ಹಿಂದಿನ ಸಂಚಿಕೆಯಿಂದ….
ಬಹಳ ಹೊತ್ತಿನವರೆಗೂ ಯಾವ ಶಬ್ದವೂ ಇಲ್ಲ. ‘ಬರಿ ಕಾಲ್ಪನಿಕ ಶಬ್ದಕಿವಿಗೆ ಬಿತ್ತು. ಇದು ಕತ್ತಲು ಮಾಡಿದ ಯಕ್ಷಣಿ; ಮೋಸ ಎಂದು ಮನಸ್ಸಿನಲ್ಲಿ ಗುಣಾಕಾರ ಹಾಕುತ್ತಿದ್ದನು. ಅವನ ಸ್ನಾಯುಗಳಿಗೆ ಮತ್ತೆ ಶಕ್ತಿ ಬಂದಿತ್ತು.
‘ಇದು ಎಂಥ ಮಾಯೆ! ಅಲೌಕಿಕ ಮಾಯೆ!’
‘ನಾನು ಬಂದಿನೀ… ಸೆರೆಯಾಳು…’
ಇಲ್ಲ, ಮನುಷ್ಯರ ಕಂಠಧ್ವನಿ- ಮೋಸವಿಲ್ಲ. ಮಾತುಗಳು ಸಂದೇಹಾಸ್ಪದವಾಗಿದ್ದರೂ ಸ್ಪಷ್ಟವಾಗಿವೆ. ಮಾತಾಡಿದ ವ್ಯಕ್ತಿ ಇನ್ನೂ ಹತ್ತಿರ ಬಂದಿರುವ ಹಾಗಿತ್ತು. ಚಿತ್ರಕನು ‘ಬಂದಿನೀ?… ನೀನು ಹೆಂಗಸೇ?’ ಎಂದು ಕೇಳಿದನು.
‘ಹೌದು.’
‘ಈಗ ಸಮಾಧಾನವಾಯಿತು. ನಿನ್ನನ್ನು ಪ್ರೇತವೆಂದು ಭಾವಿಸಿದ್ದೆ’.
‘ನೀನು ಯಾರು?’
‘ನಾನೂ ಕೂಡ ನಿನ್ನಂತೆಯೆ ಸೆರೆಯಾಳು. ನೀನು ಎಷ್ಟು ದಿನದಿಂದ ಬಂದಿಯಾಗಿದ್ದೀಯೆ?’ ಚಿತ್ರಕ ಆಕೆಯನ್ನು ಪ್ರಶ್ನಿಸಿದನು.
‘ಎಷ್ಟು ದಿನದಿಂದ ಎಂದು ನನಗೆ ಗೊತ್ತಿಲ್ಲ. ಇಲ್ಲಿ ಹಗಲು- ರಾತ್ರಿ ಇಲ್ಲ. ತಿಂಗಳು- ವರ್ಷ ಇಲ್ಲ-’ ಕಂಠಧ್ವನಿ ಕರಗಿಹೋಯಿತು.
‘ನೀನು ನನ್ನ ಹತ್ತಿರ ಬಾ. ಭಯಪಡಬೇಡ. ನಾನು ನಿನಗೆ ಕೇಡು ಮಾಡುವುದಿಲ್ಲ’. ಚಿತ್ರಕ ಅವಳಿಗೆ ಆಶ್ವಾಸನೆ ಕೊಟ್ಟನು.
‘ನೀನು ಹೂಣನೇನು?’ ಸ್ವಲ್ಪ ಸಮಯದ ನಂತರ ಪ್ರಶ್ನೆ ಕೇಳಿ ಬಂತು.
‘ಇಲ್ಲ. ನಾನು ಆರ್ಯ.
