ಕಟ್ಟುಹಾವು – ಇದು ಸೈಲೆಂಟ್ ಕಿಲ್ಲರ್

ಕಟ್ಟುಹಾವು – Common Krait

ನಮ್ಮ ಮಲೆನಾಡು ಭಾಗದಲ್ಲಿ ಕಟ್ಟುಹಾವು, ಕಡಂಬಳ ಹಾವು, ಕಟ್ಟು ಕಡಂಬಳ, ಕಟ್ಟು ಕನ್ನಡಿ ಹಾವು ಎಂದೆಲ್ಲ ಹೆಸರಿನಿಂದ ಕರೆವ ಈ ಹಾವಿಗೆ ಆಂಗ್ಲದಲ್ಲಿ Common Krait ಎನ್ನುತ್ತಾರೆ,ಭಾರತದ 4 ಅಪಾಯಕಾರಿ ಹಾವುಗಳಲ್ಲಿ (Big four venomous snakes) ಇದೂ ಒಂದು.

ನಮ್ಮಲ್ಲಿ 2-3 ಅಡಿ ಉದ್ದದ ಹಾವುಗಳನ್ನು ಈ ಜಾತಿಯಲ್ಲಿ ನೋಡಬಹುದು, ಸದಾ ರಾತ್ರಿ ಸಂಚಾರಿಯಾದ (Noctarnul) ಇದು ಹೆಚ್ಚಾಗಿ ಇತರ ಜಾತಿ ಹಾವುಗಳನ್ನೇ ತಿಂದು ಜೀವಿಸುತ್ತದೆ.

ಕಟ್ಟುಹಾವು – Common Krait ವಿಷಪೂರಿತ

ಸಾಮಾನ್ಯವಾಗಿ ಕಪ್ಪು ಬಣ್ಣದಂತೆ ಕಂಡು ಬಂದರೂ ಇದರ ಬಣ್ಣ ಕಡು ನೀಲಿ, ತಲೆ ಕುತ್ತಿಗೆಗಿಂತ ಸ್ವಲ್ಪ ಚಿಕ್ಕದು, ಮೈ ಮೇಲೆ ಬಿಳಿ ಬಣ್ಣದ ಜೋಡಿ ಅಡ್ಡ ಪಟ್ಟಿ (ಕಟ್ಟುಗಳು)ಗಳು, ಕೆಲವು ಸಲ ಒಂದೊಂದೆ ಬಿಳಿ ಪಟ್ಟಿಗಳು ಇರುವ ಹಾವು ಕೂಡ ಕಾಣುತ್ತವೆ, ಬೆಳಕು ಕಂಡಾಗ ಸ್ವಲ್ಪ ಅಂಜುವ ಈ ಹಾವುಗಳು ಟಾರ್ಚ್ ಬೆಳಕು ಬೀಳುತ್ತಿದ್ದಂತೆ ಓಡಿಹೋಗುವುದೇ ಹೆಚ್ಚು.

ಸೈಲೆಂಟ್ ಕಿಲ್ಲರ್: ಸಾಮಾನ್ಯವಾಗಿ ವಿಷಪೂರಿತ ಹಾವುಗಳು ಕಡಿದಾಗ, ವಿಷವು ದೇಹ ಸೇರಿದ್ದರೆ ಹಾವು ಕಡಿದ ಜಾಗದಲ್ಲಿ ಕ್ರಮೇಣ ಉರಿ, ನೋವು, ಸೆಳೆತ ಹಾಗು ಆ ಭಾಗ ಊದಿಕೊಳ್ಳುವಂತಹ ಲಕ್ಷಣಗಳು ಕಾಣಿಸುತ್ತವೆ. ಆದರೆ ಈ ಕಟ್ಟಾವು ಕಡಿದ ಜಾಗದಲ್ಲಿ ಉರಿ ಸೆಳೆತಗಳಂತಹ ಲಕ್ಷಣ ಕಾಣಿಸದೆ, ಕೊನೆ ಹಂತದಲ್ಲಿ ಹೊಟ್ಟೆ ನೋವು, ವಾಂತಿಗಳಂತಹ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಅಧಿಕವಾಗಿರುತ್ತದೆ. ಹೆಚ್ಚಾಗಿ ಮಕ್ಕಳೆ ಈ ಹಾವಿನ ಕಡಿತಕ್ಕೆ ಒಳಗಾಗಿ ಸಾವಿಗೀಡಾದ ಘಟನೆಗಳು ವರದಿಯಾಗುತ್ತಿವೆ, ಹಾಗಾಗಿ ಈ ಹಾವನ್ನ ಸೈಲೆಂಟ್ ಕಿಲ್ಲರ್ ಎಂದು ಕರೆಯುತ್ತಾರೆ. ನಮ್ಮ ಮಲೆನಾಡು ಭಾಗದಲ್ಲಿ ಇದರ ಕಡಿತಗಳು ಕಡಿಮೆ, ಬಯಲು ಸೀಮೆಯಲ್ಲಿ ಅಧಿಕ ಜನ ಕಡಿತಕ್ಕೆ ಒಳಗಾದ ವರದಿಗಳಾಗುತ್ತವೆ.

