ಯುಗಾಧಿ ಮರಳಿದೆ

ಯುಗಾಧಿ ಹಬ್ಬವು ಹಿಂದುಗಳಿಗೆ ದೊಡ್ಡ ಹಬ್ಬ. ಹಿಂದೂಗಳ ಅನೇಕ ಹಬ್ಬಗಳಲ್ಲಿ ಬಹು ಮುಖ್ಯವಾದದ್ದು ಯುಗಾಧಿ ಹಬ್ಬ. ಹಿಂದೂಗಳ ಪಂಚಾಗದ ಪ್ರಕಾರ ಮೊದಲ ಹಬ್ಬ, ಹಳೆಯ ಸಂವತ್ಸರವನ್ನು ಕಳೆದು ಹೊಸ ಸಂವತ್ಸರದ ಚೈತ್ರ ಮಾಸದ ಮೊದಲ ದಿನವೇ ಯುಗಾಧಿ ಹಬ್ಬದ ಆಚರಣೆ. ಈ ಹಬ್ಬದ ಸಂದರ್ಭದಲ್ಲಿ ಪ್ರಕೃತಿಯು ಬದಲಾಗುವ ಪರಿಯನ್ನು ನೋಡಿ ಸಂತೋಷ ಪಡುವ ಸಂದರ್ಭ ಎನ್ನಬಹುದು, ಅಂದರೆ ಚೈತ್ರಮಾಸ ಆಗಮನವೆಂದರೆ ಮನಸ್ಸು ಅರಳಿಸುವಂತಹ ವಸಂತ ಮಾಸ ಎಂದು ಕೂಡ ಹೇಳಬಹುದು. ಈ ಹಬ್ಬ ಬಂದಾಗ ಚೆಂದದ ಕಳೆ ಉಂಟು, ನೋಡಿದಕಡೆಯಲ್ಲೆಲಾ ಮರ ಗಿಡಗಳು ಚಿಗುರಿ ಹೊಚ್ಚ ಹೊಸ ಎಲೆಗಳು ಮೂಡುತ್ತವೆ. ಕೆಲವೇ ದಿನಗಳ ಹಿಂದೆ ಎಲೆಗಳೆಲ್ಲ ಉದುರಿ ಬರಡಾಗಿದ್ದ ಮರಗಳು ಈ ಚೈತ್ರಮಾಸದಲ್ಲಿ ಹೊಂಗೆ, ಬೇವು, ಮಾವಿನ ಮರಗಳು ಚಿಗುರಿನ ಜೊತೆ ಹೂಗಳಿಂದ ಅಲಂಕರಿಸುವ ಪ್ರಕೃತಿ ಸೊಬಗನ್ನು ನೋಡಲು ಕಣ್ಣಿಗೆ ಹಬ್ಬ. ಇದನ್ನು ಉಪಯೋಗಿಸಿಕೊಂಡು ಅನೇಕ ಪಕ್ಷಿಗಳ ಜೊತೆಗೆ ಕೋಗಿಲೆಯು ಕೂಗುವುದನ್ನು ನೋಡಿದರೆ ಮನಸ್ಸಿಗೆ ಮುದ ನೀಡುತ್ತದೆ. ಅನೇಕ ಕವಿಗಳು ಇದನ್ನು ನಾನಾ ರೀತಿಯಲ್ಲಿ ವರ್ಣಿಸುತ್ತಾರೆ. ಇದರಿಂದಾಗಿ ಈ ಹಬ್ಬವನ್ನು ಪ್ರಕೃತಿಯ ಹಬ್ಬ ಎಂದು ಕೂಡ ಕರೆಯಬಹುದು.

ಹಬ್ಬದ ಆಚರಣೆ

 ಮನೆಯಲ್ಲಿ ಎಲ್ಲರು ಉಷಾಕಾಲದಲ್ಲಿ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ, ಮನೆಯೆಲ್ಲ ಶುಚಿಗೊಳಿಸಿ ವಿಶೇಷವಾದ ರಂಗೋಲಿಯನ್ನು ಬಿಡುತ್ತಾರೆ. ಇದರ ಜೊತೆಯಲ್ಲಿ ಮನೆಯ ಮುಖ್ಯದ್ವಾರ ಹಾಗು ದೇವರ ಮನೆಯ ದ್ವಾರಕ್ಕೆ ಮಾವಿನ ಎಲೆಯ ತೋರಣ ಕಾಟುತ್ತಾರೆ. ಮನೆ ಮಂದಿಯೆಲ್ಲ ಅಭ್ಯಂಜನ ಸ್ನಾನ ಮಾಡಿ ಹೊಸ ಬಟ್ಟೆ ಉಟ್ಟು ವಿಶೇಷವಾಗಿ ದೇವರ ಪೂಜೆಯ ಮಾಡುವುದರ ಜೊತೆಗೆ ಹೊಸ ವರ್ಷದ ಪಂಚಾಂಗವನ್ನು ದೇವರ ಮನೆಯಲ್ಲಿ ಇತ್ತು ಪೂಜಿಸುವುದು ರೂಡಿ. ಪೂಜೆಯಾದ ನಂತರ ಎಲ್ಲರು ದೇವರ ತೀರ್ಥ ಪ್ರಸಾದದ ಜೊತೆಗೆ ಬೇವು ಬೆಲ್ಲವನ್ನು ಸೇವಿಸುತ್ತಾರೆ. ಬೇವು ಬೆಲ್ಲ ಸೇವಿಸುವುದು ಹೊಸ ವರ್ಷದಲ್ಲಿ ಬರುವ ಕಷ್ಟ ಸುಖ ದುಃಖಗಳನ್ನೂ ಸಮವಾಗಿ ಹಂಚಿಕೊಳ್ಳುವ ನಂಬಿಕೆಯಿಂದ. ಮತ್ತು ಕೆಲವರು ಅವರಿಗೆ ಇಷ್ಟವಾದ ಮತ್ತು ಮನೆ ದೇವರುಗಳ ದೇವಸ್ಥಾನಗಳಿಗೆ ಹೋಗಿ ದೇವರ ಆಶೀರ್ವಾದಗಳನ್ನು ಪಡೆಯುತ್ತಾರೆ.