ಆಗ ಆ ಅದೃಶ್ಯ ರಮಣಿಯು ಹತ್ತಿರ ಬಂದು ಚಿತ್ರಕನ ಮಂಡಿಯ ಮೇಲೆ ಕೈ ಇಟ್ಟಳು. ಚಿತ್ರಕನು ಅವಳ ಕೈಯನ್ನು ಮುಟ್ಟಿನೋಡಿದನು. ಅಸ್ಥಿಪಂಜರದ ಕೈ, ಕೃಶವಾದ ಬೆರಳುಗಳ ತುದಿಯಲ್ಲಿ ಉದ್ದವಾದ ಉಗುರುಗಳು. ಅವನ ಮಂಡಿಯ ಮೇಲಿದ್ದ ಕೈ ಥರಥರ ನಡುಗುತ್ತಿತ್ತು. ಚಿತ್ರಕ ಆಕೆಯನ್ನು ಕುರಿತು’ ಕುಳಿತುಕೋ. ನನ್ನ ಬಗ್ಗೆ ಹೆದರಬೇಡ. ನಾನೂ ಕೂಡ ನಿನ್ನ ಹಾಗೆಯೇ ಅಸಹಾಯಕ. ನೀನು ಬಹಳ ದಿನಗಳಿಂದ ಇಲ್ಲಿ ಬಂದಿಯಾಗಿದ್ದೀಯೆ ಎಂದು ತೋರುತ್ತದೆ.
ನೀನು ಕತ್ತಲಿನಲ್ಲಿ ನೋಡಬಲ್ಲೆಯಾ?’ ಎಂದು ಪ್ರಶ್ನಿಸಿದನು.
‘ಸ್ವಲ್ಪ’
‘ನಿನ್ನ ವಯಸ್ಸು ಎಷ್ಟು?’
ಇಷ್ಟು ಹೊತ್ತಿಗೆ ಆಕೆಗೆ ಸ್ವಲ್ಪ ಧೈರ್ಯ ಬಂದಿತ್ತು. ಅವಳು ಮೆಟ್ಟಿಲಿನ ಮೇಲೆ ಕುಳಿತುಕೊಂಡಳು. ಅವಳು ಬಹಳ ದಿನಗಳಿಂದ ಮಾತನಾಡದೆ ಇದ್ದುದರಿಂದು ಮಾತು ಮರೆತೇ ಹೋಗಿತ್ತೋ ಏನೋ. ಮೊದಮೊದಲು ಅಸ್ಪಷ್ಟವಾಗಿದ್ದ ಮಾತು ಬರುಬರುತ್ತ ಸ್ಪಷ್ಟವಾಗುತ್ತ ಬಂತು. ಅವಳಿಗೆ ಮೊದಲಿನಂತೆ ಮಾತನಾಡುವ ಶಕ್ತಿ ಮರುಕಳಿಸಿತ್ತು.
ಆ ಹೆಂಗಸು ‘ನನ್ನ ವಯಸ್ಸು ಎಷ್ಟೆಂದು ನನಗೆ ಗೊತ್ತಿಲ್ಲ. ನಾನು ಸೆರೆ ಸಿಕ್ಕಿದಾಗ ನನಗೆ ಇಪ್ಪತ್ತು ವರ್ಷ ವಯಸ್ಸು ಆಗಿತ್ತು’ ಎಂದು ಹೇಳಿದಳು. ‘ನಿನ್ನನ್ನು ಬಂದಿಯನ್ನಾಗಿ ಮಾಡಿದವರು ಯಾರು?’
‘ಹೂಣ!’
‘ಹೂಣ. ಯಾವನು ಆ ಹೂಣ?’
