ಗೆಳೆಯನೊಬ್ಬ ಸತ್ತ ಸುದ್ದಿ
ಗೆಳೆಯ
ನೀ ಹೋಗಿಬಿಟ್ಟ ಥಣ್ಣನೆ ಸುದ್ದಿ
ಈಗಷ್ಟೆ ತಿಳಿಯಿತು ಮೂರನೆ ಬಾಯಿಂದ
ಹೌದು, ನೋವಾಗದಿರದೆ?
ಅದೀಗ ನಿನಗೆಲ್ಲಿ ಅರಿವಾದೀತು
ನೀ ಬದುಕಿದ್ದಾಗಲೇ ಅಂಥದ್ದೊಂದು
ಕಿವಿಯಾಗಲಿ
ಅಥವ ಮನಸ್ಸಾಗಲಿ
ಎಲ್ಲಿತ್ತು ನಿನಗೆ
ಕಾಲೇಜಿನಿಂದಾಚೆಗೆ?
ಪ್ರೈಮರಿ ಶಾಲೆಯಲ್ಲೇ ನೀನು
ನನ್ನೆದೆಯೊಳಗೆ ಗೋಂದಾಗಿದ್ದವನು
ಅಂದಿನಿಂದ ಪ್ರಬುದ್ಧ ಪಥದವರೆಗು
ಹಾಗೆ ನನ್ನ ಕಾಡಿದವನು
ಕುಯ್ದರೂ ಬಿಡದೆ ಅಂಟಿದವನು!
ಏಕೋ ಏನೋ
ಕಾಮದ ಕಟು ಕಾಟದ ಕಜ್ಜಿ
ನಿನ್ನ ಮೈಗೆ ಏಡಿ ರೋಗದ ಹಾಗೆ ಮುತ್ತಿ
ನಿನ್ನ ಕೆಡವಿದ್ದು
ಅಂತ ನನಗನಿಸಿದ್ದು ಸತ್ಯ
ಜನ ಮಾತಾಡಿದ್ದು ಹರಡಿದ್ದು
ಎಲ್ಲ ಬೇರೆ
ನೀನೇ ಖುಷಿಯಿಂದ
ಪ್ರಬಲ ಮೆತ್ತಿಸಿಕೊಂಡದ್ದು
ಮುಂತಾಗಿ
ಯಾರೂ ಜಗದಿ ಸಂತರಿಲ್ಲ ನಿಜ
ಬಹುಶಃ ಸಂತರೂ ಕೂಡ
ಗಂಡಾಗಲಿ ಹೆಣ್ಣಾಗಲಿ ಎಲ್ಲ ಒಂದೇ
ಮಣ್ಣಲಿ ಹುಟ್ಟಿ ಬೆಳೆದವರು
ಎಲ್ಲರೊಳಗೂ ಗುಹ್ಯ ಗುಹೆ ಸುರಂಗ
ನಿನ್ನ ‘ಕ್ರೀಡೆ ಕೇಳಿ’ ಅತಿ ಎನಿಸಿ
ನಾ ಕೆಲವು ಸಲ ಹೇಳಿದೆ ನಿಜ
ಹಾಗಂತ ನಾ ನಿನ್ನ ಪ್ರೀತಿ ಗೋಂದನ್ನು
ನಿರಂತರ ತೊಡೆವ ಉದ್ದೇಶವಲ್ಲ
ಫುಟ್ ಪಾತಿನಲ್ಲೂ ಹಾಸಿಗೆ ಹಾಸಬಲ್ಲ
ನಿನ್ನ ತಡೆದು ಗೀಚಲೊಂದು ಎಲ್ಲೆ!
ಹೌದು
ಅಷ್ಟೆ ನನ್ನ ಘೋರ ತಪ್ಪು!
ಕಾಲದ ಚಲನೆ ಜೊತೆ
ಬದಲಾಯಿತು ನಿನ್ನ ನಿಷ್ಠುರ ನಡೆ
ಹಾಗೆ ಎಷ್ಟು ದೂರವೋ ನಾನರಿಯೆ
ನಡೆದು ಹೋಗುತ್ತಾ ಹೋಗುತ್ತಾ
ನೀನಸ್ತಂಗತನಾದೆ ನನ್ನಾಗಸದಿಂದ
ಈಗ
ಈ ದಿಢೀರ್ ಸುದ್ದಿ ನಾಟುವವರೆಗೆ
ನಿನ್ನ ಬಗ್ಗೆ ಸಂಪೂರ್ಣ ಕೋಮಾ
ನನ್ನ ಮೆದುಳ ಅಂಗಳದೊಳಗೆ!
ಸುದ್ದಿ ಅಂತೂ ಬಂದು
ಬಡಿದೆಚ್ಚರಿಸಿದ್ದಾಯಿತು
ಇಂಥ ಘಳಿಗೆಯಲಿ ಕೂಡ ನನಗೆ
ಅಥವ ಒಮ್ಮೆ ನೀ ಅಂಟಿದಂತಿದ್ದ
ನನ್ನೆದೆಯೊಳಗೆ
ಎಂಥ ತಂತಿ ಕೂಡ ಮಿಡಿಯದೆ
ಖಾಲಿ ಮೈದಾನದ ನಿರ್ಭಾವ!
ಇದೇನು
ಎಲ್ಲ ಗೆಳೆತನಗಳಿಗೆ ಮುನ್ನೆಚ್ಚರಿಕೆಯ
ದೃಷ್ಟಾಂತವೋ
ಅಥವ
ಆತ್ಮೀಯತೆಯ ಖೂನಿಯೋ…?
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಮೊಬೈಲ್: 98446 45459