ಚೆಲುವ ಕನ್ನಡ ನಾಡು
ಕಾವೇರಿಯಿಂದ ಗೋದಾವರಿವರೆಗಿರುವ
ಕನ್ನಡ ನಾಡೆಲ್ಲವನು ನೀನೊಮ್ಮೆ ನೋಡು
ಕೈ ಬೀಸಿ ಕರೆಯುತಿಹವು ಹಂಪಿ ಬಾದಾಮಿ
ಪಟ್ಟದಕಲ್ಲು ಐಹೊಳೆ ಬೇಲೂರು ಹಳೇಬೀಡು
ಬೆಂದಕಾಳೂರು ದಸರೆಯ ಮೈಸೂರು
ಕಡಲತೀರಗಳು ವೀರ ಚೆನ್ನಮ್ಮನ ಕಿತ್ತೂರು
ಕೊಡಗಿನ ಬೆಡಗು ಜೋಗ ತಡಸಲು ನೀರು
ಚಾಮುಂಡಿ ಬಾಹುಬಲಿ ಹರಸಲು ನಿಂತಿಹರು
ಮಲ್ಲಿಗೆ ಕಂಪು, ಶಿಲೆಗಳ ಸಂಗೀತದಿಂಪು
ನಂದಿಗಿರಿಧಾಮಗಳು ಮೈಮನಕೆ ತಂಪು
ನೋಡಿ ಪಕ್ಷಿಧಾಮ ಬನವಾಸಿ ಆಗುಂಬೆ
ನಾಡಿನಾಚೆಗೂ ಪ್ರಸಿದ್ಧ ಚನ್ನಪಟ್ಟಣ ಗೊಂಬೆ
ಪಂಪ ರನ್ನರ ಪದಗಳ ಚಂದದ ನುಡಿಯು
ಜಗಕೆಲ್ಲ ವಚನಗಳ ಬೆಳಕು ಚೆಲ್ಲಿದ ನುಡಿಯು
ಕೀರ್ತನ ಪರಿಮಳ ಮಳೆಗರೆದ ನುಡಿಯು
ಅಷ್ಟ ಜ್ಞಾನಪೀಠ ಗೆದ್ದ ಹೆಮ್ಮೆಯ ನುಡಿಯು
ಎಂದೂ ಇವನಾರವ ಎಂದೆನಿಸದ ಕರುನಾಡು
ಇವ ನಮ್ಮವ ಎನ್ನುವ ಸಂಸ್ಕೃತಿಯ ಗೂಡು
ಚಿನ್ನದ ಗಣಿಯಿದು ಕಲಿಗಳ ಕಲೆಗಳ ಬೀಡು
ಗಂಧದ ಗುಡಿಯಿದು ಚೆಲುವ ಕನ್ನಡ ನಾಡು
ಡಾ. ಗುರುಸಿದ್ಧಯ್ಯಾ ಸ್ವಾಮಿ
ಅಕ್ಕಲಕೋಟ – ೪೧೩೨೧೬ ಮಹಾರಾಷ್ಟ್ರ
E mail gurusiddayya.s@gmail.com
ಮೊಬೈಲ್ -೯೧೭೫೫೪೭೨೫೯
ಚಿತ್ರ ಕೃಪೆ: ಸೃಷ್ಟಿ ಗುರುಸಿದ್ಧಯ್ಯಾ ಸ್ವಾಮಿ