು ಉತ್ಪ್ರೇಕ್ಷೆಯಾಗಿರಲಿಲ್ಲ. ಹಾಗಂತ ಇನ್ನೆಲ್ಲಿಗೆ ಹೋಗುವುದು? ಮುದ್ದಪ್ಪನವರ ಘಳಿಗೆ ಘಳಿಗೆಗೂ ಕುಸಿಯುತ್ತಿದ್ದ ಆರೋಗ್ಯ ಸ್ಥಿತಿಗೆ, ಕಿಸ್ಮಾಯೋ ಆಸ್ಪತ್ರೆ ಖಂಡಿತ ಸೂಕ್ತ ಆಗಿರಲಿಲ್ಲ. ಮುರಿದ ಪಕ್ಕೆಲುಬು ಶ್ವಾಸಕ್ಕೆ ಚುಚ್ಚಿ, ಗಾಳಿಯು ಶ್ವಾಸದಿಂದ ಸೋರಿ, ಅದರಿಂದ ಆದಂಥ (ನ್ಯೂಮೋಥೊರ್ಯಾಕ್ಸ್) ವ್ಯತಿರೇಕವೇ ಅಲ್ಲದೆ, ಹೃದಯಾಘಾತ ಬೇರೆ. ಕೊನೆಗೆ ಮೊಗದಿಶುಗೆ ಹೋಗುವುದೇ ಉತ್ತಮವೆಂದು ತೀರ್ಮಾನಿಸಿ, ಏರ್ಪೋರ್ಟಿನತ್ತ ಹೊರಟೆವು.
ವಿಮಾನ ನಿಲ್ದಾಣದಲ್ಲಿ ಮುದ್ದಪ್ಪನವರು ಉಸಿರಾಡುತ್ತಿದ್ದ ಸ್ಥಿತಿ ಗಮನಿಸಿದ, ಏರ್ ಲೈನಿನ ಅಧಿಕಾರಿಯೊಬ್ಬರು, ಇವರು ಪ್ರಯಾಣಕ್ಕೆ ಅರ್ಹರಲ್ಲ; ಪ್ರಯಾಣದ ವೇಳೆ ಅವರಿಗೇನೂ ಹೆಚ್ಚೂಕಮ್ಮಿ ಆಗದು ಎಂಬ ವೈದ್ಯರ ಪ್ರಮಾಣಪತ್ರ ಬೇಕು ಎಂದರು. ನಾನೇ ವೈದ್ಯ ಎಂದಾಗ, ‘ಅವರಿಗೇನಾದರೂ ನಾನೇ ಜವಾಬ್ದಾರಿ’ ಎಂದು ಮುಚ್ಚಳಿಕೆ ರೀತಿ ಬರೆಸಿಕೊಂಡ ನಂತರ ಪ್ರಯಾಣಕ್ಕೆ ಅನುಮತಿ ಕೊಟ್ಟರು. ಜಗನ್ನಾಥ ಮೊದಲೇ ಮೊಗದಿಶು ಸಂಪರ್ಕಿಸಿ, ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದ. ಡಾ. ಶೆಟ್ಟಿಯವರಿದ್ದ ‘ಮದೀನ’ ಆಸ್ಪತ್ರೆಗೆ ದಾಖಲಿಸಿದ್ದಾಯಿತು. ಪರಿಸ್ಥಿತಿ ತೀವ್ರವಾಗಿದ್ದು ಬದುಕುಳಿವ ಸಂಭವ ಬಹಳ ಕ್ಷೀಣವಾಗಿತ್ತು. ಇಷ್ಟೆಲ್ಲ ಆಗುವ ಹೊತ್ತಿಗೆ ಸಂಜೆಯಾಗಿತ್ತು. ನನ್ನ ಮಡದಿ ಮಕ್ಕಳನ್ನು ಮನೆಗೆ ಕಳಿಸಿ, ನಾನು ಮತ್ತು ಶ್ರೀಮತಿ ಮುದ್ದಪ್ಪನವರು ಅವರ ಜೊತೆಗೆ ಉಳಿದೆವು. ಆಳವಾಗಿ ಬಹಳ ಕಷ್ಟದಲ್ಲಿ ಉಸಿರಾಡುತ್ತಾ, ಒಮ್ಮೆ ನನ್ನತ್ತ ತಿರುಗಿದವರು,”ಒಂದೇ ಒಂದು ದಂ ಕೊಡಿ ಸ್ವಾಮಿ” ಎಂದು ಅಂಗಲಾಚಿದಂತೆ ಸಿಗರೇಟಿಗೆ ಬೇಡಿಕೆ ಇಟ್ಟರು. ಅದಕ್ಕೆ ಅವರ ಮಡದಿಯೇ, ಕೊಡವ ಭಾಷೆಯಲ್ಲಿ ಹುಷಾರಾದ ನಂತರ ಎಂದರು. ಅಷ್ಟೆ ಮುದ್ದಪ್ಪನವರ ಕೊನೆಯ ಮಾತು. ಸ್ವಲ ಹೊತ್ತಿಗೇ ಅವರ ಕಣ್ಣುಗಳು ಮುಚ್ಚಿ, ಕತ್ತು ಒಂದು ಕಡೆಗೆ ಉರುಳಿತ್ತು!