ಬೇವು ಬೆಲ್ಲವನ್ನು ಸೇವಿಸುವಾಗ ಹೇಳಿಕೊಳ್ಳುವ ಮಂತ್ರ

ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ|

ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ||

ಇದರರ್ಥ ಹೀಗಿದೆ – ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ.

ಈ ಹಬ್ಬದಲ್ಲಿ ಮನೆಮಂದಿಯೆಲ್ಲ ಹೊಸ ಬಟ್ಟೆಗಳನ್ನು ಧರಿಸಿ ವಿಶೇಷವಾದ ಅಡುಗೆ ಜೊತೆಗೆ ಪ್ರತಿಯೊಬ್ಬರ ಮನೆಯಲ್ಲೂ ಹೋಳಿಗೆ ಪಾಯಸವನ್ನು ಊಟ ಮಾಡಿ ಸಂತೋಷಪಡುತ್ತಾರೆ. ಸಾಯಂಕಾಲ ಹಿರಿಯವರಿಂದ ಪಂಚಾಂಗ ಶ್ರವಣವನ್ನು ಮಾಡಿ ಈ ವರ್ಷದಲ್ಲಿ ನೆಡೆಯುವ ಮಳೆ ಬೆಳೆಗಾಲ ವಿಚಾರ ದೇಶಕ್ಕೆ ಆಗುವ ಒಳ್ಳೆಯ ಮತ್ತು ಕೆಟ್ಟ ವಿಷಯಗಳನ್ನು ತಿಳಿದುಕೊಂಡು ಅದಕ್ಕೆ ಪರಿಹಾರಗಳನ್ನು ತಿಳಿದು ಕೊಳ್ಳುವುದರ ಮೂಲಕ ಜೊತೆಗೆ ತಮ್ಮ ಜಾತಕಾನುಸಾರವಾಗಿ ರಾಶಿ ಫಲಗಳ್ಳನ್ನು ತಿಳಿಯಲಾಗುತ್ತದೆ. ಇದಾದ ನಂತರ ಹಳ್ಳಿಗಳಲ್ಲಿ ಮಕ್ಕಳು ಮತ್ತು ದೊಡ್ಡವರು ಕೂಡ ಉಯಾಲೆಯನ್ನು ಆಡುವುದು ರೂಡಿಯಲ್ಲಿ ಇರುತ್ತದೆ. ನಗರಗಳಲ್ಲೂ ಅನೇಕ ರೀತಿಯ ಆಟಗಳನ್ನು ಆಡುವುದರ ಮೂಲಕ ವರ್ಷದಲ್ಲಿ ಆಗುವ ಲಾಭ ನಷ್ಟಗಳನ್ನು ಊಹಿಸುತ್ತಾರೆ.

ಮತ್ತೆ ಸಾಯಂಕಾಲ ಎಲ್ಲರು ಚಂದ್ರನ ದರ್ಶನ ಮಾಡಿ ಗುರು ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದಗಳನ್ನೂ ಪಡೆದುಕೊಳ್ಳುತ್ತಾರೆ. ಈ ಹಬ್ಬದ ಹಿಂದಿನ ದಿನದಿಂದ ಹಿಡಿದು ಮುಂದಿನ ಎರಡು ದಿನಗಳವರೆಗೂ ಆಚರಿಸುತ್ತಾರೆ.

ಒಟ್ಟಿನಲ್ಲಿ ಈ ಹಬ್ಬವು ಬೇರೆ ಹಬ್ಬಗಳ ರೀತಿ ಯಾವುದೇ ದೇವರ ಹೆಸರಿನಲ್ಲಿ ಆಚರಿಸುವ ಹಬ್ಬವಲ್ಲ. ಹೀಗಾಗಿ ಯಾವುದೇ ಜಾತಿಗೆ ಸೇರಿದ ಹಬ್ಬವು ಅಲ್ಲ. ಎಲ್ಲರು ಹಬ್ಬದ ಊಟವನ್ನು ಮಾಡಿ ಸಂತೋಷಪಟ್ಟು ಹೊಸ ವರ್ಷವನ್ನು ಸ್ವಾಗತಿಸುವ ಹಬ್ಬ ಎನ್ನಬಹುದು. ಈ ಹಬ್ಬಕ್ಕೆ ಮತ್ತು ದೀಪಾವಳಿಗೆ ಹಳ್ಳಿಯ ಕಡೆ ಬಂದು ಗಾದೆ ಮಾತಿದೆ ಅಂದರೆ ಉಂಡದ್ದೇ ಯುಗಾದಿ ಹಬ್ಬ ಮಿಂದದ್ದೇ ದೀಪಾವಳಿ ಎಂಬ ರೂಡಿ ಮಾತು ಇದೆ.

ಈ ಯುಗಾದಿ ಎಲ್ಲ ಜನಗಳಿಗೂ ಸಂತಸತರಲಿ ಹಾಗು ಕಷ್ಟ ಸುಖಗಳನ್ನು ಸಮಾನವಾಗಿ ಹಂಚಲಿ ಎಂದು ಆರೈಸುವ.

ಕುಮಾರಸ್ವಾಮಿ

ಹಿರಿಯ ಚಿಂತಕರು ಹಾಗು ಲೇಖಕರು 

Related post