ಹಿಂದಿನ ಸಂಚಿಕೆಯಿಂದ….
ನಡುರಾತ್ರಿಯಾದ ಮೇಲೆ ಅವನಿಗೆ ಎಚ್ಚರವಾಯಿತು. ಎದ್ದು ಕುಳಿತನು. ಬೆಂಕಿ ಆರಿ ತಣ್ಣಗಾಗಿತ್ತು. ಸುತ್ತಲೂ ಗಾಢಾಂಧಕಾರ. ರಟ್ಟಾ ಎದ್ದು ಬಂದು ಅವನ ತೋಳುಗಳನ್ನು ಬಿಗಿಯಾಗಿ ಅವಚಿಕೊಂಡು ಕುಳಿತಿರುವ ಹಾಗೆ ಭಾಸವಾಯಿತು. ಅವನ ಕಿವಿಯಲ್ಲಿ ‘ನೋಡಿರಿ ಗುಹೆಯ ಬಾಗಿಲ ಕಡೆ ನೋಡಿರಿ-’ ಎಂದು ರಟ್ಟಾ ಮೆಲ್ಲಗೆ ಹೇಳಿದಳು.
ಚಿತ್ರಕನು ಗುಹೆಯ ಬಾಗಿಲ ಕಡೆ ದೃಷ್ಟಿ ಹರಿಸಿ ನೋಡುತ್ತಾನೆ- ಬೆಂಕಿಯ ಹಾಗೆ ಕೆಂಪು ಬಣ್ಣದ ಎರಡು ಕಣ್ಣುಗಳು ಅವರನ್ನೇ ದುರುಗುಟ್ಟಿ ನೋಡುತ್ತಿವೆ. ಕತ್ತಲಿನಲ್ಲಿ ಬೆಂಕಿಯಂತಿರುವ ಕಣ್ಣಿನ ಪ್ರಾಣಿಯ ಶರೀರ ಕಾಣಿಸುತ್ತಿಲ್ಲ. ನಡುನಡುವೆ ಅದರ ರೆಪ್ಪೆ ಬಡಿತ ಮಾತ್ರ ಕಾಣುತ್ತಿದೆ.
ಕಾಡು ಮೃಗಗಳ ಕಣ್ಣುಗಳು ರಾತ್ರಿ ಹೊತ್ತಿನಲ್ಲಿ ಕೆಂಪಾಗಿ ಕಾಣಿಸುತ್ತವೆ ಎಂದು ಚಿತ್ರಕನಿಗೆ ಗೊತ್ತಿತ್ತು. ಅದು ಚಿರತೆಯೋ ಅಥವಾ ಹುಲಿಯೋ ಆಗಿರಬೇಕು. ಬಹುಶಃ ಅದಕ್ಕೆ ಗುಹೆಯ ಒಳಕ್ಕೆ ಬರಲು ಧೈರ್ಯಬರುತ್ತಿಲ್ಲವೆಂದು ಕಾಣುತ್ತದೆ. ಕ್ರಮೇಣ ಧೈರ್ಯ ಬರಬಹುದು. ರಕ್ತಪಿಪಾಸುಗಳಿಗೆ ಭಯವೆಲ್ಲಿಯದು!
ಚಿತ್ರಕನ ಶರೀರ ವಜ್ರಮಯವಾಯಿತು. ರಟ್ಟಾ ಅವನ ಬಳಿ ಕುಳಿತು ಅವನ ಬಾಹುಗಳನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದಳು. ನಡುಗುವ ಧ್ವನಿಯಲ್ಲಿ ಅವಳು ‘ಇದೇನು ಹುಲಿಯೇ?’ ಎಂದು ಕೇಳಿದಳು.
ಚಿತ್ರಕ ಅವಳ ಮಾತಿಗೆ ಉತ್ತರ ಕೊಡಲಿಲ್ಲ. ಅದಕ್ಕೆ ಬದಲಾಗಿ ಅವನ ಕಂಠದಿಂದ ಒಂದು ಜೋರಾದ ವಿಕಟ ಶಬ್ದ ಹೊರಹೊಮ್ಮಿತು. ಆ ಶಬ್ದ ಎಷ್ಟು ವಿಕಟ ಹಾಗೂ ಭಯಂಕರವಾಗಿತ್ತೆಂದರೆ ಯಾವ ಕ್ರೂರ ಮೃಗವೂ ಕೂಡ ಆ ರೀತಿ ಕೂಗುವುದಿಲ್ಲ. ಕುದುರೆಯ ಹೇಷಾರವ, ಆನೆಯ ಬೃಂಹಿತ ಹಾಗೂ ತೂರ್ಯನಿನಾದ ಒಟ್ಟಿಗೆ ಸೇರಿದರೆ ಈ ರೀತಿಯ ತುಮುಲ ಶಬ್ದ ಸೃಷ್ಟಿಯಾಗಬಹುದೋ ಏನೋ!
