ಕೃಷ್ಣಮೃಗ – Black buck

Blackbuck male, Antilope cervicapra ,Blackbuck National Park, Velavadar, Gujarat, India

ಕೃಷ್ಣಮೃಗ

Black buck or Indian antelope
Scientific name: Antelope cervicapra

ಇತ್ತೀಚಿಗೆ ಕೃಷ್ಣಮೃಗಗಳನ್ನು ನೋಡುವ ಸಲುವಾಗಿ ಚಿಕ್ಕಮಗಳೂರಿನ ಒಂದು ಊರಿಗೆ ಬೇಟಿ ನೀಡಿದ್ದೆವು (ಕೆಲವು ಕಾರಣಗಳಿಂದ ಊರಿನ ಹೆಸರು ತಿಳಿಸಿಲ್ಲ) ಸುಮಾರು 700 ಹೆಕ್ಟೇರ್ ಪ್ರದೇಶ ಇರುವ ಈ ಜಾಗದ ಸುತ್ತಲೂ ಕೃಷಿ ಭೂಮಿ ಇದೆ, ಹಾಗಾಗಿ ಕೃಷ್ಣ ಮೃಗಗಳು ಇರುವ ಸಾಧ್ಯತೆ ಇಲ್ಲ ಎಂದು ಕೊಂಡು ಒಳ ಪ್ರವೇಶ ಮಾಡಿದೆವು. ಹುಲ್ಲುಗಾವಲಿನಿಂದ ಕೂಡಿದ ಈ ಜಾಗದಲ್ಲಿ ಅಲ್ಲಲ್ಲಿ ಪೊದೆಗಳು ತುಂಬಿಕೊಂಡಿದ್ದವು, ಕೃಷ್ಣಮೃಗಗಳ ವಾಸಕ್ಕೆ ಯೋಗ್ಯವಾದ ಪ್ರದೇಶವಾಗಿತ್ತು. ಹಾಗೇ ಮುಂದೆ ಸಾಗಿದಾಗ ನಮಗೆ 4 ಕೃಷ್ಣಮೃಗಗಳಿದ್ದ ಗುಂಪು ಕಾಣಿಸಿದಾಗ ನಮ್ಮ ಸಂತೋಷಕ್ಕೆ ಪಾರವೇ ಇರಲ್ಲಿಲ್ಲ. ಇನ್ನು ಕೆಲವು ಕಡೆ ಸುತ್ತಿ ಇನ್ನಷ್ಟು ಎರಳೆಗಳನ್ನು ನೋಡಿದೆವು. ಆ ಪ್ರದೇಶದಲ್ಲಿ ಸುಮಾರು 250 -300 ಎರಳೆಗಳು ಇರಬಹುದು ಎಂಬುದು ನಮ್ಮ ಊಹೆ.ಇಲ್ಲಿ ಇವುಗಳ ನೈಸರ್ಗಿಕ ಶತ್ರು ಎ೦ದರೆ ಪಟ್ಟೆ ಕತ್ತೆ ಕಿರುಬ (Striped Hyena) ಇಷ್ಟು ಕೃಷ್ಣಮೃಗಗಳು ಅಲ್ಲಿ ಉಳಿಯಲು ಮುಖ್ಯ ಕಾರಣ ಅಲ್ಲಿ ಮಾಂಸಹಾರವನ್ನು ತಿನ್ನುವ ಜನಾಂಗ ಇಲ್ಲ ಎಂಬುದು ಹಾಗೂ ಸುತ್ತಲೂ ಜನವಸತಿ ಇದ್ದು ಹೊರಗಿನ ಬೇಟೆಗಾರರು ಅಲ್ಲಿ ಪ್ರವೇಶಿಸುವುದು ಕಠಿಣ ಇರಬೇಕು. Wild CAT-C ಯ DV ಗಿರೀಶ್ ಇವುಗಳ ಹಾಗೂ ಈ ಪ್ರದೇಶದ ಸಂರಕ್ಷಣೆಗೆ ಸತತ ಹೋರಾಟ ಮಾಡುತ್ತಿದ್ದಾರೆ.

