BTS ನಲ್ಲೊಬ್ಬ ರವಿಚಂದ್ರನ್!!
BTSನ ಕನಸುಗಾರ ಸೂಗಾ
ಸೂಗಾ ಎಂಬ ಸಾಗಾ
ಮಿನ್ ಯೂಂಗಿ (Min Yoongi) ಅಂದ್ರೆ ಯಾರಿಗೂ ಗೊತ್ತಾಗೊಲ್ಲ. ಆದರೆ ಸೂಗ SUGA ಅಂದಾಕ್ಷಣ ಎಲ್ಲರಿಗೂ ಮಿಂಚಿನ ಸಂಚಾರ ಆದಂತೆ ಆಗುವುದು. ಸೂಗ, ಆಗಸ್ಟ್-ಡಿ ಇವನ ಸ್ಟೇಜ್ ಹೆಸರುಗಳು. ಸೂಗಾ ಹುಟ್ಟಿದ್ದು ಮಾರ್ಚ್ 9, 1993ರಲ್ಲಿ. ಇದೀಗ ಅವನಿಗೆ 28 ವರ್ಷಗಳ ಪ್ರಾಯ.
ಈ ಸೂಗಾ ಥೇಟ್ ನಮ್ಮ ರವಿಚಂದ್ರನ್ ನಂತೆಯೆ. ಕನಸುಗಾರ, ಪರಿಶ್ರಮಿ, ತಾಂತ್ರಿಕತೆಯ ಅಪಾರ ಜ್ಞಾನ ಉಳ್ಳವನು. ತಾನು ರಚಿಸುವ ಗೀತೆಗಳನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ಪ್ರಸ್ತುತ ಪಡಿಸುವನು. ಕೇಳುಗರ, ನೋಡುಗರ ಹೃದಯ ಸೂರೆಗೊಳ್ಳುವನು.
ಸೂಗ ಬಡ ಕುಟುಂಬದಲ್ಲಿ ಹುಟ್ಟಿದ್ದನು. ತನ್ನ ಅವಶ್ಯಕತೆಗಳನ್ನು ಪೂರೈಸಲು ಆತ ಸಣ್ಣಪುಟ್ಟ ಕೆಲಸ ಮಾಡತೊಡಗಿದನು. ಸೂಗ ಗಾಂಭೀರ್ಯ ವ್ಯಕ್ತಿತ್ವದವನು. ಬಾಲ್ಯದ ಕಷ್ಟಗಳು ಬಹುಶಃ ಅವನನ್ನು ಹೀಗೆ ಮಾಡಿದೆಯೋ ಏನೊ…
2013ರಲ್ಲಿ ತನ್ನ ಸಂಗೀತ ಜೀವನ ಯಾನ ಪ್ರಾರಂಭಿಸಿದ ಸೂಗ BTSನಲ್ಲಿ ರ್ಯಾಪ್ ಹಾಡುಗಾರ, ಸಾಹಿತ್ಯಕಾರ, ಹಾಡುಗಳ ರೆಕಾರ್ಡ್ ಪ್ರೊಡ್ಯೂಸರ್.
ಸೂಗ ಪ್ರಾಥಮಿಕ ಶಾಲೆಯಲ್ಲಿ ಕಲಿಯುವಾಗ ‘ರಗ್ಗಾ ಮಫೀನ್’ನ ಸ್ಟೋನಿ ಶಂಕ್, ಎಪಿಕ್ ಹೈ ಹಾಡುಗಳನ್ನು ಕೇಳುತ್ತಾ ಕೇಳುತ್ತ, ತಾನೂ ರ್ಯಾಪ್ ಸಂಗಿತಗಾರನಾಗಬೇಕೆಂದು ನಿರ್ದರಿಸಿದನು. ಸೂಗ 13ನೇ ವಯಸ್ಸಿನಲ್ಲಿ ಹಾಡುಗಳ ಸಾಹಿತ್ಯ ರಚನೆಯನ್ನು ಪ್ರಾರಂಭಿಸಿದನು. 17 ನೇ ವಯಸ್ಸಿನಲ್ಲಿ ರೆಕಾರ್ಡ್ ಸ್ಟುಡಿಯೊ ಒಂದರಲ್ಲಿ ಪಾರ್ಟ್ ಟೈಂ ಕೆಸಲವನ್ನು ಪ್ರಾರಂಭಿಸಿದನು. ಆ ಕೆಲಸವು ಸೂಗಾನನ್ನು ಸಂಗೀತದ ಎತ್ತರದ ಮಜಲಿಗೆ ಕೊಂಡೊಯ್ತು. ಸಾಹಿತ್ಯ ರಚನೆ, ಹಾಡುಗಾರಿಕೆ, ಪ್ರದರ್ಶನ ಕಲೆ ಎಲ್ಲವೂ ಒಂದೊಂದಾಗಿ ಅವನ ಕೈಹಿಡಿಯಿತು. ಬದ್ಧತೆಯ ಕಲಿಕೆ ಸೂಗಾನನ್ನು ಅಪೂರ್ವ ಸಂಗೀತ ಕಲಾವಿದನನ್ನಾಗಿ ಮಾಡಿತು.
