ರಾಜ್ಯದ ಏಕೈಕ ಮಹಿಳಾ ಲೋಕೋ ಪೈಲಟ್ ಕರಾವಳಿಯ ವನಿತಾ..!

ಎಲ್ಲರಿಗೂ ಏನಾದರೊಂದು ಸಾಧನೆಯ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಬೇಕೆಂಬ ಆಸೆಯಿರುವುದು ಸಹಜ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ವನಿತಾಶ್ರೀ ಕರ್ನಾಟಕದ ಏಕೈಕ ಮಹಿಳಾ ಲೋಕೋ ಪೈಲಟ್ (ರೈಲಿನ ಚಾಲಕಿ) ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅದರಲ್ಲೂ ವನಿತಾಶ್ರೀ ಸವಾಲಿನಿಂದ ಕೂಡಿದ ರೈಲಿನ ಚಾಲಕಿಯಾಗಿ ಆಯ್ಕೆಯಾಗುವ ಮೂಲಕ ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದ್ದಾರೆ.

ಉತ್ತಮ ವೇತನದೊಂದಿಗೆ, ಭತ್ಯೆ ಮತ್ತು ಕುಟುಂಬಕ್ಕೆ ಬೆಂಬಲದ ಖಾತ್ರಿಯಿರುವ ರೈಲ್ವೆ ಇಲಾಖೆಯಲ್ಲಿ ಕನ್ನಡಿಗರು ಉದ್ಯೋಗವನ್ನು ಪಡೆಯುವುದು ಬಹಳ ವಿರಳವೆನ್ನಬಹುದು, ಅದರಲ್ಲೂ ರೈಲನ್ನೇ ಚಲಾಯಿಸುವ ಲೋಕೋ ಪೈಲಟ್ ಹುದ್ದೆಯಂತೂ ದೂರದ ಮಾತೇ ಸರಿ. ಆದರೆ ಇದೆಲ್ಲದಕ್ಕೂ ಅಪವಾದ ವಿಟ್ಲದ ವನಿತಾಶ್ರೀ ಆಗಿದ್ದು, ರೈಲ್ವೆ ಇಲಾಖೆಯಲ್ಲಿರುವ ಕರಾವಳಿಯ ಏಕೈಕ ಮಹಿಳಾ ಲೋಕೋ ಪೈಲಟ್ ಅಗಿ ಈಕೆ ಗುರುತಿಸಿಕೊಂಡಿದ್ದಾರೆ.

ರೈಲ್ವೆ ಇಲಾಖೆಯ ಲೋಕೋ ಪೈಲಟ್ ಹುದ್ದೆಯಲ್ಲಿರುವ ದಕ್ಷಿಣ ಕನ್ನಡದ ವನಿತಾಶ್ರೀ, ಪ್ರಸ್ತುತ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಶಂಟಿಂಗ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಶಂಟಿಂಗ್ ಎಂದರೆ ನಿರ್ದಿಷ್ಟ ನಿಲ್ದಾಣ ವ್ಯಾಪ್ತಿಯಲ್ಲಿ ರೈಲನ್ನು ಚಲಾಯಿಸುವುದು, ಇಂಜಿನ್ ಅಥವಾ ಬೋಗಿಗಳನ್ನು ಬದಲಾಯಿಸುವುದು, ತಂಗುವ ಅಥವಾ ತಡವಾಗಿ ಹೊರಡುವ ರೈಲುಗಳನ್ನು ಪ್ರತ್ಯೇಕವಾದ ಹಳಿಯಲ್ಲಿ ತಂದು ನಿಲ್ಲಿಸುವುದು ಮುಂತಾದ ಕೆಲಸಗಳನ್ನು ನಿರ್ವಹಿಸುತ್ತಾರೆ. ಇವರು ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ರೈಲು ಚಲಾಯಿಸುವುದಿಲ್ಲ. ಲೋಕೋ ಪೈಲಟ್ ಆಗಿ ದುಡಿಯುವವರು, ಅದರಲ್ಲೂ ಮುಖ್ಯವಾಗಿ ಹೆಣ್ಣುಮಕ್ಕಳು ವೃತ್ತಿಯನ್ನು ಸವಾಲಾಗಿ ಪರಿಗಣಿಸಲು ಸದಾ ಸಿದ್ಧರಾಗಿರಬೇಕು. ರೈಲಿನಲ್ಲೇ ದೂರದೂರಿಗೆ ಪ್ರಯಾಣಿಸಬೇಕಿರುವುದರಿಂದ ಸಾಮಾನ್ಯವಾಗಿ ಕರ್ನಾಟಕದ ಹೆಣ್ಣುಮಕ್ಕಳು ಹಾಗೂ ಅವರ ಪೋಷಕರು ಹೆಣ್ಣುಮಕ್ಕಳನ್ನು ಲೋಕೋ ಪೈಲಟ್ ಹುದ್ದೆಗೆ ಕಳುಹಿಸುವುದು ಕಡಿಮೆ ಎಂದು ವನಿತಾಶ್ರೀ ಹೇಳುತ್ತಾರೆ.