ಈ ವಿಚಿತ್ರ ಕೂಗು ಕೊನೆಯಾಗುವ ಮೊದಲೇ ಆ ಕೆಂಪುಕಣ್ಣುಗಳು ಇದ್ದಕ್ಕಿದ್ದಂತೆ ಅದೃಶ್ಯವಾಯಿತು. ಹೊರಗೆ ತರಗೆಲೆಗಳ ಮೇಲೆ ವೇಗವಾಗಿ ಓಡಿಹೋಗುವ ಪ್ರಾಣಿಯ ಶಬ್ದ ಕ್ಷಣ ಕಾಲ ಕೇಳಿಸಿತು. ಆನಂತರ ಎಲ್ಲವೂ ಮತ್ತೆ ನಿಶ್ಯಬ್ದ.
ಚಿತ್ರಕನ ಬಾಯಿಯಿಂದ ಹೊರಟ ರೋಮಹಷಣ ಶಬ್ದವನ್ನು ಕೇಳಿದ ರಟ್ಟಾಳಿಗೆ ಒಂದು ರೀತಿ ಪ್ರಜ್ಞೆಯೇ ತಪ್ಪಿ ಹೋಗಿತ್ತು. ಚಿತ್ರಕ ಆಕೆಗೆ ಮೃದುಮಧುರವಾದ ಧನಿಯಲ್ಲಿ ‘ರಾಜಕುಮಾರಿ, ಇನ್ನು ಭಯವಿಲ್ಲ, ಆ ಪ್ರಾಣಿ ಹೊರಟು ಹೋಯಿತು’ ಎಂದು ಹೇಳಿ ಸಮಾಧಾನ ಪಡಿಸಿದನು.
ರಟ್ಟಾ ಮುಖವೆತ್ತಿ ನೋಡಿದಳು. ಕತ್ತಲಲ್ಲಿ ಯಾರು ಯಾರಿಗೂ ಕಾಣಿಸುತ್ತಿರಲಿಲ್ಲ. ರಟ್ಟಾ ಕ್ಷೀಣಸ್ವರದಲ್ಲಿ ‘ಅದು ಎಂಥ ಭಯಾನಕ ಶಬ್ದ ತಾವು ಮಾಡಿದುದು!’ ಎಂದು ಆಶ್ಚರ್ಯವ್ಯಕ್ತಪಡಿಸಿದಳು.
ಚಿತ್ರಕ- ‘ಹೌದು ಅದು ಭಯಾನಕವೇ. ಅದಕ್ಕೆ ‘ಸಿಂಹನಾದ’ ಎಂದು ಹೆಸರು. ಯುದ್ಧದಲ್ಲಿ ಈ ರೀತಿ ಹುಂಕಾರ ಮಾಡುವ ರೂಢಿ ಇದೆ’ ಎಂದು ಹೇಳಿ ಮೃದುವಾಗಿ ನಕ್ಕನು.
ರಟ್ಟಾ ಆಗ ಸಮಾಧಾನದ ನಿಟ್ಟುಸಿರು ಬಿಟ್ಟಳು. ಆಕೆಯ ಕೈ ಬೆರಳುಗಳು ಚಿತ್ರಕ ಕೈಬೆರಳುಗಳಲ್ಲಿ ಸೇರಿ ಹೋದುವು. ರಟ್ಟಾ ತನ್ನ ಕೆನ್ನೆಯನ್ನು ಚಿತ್ರಕನ ಬಾಹುಗಳ ಮೇಲೆ ಇಟ್ಟಳು.
ಚಿತ್ರಕ ಹೃದಯದ ಉದ್ವೇಗವನ್ನು ಹತೋಟಗೆ ತಂದುಕೊಂಡು ‘ರಾಜಕುಮಾರಿ’ ಎಂದನು.
