ನೀವು ಕಂಡ ಭೈರಪ್ಪ ಬೇರೆ, ನನಗೆ ಸಿಕ್ಕ ಭೈರಪ್ಪ ಬೇರೆ!
ನಾಲ್ಕು ವರ್ಷಗಳ ಹಿಂದೆ ರಂಗಭೂಮಿ ಕಲಿಕೆಗಾಗಿ ಆಯ್ಕೆಯಾಗಿದ್ದರಿಂದ ಪುಸ್ತಕಗಳನ್ನು ಓದಲೇಬೇಕಿದ್ದ ಅನಿವಾರ್ಯತೆ ಸೃಷ್ಟಿಯಾಯ್ತು. ಅವರಿವರೆನ್ನದೆ ಸಿಕ್ಕ ಸಿಕ್ಕವನ್ನೆಲ್ಲ ಓದೋಕೆ ಶುರುಮಾಡಿದೆ. ನನ್ನ ಗೆಳೆಯ ಡಾ. ಎಸ್. ಎಲ್. ಭೈರಪ್ಪನವರ “ಯಾನ” ಕೃತಿಯ ಹೆಸರು ಸೂಚಿಸಿದ. ವಿಜ್ಞಾನದ ವಿದ್ಯಾರ್ಥಿಯಾದ್ದರಿಂದ “ಯಾನ” ನನ್ನ ಮೆಚ್ಚಿನ ಕೃತಿಯಾಯಿತು. ಅಲ್ಲಿಂದ ನನ್ನಲ್ಲಿ “ಭೈರಪ್ಪ” ಎಂಬ ಮಹಾಚೇತನದ ಹುಡುಕಾಟ ಶುರುವಾಯ್ತು. “ಸಾರ್ಥ, ಭಿತ್ತಿ, ಉತ್ತರಕಾಂಡ” ದಂತಹ ಕೃತಿಗಳು ನನ್ನಲ್ಲಿ ಇನ್ನಿಲ್ಲದಂತೆ ಬಹಳ ಪ್ರಭಾವ ಬೀರಿದವು. ಬರಹಗಾರನಾದ ನನಗೆ ಕೃತಿ ರಚನೆಯ ಬಗೆಗೆ ನಮಗೆ ಇರಬೇಕಾದ ಶಿಸ್ತು, ಸಹನೆ ಎಲ್ಲವನ್ನು ಭೈರಪ್ಪನವರ ಒಂದೊಂದೇ ಕೃತಿಗಳು ಪಾಠಮಾಡುತ್ತಾ ಹೋದವು. ಜೀವನದಲ್ಲಿ ಏನಾದರೂ ಆಗಲಿ ಒಮ್ಮೆ ಕಣ್ಣಾರೆ ಭೈರಪ್ಪನವರನ್ನು ನೋಡಿಯೇ ತೀರಬೇಕೆಂದು ನಾನು ನನ್ನ ಗೆಳೆಯ ಇಬ್ಬರೂ ಸೇರಿ ನಿರ್ಧರಿಸಿಬಿಟ್ಟೆವು. ಆಗಿನಿಂದ ಸುಸಮಯಕ್ಕಾಗಿ ಕಾಯುತ್ತಲೇ ಇದ್ದೆ. ಆ ದಿನ ನನ್ನ ಜೀವನದಲ್ಲಿ ಬರುತ್ತದೆಂದು ಕನಸಿನಲ್ಲಿಯೂ ಊಹಿಸಿರಲಿಲ್ಲ. ನನ್ನ ಜೀವನದ ಮಹತ್ತರ ದಿನಗಳಲ್ಲಿ ಒಂದು ಜುಲೈ 9 2022.
