ಪರಿಚ್ಛೇದ – 11
ಸಡಿಲವಾದ ಕಗ್ಗಂಟು
ಉತ್ತರ ದಿಕ್ಕಿನ ನಗರದ್ವಾರವನ್ನು ದಾಟಿ ರಟ್ಟಾ ರಕ್ಷಕಭಟರೊಂದಿಗೆ ಮುಂದೆ ನಡೆದಳು. ಇನ್ನು ಮುಂದೆ ರಾಜಮಾರ್ಗವು ಮೃಗಯಾ- ಕಾನನದಿಂದ ಸುತ್ತುವರಿದು ಹಾವಿನ ನಡೆಯಂತೆ ಅಂಕು ಡೊಂಕಾಗಿ, ಕೆಲವು ಕಡೆ ಏರುತ್ತ ಕೆಲವು ಕಡೆ ಇಳಿಯುತ್ತ ಮುಂದೆ ಹೋಗಿ ಕಾಡಿನಲ್ಲಿ ಮರೆಯಾಗಿತ್ತು. ಬೆಳಗಿನ ಎಳೆ ಬಿಸಿಲಲ್ಲಿ ಈ ದೃಶ್ಯವು ಮನೋಹರವಾಗಿ ಕಾಣುತ್ತಿತ್ತು.
ಈ ಸುಂದರವಾದ ಪ್ರಕೃತಿಯ ದೃಶ್ಯದ ಮೇಲೆ ಒಮ್ಮೆ ದೃಷ್ಟಿ ಹಾಯಿಸಿ ರಟ್ಟಾ ಕುದುರೆಯನ್ನು ನಿಲ್ಲಿಸಿ, ಸೇನಾನಿಯನ್ನು ಹತ್ತಿರ ಕರೆದು, ‘ನಕುಲ, ನೀನು ರಕ್ಷಕ ಭಟರನ್ನು ಕರೆದುಕೊಂಡು ಮುಂದೆ ನಡೆ’ ನಾವು ನಿಧಾನವಾಗಿ ನಿಮ್ಮ ಹಿಂದೆ ಬರುತ್ತೇವೆ’ ಎಂದು ಹೇಳಿದಳು.
ನಕುಲ ಕಿಂಚಿತ್ತು ಗಾಬರಿಗೊಂಡು ‘ಆದರೆ’ ಎಂದು ರಾಗ ತೆಗೆದನು. ಆಗ ರಟ್ಟಾ ‘ಜೊತೆಯಲ್ಲಿ ಆರ್ಯ ಚಿತ್ರಕ ವರ್ಮಾ ಇದ್ದಾರೆ. ನಮಗೆ ಬೇರೆ ರಕ್ಷಕರು ಬೇಕಾಗಿಲ್ಲ. ನೀವು ಹೊರಡಿರಿ. ಸ್ವಲ್ಪ ವೇಗವಾಗಿ ಕುದುರೆಯನ್ನು ಓಡಿಸಿದರೆ ಮಧ್ಯಾಹ್ನದ ಒಳಗಾಗಿ ಪಾಂಥಶಾಲೆಯನ್ನು ತಲುಪಬಹುದು. ಅಲ್ಲಿ ಮಧ್ಯಾಹ್ನದ ಭೋಜನ ಮುಗಿಸಿ, ಚಷ್ಟನ ದುರ್ಗದ ಕಡೆಗೆ ಪ್ರಯಾಣ ಮಾಡಬಹುದು’ ಎಂದು ಸಲಹೆ ಕೊಟ್ಟಳು.
ನಕುಲನು ಮತ್ತೆ ಇದನ್ನು ಒಪ್ಪದಿದ್ದಾಗ, ರಟ್ಟಾ ಅವನನ್ನು ಸಮಾಧಾನಪಡಿಸಿ ‘ರಾತ್ರಿ ಮೊದಲ ಯಾಮದ ಹೊತ್ತಿಗೆ ಚಷ್ಟನ ದುರ್ಗ ತಲುಪುತ್ತೀರಿ. ನಾವು ನಾಳೆ ಬರುತ್ತೇವೆಂದು ಮಹಾರಾಜರಿಗೆ ತಿಳಿಸಿರಿ. ಮಹಾರಾಜರು ಅಸ್ವಸ್ಥರಾಗಿದ್ದಾರೆ. ನಾನು ಬರುತ್ತಿರುವುದು. ತಿಳಿದರೆ ಅವರಿಗೆ ಸ್ವಲ್ಪ ಸಮಾಧಾನವಾಗಬಹುದು ಎಂದು ಹೇಳಿದಳು.