ವಿಷಯ ತಿಳಿದ ನಂತರ, ಬೆಳ್ಳಿಯಪ್ಪ ಕೂಡ ಬಂದರು. ಅವರ ಮೂಲಕ, ಭಾರತದ ತಮ್ಮಂದಿರ ಸಂಗಡ ಮಾತನಾಡಿದ ಶ್ರೀಮತಿ ಮುದ್ದಪ್ಪನರು, ಮೊಗದಿಶುವಿನಲ್ಲೇ ಅಂತಿಮ ಸಂಸ್ಕಾರ ಮಾಡಲು ತೀರ್ಮಾನಿಸಿದರು. ಹೆಚ್ಚಿನ ಪ್ರಚಾರ ಮಾಡದೆ, ಭಾರತದ ರಾಯಭಾರಿ ಕಛೇರಿಗೆ ತಿಳಿಸಲೇಬೇಕಿದ್ದರಿಂದ, ಆ ಕೆಲಸದ ನಂತರ, ಮುಂದಿನ ಕಾರ್ಯಕ್ಕೆ ಮಂದಾದೆವು.
ಮೊಗದಿಶುವಿನಲ್ಲಿ ಸುತ್ತ ಗೋಡೆ ಮತ್ತು ಗೇಟಿದ್ದು , ಚೊಕ್ಕಟವಾಗಿದ್ದ, ಬಹುಶಃ ಇಟಾಲಿಯನ್ನರು ನಿರ್ಮಿಸಿ ಬಿಟ್ಟಿದ್ದ ರುದ್ರಭೂಮಿಯಿತ್ತು. ಅಲ್ಲಿ ಮುದ್ದಪ್ಪನವರ ಪಾರ್ಥಿವ ಶರೀರವನ್ನು ಭೂತಾಯಿಗೆ ಅರ್ಪಿಸಿದೆವು.
ಕಾಲದ ದೈತ್ಯರಾಟೆಯ ಉರುಳು ಯಾರ ಜಾಗೃತ ಅರಿವಿಗೂ ತಿಳಿಯದ ಹಾಗೆ ಉರುಳುತ್ತಾ ಸುತ್ತುವುದೇ ವಿಶೇಷ! ಮುದ್ದಪ್ಪನವರ ಅವಸಾನವಾಗಿ ಎರಡು ವರ್ಷಕ್ಕೂ ಮಿಕ್ಕಿ ಸಂದಿದೆ.