ರಟ್ಟಾ- (ಗದ್ಗದಿತಳಾಗಿ) ರಾಜಕುಮಾರಿ ಅಲ್ಲ. ‘ರಟ್ಟಾ’ ಎಂದು ಹೇಳಿ
ಚಿತ್ರಕ ಕ್ಷಣಕಾಲ ಸುಮ್ಮನಿದ್ದು ನಡುಗುವ ಧ್ವನಿಯಲ್ಲಿ ‘ರಟ್ಟಾ’ ಎಂದನು.
‘ರಟ್ಟಾ ಯಶೋಧರಾ’ ಎನ್ನಿರಿ.
‘ರಟ್ಟಾ ಯಶೋಧರಾ!’
ಕ್ಷಣಕಾಲ ನೀರವ. ಆನಂತರ ರಟ್ಟಾ ‘ಈ ದಿನ ಈ ಕತ್ತಲು ನನ್ನ ನಾಚಿಕೆಯನ್ನು ಮರೆ ಮಾಡಿದೆ. ಆದ್ದರಿಂದ ಹೇಳುತ್ತೇನೆ. ನಾನು ನಿಮ್ಮವಳು ಜನ್ಮ ಜನ್ಮಾಂತರಗಳಲ್ಲಿಯೂ ನಾನು ನಿಮ್ಮವಳೇ ಆಗಿರುತ್ತೇನೆ. ಈ ಜನ್ಮದಲ್ಲಿಯೂ ನಿಮ್ಮವಳು. ಮುಂದಿನ ಜನ್ಮದಲ್ಲಿಯೂ ನಿಮ್ಮವಳೇ ಆಗಿರುವೆನು’ ಎಂದಳು.
ಚಿತ್ರಕನ ಹೃದಯ ತಂತು ಮಿಡಿಯಿತು. ಆಗ ಅವನು ‘ರಟ್ಟಾ, ನಿನಗೆ ಗೊತ್ತಿಲ್ಲ ನಾನು ಯಾರು ಎಂಬುದು! ಒಂದು ವೇಳೆ ಅದು ಗೊತ್ತಾದರೆ’ ಎಂದು ಎಚ್ಚರಿಸಿದನು.
ರಟ್ಟಾ ಇನ್ನೊಂದು ಕೈಯನ್ನು ಹತ್ತಿರ ತಂದು ಚಿತ್ರಕನ ತುಟಿಯನ್ನು ಮುಟ್ಟಿದಳು. ಅವಳು ಹಿಂದಿನAತೆಯೇ ಶಾಂತವಾಗಿ ‘ನನಗೆ ಇನ್ನೇನೂ ಗೊತ್ತಾಗಬೇಕಾಗಿಲ್ಲ. ನೀವು ಕ್ಷತ್ರಿಯರು ನೀವು ವೀರರು, ನೀವು ಮನುಷ್ಯರು ಆದರೆ ಇವೆಲ್ಲ ನನಗೆ ಅಪ್ರಧಾನ; ಗೌಣ. ನೀವು ನನ್ನವರು, ಇಷ್ಟೇ ನನಗೆ ಬೇಕಾಗಿರುವುದು ಎಂದಳು. ಚಿತ್ರಕನ ಭುಜದ ಮೇಲೆ ತನ್ನ ತಲೆಯನ್ನಿಟ್ಟು ‘ಈಗ ನಾನು ಮಲಗಬೇಕು. ನನ್ನ ಕಣ್ಣು ಎಳೆದುಕೊಂಡು ಹೋಗುತ್ತಿದೆ’ ಎಂದು ಹೇಳಿದಳು. ಕತ್ತಲಿನಲ್ಲಿ ಆಕಳಿಸಿದ ಸದ್ದು ಕೇಳಸಿತು
‘ಈ ದಿನ ನೀನು ನಿದ್ದೆ ಹೋಗಲಿಲ್ಲವೆ?’ ಚಿತ್ರಕ ರಟ್ಟಾಳನ್ನು ಕೇಳಿದನು.