ಮೈಸೂರಿಗೆ ಸುತ್ತೋಕೆ ಅಂತ ಹೋದವ ನಾ. ಈ ಹಾಳದ ಜಡಿ ಮಳೆ ಮನಸ್ಸು – ಮೆದುಳು ಎರಡನ್ನೂ ಸಪ್ಪೆ ಮಾಡಿಸಿಬಿಟ್ಟಿತ್ತು. ಸುತ್ತೋಕೆ ಅಂತ ಹೋದವ ಒಂದೇ ದಿನಕ್ಕೆ ವಾಪಾಸ್ಸಾಗುವ ಮನಸ್ಸು ಮಾಡಿದೆ. ವಾಪಾಸ್ಸಾಗುವ ಮುಂಚೆ ಭೈರಪ್ಪನವರು ಒಮ್ಮೆ ಕಣ್ಮುಂದೆ ಬಂದು ಹೋದರು. ತಡಮಾಡದೆ ಈ ವಿಷಯವಾಗಿ “ಪರ್ವ” ಮಹಾ ರಂಗಪ್ರಯೋಗದಲ್ಲಿ ಧುರ್ಯೋಧನನ ಪಾತ್ರ ಮಾಡಿದ ನೀನಾಸಂ ನಟ ಮತ್ತು ಕಥೆಗಾರ “ಜಿ.ಕೆ ನಂದಕುಮಾರ್” ರವರನ್ನು ಭೇಟಿಯಾದೆ. “ನೋಡು ಅವರು ಹಂಗೆ ಯಾರ ಕೈಯಾಗೂ ಸಿಗಂಗಿಲ್ಲ, ಯಾರ ಮಾತು ನಡೆಯಂಗಿಲ್ಲ, ನಿನಗ ನೋಡ್ಬೇಕು ಅನ್ನೋ ಹುಚ್ಚೈತಿ, ನೋಡೋವರೆಗೂ ಬೆನ್ನು ಬಿಡಬೇಡ” ಅಂತ ಒಂದೇ ಮಾತು ಹೇಳಿ ಸುಮ್ಮನಾದರು. ನನಗೆ ಎಲ್ಲಿಲ್ಲದ ಭಯ. ಯಾಕೆಂದರೆ ಅಂಥಹ ಒಬ್ಬ ಮಹಾನ್ ವ್ಯಕ್ತಿಯನ್ನು ನೋಡಲು ಇಡೀ ಭಾರತದ ಜನವೇ ಕಾಯುತ್ತಿದೆ. ಯಾರಿಗೂ ಸಿಕ್ಕಿಲ್ಲ. ಕಾರಣ ಅವರ ಆರೊಗ್ಯದಲ್ಲಾದ ಏರುಪೇರು. ಇಂಥಹ ಪರಿಸ್ಥಿತಿಯಲ್ಲಿ ನಾನೊಬ್ಬ ಯುವಬರಹಗಾರನಾಗಿ ಅವರನ್ನು ಕಾಣಲು ಸಾಧ್ಯವೇ ಇಲ್ಲ ಅಂತ ನಾನೂ ಕೆಲವೊಮ್ಮೆ ನಿರ್ಧರಿಸಿಬಿಟ್ಟಿದ್ದೆ. ಯಾಕೆಂದರೆ ಹೊರ ಜಗತ್ತು ಅವರ ಬಗ್ಗೆ ಕಟ್ಟುವ ಊಹಾಪೋಹಗಳು. ಅದರ ಹೊರತಾಗಿ ಭೈರಪ್ಪನವರು ನನಗಿಷ್ಟವಾಗಿದ್ದು ಸಾಹಿತ್ಯದ ಹಾದಿಯಲ್ಲಿ.
ಧೈರ್ಯ ಮಾಡಿ ಬೆಂಗಳೂರಿಗೆ ಹೊರಡುವ ಮುಂಚೆ ಅವರಿವರನ್ನು ಕೇಳುತ್ತಾ ಅವರ ಮನೆ ಬಾಗಿಲಿಗೆ ಹೋದೆ. ಭೈರಪ್ಪನವರು ಇರಲಿಲ್ಲ. ಅವರ ಪತ್ನಿ ನಾಳೆ ಬನ್ನಿ ಅಂದರು. ಸಿಗುತ್ತಾರೆಂಬ ಭರವಸೆಯನ್ನೂ ಕೊಡಲಿಲ್ಲ. ಆಗಲೆ ಎರಡು ದಿನ ಕಳೆದಿದ್ದ ನನಗೆ ಇನ್ನೊಂದು ದಿನ ಕಾಯುವುದು ದೊಡ್ಡದಾಗಿರಲಿಲ್ಲ. ಈ ಮುಂಚೆ ಎಂಥೆಂಥವರ ಸಹಾಯ, ಸಲಹೆಗಳನ್ನ ಪಡೆದು ಹರಸಾಹಸಪಟ್ಟರೂ ಅವರ ಮನೆ ಬಾಗಿಲಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಈಗ ನಾನೇ ಸರ್ಕಸ್ಸು ಮಾಡಿ ಮನೆ ಬಾಗಿಲಿಗೆ ಬಂದು ವಾಪಾಸ್ಸು ಹೋಗುವುದು ಇಷ್ಟವಿರಲಿಲ್ಲ. ಅವತ್ತು ರಾತ್ರಿ ಕಳೆದು ಬೆಳಿಗ್ಗೆ ಅವರ ಮನೆಗೆ ಹೋಗಲು ತಯಾರಾದೆ. ಆದರೆ ಉಷಾರಿಲ್ಲದೆ ವಿಶ್ರಾಂತಿಯಲ್ಲಿ ಇದುದ್ದರಿಂದ ನನ್ನ ಹಿನ್ನೆಲೆ ತಿಳಿದು ಸಂಜೆ ಬನ್ನಿ ಅಂದರು. ಆದದ್ದಾಗಲಿ ಎಂದು ಮತ್ತೆ ಸಹನೆ ತಂದುಕೊಂಡು ಕಾಯಲು ನಿರ್ಧರಿಸಿದಾಗ ಗೆಳತಿಯೊಬ್ಬಳು ಬೇಸರ ಕಳೆಯಲು ಜೊತೆಯಾದಳು. ಭೈರಪ್ಪನವರಿಗಾಗಿ ಕಾಯುತ್ತಿರುವ ವಿಷಯ ತಿಳಿದು ಆಕೆಯೂ ನನ್ನ ಜೊತೆ ಬಂದಳು.