ಶ್ರೀಮತಿ ಮುದ್ದಪ್ಪನವರು ಎಂದಿನಂತೆ, ಇಂಗ್ಲೀಷ್ ಟೀಚರ್ ಕೆಲಸ ಸ್ವಲ್ಪ ಕಾಲ ಮುಂದುವರಿಸಿ, ಕ್ರಮೇಣ ಅಮೆರಿಕದ ರಾಯಭಾರಿ ಕಛೇರಿಯ ಒಂದು ಅಂಗಸಂಸ್ಥೆಯಲ್ಲಿ ಕೆಲಸ ಆರಂಭಿಸಿದ್ದರು. ಮತ್ತು ಒಬ್ಬರೇ ಇರುವ ಬದಲು, ನಮ್ಮ ಮನೆಯಲ್ಲೇ ನಮ್ಮ ಮಾರ್ಗದರ್ಶಕಿಯಾಗಿ ಜೊತೆಗೆ ಬಂದಿದ್ದು, ನಮ್ಮೆಲ್ಲರ ಮುದ್ದಪ್ಪ ಆಂಟಿ ಅಥವ ನಿರ್ಮಲ ಆಂಟಿ ಆಗಿದ್ದರು. ನಮಗಷ್ಟೇ ಅಲ್ಲದೆ, ಸೋಮಾಲಿ ಗಳೆಯರ ಬಳಗಕ್ಕೂ ಆಂಟಿ ಆಗಿದ್ದರು. ಎಲ್ಲರಿಗಿಂತ ಮಿಗಿಲಾಗಿ ಶಿರೋಮಣಿಪ್ರಾಯಃ ಎಂದರೆ, ಡಾ. ಸಿನ್ಹಾ ಎಂಬ ವಯೋವೃದ್ಧರಿಗೂ ಅವರು ಆಂಟಿ ಆದದ್ದು! ಸಿನ್ಹಾ ಬಂಗಾಳದವರು, ವಿಶ್ವಸಂಸ್ಥೆಯ ಕಾರ್ಯನಿಮಿತ್ತ ಬಂದಿದ್ದರು.
ಡಾ. ಜಗನ್ನಾಥನಿಗೆ ಕರ್ಣಾಟಕ ಸರ್ಕಾರದಲ್ಲಿ ಮೆಡಿಕಲ್ ಆಫೀಸರ್ ಕೆಲಸವಾಗಿ, ಹೊರಡುವವನಿದ್ದ. ಅಷ್ಟರೊಳಗೆ ಮತ್ತೊಮ್ಮೆ ಬರಬೇಕೆಂದು ಆಗ್ರಹಿಸಿದ್ದರಿಂದ, ಈ ಬಾರಿ ರಸ್ತೆಯ ಮೂಲಕ ಹೋಗಲು ನಿರ್ಧರಿಸಿದೆವು. ಕಾರಣ ಬೆಳ್ಳಿಯಪ್ಪ ಅವರೂ ಹೊರಟಿದ್ದರಿಂದ, ಅವರ ಅಧಿಕೃತ ವಾಹನ, ಟೋಯೋಟ ಲ್ಯಾಂಡ್ ಕ್ರೂಸರ್ ಇತ್ತು. ಮೇಲಾಗಿ ಈ ಒಂದು ಸುಸಂದರ್ಭ ಅಲ್ಲದೆ, ನಾವು ಮತ್ತೆಂದೂ ಕಿಸ್ಮಾಯೋ ಕಡೆ ಹೋಗಲು ಸಾಧ್ಯವೇ ಇರಲಿಲ್ಲ.
