ನೀರಿನಡಿಯಲ್ಲಿ ವಿಶ್ವದ ಅತೀ ದೊಡ್ಡ ಸಸ್ಯ
ಇತ್ತೀಚಿಗೆ ವಿಜ್ಞಾನಿಗಳು ನೀರಿನಡಿಯಲ್ಲಿ ಬೆಳೆಯುತ್ತಿರುವ ವಿಶ್ವದ ಅತೀ ದೊಡ್ಡ ಸಸ್ಯವನ್ನು ಪತ್ತೆ ಹಚ್ಚಿದ್ದು ಈ ಬಗ್ಗೆ ಅಧ್ಯಯನ ವರದಿಯೊಂದು ರಾಯಲ್ ಸೊಸೈಟಿ ‘ಬಿ’ ಯಲ್ಲಿ ಪ್ರಕಟಗೊಂಡಿದೆ.
ಪಶ್ಚಿಮ ಆಸ್ಟ್ರೇಲಿಯಾದ ಶಾರ್ಕ್ ಕೊಲ್ಲಿಯಲ್ಲಿ ಪತ್ತೆಯಾದ ಈ ಸಸ್ಯವು ಒಂದೇ ಬೀಜದಿಂದ ಹರಡಿದ್ದು ಸುಮಾರು 4500 ವರ್ಷ ಹಳೆಯದಾಗಿದೆ ಹಾಗು ಸುಮಾರು 180 ಕಿಲೋ ಮೀಟರ್ ಉದ್ದವಿದೆ.
ಈ ಒಂದೇ ಸಸ್ಯವು ಸುಮಾರು 200 ಚದರ ಕಿಲೋ ಮೀಟರ್ ವರೆಗೆ ವ್ಯಾಪಿಸಿದೆ !!! ಸರಳವಾಗಿ ಹೇಳಬೇಕೆಂದರೆ ಈ ಸಸ್ಯದ ಮೇಲ್ಮೈ ವಿಸ್ತೀರ್ಣ ಗ್ಲ್ಯಾಸ್ಗೋ ನಗರಕ್ಕಿಂತ ದೊಡ್ಡದ್ದಿದ್ದು, ಮ್ಯಾನ್ ಹಟನ್ ದ್ವೀಪಕ್ಕಿಂತ ಮೂರು ಪಟ್ಟು ವಿಶಾಲವಾಗಿದೆ, ಸುಮಾರು 20000 ರಗ್ಬಿ ಮೈದಾನಗಳಿಗೆ ಸರಿ ಸಮಾನವಾಗಿದೆ.
ಮೊದಲು ಈ ಸಸ್ಯವನ್ನು ದೊಡ್ಡ ಸೀ ಗ್ರಾಸ್ (ಹುಲ್ಲುಗಾವಲು) ಎಂದೇ ನಂಬಿದ್ದರು, ಆದರೆ ಇದರ ಅನುವಂಶೀಯ ಪರೀಕ್ಷೆ ನಡೆಸಿದಾಗ ಇದು ಒಂದೇ ಒಂದು ಬೀಜದಿಂದ ಹರಡಿದ ಸಸ್ಯ ಎಂದು ವಿಜ್ಞಾನಿಗಳು ಕಂಡುಕೊಂಡರು. ಅಧ್ಯಯನದ ಪ್ರಕಾರ ಈ ಸಸ್ಯವು “Posidonia Australis” ಸೀ ಗ್ರಾಸ್ ನ ಏಕೈಕ ತದ್ರೂಪವಾಗಿದ್ದು, ಸುಮಾರು 8500 ವರ್ಷಗಳ ಹಿಂದೆ ಶಾರ್ಕ್ ಬೇ ಪ್ರದೇಶ ನೀರಲ್ಲಿ ಮುಳುಗಿದ ನಂತರ ಆಳವಿಲ್ಲದ ನೀರಿನಲ್ಲಿ ಈ ಸಸ್ಯ ರೂಪುಗೊಂಡಿದೆ ಎಂದು ಅಂದಾಜಿಸಿದ್ದಾರೆ.
ಈ ಸಸ್ಯ ಸಾವಿರಾರು ವರ್ಷಗಳಿಂದ ಬದಲಾಗುತ್ತಿರುವ ಹವಾಮಾನಕ್ಕೆ ಒಗ್ಗಿಕೊಂಡು ತನ್ನ ಅಸಮಾನ್ಯ ಗಾತ್ರವನ್ನು ಹಿಗ್ಗಿಸಿಕೊಳ್ಳುತ್ತಿರುವುದನ್ನು ನೋಡಿದರೆ ಪ್ರತಿಕೂಲ ಹವಾಮಾನವನ್ನು ಎದುರಿಸಬಲ್ಲ ಸ್ಥಿತಿಸ್ಥಾಪಕತ್ವ ಗುಣ ಹೊಂದಿರುವ ಸಸ್ಯ ಎನ್ನುವುದರಲ್ಲಿ ಅಚ್ಚರಿ ಇಲ್ಲ.
ಹೆಚ್ಚಿನ ಓದಿಗೆ ಈ ಕೆಳಗಿನ ಕೊಂಡಿಗಳನ್ನು ಬಳಸಿ
- https://www.ndtv.com/world-news/viral-video-researchers-discover-worlds-largest-plant-in-australia-3031026
- https://www.coastalnewstoday.com/post/aus-worlds-largest-plant-discovered-in-australias-shark-bay
- https://www.standard.co.uk/news/world/worlds-biggest-plant-western-australia-shark-bay-seagrass-b1003593.html
ನಾಗರಾಜ್ ಬೆಳ್ಳೂರು
ನಿಸರ್ಗ ಕನ್ಜರ್ವೇಶನ್ ಟ್ರಸ್ಟ್