‘ಇಲ್ಲ, ನೀವೇನೊ ನಿದ್ದೆ ಹೋದಿರಿ. ನನಗೆ ನಿದ್ದೆ ಬರಲಿಲ್ಲ. ನೀವು ಎಂಥ ವಿಚಿತ್ರ ವ್ಯಕ್ತಿ ಎಂದು ಚಿಂತನೆ ಮಾಡುತ್ತ ಎಚ್ಚರವಾಗಿಯೇ ಇದ್ದೆ. ಆದ್ದರಿಂದಲೇ ಆ ಕ್ರೂರ ಮೃಗದ ಕಣ್ಣುಗಳನ್ನು ನೋಡಲು ಸಾಧ್ಯವಾಯಿತು ಇರಲಿ ಈಗ ನಿದ್ದೆ ಮಾಡುತ್ತೇನೆ. ನೀವು ನಿನ್ನೆ ರಾತ್ರಿ ಎಚ್ಚರವಿದ್ದ ಹಾಗೆ ಈ ದಿನವೂ ಎಚ್ಚೆತ್ತು ಇರಿ’. ನಕ್ಕ ಶಬ್ದ ಕೇಳಿಸಿತು. ಆನಂತರ ರಟ್ಟಾ ಚಿತ್ರಕನ
ಭುಜದ ಮೇಲೆ ತಲೆ ಇಟ್ಟು ಚೆನ್ನಾಗಿ ನಿದ್ರಿಸಿದಳು. ಅವಳು ನಿಧಾನವಾಗಿ ಉಸಿರು ಬಿಡುತ್ತಿದ್ದಳು.
ಏನು ಭಗವಂತನ ಆಟ! ಎಂದು ಮನಸ್ಸಿನಲ್ಲಿ ಭಾವಿಸುತ್ತ ಚಿತ್ರಕ ಎಚ್ಚತ್ತಿದ್ದನು.
ಉಷೆಯ ಬೆಳಕು ಗುಹೆಯ ಬಾಗಿಲ ಮೇಲೆ ಬಿದ್ದಿತು. ರಟ್ಟಾ ಎಚ್ಚರಗೊಂಡಳು. ಅವಳು ನಗು ತುಂಬಿದ ಕಣ್ಣುಗಳನ್ನು ಮೇಲೆತ್ತಿ ನೋಡಿದಳು.. ಚಿತ್ರಕನ ನಿದ್ದೆ ಇಲ್ಲದ ಕಣ್ಣುಗಳು ಅವಳಿಗೆ ಸುಪ್ರಭಾತದ ಅಭಿನಂದನೆ ಸಲ್ಲಿಸಿದವು.
‘ರಟ್ಟಾ ಯಶೋಧರಾ!’
‘ಆರ್ಯ!’
ಇಬ್ಬರೂ ಬಹಳ ಹೊತ್ತಿನವರೆಗೂ ಪರಸ್ಪರ ದೃಷ್ಟಿವಿನಿಮಯ ಮಾಡಿಕೊಂಡರು! ಆನಂತರ ಅವರು ಎದ್ದು ನಿಂತರು. ‘ನಡಿ, ಇನ್ನೂ ಬೇಕಾದಷ್ಟು ಕೆಲಸ ಬಾಕಿ ಇದೆ’ ಎಂದು ಚಿತ್ರಕನು ರಟ್ಟಾಳಿಗೆ ಹೇಳಿದನು.
ಸೂರ್ಯೋದಯಾನಂತರ ಇಬ್ಬರೂ ಗುಹೆಯಿಂದ ಹೊರಬಂದರು. ಕಷ್ಟಕರವಾದ ಕಲ್ಲು ಮುಳ್ಳುಗಳ ದಾರಿ. ಕೆಲವೊಮ್ಮೆ ಒಂದು ದಾರಿಯಲ್ಲಿ ಬಹುದೂರ ಹೋಗಿ ನೋಡಿದರೆ, ಮುಂದೆ ಅವಕಾಶವೇ ಇಲ್ಲ. ದಟ್ಟವಾಗಿ ಬೆಳೆದ ಮುಳ್ಳಿನ ಗಿಡಗಳು ಇಲ್ಲವೆ ಪರ್ವತವೇ ಗೋಡೆಯ ಹಾಗೆ ಅಡ್ಡ ಬಂದಿದೆ. ಹೀಗಿರುವಾಗ ವಾಪಸು ಬಂದು ಬೇರೆ ದಾರಿ ಹಿಡಿದು ಪ್ರಯಾಣ ಬೆಳೆಸುವುದು.
ಪರ್ವತ ಶ್ರೇಣಿ ಕೊನೆಗೊಳ್ಳುವ ಹಾಗೆ ಕಾಣುತ್ತಿಲ್ಲ. ಒಂದಾದ ಮೇ¯ ಮತ್ತೊಂದು ಕಷ್ಟಪಟ್ಟು ಒಂದು ಪರ್ವತವನ್ನು ಹತ್ತಿ ನೋಡಿದರೆ, ಮತ್ತೆ ಎದುರಿಗೆ ಮತ್ತೊಂದು ಪರ್ವತ. ತಲುಪಬೇಕಾದ ಜಾಗದ ಗುರುತು ಕೂಡ ಸಿಗುತ್ತಿಲ್ಲ.
