ಅಲೆಗಳ ಕಥೆ – ಸಮರ್ಥ ಶ್ರೀಧರ
ಸಾಹಿತ್ಯದ ಮುಖಾಂತರವೇ ಪರಿಚಯವಾದ ಗೆಳೆಯ, ನನ್ನ ಕಾಲದ ಬಡ್ಡಿಂಗ್, ಕಥೆಗಾರ ಹಾಗೂ ಸಭ್ಯ ವ್ಯಕ್ತಿತ್ವದ “ಸಮರ್ಥ ಶ್ರೀಧರ” ರವರು ವೃತ್ತಿಯಿಂದ ಗ್ರಾಫಿಕ್ ಡಿಸೈನರ್ ಆದರೂ ಕೂಡ ಸಾಹಿತ್ಯದ ಕಡೆಗೆ ಅವರಿಗಿರುವ ಒಲವು ಬೆರಗು ಮೂಡಿಸುತ್ತದೆ. ಅವರ ಚೊಚ್ಚಲ ಕೃತಿ “ಅಲೆಗಳ ಕಥೆ” ಕಥಾಸಂಕಲನ ಕುರಿತ ನನ್ನ ಅಭಿಪ್ರಾಯ ಇಂತಿದೆ.
ಶ್ರೀಧರ ಸಮರ್ಥ ರವರು ಈ ಸಂಕಲನದ ಮೂಲಕ ಕಥೆ ಕಟ್ಟಲು ಸಮರ್ಥರು ಎನಿಸಿಕೊಂಡಿದ್ದಾರೆ. ಇಲ್ಲಿನ ಎಲ್ಲಾ ಕಥೆಗಳಲ್ಲೂ ಜೀವನದ ಗಾಢ ಅನುಭವಗಳಿವೆ. ತನ್ನ ಸುತ್ತಲಿನ ಸಂಸ್ಕೃತಿಯ ಸೊಬಗು ತುಂಬಿ ತುಳುಕುತ್ತಿದೆ. ಕೆಲವು ಕಥೆಗಳಲ್ಲಿ ಬಾಲ್ಯ ಕಣ್ಮುಂದೆ ರಪ್ ಅಂತ ಪಾಸಾದಾಗ ಸಿಗುವ ಚೈತನ್ಯವನ್ನು ಈ ಕಥೆಗಳು ನಮಗೆ ಕೊಡುತ್ತವೆ.
ಎಲ್ಲ ಕಥೆಗಾರರ ಆರಂಭಿಕ ಸಂಕಲನದಂತೆ ಕಚ್ಚಾ ವಿಷಯಗಳನ್ನು ಆಧರಿಸಿದ, ಇನ್ನೂ ಮಾಡಬೇಕಾದ ಕಥೆಗಳು ಇಲ್ಲಿವೆ. ಕೆಲವೊಂದು ಕಡೆ ಆಗಿರುವ ಅಕ್ಷರ ದೋಷಗಳನ್ನು ಹೊರತುಪಡಿಸಿದರೆ, ಅವರ ಪ್ರಾಂತ್ಯದ ಭಾಷೆಯನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಆ ಭಾಷಾ ಶೈಲಿ ಓದುಗನಿಗೆ ಮುದ ನೀಡುತ್ತದೆ. ಪುಸ್ತಕದ ಮುದ್ರಣ ಅಚ್ಚುಕಟ್ಟಾಗಿದ್ದು 9 ಭಿನ್ನ ಕಥೆಗಳು ಇಲ್ಲಿ ಓದುಗನಿಗೆ ಸಿಗುತ್ತವೆ. ಲೇಖಕರೇ ಹೇಳುವ ಹಾಗೆ ಇಲ್ಲಿನ ಎಲ್ಲ ಕಥೆಗಳು ಎಲ್ಲೋ ಶುರುವಾಗಿ, ಸುಳಿವು ಕೊಡದಂತೆ ಇನ್ನೆಲ್ಲೋ ಮುಗಿದುಬಿಡುತ್ತವೆ.
