ಅಂಜನಿ ಮಹಾದೇವ – ಹಿಮದ ಶಿವಲಿಂಗ ದರ್ಶನ
ದೇಶದ ಪ್ರಮುಖ ಪ್ರವಾಸಿ ತಾಣಗಳ ಪೈಕಿ ಮನಾಲಿಯು ಅಗ್ರ ಸ್ಥಾನದಲ್ಲಿ ನಿಲ್ಲುತ್ತದೆ. ಹನಿಮೂನ್ ಟ್ರಿಪ್, ಸ್ನೇಹಿತರ ಜೊತೆಗೆ ಹಾಗೂ ಕುಟುಂಬದ ಪ್ರವಾಸಕ್ಕೂ ಮನಾಲಿ ಸದಾ ಪ್ರಶಸ್ತವಾದ ಆಯ್ಕೆಯಾಗಿದೆ. ಮನಾಲಿಯಲ್ಲಿ ಬಹಳಷ್ಟು ಪ್ರವಾಸಿ ತಾಣಗಳಿದ್ದು, ಇಲ್ಲಿನ ಕೆಲವು ಸ್ಥಳಗಳು ಇನ್ನೂ ಹೆಚ್ಚಿನ ಪ್ರವಾಸಿಗರಿಗೆ ತಿಳಿದೇ ಇಲ್ಲ. ಇಂತಹ ಕೆಲವು ಸ್ಥಳಗಳ ಪೈಕಿ ಅಂಜನಿ ಮಹಾದೇವ ದೇವಾಲಯವೂ ಒಂದು.
ಹಿಮಾಚಲ ಪ್ರದೇಶದ ಬುರ್ವಾದ ಸೋಲಾಂಗ್ ಕಣಿವೆಯಲ್ಲಿ ಇರುವ ಈ ದೇವಾಲಯವು ಪ್ರಮುಖ ಹಿಂದೂ ಯಾತ್ರಾ ಸ್ಥಳವಾಗಿದೆ. ದೇವಾಲಯದ ಸುತ್ತಲೂ ಪ್ರಾಕೃತಿಕ ಸೌಂದರ್ಯ ತುಂಬಿದ್ದು, ಈ ಸ್ಥಳದಲ್ಲಿ ಶಿವಲಿಂಗಕ್ಕೆ ಪ್ರಕೃತಿಯೇ ಜಲಾಭಿಷೇಕ ಮಾಡುತ್ತದೆ. ಈ ಸ್ಥಳವನ್ನು ‘ಹಿಮಾಚಲ ಪ್ರದೇಶದ ಅಮರನಾಥ’ ಎಂದೂ ಕರೆಯುತ್ತಾರೆ. ಈ ಸ್ಥಳವು ಹನುಮಂತನ ತಾಯಿ ಅಂಜನಿ ದೇವಿಯು ತಾನು ಮಗನನ್ನು ಪಡೆಯಲು ಮಹಾದೇವನನ್ನು ಕುರಿತು ತಪಸ್ಸು ಮಾಡಿದ ಸ್ಥಳವೆಂಬ ನಂಬಿಕೆಯಿದೆ. ಮಹಾದೇವನು ಅಂಜನಿಯ ತಪಸ್ಸಿಗೆ ಮೆಚ್ಚಿ ಇಲ್ಲಿ ಪ್ರತ್ಯಕ್ಷನಾಗಿ ಮಾತೆ ಅಂಜನಿಯನ್ನು ಭಗವಾನ್ ಶಿವನು ಆಶೀರ್ವಧಿಸಿದನು ಎಂಬ ಪ್ರತೀತಿಯಿದೆ. ಅಂದಿನಿಂದ ಇಲ್ಲಿ ನೈಸರ್ಗಿಕವಾಗಿ ಮಂಜುಗಡ್ಡೆಯ ಶಿವಲಿಂಗ ರೂಪುಗೊಂಡಿದೆ ಎಂಬ ನಂಬಿಕೆ ಭಕ್ತರಲ್ಲಿ ಇದ್ದು, ಇಲ್ಲಿಗೆ ಭೇಟಿ ನೀಡಿ ಮಹಾದೇವನ ದರ್ಶನ ಪಡೆಯುವ ಭಕ್ತರ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಇದೆ. ಆದ್ದರಿಂದ ಈ ಸ್ಥಳವನ್ನು ಅಂಜನಿ ಮಹಾದೇವ ಎಂದು ಕರೆಯುತ್ತಾರೆ. ಅಜ್ಞಾತವಾಗಿದ್ದ ಈ ಸ್ಥಳವನ್ನು ಹಲವಾರು ವರ್ಷಗಳ ಹಿಂದೆ ಗುರು ಬಾಬಾ ಪ್ರಕಾಶ್ ಪುರಿ ಜಿ ಮಹಾರಾಜ್ ಅವರಿಗೆ ಈ ಸ್ಥಳದಲ್ಲಿ ದೈವಿಕ ದರ್ಶನದ ನಂತರ ಕಂಡುಹಿಡಿದರು. ಈ ದೇವಾಲಯದ ಪಕ್ಕದಲ್ಲಿ ಬಾಬಾರವರು ತಪಸ್ಸು ಮಾಡಿದ್ದ ಸ್ಥಳದಲ್ಲಿ ಸಂತ ಬಾಬಾರವರ ಗುಡಿಯಿದ್ದು, ಇಲ್ಲಿ ಬಾಬಾರಿಗೆ ಪೂಜೆ ನಡೆಯುತ್ತದೆ.
