ಒಂದೆ ತಳಿಗೆಯೊಳುಂಡು, ಒಂದೆ ಹಾಸಿನೊಳರಗಿ
ಒಂದೆ ಮನೆಯಂಗಳದಲಿ ಆಡಿ ನಲಿದವರ
ಬಂಧನವು ಕಡಿಯುವುದೆ ಬೇರೆ ಮನೆ ಹೆಣ್ಣೊಂದು
ಬಂದ ಕೂಡಲೆ ಹೇಳು- || ಪ್ರತ್ಯಗಾತ್ಮ ||
ತಾಯ್ ತಂದೆಗಳ ಕಂಡು ಮಗು ಅಮ್ಮ, ‘ಅಪ್ಪ’ ಎನೆ
ಬಾಯ್ ತುಂಬ ಅಣ್ಣ ‘ಮೇಣ್ಅಕ್ಕ’ ಎಂದನೆಲು
ಬಾಯಿನುಡಿ ಅಲ್ಲ, ಅವು ಕನ್ನಡ ನುಡಿ ಹಿರಿಮೆ
ತಾಯ್ ನುಡಿ ಅಕಾರದಿ- || ಪ್ರತ್ಯಗಾತ್ಮ ||
ನಿನ್ನ ಹೊಟ್ಟೆಯು ಮುಖವು ಬೆಂಕಿಗೆದುರಾಗಿರಲಿ
ಬೆನ್ನು ತೋರಿಸಬೇಡ ಬೆಂಕಿಗೆಂದೆಂದೂ
ನಿನ್ನ ಮುಖವನು ರವಿಯ ಬಿಸಿಲಿಗೊಡ್ಡಲು ಬೇಡ
ಬೆನ್ನು ಕೊಡು ಸೂರ್ಯನಿಗೆ- || ಪ್ರತ್ಯಗಾತ್ಮ ||
ತರವೆ ಮಸಣದ ಬೆಂಕಿ ಮೈಯ ಕಾಯಿಸಿಕೊಳ್ಳಲು ?
ಅರಿಯೊ ನೀನ್ ಅದರಿಂದ ಆಯುಷ್ಯ ಹಾನಿ
ಪರಮ ಪಾವನವಾದ ಹೋಮಾಗ್ನಿ ಧೂಮದಿಂ
ಹಿರಿದಪ್ಪುದಾಯುಷ್ಯ – || ಪ್ರತ್ಯಗಾತ್ಮ ||
ಮೂಡ ಬಡಗಣ ಕಡೆಯ ಬಿಳಿಯ ಎಕ್ಕದ ಬೇರ
ನೋಡಿ ತೆಗೆದರಿಸಿನದ ಬಟ್ಟೆಯಲಿ ಬಿಗಿದು
ಮೂಡಣಕೆ ಮುಖ ಮಾಡಿ ಸಾಮ್ರಾಣಿ ಧೂಪ ಕೊಡು
ಮೂಡಲಯ್ಯಗೆ ನಮಿಸು- || ಪ್ರತ್ಯಗಾತ್ಮ ||
ಎನ್. ಶಿವರಾಮಯ್ಯ (ನೇನಂಶಿ)
ವಾಚನ: ಗೌರಿದತ್ತ