ಸಂಜೆಯ ವೇಳೆಗೆ ಮನೆಯ ಕಾಂಪೌಂಡಿನ ಹೊರಗೆ ಬರಿ ಕೈಯಲ್ಲಿ ನಿಂತಿದ್ದೆವು. ನಮ್ಮ ಬರಿ ಕೈಗಳು ನಮ್ಮನ್ನೇ ನೋಡಿ ನಗುತ್ತಿದ್ದವು. ನಾನು ಬರೆದ ಪುಸ್ತಕಗಳನ್ನು ಕೊಟ್ಟು, ಓದಿ ಅಂತ ಹೇಳಿ ಅವರಿಗೆ ಇನ್ನಷ್ಟು ಕಷ್ಟ ಕೊಡಲು ನನಗಿಷ್ಟವಿರಲಿಲ್ಲ. ಹಾಗಾಗಿ ಆರೋಗ್ಯ ವಿಚಾರಿಸುವ ಕಾರಣ ಹಿಡಿದು, ಒಂದು ಕವರಿನಲ್ಲಿ ಹಣ್ಣುಗಳನ್ನು ಕೊಂಡು ಮನೆ ಒಳಗೆ ಹೋದೆವು. ಅವರ ಪತ್ನಿ ನಮ್ಮನ್ನು ತಡೆದು ನಿಲ್ಲಿಸಿ ವಿಸಿಟರ್ಸ್ ಜಾಗದಲ್ಲಿ ಕೂರಿಸಿದರು. ಸ್ವಲ್ಪ ಸಮಯದ ನಂತರ ಅಷ್ಟು ದಿನ ನಾನು ನೋಡಲು ಉತ್ಸಾಹದಿಂದ ಕಾಯುತ್ತಿದ್ದ ಮಹಾಚೇತನ ಕೈಯಲ್ಲಿ ಕನ್ನಡಕ ಒರೆಸುತ್ತಾ ನನ್ನೆದುರಿಗೆ ನಡೆದು ಬರುತ್ತಿದ್ದಂತೆಯೇ ಇನ್ನೊಂದು ರೂಮಿಗೆ ಕರೆದರು. ಅದು ಅವರಿಗೆ ಸಂದ ಪ್ರಶಸ್ತಿಗಳನ್ನು ಜೋಡಿಸಿದ್ದ ಕೊಠಡಿ. ನನಗೆ ಆಗಲೇ ನಡುಕ ಶುರುವಾಗಿತ್ತು.