ಪ್ರತಿ ಕತೆಯ ತಂತ್ರಗಳೂ ವಿಭಿನ್ನವಾಗಿವೆ. ನಮ್ಮ ಸುತ್ತಲೇ ನಡೆಯುವ ಘಟನೆಗಳನ್ನು ಹಾಲು-ಜೇನಿನಂತೆ ಪೋಣಿಸಿ ನಮ್ಮುಂದೆ ಇರಿಸಿದ್ದಾರೆ. ಎಲ್ಲ ಕಥೆಗಳಲ್ಲೂ ಒಂದೊಂದು ವಿಷಯವನ್ನು ಹೇಳಲು ಮುಂದಾಗಿರುವ ಅವರ ಪ್ರಯತ್ನ ನಿಜಕ್ಕೂ ಮೆಚ್ಚುವಂತದ್ದು. ಈ ಕಥೆಗಳ ಓದಿನಿಂದ ಅವರ ಮುಂಬರುವ ಕಥೆಗಳನ್ನು ಓದಲು ನಾನಂತು ಕಾತುರನಾಗಿದ್ದೇನೆ.
ನಾಲ್ಕು ನೀಳ್ಗತೆಗಳು ಹಾಗೂ ಐದು ಸಣ್ಣ ಕಥೆಗಳಿದ್ದು ಎಲ್ಲಾ ಕಥೆಗಳು ಆಯಾಸವಾಗದಂತೆ ಓದಿಸಿಕೊಂಡು ಹೋಗುತ್ತವೆ. ಓದುವಾಗ ಮುಂದೆ ಏನಾಗಬಹುದು ಎಂಬ ಕುತೂಹಲವನ್ನು ಲೇಖಕರು ಎಲ್ಲ ಕಥೆಗಳಲ್ಲೂ ಕಾಯ್ದುಕೊಂಡಿದ್ದಾರೆ. ಒಂದು ಅನಿರೀಕ್ಷಿತ ಕರೆಯಿಂದ ಆಗಬಹುದಾದ ಅಚಾತುರ್ಯಗಳು, ಹಳ್ಳಿ ಲವ್ ಸ್ಟೋರಿಗಳು, ಕಾಲೇಜು ಗಲಾಟೆಗಳು, ತಲೆಗತ್ತದ ಸಬ್ಜೆಕ್ಟ್ ಗಳು.. ಎಲ್ಲವೂ ನಮ್ಮದೇ ಸ್ವಂತ ಅನುಭವಗಳಂತೆ ಮೂಡಿಬಂದಿವೆ. ಪ್ರತೀ ಪಾತ್ರಗಳಲ್ಲೂ ಲೇಖಕ ಚೆನ್ನಾಗಿಯೇ ಜೀವಿಸಿದ್ದಾನೆ. ಇನ್ನು ಕೃತಿಯ ಶೀರ್ಷಿಕೆಯ ಕಥೆಯು ಸರಳವಾಗಿ ಆರಭವಾಗಿ ಕೊನೆಯಲ್ಲಿ ಇದ್ದಕ್ಕಿದ್ದಂತೆ ಯಾರನ್ನೋ ಕಳೆದುಕೊಂಡ ಅನುಭವ ನೀಡುತ್ತದೆ.
ಸಮರ್ಥರು ಇನ್ನಷ್ಟು ಬರೆಯಬಲ್ಲರೆಂಬ ಭರವಸೆಯನ್ನು ಈ ಸಂಕಲನದ ಮೂಲಕ ಸಾದರಪಡಿಸಿಕೊಂಡಿದ್ದಾರೆ. ಅವರ ಮುಂದಿನ ಸಾಹಿತ್ಯ ಕೃಷಿಗೆ ಶುಭವಾಗಲಿ..
ಪುಸ್ತಕ ಓದಲಿಚ್ಛಿಸುವವರು ಸಮರ್ಥ ಶ್ರೀಧರ ರವರನ್ನು 91-8277549253 ಸಂಪರ್ಕಿಸಿ ಪುಸ್ತಕ ತಲುಪುವ ವ್ಯವಸ್ಥೆ ಮಾಡುತ್ತಾರೆ.
ಅನಂತ್ ಕುಣಿಗಲ್
ಅವ್ವ ಪುಸ್ತಕಾಲಯ