ದಕ್ಷಿಣ ಸೋಮಾಲಯಾದ ಜೂಬ್ಬಾಲ್ಯಾಂಡ್ ಪ್ರದೇಶದ ಕರಾವಳಿ ತೀರದಲ್ಲಿ ಕಿಸ್ಮಾಯೋ ಪಟ್ಟಣವಿದೆ. ಇದನ್ನು ಇಟಲಿ ಜನ ಕಿಸಿಮಾಯಿಯೋ (Chisimaio) ಎಂದು ಕರೆಯುವರು. ಈಗಿನ ಜನಸಂಖ್ಯೆ ಸುಮಾರು ಹತ್ತು ಲಕ್ಷ. ಮೊಗದಿಶು ವಿನಿಂದ 530 ಕಿಮಿ ದೂರ. ಜೂಬ್ಬಾ ನದಿ ಹರಿವ ಕಾರಣ ಆ ಪ್ರಾಂತ್ಯಕ್ಕೆ ‘ಜೂಬ್ಬಾಲ್ಯಾಂಡ್’ ಎಂಬ ನಾಮ. ಕಿಸ್ಮಾಯೋ ತೀರದ ಆಚೆಗೆ ಸಣ್ಣಸಣ್ಣ ದ್ವೀಪ ಸಮುದಾಯವೇ ಇದೆ. ಅದರಲ್ಲಿ ಮುಖ್ಯ ‘ಬಾಜುನಿ’ ಎಂಬ ದ್ವೀಪ. ಕಿಸ್ಮಾಯೋನಲ್ಲಿ ಫೆಬ್ರುವರಿಯಿಂದ ಏಪ್ರಿಲ್ ವರೆಗೆ ಬಹಳ ಸೆಕೆ. ಮೇ ತಿಂಗಳಿಂದ ಜನವರಿ ಅಂತ್ಯದವರೆಗೂ ಉತ್ತಮ ಹವ ಎಂದಿದ್ದರೂ, ಕರಾವಳಿಯ ಸೆಕೆಯ ಅನುಭವ ಯಾರಿಗಿರದು? ವ್ಯವಸಾಯ ಮತ್ತು ಮೀನುಗಾರಿಕೆ ಪ್ರಮುಖ ವೃತ್ತಿಗಳು. ಕರಾವಳಿ ತೊರೆದು ತುಸು ಹೊತ್ತಿನ ಚಲನೆಯ ನಂತರ, ಹಸುರು ಮೆಟ್ಟಿದ ದಟ್ಟ ಕಾನನ; ಹೈಯಿನ, ಸಿಂಹವೇ ಮುಂತಾದ ಪ್ರಾಣಿಗಳ ಸಮೂಹವೇ ಇದೆಯಂತೆ.
ಬರ್ಬರಾ ರೀತಿ, ಕಿಸ್ಮಾಯೋ ಕೂಡ ಸೋಮಾಲಯಾದಲ್ಲಿಯ ಇನ್ನೊಂದು ಪ್ರಮುಖ ಬಂದರು. ಕೆನ್ಯಾದ ಮೊಂಬಾಸ ಬಂದರಿಗೆ ಅತಿ ದೂರವಿಲ್ಲ. ಪಟ್ಟಣದಿಂದ ಅನತಿ ದೂರದ ಪರ್ಯಾಯ ದ್ವೀಪದಲ್ಲೇ ಬಂದರಿರುವುದು.
‘ಅನಾನ್ಲೆ’ ಎಂಬುದು ಬಿಳಿ ಮರಳಿನ ಪ್ರಮುಖ ಬೀಚ್; ಸುಂದರ ಹಾಗೂ ಬೆರಗಿನ ಸೂರ್ಯಾಸ್ತಗಳಿಗೆ ಪ್ರಸಿದ್ಧ.
ಕಿಸ್ಮಾಯೋಗೆ ಹೋಗುವ ರಸ್ತೆಯ ಅತ್ತಿತ್ತ ಸಿಗುವ, ನೋಡಬಹುದಾದ ಇತರೆ ಸ್ಥಳಗಳಿಗೆ ಸಹ ಸಮಯ ಸಿಕ್ಕರೆ, ಹೀಗೆ ಹೋಗಿ ಹಾಗೆ ಬರುವ ಮನಸ್ಸಿನಲ್ಲೇ, ಅಂತೂ ಹೊರಟೆವು: ಬೆಳ್ಳಿಯಪ್ಪ, ಮುದ್ದಪ್ಪ ಆಂಟಿ, ನಾನು, ಕಮಲ ಮತ್ತು ಮಕ್ಕಳಲ್ಲದೆ, ಅಲ್ ಬೆರೂನಿ ಎಂಬ ಇನ್ನೊಬ್ಬ ಭಾರತೀಯ ಗೆಳೆಯ ಮತ್ತು ಆತನ ಗೆಳತಿ, ಸಿತಾರ ಎಂಬ ಪಾಕಿಸ್ತಾನಿ ಮಹಿಳೆ (ಈಗ ಅವರಿಬ್ಬರೂ ಮದುವೆಯಾಗಿ, ಅಮೆರಿಕದಲ್ಲಿ ನೆಲೆಸಿದ್ದಾರೆ), ಇಷ್ಟು ಮಂದಿ.