ನಮ್ಮಲ್ಲಿ ಕಟ್ಟುಹಾವನ್ನೇ ಹೋಲುವ ತೋಳ ಹಾವು (wolf snake) ಇದ್ದು ಇದು ವಿಷ ರಹಿತವಾಗಿದೆ. ಅನುಭವ ಉಳ್ಳವರು ಮಾತ್ರ ಈ ಎರಡು ಹಾವುಗಳ ನಡುವಿನ ವ್ಯತ್ಯಾಸ ಗುರುತಿಸಬಲ್ಲರು.

ತೋಳ ಹಾವು Wolf snake ವಿಷ ರಹಿತ

ಸಾಮಾನ್ಯವಾಗಿ ಇಲಿಗಳಿಗಾಗಿ ಮನೆ ಸೇರುವ ಹಾವುಗಳು ಇಲಿ ಹುಡುಕಾಟದಲ್ಲಿರುವಾಗ ನಿದ್ರಿಸುವ ಮನುಷ್ಯನ ಸಮೀಪ ಬರುವ ಸಾಧ್ಯತೆ ಇರುತ್ತದೆ. ಮನುಷ್ಯ ನಿದ್ರಿಸುವಾಗ ಕೆಲವು ಸಲ ತನ್ನ ಕೈ-ಕಾಲುಗಳನ್ನು ತನಗರಿವಿಲ್ಲದಂತೆ ಆಗಾಗ ಚಲಿಸುತ್ತಿರುತ್ತಾನೆ, ಬೇಟೆಯ ಹುಡುಕಾಟದಲ್ಲಿರುವ ಹಾವುಗಳು ಚಲಿಸುವ ಕೈ-ಕಾಲುಗಳನ್ನೇ ಬಲಿ ಜೀವಿಗಳು ಎಂದು ಕಡಿವ ಸಾಧ್ಯತೆ ಇರುತ್ತದೆ.ಹಾಗಾಗಿ ಮನೆಗಳಲ್ಲಿ ಇಲಿಗಳು ಇರದಂತೆ ನೋಡಿಕೊಳ್ಳಿ.

ಹಾವುಗಳು ಶೀತ ರಕ್ತ(Cold-blooded) ಜೀವಿಗಳು, ಅತಿಯಾದ ಶೀತ, ಅತಿಯಾದ ಬಿಸಿ ಸಹಿಸುವುದಿಲ್ಲ. ತೀವ್ರ ಚಳಿಗಾಲದಲ್ಲಿ ಹಾವು ಮನೆ ಸೇರಿದಾಗ ಮನುಷ್ಯನ ಬಿಸಿಗೆ ಮಲಗಿರುವ ಹೊದಿಕೆಯೊಳಗೆ ಸೇರಿಕೊಂಡು, ವ್ಯಕ್ತಿ ಹಾಸಿಗೆಯಲ್ಲಿ ಹೊರಳಿದಾಗ ಹಾವಿನ ಮೇಲೆ ಭಾರ ಬಿದ್ದರೆ ಆಗಲೂ ಕಡಿವ ಸಾಧ್ಯತೆ ಇದೆ. ಹಾಗಾಗಿಯೇ ಇದನ್ನು ಕಂಡ ನಮ್ಮ ಹಿರಿಯರು ಹಾವಿಗೆ ತೊಂದರೆ ಪಡಿಸಿದರೆ ನಮ್ಮ ಮಗ್ಗಲ್ಲಲ್ಲಿ ತೊಂದರೆಪಡಿಸಿದ ಹಾವು ಬಂದು ಮಲಗಿ ನಮ್ಮನ್ನು ಕಡಿದು ಸಾಯಿಸುತ್ತದೆ ಎಂದು ಹೇಳುತ್ತಿದ್ದಿರಬೇಕು. ಗುಡಿಸಲು ಮನೆಗಳಾದರೆ ಮಲಗುವಾಗ ಹಾಸಿಗೆ ಸುತ್ತಲೂ ಸೊಳ್ಳೆ ಪರದೆ ಬಳಸಿದರೆ ಈ ಅಪಾಯದಿಂದ ಪಾರಾಗಬಹುದು.

ಕಟ್ಟಾವುಗಳು ರಾತ್ರಿ ಸಮಯದಲ್ಲಿ ಸಂಚರಿಸುವುದರಿಂದ ಮನೆ ಬಾಗಿಲುಗಳನ್ನು ಮುಚ್ಚಿ ಇರುವುದು ಸೂಕ್ತ ಹಾಗು ರಾತ್ರಿ ಸಂಚರಿಸುವವರು ಕಡ್ಡಾಯವಾಗಿ ಟಾರ್ಚ್ ಬಳಸಲೇ ಬೇಕು ಆದರೆ ದುರಂತವೆಂದರೆ ರಾತ್ರಿ ವೇಳೆ ಅನೇಕ ಜನ ಕತ್ತಲೆಯಲ್ಲಿ ಬರಿಗಾಲ್ಲಲ್ಲಿ (ಶೂ ದರಿಸದೆ) ನಡೆದು ಸಾಗುವುದನ್ನು ನೋಡಿದ್ದೇನೆ.