ಇನ್ನು ವನಿತಾಶ್ರೀ ಅವರ ಪತಿ ಸತೀಶ್ ಪೊಲೀಸ್ ಇಲಾಖೆ ಉದ್ಯೋಗಿಯಾಗಿದ್ದಾರೆ. ಇವರಿಗೆ ಇಬ್ಬರು ಗಂಡುಮಕ್ಕಳಿದ್ದು, ಓರ್ವ ಐದನೇ ತರಗತಿ, ಮತ್ತೊಬ್ಬ ಒಂದನೇ ತರಗತಿ. ತಂದೆ ವಿಟ್ಲ ನಾರಾಯಣ ನಾಯ್ಕ ಪಶುಸಂಗೋಪನೆ ಇಲಾಖೆಯಲ್ಲಿ ನಿವೃತ್ತ ಕಾಂಪೌಂಡರ್. ತಾಯಿ ಜಯಶ್ರೀ ಮಂಗಳೂರು ಭವಿಷ್ಯ ನಿಧಿ ಕಚೇರಿಯಲ್ಲಿ ಉದ್ಯೋಗಿಯಾಗಿದ್ದು, ಇತ್ತೀಚೆಗೆ ಬೆಂಗಳೂರು ಕಚೇರಿಗೆ ವರ್ಗಾವಣೆಗೊಂಡಿದ್ದಾರೆ.

ವನಿತಾಶ್ರೀ ಅವರಿಗೆ ಈ ವೃತ್ತಿಯು ಇವರ ಆಸಕ್ತಿಯ ಆಯ್ಕೆಯಾಗಿರಲಿಲ್ಲ. ಮಂಗಳೂರು ಕೆ.ಪಿ.ಟಿ ಯಲ್ಲಿ ಅಟೋ ಮೊಬೈಲ್ ಡಿಪ್ಲೊಮೋ ಮುಗಿಸಿದಾಗ ರೈಲ್ವೆ ಇಲಾಖೆಯಲ್ಲಿ ಉದ್ಯೋಗಾವಕಾಶ ಇರುವ ಬಗ್ಗೆ ಮತ್ತು ಇಲಾಖೆಯಲ್ಲಿ ಇರುವ ಸೌಲಭ್ಯಗಳ ಬಗ್ಗೆ ತನ್ನ ತಂದೆಯಿಂದ ತಿಳಿಯಲ್ಪಟ್ಟರು. ಇದರಿಂದ ಈ ಕುರಿತು ಪ್ರಯತ್ನವೂ ಆರಂಭವಾಗಿ ಉದ್ಯೋಗ ದೊರೆತಾಗ ಕುಟುಂಬಸ್ಥರೆಲ್ಲ ಸವಾಲಿನ ವೃತ್ತಿಯನ್ನು ನಿರ್ವಹಿಸಲು ಆತ್ಮಸ್ಥೈರ್ಯ ತುಂಬಿದರು. ತಾಯಿಯ ಬೆಂಬಲವೂ ದೊರೆತ ಫಲವಾಗಿ 2006ರಲ್ಲಿ ಚೆನ್ನೈ ವಿಭಾಗದಲ್ಲಿ ಸಹಾಯಕ ಲೋಕೋ ಪೈಲಟ್ ಆಗಿ ವೃತ್ತಿ ಜೀವನವನ್ನು ವನಿತಾಶ್ರೀ ಆರಂಭಿಸಿದರು.