ಆ ಹೆಂಗಸು ತಡೆದು ತಡೆದು ಹೇಳಲು ಪ್ರಾರಂಭಿಸಿದಳು- ‘ಕುರೂಪಿಯೂ ಕುಳ್ಳನೂ ಆದ ಒಬ್ಬ ಹೂಣ. ಹೂಣರು ಅರಮನೆಯ ಮೇಳೆ ದಾಳಿ ಮಾಡಿದ್ದರು. ನಾನು ರಾಜಪುತ್ರಿಯ ದಾದಿ… ನಾನು ರಾಜಪುತ್ರನಿಗೆ ಸ್ತನ್ಯಪಾ£ ಮಾಡಿಸುತ್ತಿರುವಾಗ ಹೂಣರು ಅಂತಃಪುರವನ್ನು ಪ್ರವೇಶಿಸಿದರು… ಅವರು ರಾಜಪುತ್ರನನ್ನು ನನ್ನ ಮಡಿಲಿನಿಂದ ಎಳೆದುಕೊಂಡು ಕತ್ತಿಯ ಅಲಗಿನ ಮೇಲೆ ಚಂಡಿನಂತೆ ಎಸೆದಾಡಿಕೊಂಡು ಆಟವಾಡುತ್ತಿದ್ದರು. ಒಬ್ಬ ಕುಳ್ಳನಾದ ಹೂಣನು ನನ್ನ ಕೈಹಿಡಿದು ಎಳೆದುಕೊಂಡು ಬಂದನು…’
‘ಸರ್ವನಾಶ! ಇದು ಇಪ್ಪತ್ತೈದು ವರ್ಷಗಳ ಹಿಂದಿನ ಮಾತು. ನೀನು ಇಪ್ಪತ್ತೈದು ವರ್ಷಗಳಿಂದ ಈ ಸೆರೆಯಲ್ಲಿ ಇದ್ದೀಯೆ ಎಂದ ಹಾಗಾಯಿತು.
ಅಲ್ಲವೆ?’
‘ಇಪ್ಪತ್ತೈದು ವರ್ಷ?… ಅದೆಲ್ಲಾ ನನಗೆ ತಿಳಿಯದು… ಆ ಕುಳ್ಳ ಹೂಣನು ನನ್ನನ್ನು ಎಳೆದುಕೊಂಡು ಈ ಸ್ತಂಭಗೃಹಕ್ಕೆ ಕರೆತಂದನು. ನಿರ್ಜನವಾದ ಸ್ತಂಭಗೃಹದಲ್ಲಿ ಅವನ ಕೈಯಿಂದ ಬಿಡಿಸಿಕೊಳ್ಳಲು ಬಹಳ ಪ್ರಯತ್ನ ಪಟ್ಟೆ. ಆದರೆ… ಸ್ತಂಭಗೃಹದ ಗೋಡೆಯಲ್ಲಿ ಒಂದು ಗುಪ್ತದ್ವಾರವಿತ್ತು. ಅವನು ಅದನ್ನು ಹೇಗೋ ತೆಗೆದು ಒಳಗೆ ಹೋದನು… ಆ ಹೂಣನು ನನ್ನನ್ನು ಈ ಅಂಧಕಾರ ಕೂಪದಲ್ಲಿ ತಳ್ಳಿ ಗುಪ್ತದ್ವಾರದ ಬಾಗಿಲು ಮುಚ್ಚಿ ಹೊರಟು ಹೋದನು.’
‘ಆ ಮೇಲೆ?’
‘ಆ ಮೇಲೆ ನನಗೊಂದೂ ಗೊತ್ತಿಲ್ಲ… ಆ ದಿನದಿಂದ ಈ ಬಿಲದೊಳಗೆ ಇದ್ದೇನೆ. ಈ ಗವಿಯು ಬಹಳ ದೂರದವರೆಗೂ ಹಬ್ಬಿದೆ. ಆದರೆ ಹೊರಗೆ ಹೋಗುವ ದಾರಿ ಮಾತ್ರ ಇಲ್ಲ…. ಆ ಹೂಣನು ಮಧ್ಯೇ ಮಧ್ಯೇ ತಿನ್ನಲು ಏನಾದರೂ ಒಳಗೆ ಎಸೆದು ಹೋಗುತ್ತಿದ್ದನು… ಆ ಹೂಣನು ನನ್ನನ್ನು ಕತ್ತಲಲ್ಲಿ ನೋಡಲಾಗುತ್ತಿರಲಿಲ್ಲವಾದ ಕಾರಣ, ಹಿಡಿಯಲು ಪ್ರಯತ್ನ ಮಾಡಲಿಲ್ಲ…’
