ಕಳೆದುಹೋದ ಬಾಲ್ಯವನ್ನು ನೆನೆಸಿಕೊಂಡರೆ ಮತ್ತೆ ಮರುಕಳಿಸಬಾರದೇ ಎಂಬ ಆಸೆ ಎಲ್ಲರಲ್ಲೂ ಉಂಟಾಗುವುದು ಸಹಜ ಅಲ್ಲವೇ ? ಇಲ್ಲಿ ನಾನು ಹೇಳ ಹೊರಟಿರುವುದು ನನ್ನಮ್ಮನ ಬಾಲ್ಯ…
ದೊಡ್ಡದಾದ ತುಂಬು ಕುಟುಂಬದಲ್ಲಿ ಬೆಳೆದ ನನ್ನ ತಾಯಿಯ ವಿದ್ಯಾಭ್ಯಾಸ ನೆಡೆದಿದ್ದು ನಮ್ಮ ಹಳ್ಳಿಯಲ್ಲೇ. ಅವಳು ತನ್ನ ಬಾಲ್ಯವನ್ನು ನೆನಿಸಿಕೊಳ್ಳುವಾಗ ಬಹಳಷ್ಟು ಬಾರಿ ತಾನು ಮಾಡಿದ ನಾಟಕದ ಬಗ್ಗೆ ಹೇಳುತ್ತಿರುತ್ತಾಳೆ.
ಹಳ್ಳಿಗಳಲ್ಲಿ ನಾಟಕವೆಂದರೆ ಜನರು ತಮ್ಮ ಪರಿವಾರದವರೊಡನೆ ಗಾಡಿಗಳಲ್ಲಿ ಉತ್ಸಹಾದಿಂದ ಬರುತ್ತಿದ್ದ ಕಾಲ. ಒಂದು ನಾಟಕದಲ್ಲಿ ನನ್ನಮ್ಮ ಕೃಷ್ಣನ ಪಾತ್ರದಾರಿ ಹಾಗು ಅವಳ ಆತ್ಮೀಯ ಸ್ನೇಹಿತೆಯದು ಪಾರ್ಥನ ಪಾತ್ರ. ಅವರಿಬ್ಬರ ನಡುವಿನ ಆ ನಿಷ್ಕಲ್ಮಶ ಸ್ನೇಹವೋ ಏನೋ ಅಂದು ಅವರಿಗೆ ನೀಡಿದ ಪಾತ್ರ ಬಹಳ ಸೂಕ್ತವಾಗಿತ್ತು. ನಾಟಕದಲ್ಲಿನ ಅವರಿಬ್ಬರ ಸನ್ನಿವೇಶಕ್ಕೆ ಜನರು ಮೆಚ್ಚಿ “ಒನ್ಸ್ ಮೋರ್” ಎಂದು ಕೂಗು ಹಾಕುತ್ತಿದ್ದರಂತೆ. ಅಂದಿನಿಂದ ನಮ್ಮ ಹಳ್ಳಿಯಲ್ಲಿನ ಜನರ ಮನದಲ್ಲಿ ಕೃಷ್ಣ ಹಾಗು ಪಾರ್ಥ ಎಂದು ಹೆಸರುವಾಸಿಯಾದವರು.
ಇಬ್ಬರ ಓದು ನಂತರ ಮದುವೆ ಸಂಸಾರ ಇತ್ಯಾದಿ ಜಂಜಾಟಗಳಲ್ಲಿ ಒಬ್ಬರನ್ನೊಬ್ಬರು ಭೇಟಿ ಮಾಡಲು ಸಾಧ್ಯ ಕಡಿಮೆಯಿತ್ತು. ಹೀಗೊಂದು ದಿನ ಅಮ್ಮನು ತವರು ಮನೆಗೆ ಹೋಗಿ ಹಿಂತಿರುಗಿ ಬರುವಾಗ ನಾವಿದ್ದ ಬಸ್ಸಿನಲ್ಲಿ ಅವಳ ಆತ್ಮೀಯ ಗೆಳತಿ ಪಾರ್ಥ ಕೂಡ ಇದ್ದದ್ದು ಕಂಡು ಬಂತು. ಎಂತಹ ಬಾಂಧವ್ಯವೆಂದರೆ ಅಮ್ಮನ ಧ್ವನಿಯನ್ನು ಪಾರ್ಥ ಗುರುತು ಹಿಡಿದದ್ದು ಅಮ್ಮನಿಗೆ ಹೇಳಲಾಗದಷ್ಟು ಖುಷಿ. ಆ ಕ್ಷಣ ಇಬ್ಬರ ಕಣ್ಣಲ್ಲೂ ನೀರು ಜಿನುಗಿದ್ದು ಸಂತೋಷದಿಂದ ಆಲಂಗಿಸಿಕೊಂಡ್ಡಿದ್ದು ನನಗೆ ಈಗಲೂ ಕಣ್ಣಿಗೆ ಕಟ್ಟಿದ ಹಾಗಿದೆ. ಸರಿ ಸುಮಾರು 10 – 15 ವರ್ಷಗಳ ನಂತರದ ಭೇಟಿ ಎಂತಹ ಸುಂದರ ಕ್ಷಣಗಳು ಅಲ್ಲವೇ.
ಅಕ್ಕ ಪಕ್ಕ ಹಳ್ಳಿಗಳಿಂದ ಶಾಲೆಗೆ ಬರುತ್ತಿದ್ದದ್ದು ಈ ಸ್ನೇಹಿತೆಯರು. ಪಾರ್ಥಳಿಗಂತೂ ಅವಳ ಗೆಳತಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗುವುದು ಅವಳಿಗೆ ಆತಿಥ್ಯ ನೀಡುವುದೆಂದರೆ ಬಹಳ ಖುಷಿಯ ವಿಚಾರವಂತೆ.
ತಂತ್ರಜ್ಞಾನತೆ ಬೆಳಿದಿರುವ ಈ ದಿನಗಳಲ್ಲಿ ಅಮ್ಮನ ಬಾಲ್ಯ ಸ್ನೇಹಿತರೆಲ್ಲರೂ ಒಂದು ವಾಟ್ಸಪ್ ಗ್ರೂಪ್ ಮಾಡಿಕೊಂಡಿದ್ದಾರೆ. ಆಗಾಗ ತಮ್ಮ ಹಳೆಯ ಮಧುರ ನೆನಪುಗಳನ್ನು ಹಂಚಿಕೊಳ್ಳುತ್ತ ಮುದಗೊಳ್ಳುತ್ತಾರೆ. ಅಮ್ಮ ಈ ಗ್ರೂಪಿನಿಂದ ದಿನಾಲೂ ಹೆಚ್ಚು ಸಂತಸದ ಸಮಯಗಳನ್ನು ಕಳೆಯುವುದನ್ನು ನೋಡಲು ನನಗು ಖುಷಿ. ಅವರುಗಳು ತಮ್ಮ ನೆನಪುಗಳನ್ನು ಮೆಲಕು ಹಾಕುತ್ತಿದ್ದರೆ ನಮಗೆ ಇಂತಹ ಬಾಲ್ಯವೇಕೆ ಸಿಗಲಿಲ್ಲ ಎಂದೆನಿಸುತ್ತದೆ.
ಎಷ್ಟೇ ಆದರೂ ನಾವುಗಳು ನಗರದಲ್ಲಿ ಬೆಳೆದವರಲ್ಲವೇ!
ಶಿಲ್ಪ
1 Comment
Childhood memories never last .
But everyone deserves one .