ಸೂಗಾನ ಸಂಗೀತದ ಆಲ್ಬಂಗಳು ‘ಬಿಲ್ಬೋರ್ಡ್ಸ್ ವರ್ಲ್ಡ್ ಆಲ್ಬಂಸ್ ಚಾರ್ಟ್’ (Billboard’s World Albums Chart), ಯುಕೆ ಆಲ್ಬಂಸ್ ಚಾರ್ಟ್ (UK Albums Chart) ಆಸ್ಟ್ರೇಲಿಯಾದ ಎಆರ್ ಐಎ ಆಲ್ಬಂಸ್ (ARIA Album Chart) ಮೊದಲಾದ ಜಗತ್ತಿನ ಪ್ರಖ್ಯಾತ ಸಂಗೀತ ಚಾರ್ಟ್ ಗಳಲ್ಲಿ ಮೊದಲಸ್ಥಾನ ಗಳಿಸಿದ್ದವು.
ಸೂಗ ಸುಮಾರು 130ಕ್ಕೂ ಹೆಚ್ಚು ಹಾಡುಗಳನ್ನು ರಚಿಸಿದ್ದಾನೆ. ಅವುಗಳಲ್ಲಿ ಕೆಲವೊಂದು ಹಾಡುಗಳಿಗೆ ಸೂಗಾ ಹೆಜ್ಜೆ ಹಾಕಿದ್ದಾನೆ. ಆಗಲೆ ಹೇಳಿದ ಹಾಗೆ ಸೂಗಾ ತನ್ನ 13ನೇ ವಯಸ್ಸಿನಲ್ಲಿ ಹಾಡುಗಳಿಗೆ ಸಾಹಿತ್ಯ ಬರೆಯಲು ಪ್ರಾರಂಭಿಸಿದನು. ಅದೇ ಸಮಯದಲ್ಲಿ ಮ್ಯೂಸಿಕಲ್ ಇನ್ಸ್ಟ್ರುಮೆಂಟ್ ಡಿಜಿಟಲ್ ಇಂಟರ್ಫೇಸ್ – MIDI (Musical Instrument Digital Interface) ಎಂಬ ಸಂಗೀತ ಲೋಕಕ್ಕೆ ಸಂಬಂಧಿಸಿದ ಅತ್ಯಾಧುನಿಕ ತಂತ್ರಜ್ಞಾನವನ್ನು ಕಲಿತನು. BTSನ ಮುನ್ನೆಲೆಗೆ ಬರುವ ಮುನ್ನ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿದ್ದನು. ಹಲವಾರು ಹಾಡುಗಳಿಗೆ ಹಿನ್ನೆಲೆಯಲ್ಲಿ ಕೆಲಸ ಮಾಡಿ ಅನುಭವ ಪಡೆದಿದ್ದನು.
BTS ನಲ್ಲಿ ಮೊದಲಿಗೆ ಸಂಗೀತಕಾರನಾಗಿ ಸೇರಿದ ಸೂಗಾ ತನ್ನ ಮೂರು ವರ್ಷಗಳ ಟ್ರೈನಿಂಗ್ ನಲ್ಲಿ ಇತರ ಬ್ಯಾಂಡ್ ಹುಡುಗರೊಂದಿಗೆ ಸತತ ಅಭ್ಯಾಸ ಮಾಡಿ, BTSನ ಸದಸ್ಯನಾಗಿ ಹೊರಹೊಮ್ಮಿದ.
ಎಳವೆಯಲ್ಲಿಯೇ ಬರೆಯಲು ಪ್ರಾರಂಭಿಸಿದ್ದ ಸೂಗಾ, ತನ್ನೆಲ್ಲಾ ಭಾವನೆಗಳಿಗೆ ಶೃತಿ, ರಾಗದ ಆಕಾರ ಕೊಟ್ಟು ಅಕ್ಷರಕ್ಕೆ ಇಳಿಸುತ್ತಿದ್ದ.