ಸದ್ಯದ ಕನ್ನಡದ ಏಕೈಕ ಲೋಕೋ ಪೈಲಟ್ ಎನಿಸಿಕೊಂಡಿರುವ ವನಿತಾಶ್ರೀಯವರ ಛಲ, ಸಾಧನೆಯನ್ನು ಹಾಗೂ ತ್ಯಾಗವನ್ನು ಮೆಚ್ಚಲೇಬೇಕು. ಸುಮಾರು 116 ರೈಲ್ವೆ ನೌಕರರು ಇರುವ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಕೇವಲ ಇಬ್ಬರೇ ಕನ್ನಡಿಗರಿದ್ದಾರೆ. ಇವರ ಪೈಕಿ ಕನ್ನಡದ ಮಹಿಳೆ ಇವರೊಬ್ಬರೇ. ಶಂಟಿಂಗ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರು ಮಂದಿ ನೌಕರರ ಪೈಕಿ ವನಿತಾಶ್ರೀ ಹೊರತುಪಡಿಸಿ ಉಳಿದ ಐದು ಮಂದಿ ಉತ್ತರ ಭಾರತದವರು ಎನ್ನುವುದು ಗಮನಿಸಬೇಕಾದ ಅಂಶ. “ನಾನು ರೈಲಲ್ಲಿ ಕುಳಿತು ಚಲಾಯಿಸುವಾಗ ನನ್ನನ್ನು ಬೆರಗು ಕಂಗಳಿಂದ ಜನರು ನೋಡುತ್ತಾರೆ. ನನಗೆ ಹೆಮ್ಮೆ ಅನ್ನಿಸುತ್ತದೆ. ಈ ಮಹಿಳೆಯರಿಗೆ ಈ ಉದ್ಯೋಗ ಕಲ್ಪಿಸುವ ರೆಲ್ವೇ ಇಲಾಖೆಯ ಬಗೆಗೂ ನಾನು ಬಹಳ ಅಭಿಮಾನಪಡುತ್ತೇನೆ. ಹೆಣ್ಣು ಮಕ್ಕಳು ನನ್ನನ್ನು ನೋಡಿ ರೈಲಿನ ಪೈಲಟ್ಗಳಾಗುವ ಮನಸ್ಸನ್ನು ಮಾಡಲಿ, ಹೆಣ್ಣು ಮಕ್ಕಳಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ” ಎಂದು ಕಂಕನಾಡಿ ರೈಲ್ವೆ ಸ್ಟೇಷನ್ನ ಶಂಟಿಂಗ್ ವಿಭಾಗದ ಲೋಕೋ ಪೈಲಟ್ ವನಿತಾಶ್ರೀ ಹೇಳುತ್ತಾರೆ.

ಈ ಹುದೆಯನ್ನು ಆಸಕ್ತಿಯಿಂದ ಆಯ್ಕೆ ಮಾಡಿಕೊಳ್ಳದೇ ಇದ್ದರೂ ಉದ್ಯೋಗ ದೊರೆತ ನಂತರ ಅದನ್ನು ಛಲ, ಅತ್ಯಂತ ಶ್ರದ್ಧೆ, ಧಕ್ಷತೆ ಮತ್ತು ಆಸಕ್ತಿಯಿಂದ ನಿರ್ವಹಿಸುತ್ತಿರುವ ವನಿತಾಶ್ರೀ ಎಲ್ಲರಿಗೂ ಮಾದರಿ. ಗಂಡಸರಷ್ಟೇ ನಿರ್ವಹಿಸುವ ಮತ್ತು ಹೆಣ್ಣು ಮಕ್ಕಳಷ್ಟೇ ನಿರ್ವಹಿಸುವ ಕೆಲಸಗಳೆಂಬ ವಿಭಾಗೀಕರಣ ಇನ್ನೂ ಜೀವಂತವಾಗಿರುವ ಇಂದಿನ ಸಮಾಜದಲ್ಲಿ ಅತ್ಯಂತ ಕಠಿಣ ಹಾಗೂ ಸವಾಲಿನಿಂದ ಕೂಡಿದ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ವನಿತಾಶ್ರೀ ಯುವ ಪೀಳಿಗೆಗೆ ಸ್ಪೂರ್ತಿಯಾಗಿದ್ದಾರೆ. ಸಮಯ ಮತ್ತು ಸಂದರ್ಭಗಳನ್ನು ಬಂದ ಹಾಗೆ ಎದುರಿಸುತ್ತಾ ಹೋಗಿ ಅದೇ ಕ್ಷೇತ್ರದಲ್ಲಿ ವಿಭಿನ್ನವಾಗಿ ಗುರುತಿಸಿಕೊಳ್ಳಬಹುದು ಎನ್ನುವುದರಲ್ಲಿ ಈಕೆಯೇ ಉತ್ತಮ ಉದಾಹರಣೆ.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160

Related post

2 Comments

  • super article sir

  • ಉತ್ತಮ ಬರಹ

Leave a Reply

Your email address will not be published. Required fields are marked *