ಚಿತ್ರಕ ಹಿಂದೆ ಮೋಂಗನ ಕಥೆಯಲ್ಲಿ ಕೆಲವು ಭಾಗಗಳನ್ನು ಕೇಳಿದ್ದನು. ಈಗ ಈ ಹೆಂಗಸಿನ ವೃತ್ತಾಂತವನ್ನು ಕೇಳುತ್ತಲೇ ಇಪ್ಪತ್ತೈದು ವರ್ಷಗಳ ಹಿಂದೆ ಹೂಣರು ನಡೆಸಿದ ಅತ್ಯಾಚಾರದ ಚಿತ್ರ ಅಸ್ಪಷ್ಟವಾಗಿ ಕಣ್ಣ ಮುಂದೆ ಬಂದ ಹಾಗಾಯಿತು. ಹೆಂಗಸಿನ ಬಗ್ಗೆ ಅವನ ಮನಸ್ಸಿನಲ್ಲಿ ಸಹಾನುಭೂತಿ ಉಂಟಾಯಿತು. ಅವನು ಕತ್ತಲಿನಲ್ಲಿ ಆಕೆಯ ಕೈಗಳ ಮೇಲೆ ಕೈಯಿಟ್ಟು ‘ಹಿತಭಾಗ್ಯಳೆ! ನಿನ್ನ ನಿನ್ನ ಬಂಧು ಬಾಂಧವರು ಯಾರು ಯಾರು ಇದ್ದರು?’ ಎಂದು ಕೇಳಿದನು.
ಆ ಹೆಂಗಸು ದೀರ್ಘವಾಗಿ ನಿಟ್ಟುಸಿರು ಬಿಟ್ಟು ‘ಗಂಡ ಇದ್ದನು- ಒಬ್ಬಳು ಮಗಳಿದ್ದಳು-’ ಎಂದಳು.
‘ಬಹುಶಃ ಅವರು ಬದುಕಿರಬಹುದು. ನಾಳೆ ಬೆಳಗ್ಗೆ ನಾನು ಹೊರಗೆ ಹೋಗುತ್ತೇನೆ. ನಾನು ಬದುಕಿದ್ದರೆ ನಿನ್ನ ಉದ್ಧಾರಕ್ಕಾಗಿ ಪ್ರಯತ್ನ ಪಡುತ್ತೇನೆ. ನಿನ್ನ ಹೆಸರೇನು?
‘ಪೃಥಾ’.
ಒಳ್ಳೆಯದು. ಅಮ್ಮಾ, ಪೃಥಾ, ನಾನು ಸ್ಪಲ್ಪ ನಿದ್ದೆ ಮಾಡುತ್ತೇನೆ. ರಾತ್ರಿ ಕಳೆದು ಬೆಳಕು ಹರಿಯುವ ವೇಳೆಯಾಗಿರಬಹುದು. ನಾಳೆ ಬೆಳಗ್ಗೆ ಬಹುಶಃ ನನ್ನನ್ನು ಶೂಲಕ್ಕೇರಿಸಬಹುದು. ಆದರೂ ಒಂದು ಉಪಾಯ ಮಾಡುತ್ತೇನೆ. ಬಹುಶಃ ಬಿಡುಗಡೆ ಹೊಂದಬಹುದು.
‘ನೀನು ಯಾರು? ಅದನ್ನು ಹೇಳಲೇ ಇಲ್ಲವಲ್ಲ.’ ‘ನಾನು ಕಳ್ಳ. ನೀನು ರಾತ್ರಿಯಲ್ಲಿ ನಿದ್ದೆ ಮಾಡುವುದಿಲ್ಲವೆ?’
‘ಯಾವಾಗ ನಿದ್ದೆ ಮಾಡುತ್ತೇನೆಯೋ ಯಾವಾಗ ಎದ್ದಿರುತ್ತೇನೆಯೋ ನನಗೇ ಗೊತ್ತಿಲ್ಲ. ನೀನು ಮಲಗಿ ನಿದ್ದೆ ಹೋಗು. ನಾನು ಎಚ್ಚರವಾಗಿರುತ್ತೇನೆ.’
ಮುಂದುವರೆಯುವುದು…
ಎನ್. ಶಿವರಾಮಯ್ಯ (ನೇನಂಶಿ)