‘ದಿ ಮೋಸ್ಟ್ ಬ್ಯೂಟಿಫುಲ್ ಮೊಮೆಂಟ್ ಇನ್ ಲೈಫ್’ ಎಂಬ ರ್ಯಾಪ್ ಹಾಡಿನಲ್ಲಿ ಸೂಗಾ ಹದಿಹರೆಯದಿಂದ ಪ್ರೌಢಾವಸ್ಥೆಗೆ ತಲುಪುವಾಗಿನ ತಳಮಳಗಳನ್ನು ಸಹಜವಾಗಿ , ಹಾಡಿನ ರೂಪದಲ್ಲಿ ವಿವರಿಸಿದ್ದಾನೆ. ‘ಇಂಟ್ರೊ-ನೆವರ್ ಮೈಂಡ್’ ಎಂಬ ಹಾಡಿನಲ್ಲಿ ಸೂಗಾ ತನ್ನೆಲ್ಲ ಅನುಭವದ ಅನಿಸಿಕೆಗಳನ್ನು ಸರಳವಾಗಿ, ಎಲ್ಲರ ಮನಮುಟ್ಟುವಂತೆ ವಿಶದೀಕರಿಸಿದ್ದಾನೆ. 2016ರಲ್ಲಿ ಆಗಸ್ಟ್ -ಡಿ ಆಲ್ಬಂನೊಂದಿಗೆ ಮಿಕ್ಸ್ ಟೇಪ್ ಸಂಗೀತಗಳಲ್ಲಿಯೂ ಸಹ ಕಾಣಿಸಿಕೊಂಡನು. ಇತರ ಕಲಾವಿದರುಗಳೊಂದಿಗೆ ಸೇರಿ ಮಾಡುವ ಸಂಗೀತ ಆಲ್ಭಂ ಅನ್ನು ಮಿಕ್ಸ್ ಟೇಪ್ ಎನ್ನುವರು.
ಸೂಗಾನ ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ. ಕಲ್ಲು ಮುಳ್ಳುಗಳ ಹಾದಿಯು ಅವನ ಬದುಕನ್ನು ಸುಂದರಗೊಳಿಸಿತು.
2013ರಲ್ಲಿ ಅಪೆಂಡಿಸೈಟಿಸ್ ಸೂಗಾನನ್ನು ಕಾಡಿಸಿತು. 2016ರಲ್ಲಿ ಬಾಗಿಲಿನ ಹೊಸ್ತಿಲು ಎಡವಿ ಬಿದ್ದು ಕಿವಿಗೆ ಅತಿಯಾದ ಗಾಯವಾಯಿತು. ಪ್ಲಾಸ್ಟಿಕ್ ಸರ್ಜನ್ ಸೂಗಾನಿಗೆ ಕಿವಿಯ ಗಾಯ ವಾಸಿಯಾಗುವ ತನಕ ಯಾವುದೇ ಸಂಗೀತ ಕಾರ್ಯಕ್ರಮಗಳನ್ನು ನೀಡದಂತೆ ಸಲಹೆ ನೀಡಿದ್ದರು. ಅವರ ಸಲಹೆಯಂತೆ ಸೂಗ ಒಂದು ವಾರ ಸಂಪೂರ್ಣವಾಗಿ ವಿಶ್ರಾಂತಿ ಪಡೆಯಬೇಕಾಯಿತು. ಅದೇ ಸಮಯದಲ್ಲಿ ಡಿಸೆಂಬರ್ ಕಡೇ ವಾರದ ಕಾರ್ಯಕ್ರಮಗಳಲ್ಲಿ ಸೂಗಾನಿಗೆ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ.