ಮೊಗದಿಶುವಿಂದ ಮೂವತ್ತು ಕಿಮಿ ದೂರದಲ್ಲಿ ಗಂಧರ್ಷ (ಸೋಮಾಲಿಗಳ ನಾಲಿಗೆಗೆ ಅದು, ಗೊಂದೆರ್ಷೆ) ಎಂಬ ಸಮುದ್ರ ತೀರದಲ್ಲಿನ ಪಳೆಯುಳಿಕೆಯಾದ ಸ್ಮಾರಕವಿದೆ. ಅಲ್ಲಿಗೆ ಮೊದಲು ಭೇಟಿಕೊಟ್ಟು, ಬೀಚಿನಲ್ಲಿ ಸ್ವಲ್ಪ ಹೊತ್ತು ಕಾಲಾಡಿಸಿ, ಮತ್ತೆ ರಸ್ತೆ ಹತ್ತಿದೆವು. ನಮ್ಮ ಮುಂದಿನ ಗುರಿ ಭೂಮಧ್ಯರೇಖೆ ಹಾಯ್ದು ಹೋಗಿದ್ದ ‘ಸಂಗೂನಿ’ ಅಥವ ‘ಸಂಗುನಿ’ ಎಂಬ ಹಳ್ಳಿ. ಮೊಗದಿಶುವಿಂದ ಸುಮಾರು 230 ಕಿಮಿ ದೂರ. ಅಲ್ಲಿನ ಸ್ಮಾರಕದಲ್ಲಿ ಎಲ್ಲರ ಪೋಟೋ ತೆಗೆದ ನಾನೇ ಇದ್ದ ಇನ್ನೊಂದು ಫೋಟೋ ಕಾಣದಾಗಿದೆ. ಆಗ ಸೆಲ್ಫಿ ಇಲ್ಲದ ಕಾಲವಲ್ಲವೇ?
ಭೂಮಧ್ಯ ರೇಖೆ, ಸೋಮಾಲಿಯಾ ಅಲ್ಲದೆ ಉಗಾಂಡ, ಕೆನ್ಯ, ಮಾಲ್ಡಿವ್ಸ್, ಇಂಡೋನೇಷ್ಯ ಮುಂತಾಗಿ ಒಟ್ಟು ಹದಿಮೂರು ದೇಶಗಳ ಮೂಲಕ ಹಾಯ್ದು ಹೋಗುತ್ತದೆ – ಏಳು ಆಫ್ರಿಕ, ಮೂರು ದಕ್ಷಿಣ ಅಮೆರಿಕ ಖಂಡಗಳ ದೇಶಗಳಲ್ಲಿ, ಇನ್ನುಳಿದವು ಹಿಂದೂಮಹಾ ಸಾಗರ ಹಾಗೂ ಶಾಂತಿ ಸಾಗರಗಳಲ್ಲಿರುವ ದ್ವೀಪರಾಷ್ಟ್ರಗಳ ಮೂಲಕ. ಸೋಮಾಲಿಯ ಒಂದೇ ಒಂದು ಅರಬ್ ದೇಶ ಅವುಗಳಲ್ಲಿ!
ಕೊನೆಗೂ ಇನ್ನೂ ಎರಡು ಕಡೆ ಊಟಕ್ಕೆ ಮುಂತಾಗಿ ನಿಂತೂ ಸಹ, ಬೆಳಿಗ್ಗೆ ಆರು ಘಂಟೆಗೇ ಬಿಟ್ಟವರು, ಹತ್ತು ಘಂಟೆ ಕಾಲದ ಪ್ರಯಾಣವನ್ನು ಒಂಭತ್ತೂವರೆಗೇ ತಲಪಿ ಡಾ. ಜಗನ್ನಾಥನನ್ನು ತಬ್ಬಿ ಬೆನ್ನು ತಟ್ಟಿದಾಗ ನನಗೆ ನೆಮ್ಮದಿ! ಇನ್ನು, ಜಗನ್ನಾಥನ ಮಡದಿ, ರತ್ನಮ್ಮ ತನ್ನ ಆತ್ಮೀಯ ಗೆಳತಿ ಮನೆಗೆ ಬಂದಾಗ, ಇನ್ನೆಷ್ಟು ಖುಷಿ ನೀಡಿಲ್ಲ ಹೇಳಿ!