ಭೈರಪ್ಪನವರು ಸಿಟ್ಟಾಗ್ತಾರೆ, ಬೈತಾರೆ, ಸುಮ್ ಸುಮ್ನೆ ಯಾರನ್ನೂ ಮೀಟ್ ಮಾಡಲ್ಲ ಅನ್ನೋ ವದಂತಿಗಳೆಲ್ಲ ನನ್ನ ತಲೆ ತುಂಬಿದ್ದವು. ಕೈಯಲ್ಲಿ ಹಣ್ಣಿನ ಕವರ್ ಹಿಡಿದು ರೂಮೊಳಗೆ ಕಾಲಿಟ್ಟೆ. ಕೂರಲು ಹೇಳಿದರು. ನನಗೆ ಏನು ಮಾತನಾಡಬೇಕೆಂದು ತೋಚಲಿಲ್ಲ. ಆಗಾಗ ಗೆಳತಿಯ ಮುಖ ನೋಡುತ್ತಿದ್ದೆ ಅವಳದೂ ಅದೇ ಮುಖಭಾವ. ಸಿಗುತ್ತಾರೆಂದು ಮೊದಲೇ ತಿಳಿದಿದ್ದರೆ ಏನಾದರೂ ಪ್ರಶ್ನಾವಳಿ ತಯಾರಿಸಿಕೊಂಡು ಬರಬಹುದಿತ್ತು. ಆದರೆ ಅನಿರೀಕ್ಷಿತವಾಗಿ ನಡೆದುಹೋದ ಈ ಘಟನಾವಳಿಗಳು ನೆನೆದಾಗಲೆಲ್ಲ ಅಚ್ಚರಿಯನ್ನುಂಟುಮಾಡುತ್ತವೆ. ಮೌನವನ್ನು ಸೀಳುವಂತೆ ಭೈರಪ್ಪನವರು ಮಾತನಾಡಲು ಶರುಮಾಡಿದರು. ಮಹಾಸಾಗರದ ಮುಂದೆ ದಡದಲ್ಲಿ ಕಟ್ಟಿ ನಿಲ್ಲಿಸಿದ್ದ ಮರಳಿನ ಮನೆಯಾಗಿದ್ದೆ ನಾನು. ಮಾತಿನ ಭರಾಟೆಯಲ್ಲಿ ಸಮುದ್ರದ ಅಲೆಗಳು ಯಾವಾಗಬೇಕಾದರೂ ದಡ ಅಪ್ಪಳಿಸಬಹುದೆಂಬ ಅರಿವು ನನಗಿತ್ತಾದರೂ.. ಆ ಕ್ಷಣದಲ್ಲಿ ನಾನು ಅಸಹಾಯಕ. ಆ ದುಗುಡವನ್ನು ಹೋಗಲಾಡಿಸಿದ್ದು ಭೈರಪ್ಪನವರ ಆರಂಭಿಕ ಆತ್ಮೀಯ ಮಾತುಗಳೇ..
ನನ್ನ ಹಿನ್ನೆಲೆಯ ಬಗ್ಗೆ ಅವರೇ ಕೇಳಿತಿಳಿದುಕೊಂಡರು. ಸಿನೆಮಾ ಕುರಿತಂತೆ ಮಾತು ಆರಂಭವಾಯಿತು. ನನ್ನಲ್ಲೂ ಧೈರ್ಯ ಮನೆಮಾಡತೊಡಗಿತು. ಭೈರಪ್ಪನವರ ಆತ್ಮೀಯತೆ ನನ್ನಲ್ಲಿದ್ದ ಭಯ, ಊಹಾಪೋಹಗಳನ್ನು ಹೊಡೆದೋಡಿಸಿತ್ತು. ನಾನು ಏನೂ ತಯಾರಾಗಿ ಹೋಗದಿದ್ದರೂ.. ಮಾತನಾಡುತ್ತಾಹೋದಂತೆ ತಲೆಯಲ್ಲಿ ಪ್ರಶ್ನೆಗಳ ಸುರಿಮಳೆಯೇ ತಯಾರಾಗಿತ್ತು. ಅವರು ಮಾತನಾಡಿಸಿದರೆ ಇನ್ನೂ ಒಂದು ಗಂಟೆ ಮಾತನಾಡಲು ರೆಡಿ ಇದ್ದರು. ಆದರೆ ಅವರ ಮುಖದಲ್ಲಿ ಆಯಾಸ ಗಮನಿಸಿ ನಾನೇ ಮಾತು ನಿಲ್ಲಿಸಿದೆ. ಈ ಮಧ್ಯೆ ಅವರ ಹೆಂಡತಿ ಬಾಳೆಹಣ್ಣು ಮತ್ತು ಚೌಚೌ ತುಂಬಿದ ಪ್ಲೇಟುಗಳನ್ನು ನಮ್ಮ ಮುಂದೆ ಇಟ್ಟು ಹೋಗಿದ್ದರು. ಭೈರಪ್ಪನವರು ನೋಡಲು ಎರಡು ನಿಮಿಷವಾದರೂ ಸಿಕ್ಕರೆ ಸಾಕು ಎಂದು ಹೋಗಿದ್ದ ನನಗೆ ಅವರೊಂದಿಗೆ ಕಳೆದ ಆ ಎರಡು ಗಂಟೆಗಳ ಸಂಜೆ ಬಹಳ ಅರ್ಥಪೂರ್ಣವೆನಿಸಿತು. ಈ ವಿಷಯದಲ್ಲಿ ನಾನು ಬಹಳ ಅದೃಷ್ಟವಂತ. ಇದಕ್ಕೆ ಕಾರಣರಾದ ಎಲ್ಲರಿಗೂ ಈ ಲೇಖನ ಅರ್ಪಣೆ. (ಸಂದರ್ಶನ ಪ್ರತ್ಯೇಕವಾಗಿ ಪ್ರಕಟಗೊಂಡಿದೆ)
ಅನಂತ ಕುಣಿಗಲ್
ಯುವ ಸಾಹಿತಿ