2020ರಲ್ಲಿ ಎಡಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ. ಬಹಳ ಹಿಂದೆ ಒಮ್ಮೆ ಪೇಪರ್ ಹಾಕುವ ಹುಡುಗನಾಗಿ ಕೆಲಸ ಮಾಡುತ್ತಿದ್ದಾಗ ಬೈಕ್ ಆಕ್ಸಿಡೆಂಟ್ ಆಗಿ, ಎಡ ಭುಜದ ಮಾಂಸವು ಹರಿದುಹೋಗಿತ್ತು. ಬಹಳ ವರ್ಷಗಳ ನಂತರ ಹಳೆಯ ನೋವು ಕಾಣಿಸಿಕೊಂಡು ಆಗಾಗ ಹಿಂಸೆ ಅನುಭವಿಸುತ್ತಲೇ ಇದ್ದನು. 2020ರಲ್ಲಿ ಎಡಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿ, ನೋವು ವಾಸಿಯಾಗಿವ ವರೆಗೂ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಿರಲಿಲ್ಲ. ಪ್ರತಿ ಕಾರ್ಯಕ್ರಮದಲ್ಲಿಯೂ BTSನ ಇತರ ಹುಡುಗರು ಸೂಗಾನ ಜಾಗವನ್ನು ಹಾಗೆಯೇ ಖಾಲಿಬಿಟ್ಟಿರುತ್ತಿದ್ದರು. ತಾನು ನೋವಿನಲ್ಲಿರುವಾಗಿನ ಅನುಭವಗಳನ್ನು ಅಕ್ಷರಕ್ಕಿಳಿಸುವ ಚಾಣಾಕ್ಷ. ನೋವನ್ನೂ ಸಹ ನಲಿವಿನ ಕಣ್ಣುಗಳಿಂದ ನೋಡುವ ಸೂಗಾನ ಹೃದಯವಂತಿಕೆಯೇ ಒಂದು ಸಾಗಾ (Saga), ಧೀರತೆ ಮೆಚ್ಚಲೇಬೇಕು.
ನಿಮಗೆ ಗೊತ್ತಾ!!!
ಸೂಗಾ ಇದೀಗ ತನ್ನ ವಿದ್ಯಾಭ್ಯಾಸ ಮುಂದುವರಿಸುವ ಸಲುವಾಗಿ BTSನ ಇನ್ನಿತರ ಹುಡುಗರೊಂದಿಗೆ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ನಲ್ಲಿ ಸ್ನಾತಕೋತ್ತರ ಪದವಿಗಾಗಿ ತನ್ನ ಹೆಸರು ನೋಂದಾಯಿಸಿದ್ದಾನೆ.
ಪ್ರಪಂಚದ ಪ್ರಭಾವೀ ಹಾಡುಗಾರರಲ್ಲಿ ಸೂಗಾ 10ರ ಸ್ಥಾನಗಳ ಒಳಗಿದ್ದಾನೆ.
ಸೂಗಾ ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಅಸಂಖ್ಯ ದಾನಧರ್ಮಗಳನ್ನು ಮಾಡಿದ್ದಾನೆ.
ಕೋಟ್ಯಂತರ ರೂಪಾಯಿಗಳನ್ನು ಅತ್ಯವಶ್ಯಕತೆ ಇರುವ ಜನರಿಗೆ, ಸಂಸ್ಥೆಗಳಿಗೆ, ಮಿಷನ್ ಗಳಿಗೆ ದಾನಕೊಟ್ಟಿದ್ದಾನೆ.
ಬವಣೆಯು ಬದುಕು ಕಲಿಸಿರುವುದರಿಂದ ಬೇರೆಯವರ ಕಷ್ಟಕ್ಕೆ ತಟ್ಟನೆ ಒದಗುವ ಉದಾರಿ.
ಸೂಗ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಸಮಾಜದ ಕಣ್ಣಿನಲ್ಲಿ ನಿಕೃಷ್ಟರೆನಿಸುವ ಲೆಸ್ಬಿಯನ್, ಗೇ, ಟ್ರಾನ್ಸ್ ಜೆಂಡರುಗಳ ಸಮಾಜಿಕ ಸ್ಥಾನಮಾನ, ಸಮಾನತೆಯ ಬಗ್ಗೆಯೂ ಕಳಕಳಿ ವ್ಯಕ್ತಪಡಿಸಿದ್ದಾನೆ.
ಸೂಗಾ ಹಾಡುಗಳ ತುಣುಕುಗಳು ನಿಮಗಾಗಿ
ಮುಂದಿನ ವಾರ BTSನ ಇನ್ನೊಬ್ಬ ಸದಸ್ಯನ ಕತೆಯನ್ನು ನಿಮ್ಮ ಮುಂದೆ ಇಡುವೆ. ಅಲ್ಲಿಯವರೆಗೆ ಬೈ ಬೈ Borahae!! 💜 Saranghae!! 💜
ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ. ವಾಟ್ಸಪ್ ಮೂಲಕ, ಫೇಸ್‌ಬುಕ್ ನಲ್ಲಿಯೂ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿರುವುದಕ್ಕಾಗಿ ಧನ್ಯವಾದಗಳು.
ನಿಖಿತಾ ಅಡವೀಶಯ್ಯ
2 Comments
It’s awesome!! Keep it up💜
Thank you very much