ಇಷ್ಟಾದರೂ ನಕುಲನ ಮನಸ್ಸು ರಾಜಕುಮಾರಿಯೊಬ್ಬಳನ್ನೇ ಬಿಟ್ಟು ಹೋಗಲು ಹಿಂದೇಟು ಹಾಕುತ್ತಿತ್ತು. ಇದನ್ನರಿತ ರಟ್ಟಾ ನಕುಲನನ್ನು ಒಮ್ಮೆ ದಿಟ್ಟಿಸಿ ನೋಡಿ ಮೃದು ಮಧುರವಾದ ಮಂದಹಾಸ ಬೀರಿದಳು. ಆ ನಗು ನಕುಲನ ಮೇಲೆ ಮೋಡಿ ಮಾಡಿದಂತಾಯಿತು. ಅವನು ಮಂತ್ರಮುಗ್ಧನಾಗಿ ‘ದೇವದುಹಿತೆಯ ಅಪ್ಪಣೆಯಂತೆ’ ಎಂದು ಹೇಳಿ ಸಂಗಡಿಗರನ್ನು ಕರೆದುಕೊಂಡು, ವೇಗವಾಗಿ ಕುದುರೆಯನ್ನು ಓಡಿಸುತ್ತ ಹೊರಟು ಹೋದನು. ಮಂತ್ರಿಗಳ ಆದೇಶವನ್ನು ಮೀರಿದರೂ ಮೀರಬಹುದು. ಆದರೆ ರಾಜನಂದಿನಿಯ ನಗುವಿನ ಒತ್ತಾಯಕ್ಕೆ ಮಣಿಯದಿರುವುದು ಸಾಧ್ಯವಿಲ್ಲದ ಮಾತು.
ಸೇನಾನಿ ಹಾಗೂ ರಕ್ಷಕ ಭಟರ ಕುದುರೆಗಳ ಖುರ ಪುಟ ಧ್ವನಿಯು ದೂರಹೋದಂತೆಲ್ಲ ಕ್ಷೀಣವಾಗುತ್ತ ಬಂದಿತು. ರಟ್ಟಾ ಕೂಟ ಅನಾಯಾಸವಾಗಿ ಮಂದಗತಿಯಲ್ಲಿ ಕುದುರೆಯನ್ನು ನಡೆಸುತ್ತ ಮುನ್ನಡೆಯುತ್ತಿದ್ದಳು. ಚಿತ್ರಕನೂ ಪಕ್ಕದಲ್ಲಿಯೇ ಇದ್ದನು.
ರಟ್ಟಾಳ ಮುಖ ಉತ್ಫುಲ್ಲ; ಕಣ್ಣುಗಳು ಚಂಚಲ. ಅವಳು ಒಮ್ಮೆ ನಿರ್ಮಲವಾದ ಆಕಾಶದ ಕಡೆ ನೋಡಿದರೆ, ಇನ್ನೊಮ್ಮೆ ಮೃಗಯಾ-ಕಾನನವನ್ನು ಕುತೂಹಲದಿಂದ ನೋಡುವಳು. ಕುದುರೆಯ ಕೊರಳ ಗಂಟೆ ಹಾಗೂ ಕುದುರೆಯ ತಾಳಬದ್ಧವಾದ ನಡಿಗೆಯ ಸಪ್ಪಳ ಅವನ ಕಿವಿಗೆ ಅಮೃತವರ್ಷವನ್ನು ಕರೆದಿದೆ.