ಕಟ್ಟುಹಾವು ಚಿಕ್ಕದಾದ ವಿಷದ ಹಲ್ಲನ್ನು (Fang’s) ಹೊಂದಿದ್ದು ಈ ಹಲ್ಲು ಚುಚ್ಚಿದಾಗ ( ಕಡಿದಾಗ ) ಚಿಕ್ಕ ಮುಳ್ಳು ಚುಚ್ಚಿದಂತಹ ಅನುಭವವಾಗುತ್ತದೆ. ಇದರ ವಿಷ ನರಮಂಡಲ ಹಾಳು ಮಾಡುವಂತಹ ನ್ಯೂರೋಟಾಕ್ಸಿನ್ (Neurotoxin) ವಿಷ ಹೊಂದಿದ್ದು ನಾಗರ ಹಾವಿಗಿಂತಲೂ ಒಂದಿಷ್ಟು ಹೆಚ್ಚು ಪರಿಣಾಮಕಾರಿ, ಇದರ ವಿಷ ಬೇರೆ ವಿಷದ ಹಾವುಗಳಂತೆ ಉರಿ ನೋವು ಸೆಳೆತಗಳಂತಹ ಲಕ್ಷಣ ತೋರಿಸದೇ ಇರುವುದರಿಂದ ಇನ್ನಷ್ಟು ಅಪಾಯಕಾರಿ ಆಗಬಲ್ಲದು.

ಪ್ರಸ್ತುತ ನಮ್ಮ ದೇಶದಲ್ಲಿ 4 ಜಾತಿಯ ಹಾವಿನ ಕಡಿತಕ್ಕೆ (Big four venomous snake) ಒಂದೇ ರೀತಿಯ ಔಷಧಿ (ASV) ಲಭ್ಯವಿದೆ, ಆದರೆ ಇತ್ತೀಚಿನ ಸಂಶೋದನೆಗಳ ಪ್ರಕಾರ ಈಗ ಲಭ್ಯವಿರುವ ಔಷಧ ಕಟ್ಟಾವಿನ ಕಡಿತಕ್ಕೆ ಅಷ್ಟು ಪರಿಣಾಮಕಾರಿಯಲ್ಲ ಎನ್ನುತ್ತಿವೆ.
ಈ ಬಗ್ಗೆ ವರದಿಯನ್ನು ಈ ಕೆಳಗಿನ ಲಿಂಕ್ ಬಳಸಿ ಓದಬಹುದು.

https://science.thewire.in/health/snakebites-anti-venom-irula-cooperative-cobra-krait-viper-romulus-whitaker/

ಮುಂದೆ ಆಯಾ ಹಾವಿನ ಕಡಿತಕ್ಕೆ ನಿರ್ದಿಷ್ಟವಾದ ಔಷದಿ ಬರುವ ಸಾಧ್ಯತೆ ಇದೆ.ವಿದೇಶಗಳಲ್ಲಿ ಆಯಾ ಹಾವಿನ ಕಡಿತಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಲಭ್ಯವಿದೆ.

ಚಿಕಿತ್ಸೆ: ಹಾವಿನ ಕಡಿತಕ್ಕೆ ನಮ್ಮ ದೇಶದಲ್ಲಿ ಪ್ರಸ್ತುತ ಇರುವ ಪರಿಣಾಮಕಾರಿ ಔಷಧಿ ಎಂದರೆ ಅದು ASV (Anti snake venom) ಮಾತ್ರ ಹಾಗಾಗಿ ಹಾವು ಕಡಿದ ಕೂಡಲೇ (ತುರ್ತಾಗಿ) ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವುದೊಂದೆ ಅಪಾಯದಿಂದ ತಪ್ಪಿಸಿಕೊಳ್ಳುವ ಮಾರ್ಗ.

ಹಾವುಗಳು ನಮ್ಮ ಜೀವ ವೈವಿಧ್ಯ ಸಂರಕ್ಷಕ ಕೊಂಡಿಗಳು, ಈ ನೈಸರ್ಗಿಕ ಕೆಲಸದ ಜೊತೆಗೆ ಮನುಷ್ಯನಿಗೂ ಉಪಕಾರಿ, ರೈತನ ಬೆಳೆಗಳನ್ನು ಇಲಿಗಳಿಂದ ರಕ್ಷಿಸಿ ಅಧಿಕ ಆದಾಯ ತರಬಲ್ಲವು, ಹಾವುಗಳು ಕಡಿಯದಂತೆ ಮುಂಜಾಗ್ರತೆ ವಹಿಸಿದರೆ ಅವುಗಳಿಂದ ನಮಗೆ ಯಾವುದೇ ಅಪಾಯವಿಲ್ಲ.

ಜೀವಿಸಿ, ಜೀವಿಸಲು ಬಿಡಿ.

ನಾಗರಾಜ್ ಬೆಳ್ಳೂರು
ನಿಸರ್ಗ ಕನ್ಜರ್ವೇಶನ್ ಟ್ರಸ್ಟ್

Related post

Leave a Reply

Your email address will not be published. Required fields are marked *