ನಡು ಹಗಲು ಮೀರುತ್ತ ಬಂತು. ಕಡೆಗೆ ಬಹಳ ಪ್ರಯಾಸಪಟ್ಟು ಒಂದು ಪರ್ವತವನ್ನು ದಾಟಿದ ಮೇಲೆ, ಇನ್ನೊಂದು ಪರ್ವತದ ಮೇಲೆ ಹೋಗಿ ನಿಂತರು. ಆಗ ಅವರು ಜಯಧ್ವನಿ ಮಾಡುತ್ತ ಕುಣಿದಾಡಿದರು. ಮುಂಭಾಗದಲ್ಲಿಯೇ ತಪ್ಪಲಿನ ಪ್ರದೇಶ. ಅಂದವಾದ ‘ಚಿತ್ರಗಳಿಂದ ಕೂಡಿದ ಪಾರಸಿಕ ರತ್ನಗಂಬಳಿಯ ಹಾಗೆ ಆ ತಪ್ಪಲಿನ ಪ್ರದೇಶ ಅವರ ಕಣ್ಣುಗಳಿಗೆ ಹಬ್ಬವನ್ನುಂಟುಮಾಡಿತು. ಹತ್ತು ಹರಿದಾರಿ ಉದ್ದ- ಅಗಲ ಪ್ರದೇಶದಲ್ಲಿ ಆ ಶಿಬಿರ ವ್ಯಾಪಿಸಿತ್ತು. ಕಣ್ಣಿನ ದೃಷ್ಟಿ ಹರಿಯುವಷ್ಟು ದೂರದವರೆಗೂ ಶಿಬಿರ ಹರಡಿತ್ತು. ಬಟ್ಟೆ ಗುಡಾರಗಳು, ಮೇಣದ ಬಟ್ಟೆಯ ಗುಡಾರಗಳು. ಅವುಗಳ ನಡುವೆ ಇರುವೆ ಸಾಲಿನ ಹಾಗೆ ಮನುಷ್ಯರು ಓಡಾಡುತ್ತಿದ್ದರು. ಶಿಬಿರದ ಎಡಭಾಗದಲ್ಲಿ ಕುದುರೆ ಲಾಯ- ಅದರಲ್ಲಿ ಬಿಳಿ- ಕಪ್ಪು-ಪಿಂಗಳ ಹೀಗೆ ಬೇರೆ ಬೇರೆ ಬಣ್ಣದ ಕುದುರೆಗಳಿದ್ದವು. ಕಾಂಬೋಜ- ಸಿಂದೂ- ಆರಟ್ಟ- ವನಾಯು-ಹೀಗೆ ನಾನಾ ಜಾತಿಯ ಚುರುಕಾದ- ಶಕ್ತಿ ಶಾಲಿಯಾದ ಯುದ್ಧದ ಕುದುರೆಗಳು ಕಣ್ಣಿಗೆ ಬಿದ್ದವು. ಬೇರೊಂದೆಡೆ ಶಿಬಿರದ ದಕ್ಷಿಣ ದಿಕ್ಕಿಗೆ ಮೋಡಗಳ ಸಮೂಹದ ಹಾಗೆ ಆನೆಗಳ ಹಿಂಡು. ಮದಜಲ ಸುರಿಸುತ್ತಿರುವ ಆನೆಗಳ ಹಿಂಡು ಕೊರಳ ಗಂಟೆಗಳನ್ನು ಬಾರಿಸುತ್ತ ಅತ್ತಿತ್ತ ತೂಗಾಡುತ್ತಿದ್ದವು. ಸೊಂಡಿಲನ್ನು ಎತ್ತಿ ಆಡಿಸುತ್ತಿದ್ದವು. ಆಗಾಗ್ಗೆ ಬೃಂಹಿತ ಧ್ವನಿ ಮಾಡುತ್ತಿದ್ದವು.