ಆದರೆ, ಅವನ ಮುಖ ಗಂಭೀರ; ಹುಬ್ಬು ಗಂಟಿಕ್ಕಿದೆ. ಅವನು ತನ್ನ ಕುದುರೆಯ ನಿಮಿರಿದ ಕಿವಿಗಳನ್ನೇ ನೋಡುತ್ತ ಕುಳಿತಿದ್ದಾನೆ. ಅವನ ಅಂತರಂಗದಲ್ಲಿ ತುಮುಲ, ತಳಮಳ. ಸೇಡು ತೀರಿಸಿಕೊಳ್ಳಲು ನಿಯತಿಯು ಅವನಿಗೆ ಮತ್ತೆ ಮತ್ತೆ ಅವಕಾಶ ಕಲ್ಪಿಸುತ್ತಿದೆ. ಅದು ಹೀಗೇಕೆ ಮಾಡುತ್ತಿದೆ? ಅದರ ಉದ್ದೇಶವೇನಿರಬಹುದು. ಪ್ರತೀಕಾರಕ್ಕೆ ಅವಕಾಶ ದೊರೆತರೂ ಅವನು ಅದನ್ನು ಕೈಬಿಡುತ್ತಿದ್ದಾನೆ! ಹಿಂಸೆಗೆ ಪ್ರತಿಯಾಗಿ ಹಿಂಸೆ ಇದು ಕ್ಷತ್ರಿಯರ ಸ್ವಧರ್ಮ ಆದರೂ ಅವನು ಏಕೆ ಮುಂದಾಗುತ್ತಿಲ್ಲ?
ನಿರ್ಜನ ಪ್ರದೇಶ. ಎಲ್ಲಿಯೂ ಜನ ಸಂಚಾರವಿಲ್ಲ. ಯಾವಾಗಲೋ ಒಂದೊಂದು ಸಲ ಮೊಲಗಳು ದಾರಿಯ ಪಕ್ಕ ಕಾಣಿಸಿಕೊಳ್ಳುತ್ತವೆ. ಕುದುರೆಯ ಗೊರಸಿನ ಶಬ್ದಕ್ಕೆ ಹೆದರಿ ಕುಪ್ಪಳಿಸುತ್ತ ಓಡಿಹೋಗುತ್ತವೆ. ರಸ್ತೆಯ ಮೇಲೆ ಉದ್ದವಾಗಿ ಬಿದ್ದಿದ್ದ ಮರದ ನೆರಳು ಚಿಕ್ಕದಾಗುತ್ತಿದೆ.
ಎರಡು ಕುದುರೆಗಳೂ ಅಕ್ಕಪಕ್ಕ ನಡೆಯುತ್ತಿವೆ. ಸುಗೋಪಾಳ ಅರವಂಟಿಗೆ ಹಿಂದೆ ಬಿದ್ದಿತು. ಸುಗೋಪಾ ಈ ದಿನ ಬಂದಿರಲಿಲ್ಲ. ಅರವಂಟಿಗೆ ಶೂನ್ಯವಾಗಿತ್ತು.
ರಟ್ಟಾ ಇಲ್ಲಿಯವರೆಗೂ ಚಿತ್ರಕನ ಕಡೆಗೆ ಸಂಪೂರ್ಣವಾಗಿ ದೃಷ್ಟಿ ಹರಸಿರಲಿಲ್ಲ. ಅವಳ ಮನಸ್ಸಿನಲ್ಲಿ ಸ್ವಲ್ಪ ಸಂಕೋಚವಿದ್ದಂತಿತ್ತು. ಚಿತ್ರಕನೇ ಮಾತು ಕತೆಗೆ ಮುಂದಾಗುತ್ತಾನೆಂಬ ಆಸೆ ಅವಳಲ್ಲಿತ್ತು. ಆದರೆ ಚಿತ್ರಕನು ಅದಕ್ಕೆ ಮುಂದಾಗದಿದ್ದಾಗ ರಟ್ಟಾ ತನ್ನ ಮನಸ್ಸನ್ನು ಗಟ್ಟಿ ಮಾಡಿಕೊಂಡು ನಗು ಮುಖ ಮಾಡಿಕೊಂಡು ಅವನ ಕಡೆ ತಿರುಗಿ ‘ಆರ್ಯ ಚಿತ್ರಕ, ತಾವು ಏಕೆ ಮೌನವಾಗಿದ್ದೀರಿ? ಸುಂದರವಾದ ಈ ಪ್ರಕೃತಿಯ ನವನವೀನ ಶೋಭೆಯು ತಮಗೆ ಆನಂದವನ್ನು ಕೊಡುತ್ತಿಲ್ಲವೆ?’ ಎಂದು ಕೇಳಿದಳು.