ಕೃಷ್ಣ ಮೃಗಗಳ ಬಗ್ಗೆ

ತೂಕ ಸುಮಾರು 40-50 Kg ಗಂಡಿಗಿಂತ ಹೆಣ್ಣು ಚಿಕ್ಕದು, ಗಂಡು 3 ವರ್ಷವಾದ ನಂತರ ಪ್ರಾಯಕ್ಕೆ ಬರುತ್ತದೆ, ಪ್ರಾಯಕ್ಕೆ ಬಂದ ನಂತರ ಇದರ ಬಣ್ಣ ಕಪ್ಪಾಗುತ್ತದೆ. ಆದ್ದರಿಂದ ಈ ಎರಳೆಗೆ ಕೃಷ್ಣಮೃಗ ಎಂದು ಹೆಸರು. ಅಪರೂಪವಾಗಿ ಬಿಳಿ ಹಾಗೂ ಅತೀ ಕಪ್ಪು ಎರಳೆಗಳು ಕಾಣುವುದುಂಟು.ಹೆಣ್ಣಿನ ಕೆಚ್ಚಲಲ್ಲಿ 2 ಮೊಲೆಗಳು ಇವೆ.ಹೆಣ್ಣುಗಳಿಗೆ ಕೊಂಬುಗಳು ಇಲ್ಲ, ಒಂದು ಸೂಲದಲ್ಲಿ ಒಂದೇ ಮರಿ ಹಾಕುತ್ತದೆ. ಅಪರೂಪಕ್ಕೆ ಎರಡು ಹಾಕುತ್ತದೆ.

ಭಾರತದಲ್ಲಿ ಇದೊಂದೆ ನಿಜವಾದ ಆಂಟಿ ಲೋಪ್ (Tibetan Antelope – (ಚೀರು) ಇದ್ದರೂ ಇದು ಆಂಟಿ ಲೋಪಿನಿ ಒಳ ಕುಟುಂಬದಲ್ಲಿ ಬರುವುದಿಲ್ಲ)
ಜಗತ್ತಿನಲ್ಲಿ ಈ ಜಾತಿಯ ಎರಳೆ ಇನ್ನೆಲ್ಲಿಯೂ ಇಲ್ಲ. ಒಮ್ಮೆ ಭಾರತದಿಂದ ಕೊಂಡೊಯ್ದು ಅಮೆರಿಕಾ ಸಂಯುಕ್ತ ಸಂಸ್ಥಾನದ ಟೆಕ್ಸಾಸ್ ದಲ್ಲಿಬೆಳೆಸಿದ ಈ ಎರಳೆಗಳ ಸಂತಾನಗಳು ಅಲ್ಲಿ ಅಭಿವೃದ್ಧಿ ಹೊಂದಿವೆ.ಇದು ಅತೀ ವೇಗದ ಪ್ರಾಣಿ ಇದನ್ನು ಬೆನ್ನಟ್ಟಿ ಹಿಡಿಯುವುದು ಚೀತಾ ಗೆ ಮಾತ್ರ ಸಾಧ್ಯ ಆದರೆ ನಮ್ಮಲ್ಲಿ ಚೀತಾ ವಿನಾಶ (extinct) ವಾಗಿದೆ.ಹಾಗಾಗಿ ಇದರ ನೈಸರ್ಗಿಕ ಶತ್ರುಗಳು ಕಡಿಮೆ.

ಇವು ಸಂಘ ಜೀವಿಗಳು ಒಂದು ಗುಂಪಲ್ಲಿ 10-25 ಪ್ರಾಣಿಗಳು ಇರಬಹುದು. ಹಿಂಡಿಗೆ ಒಬ್ಬನೇ ಯಜಮಾನ. ಇವುಗಳ ಕಣ್ಣು ಚುರುಕು, ಕಿವಿ ಮೂಗು ಮಂದ.ದಟ್ಟ ಕಾಡು, ಗುಡ್ಡಗಾಡಿನಲ್ಲಿ ಕಾಣಿಸುವುದಿಲ್ಲ. ಸಮತಟ್ಟಾದ ಹುಲ್ಲುಗಾವಲಿನಲ್ಲಿ ಕಾಣಿಸುತ್ತವೆ ನೀರನ್ನ ಕಡಿಮೆ ಕುಡಿಯುತ್ತವೆ.

ಹಿಂದೊಮ್ಮೆ ಬಯಲು ಸೀಮೆಯ ಕೃಷಿ ಭೂಮಿಗೆ ಲಗ್ಗೆ ಇಡುತ್ತಿದ್ದ ಇವನ್ನು ಅಮಾನುಷವಾಗಿ ಕೊಂದಿದ್ದರಿಂದ ಇಂದು ಇವು ವಿರಳವಾಗಿವೆ. ನಮ್ಮ ರಾಜ್ಯದ ರಾಣೆಬೆನ್ನೂರಿನಲ್ಲಿ ಕೃಷ್ಣ ಮೃಗದ ಅಭಯಾರಣ್ಯವಿದೆ, ಈ ಎರಳೆ ಸಂತಾನದ ನೈಸರ್ಗಿಕ ನಿಯಂತ್ರಣಕ್ಕೆ ಆಪ್ರಿಕಾದಿಂದ ಚೀತಾಗಳನ್ನು ತರಿಸುತ್ತಾರೆ ಎಂಬ ಸುದ್ದಿಯನ್ನು ಕೇಳಿದ್ದೆ.

ಈ ಸುಂದರ ವನ್ಯಜೀವಿಯ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ…

ನಾಗರಾಜ್ ಬೆಳ್ಳೂರ್
ಶಿವಮೊಗ್ಗ

Related post

Leave a Reply

Your email address will not be published. Required fields are marked *