ಬೆಳ್ಳಿಯಪ್ಪ ಒಬ್ಬರೇ ಗಾಡಿ ಓಡಿಸಿ ಸುಸ್ತಾಗಿರಬಹುದು ಅಂದಕೊಂಡು, ಬೇಗ ರಾತ್ರಿ ಪಾರ್ಟಿ, ಊಟ ಮುಗಿಸಿ ಹಾಸಿಗೆ ಹಿಡಿದದ್ದೆ. ಈ ಬಾರಿ ಜಗನ್ನಾಥ ತನ್ನ ಅಧಿಕೃತ ಕ್ವಾರ್ಟರ್ ಸೇರಿಕೊಂಡಿದ್ದರಿಂದ ಎಲ್ಲರಿಗೂ ವ್ಯವಸ್ಥೆ ಅಚ್ಚುಕಟ್ಟಾಗಿತ್ತು.
ಮಾರನೇ ದಿನ ಎಲ್ಲ ಒಬ್ಬೊಬ್ಬರೇ ಅವರವರ ಹೊತ್ತಿಗೆದ್ದು ಆಕಳಿಸಿದರೆ, ರತ್ನಮ್ಮ ಮಾತ್ರ, ತಾನೇ ಕೋಕೋ ಕೂಗಿ ಕೋಳಿಗೇ ಏಳಿಸಿದಂತೆ, ಬಹು ಬೇಗನೆ, ಮಬ್ಬಿಗೇ ಎದ್ದು, ಕಿಚನ್ನಿನಲ್ಲಿ ಸೀಟಿ ಊದಿಸಲು ಆರಂಭಿಸಿದಾಗ, ನಿಧಾನ ಇಡೀ ಮನೆ ಎದ್ದು ಕೂತಿದ್ದು!
ಪಟ್ಟಣ ಪರ್ಯಟನೆಗೆ ಹೊರಡಲು ಎಲ್ಲರೂ ಅಣಿಯಾದರು. ಆ ಸಂದರ್ಭ ಜರುಗಿದ ಒಂದು ಸಣ್ಣ ಘಟನೆ ನನಗೆ ಮರೆಯಲು ಅಸಾಧ್ಯ. ಬೆಳ್ಳಿಯಪ್ಪ, “ಡಾಕ್ಟ್ರೆ, ಬನ್ನಿ ಗಾಡಿ ಹತ್ತಿ, ನೋಡೋಣ ಹೇಗೆ ಕಲಿಯುವಿರಿ” ಎಂದು ನನ್ನನ್ನು ಡ್ರೈವರ್ ಸೀಟಿಗೆ ಬಲವಂತ ಹತ್ತಿಸಿ, ಪೀಠಿಕೆಯ ನಂತರ, ಆಕ್ಸಿಲರೇಟರ್ ಒತ್ತಲು ಹೇಳಿದ್ದೇ, ಗಾಡಿ ಓಡಿತ್ತು. ಸದ್ಯಕ್ಕೆ ವಿಶಾಲ ಕಾಂಪೌಂಡ್ ಇದ್ದೂ ಸಹ, ಬೆಳ್ಳಿಯಪ್ಪ ಬ್ರೇಕ್ ಒತ್ತಿ ಎಂದು ಅರಚಿದರೂ, ತಬ್ಬಿಬ್ಬಾದ ನಾನು ಇನ್ನೇನು ಗಾಡಿಯನ್ನು ಕಾಂಪೌಂಡಿಗೆ ಇಕ್ಕುವುದರಲ್ಲಿ, ಪುಣ್ಯಾತ್ಮ ಆರಡಿ ಎತ್ತರದ ಬೆಳ್ಳಿಯಪ್ಪ, ತಾವೇ ಆ ಕಡೇ ಸೀಟಿಂದ ದೇಹ ಬಗ್ಗಿಸಿ ಕೈಯ್ಯಲ್ಲೇ ಬ್ರೇಕ್ ಒತ್ತಿ ಗಾಡಿ ನಿಲ್ಲಿಸಿದ್ದರು. ಬಹುಶಃ ಅದೇ ಮೊದಲು ಮತ್ತು ಕೊನೆ, ಬೆಳ್ಳಿಯಪ್ಪ ಇನ್ನೆಂದೂ ಯಾರಿಗೂ ಕಲಿಸುವ ತಂಟೆಗೆ ಹೋಗಿರುವುದಿಲ್ಲ!