ಚಿತ್ರಕ ರಟ್ಟಾಳ ಕಡೆ ಕಣ್ಣು ಹೊರಳಿಸಿದನು. ಕ್ಷಣ ಕಾಲ ಅವನ ಕಣ್ಣು ಕೋರೈಸಿದಂತಾಯಿತು. ಎಂಥ ಅಪೂರ್ವ ರೂಪವತಿ ಈ ರಾಜಕನ್ಯೆ! ಒಂದೇ ದೇಹದಲ್ಲಿ ಕಾಠಿಣ್ಯ ಮತ್ತು ಕೋಮಲತೆ, ದೃಢತೆ ಮತ್ತು ಸರಸತೆಯ ಎಂಥ ಅಪರೂಪದ ಸಮಾವೇಶ! ಚಿತ್ರಕನು ಹಿಂದೆಯೂ ಒಂದು ಬಾರಿ ರಾಜಕನ್ಯೆಯನ್ನು ಪುರುಷವೇಷದಲ್ಲಿ ನೋಡಿದ್ದನು. ಆದರೆ ಇಂದಿನ ಪುರುಷವೇಷದಲ್ಲಿ
ಏನೋ ಭಿನ್ನತೆ ಇದ್ದ ಹಾಗೆ ಕಾಣಿಸಿತು. ವೇಷಭೂಷಣದ ಪೌರುಷವು ಆಕೆಯ ಅಕಳಂಕ ನಾರೀತ್ವವನ್ನು ಅಲಂಕರಿಸಿತ್ತೇ ಹೊರತು ಮರೆಮಾಚಲಾಗಿರಲಿಲ್ಲ. ಹೂವಿನ ದಂಟಿನಂತೆ ಸೊಂಟದ ಮೇಲ್ಭಾಗಕ್ಕೆ ಹಬ್ಬಿ ಕೇಸರ ಕುಸುಮದ ಕಾಂತಿಯನ್ನು ಪಸರಿಸುತ್ತ ಅರಳಿತ್ತು. ಆಪೀನ ವಕ್ಷಸ್ಥಳದ ಮೇಲೆ ಬಲವಾಗಿ ಬಿಗಿದಿದ್ದ ಬಲೆಯಾಕಾರದ ಸುವರ್ಣ ಕವಚವು ಯೌವನದ ಉನ್ಮಾದಕತೆಯನ್ನು ಸ್ವರ್ಣಶೃಂಖಲೆಗಳಿಂದ ಬಿಗಿದಿರುವ ಹಾಗೆ ಕಾಣುತ್ತಿತ್ತು. ಎಲ್ಲಕ್ಕೂ ಮಿಗಿಲಾಗಿ ತೀಕ್ಷ ಮಧುರ ಮುಖ ಬೇರೆ! ಇದು ಕೇವಲ ರಕ್ತ ಮಾಂಸದ ಸಮಾವೇಶದಿಂದಾದ ಸುಂದರ ಮುಖವಲ್ಲ; ಇದು ಸಮ ಪ್ರಮಾಣದ ಅಂಗ-ಪ್ರತ್ಯಂಗಗಳ ಸುಂದರ ಕೊಡುಗೆಯೂ ಅಲ್ಲ. ಆಕೆಯ ಆಂತರಿಕ ಸೌಂದರ್ಯದ ಕಾಂತಿಯು ಮುಖದಲ್ಲಿ ಪ್ರತಿಬಿಂಬಿತವಾಗುತ್ತಿದೆಯೋ ಎಂಬಂತೆ ಕಾಣುತ್ತಿತ್ತು.