ಈ ವಿಕ್ಷುಬ್ಧ ಸಮುದ್ರದ ಹಾಗೆ ಇರುವ ಸೇನಾ ಶಿಬಿರವನ್ನು ನೋಡಿ ರಟ್ಟಾಳ ಮುಖ ಒಣಗಿತು. ಚಿತ್ರಕ ಅದನ್ನು ಗಮನಿಸಿ ‘ಹೆದರಬೇಡ, ನನ್ನ ಬಳಿ ಮಂತ್ರಿಸಿದ ಕವಚವಿದೆ. – ಅಲ್ಲಿ ಮಧ್ಯಭಾಗದಲ್ಲಿ ಕೆಂಪು ಬಣ್ಣದ ಬೃಹತ್ತಾದ ರೇಷ್ಮೆಯ ಗುಡಾರ ಕಾಣಿಸುತ್ತಿದೆಯಲ್ಲಾ ಅದೇ ಸಮ್ರಾಟರ ಶಿಬಿರ. ನಾವು ಅಲ್ಲಿಗೆ ಹೋಗಬೇಕು’ ಎಂದನು.
ಅನಂತರ ಅವರು ಪರ್ವತದ ತುದಿಯಿಂದ ಕೆಳಗೆ ಇಳಿದರು. ಆದರೆ ಅಡ್ಡಿ-ಆತಂಕಗಳು ಇನ್ನೂ ಮುಗಿಯುವ ಲಕ್ಷಣ ಕಂಡುಬರಲಿಲ್ಲ. ಅಶ್ವಾರೋಹಿಗಳ ಒಂದು ಗುಂಪು ಬಂದು ಅವರನ್ನು ಸುತ್ತುವರಿಯಿತು.
‘ಯಾರು ನೀವು? ಯಾವ ಕಾರ್ಯಾರ್ಥವಾಗಿ ಬಂದಿದ್ದೀರಿ?’ ಮುಂತಾದ ಪ್ರಶ್ನೆಗಳು. ಎದುರಾದವು.
ಚಿತ್ರಕ ಸ್ಕಂದಗುಪ್ತನ ಅಭಿಜ್ಞಾನ- ಮುದ್ರೆಯನ್ನು ತೋರಿಸಿ ಅವರಿಂದ ಬಿಡುಗಡೆ ಹೊಂದಿದನು. ಅದಾದ ಮೇಲೆ ಇನ್ನೂ ಕೆಲವು ಭಟರು ಮುಂದೆ ಹೋಗಲು ಅಡ್ಡಿಪಡಿಸಿದರು. ಸಾಧಾರಣ ಸೈನಿಕರು ಹೊಸಬರನ್ನು ನೋಡಿ ಹಾಸ್ಯ ಮಾಡಿದರು. ಆದರೆ ಅದೃಷ್ಟವಶಾತ್ ರಟ್ಟಾಳನ್ನು ಯಾರೂ ಕೂಡ ಹೆಣ್ಣೆಂದು ಗುರುತು ಹಿಡಿಯಲಿಲ್ಲ.
ಕಟ್ಟ ಕಡೆಗೆ ಅವರು ಸ್ಕಂದಗುಪ್ತನ, ಪ್ರಹರಿಗಳಿಂದ ರಕ್ಷಿತವಾದ, ಶಿಬಿರದ ಮುಂಭಾಗಕ್ಕೆ ಬಂದರು. ಕುದುರೆಗಳಿಂದ ಇಳಿದು ಭರ್ಜಿ ಹಿಡಿದ ಪ್ರಧಾನ ದ್ವಾರಪಾಲಕನ ಮುಂದೆ ಹೋಗಿ ನಿಂತರು.
ದ್ವಾರಪಾಲಕ- ‘ಏನು ಬೇಕು?’
ಚಿತ್ರಕ- ‘ಇವರು ವಿಟಂಕ ರಾಜ್ಯದ ರಾಜದುಹಿತೆ ಕುಮಾರಿ ರಟ್ಟಾ ಯಶೋಧರಾ- ಪರಮ ಭಟ್ಟಾರಕ ಸಮ್ರಾಟ್ ಸ್ಕಂದಗುಪ್ತರ ದರ್ಶನಾರ್ಥವಾಗಿ ಬಂದಿದ್ದಾರೆ’ ಎಂದು ಹೇಳಿ ರಟ್ಟಾಳ ತಲೆಯ ಮೇಲಿದ್ದ ರೂಮಾಲನ್ನು ಬಿಚ್ಚಿದನು. ಬಂಧನ ಮುಕ್ತವಾದ ನೀಳವಾದ ಜಡೆಯು ರಟ್ಟಾಳ ಬೆನ್ನ ಮೇಲೆ ಇಳಿಯಬಿದ್ದಿತು.
ಮುಂದುವರೆಯುವುದು….
ಎನ್. ಶಿವರಾಮಯ್ಯ (ನೇನಂಶಿ)