ಕಿಸ್ಮಾಯೋ ಎಂಬ ಅಂದಿನ ಆ ಪುಟ್ಟ ಪಟ್ಟಣ ಅಥವ ದೊಡ್ಡ ಹಳ್ಳಿ ಸುತ್ತಿ ಬರಲು ಹೆಚ್ಚು ವೇಳೆ ಬೇಕಿಲ್ಲ. ಆದರೆ, ಎಲ್ಲ ಒಟ್ಟಿಗೆ ಹೋದಾಗ, ಅದೂ ಇದೂ ಖರೀದಿ ಮುಂತಾಗಿ ವೇಳೆಯನ್ನು ಹೆಬ್ಬಾವಿನ ಬಾಯಾಗಿ ನುಂಗುತ್ತಾ, ಮದುವೆ ಹೆಜ್ಜೆ ಹಾಕುತ್ತದೆ! ಅಂದು ಆದದ್ದೂ ಅದೇ. ಎಲ್ಲ ಮುಗಿಸಿ, ಅಲ್ಲೇ ಒಂದು ಸೋಮಾಲಿ ಹೋಟೇಲಿನಲ್ಲಿ ಹೋಗಿ ಕೂತಾಗ, ಮಧ್ಯಾಹ್ನ ಒಂದು ಘಂಟೆ ಮೀರಿತ್ತು. ಅಲ್ಲಿಯ ಆಹಾರಗಳಲ್ಲಿ, ಮೂಫಾ (ಇಲ್ಲಿನ ದೋಸೆ ರೀತಿ), ಬ್ರೆಡ್, ಅನ್ನ ಅಲ್ಲದೆ, ಡೈಲೋ ಎಂಬ ಎಳೆ ಕುರಿಯ ಮಾಂಸ ಎಲ್ಲರ ಅಚ್ಚುಮೆಚ್ಚು. ಏನೊ ಒಂದಷ್ಟು ತಿಂದು, ಜಗನ್ನಾಥ ಮತ್ತವನ ಮಡದಿಗೆ ವಿದಾಯ ಹೇಳಿ ಮೊಗದಿಶು ರಸ್ತೆಗೆ ತಿರುಗಿದಾಗ, ಮೂರು ಘಂಟೆ ಮಧ್ಯಾಹ್ನ! ನಡುರಾತ್ರಿ ಹೊತ್ತಿಗೆ ತಲಪುವ ಖಾತ್ರಿ ಮಾಡಿಕೊಂಡು, ನಮ್ಮ ಎರಡನೇ ಬಾರಿಯ ಕಿಸ್ಮಾಯೋ ಭೇಟಿ ಕ್ಷೇಮವಾಗಿ ಜರುಗಿದ್ದ ಧನ್ಯತೆಯಲ್ಲೂ, ನನ್ನೊಳಗೆ ನಮ್ಮ ಮೊದಲ, ಮುದ್ದಪ್ಪನವರ ಸಂಗಡದ ಭೇಟಿ ನೆನಪಾಗಿ, ಹಿಂಸೆ ಹಿಂಡುತ್ತಿತ್ತು. ಯಾರಿಗೂ ಅರಿವಾಗದಂತಿದ್ದೆ, ಅದರಲ್ಲೂ ಮುದ್ದಪ್ಪ ಆಂಟಿಯವರ ಕಡೆ ನೋಡಲೂ ಹಿಂಜರಿಕೆ…ಇನ್ನು ಅವರ ಮನಸ್ಸನ್ನು ಅಳೆಯಲಾದೀತೆ…?
ಮುಂದುವರಿಯುವುದು…
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಮೊಬೈಲ್: 98446 45459