ಇಷ್ಟಾದರೂ ಚಿತ್ರಕನ ಅಶಾಂತ ಮನಸ್ಸು ಶಾಂತವಾಗಲಿಲ್ಲ. ಬದಲಾಗಿ ಇನ್ನೂ ವಿರುದ್ಧವಾಗಿ ರೂಪುಗೊಂಡಿತು. ಈ ರಾಜಕುಮಾರಿಯು ಅವನ ಸಂಗಡ ಇಷ್ಟು ದಿನವೂ ಇಷ್ಟು ನಯವಾಗಿ ಏಕೆ ವ್ಯವಹರಿಸುತ್ತಿದ್ದಾಳೆ? ಇದಕ್ಕೆ ಬದಲಾಗಿ ಅವಳು ತನ್ನ ಸ್ಥಾನಗೌರವದಿಂದ ಅವನನ್ನು ತುಚ್ಛೀಕರಿಸಿದ್ದರೆ ಒಳ್ಳೆಯದೇ ಆಗುತ್ತಿತ್ತು. ರಾಜಕನ್ಯೆಗೆ ಅವನ ನಿಜವಾದ ಸ್ವರೂಪವು ತಿಳಿದಿದ್ದರೆ ಆಕೆ ಹೀಗೆ ಮೃದು ಮಧುರವಾಗಿ ನಡೆದುಕೊಳ್ಳುತ್ತಿರಲಿಲ್ಲ. ಒಂದು ವೇಳೆ
ತಿಳಿದಿದ್ದರೆ ಏನಾಗುತ್ತಿತ್ತು.
ಚಿತ್ರಕನು ಮಾತನಾಡಿದಾಗ ಅವನ ಧ್ವನಿಯಲ್ಲಿ ಈ ಪ್ರಶ್ನೆಗಳ ಪ್ರಚ್ಛನ್ನ ಪ್ರತಿಧ್ವನಿ ಇತ್ತು. ಅವನು ರಟ್ಟಾಳ ಕಡೆಯಿಂದ ತನ್ನ ಕಣ್ಣುಗಳನ್ನು ಹೊರಳಿಸಿ, ಚಲಿಸುತ್ತಿರುವ ಕುದುರೆಯ ಅಲುಗಾಡದ ಚಾಮರದ ತುದಿಯನ್ನೇ ನೋಡುತ್ತ, ಗಂಭೀರವಾಗಿ, ‘ಬೆಂಗಾವಲಿನವರನ್ನು ಮುಂದೆ ಕಳುಹಿಸಿಕೊಟ್ಟು ತಾವು ತಪ್ಪು ಮಾಡಿದಿರಿ’ ಎಂದು ಎಚ್ಚರಿಸಿದನು.
ಚಿತ್ರಕನು ಮಾತನಾಡಿದಾಗ ಅವನ ಧ್ವನಿಯಲ್ಲಿ ಈ ಪ್ರಶ್ನೆಗಳ ಪ್ರಚ್ಛನ್ನ ಪ್ರತಿಧ್ವನಿ ಇತ್ತು. ಅವನು ರಟ್ಟಾಳ ಕಡೆಯಿಂದ ತನ್ನ ಕಣ್ಣುಗಳನ್ನು ಹೊರಳಿಸಿ, ಚಲಿಸುತ್ತಿರುವ ಕುದುರೆಯ ಅಲುಗಾಡದ ಚಾಮರದ ತುದಿಯನ್ನೇ ನೋಡುತ್ತ, ಗಂಭೀರವಾಗಿ, ‘ಬೆಂಗಾವಲಿನವರನ್ನು ಮುಂದೆ ಕಳುಹಿಸಿಕೊಟ್ಟು ತಾವು ತಪ್ಪು ಮಾಡಿದಿರಿ’ ಎಂದು ಎಚ್ಚರಿಸಿದನು.
ಹಲ್ಲು ಮುಡಿ ಕಚ್ಚಿ ರಟ್ಟಾ ಎದುರು ದಿಕ್ಕಿನ ಕಡೆ ನೋಡಿದಳು. ಮುಚ್ಚಿದ ಬಾಯಿಯಿಂದ ನಗು ಹೊರ ಹೊಮ್ಮಲಿಲ್ಲ. ಕ್ಷಣಕಾಲ ಚಿತ್ರಕನ ಕಡೆಗೆ ದೃಷ್ಟಿ ಹರಿಸದೆಯೇ ಆಕೆ ಮೃದು ಮಧುರ ಧ್ವನಿಯಲ್ಲಿ, ‘ತಾವು ಅಜ್ಞಾತ ಕುಲಶೀಲರೇನು?’ ಎಂದು ಆಶ್ಚರ್ಯವಾಗುವ ಹಾಗೆ ಪ್ರಶ್ನಿಸಿದಳು. ಚಿತ್ರಕನು ಚಕಿತನಾಗಿ ಆಕೆಯ ಕಡೆ ನೋಡಿದನು.
ಎನ್. ಶಿವರಾಮಯ್ಯ (ನೇನಂಶಿ)