ಅಂಜನಿ ಮಹಾದೇವ ಮತ್ತು ಪವಿತ್ರ ಜಲಪಾತ:
ಈ ಸ್ಥಳವು ಪ್ರವಾಸಿಗರಿಗೆ ಸುಂದರ ಪ್ರವಾಸಿ ತಾಣವಷ್ಟೇ ಅಲ್ಲದೆ ಭಕ್ತರಿಗೆ ಪವಿತ್ರ ಸ್ಥಳವಾಗಿದೆ. ಇಲ್ಲಿಗೆ ತಲುಪಿದ ನಂತರ ಸುಮಾರು 150 ಮೆಟ್ಟಿಲುಗಳನ್ನು ಏರುತ್ತಾ ಹೋಗಿ ಎತ್ತರದ ಜಲಪಾತದ ಅಡಿಯಲ್ಲಿ ಇರುವ ಪವಿತ್ರ ಶಿವಲಿಂಗದ ಸ್ಥಳವನ್ನು ತಲುಪಬಹುದು. ಎತ್ತರದ ಜಲಪಾತದಿಂದ ಬೀಳುವ ಜಲಧಾರೆಯು ಶಿವಲಿಂಗದ ಮೇಲೆ ಬೀಳುವುದನ್ನು ಕಂಡಾಗ ನಿಸರ್ಗವೇ ಶಿವನಿಗೆ ನೀರನ್ನರ್ಪಿಸಿ ಪುಣ್ಯಸ್ನಾನ ಮಾಡಿಸುತ್ತಿರುವಂತೆ ಭಾಸವಾಗುತ್ತದೆ. ಅದೇ ರೀತಿ ಭಕ್ತರೂ ಈ ಜಲಪಾತದ ನೀರಿನಿಂದ ಮಹಾದೇವನಿಗೆ ಜಲಾಭಿಷೇಕ ಮಾಡಿ ಮಹಾದೇವನ ಆಶೀರ್ವಾದ ಪಡೆಯುತ್ತಾರೆ. ನಿಸರ್ಗದತ್ತವಾದ ಜಲಪಾತದ ಮೂಲಕ ಶಿವಲಿಂಗದ ಜಲಾಭಿಷೇಕ ಆಗುವ ಅದ್ಬುತ ದೃಶ್ಯವನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ.
ವಿಶೇಷತೆ: ಅಂಜನಿ ಮಹಾದೇವ ದೇವಸ್ಥಾನದವರೆಗಿನ ಚಾರಣ ಮಾರ್ಗವು ವರ್ಷವಿಡೀ ತೆರೆದಿದ್ದು, ನವೆಂಬರ್ – ಡಿಸೆಂಬರ್ ತಿಂಗಳ ಚಳಿಗಾಲದಲ್ಲಿ ಇಲ್ಲಿ ಹಿಮಪಾತ ಪ್ರಾರಂಭ ಆಗುವುದರಿಂದ ಜಲಪಾತದ ನೀರು ಶಿವಲಿಂಗದ ಸುತ್ತಲೂ ಹೆಪ್ಪುಗಟ್ಟುತ್ತದೆ. ಈ ಮಂಜುಗಡ್ಡೆಯ ಕಾರಣದಿಂದ ಶಿವಲಿಂಗವು ಬೃಹತ್ ಶಿವಲಿಂಗದ ಆಕಾರವನ್ನು ತಳೆದು ಫೆಬ್ರವರಿ ತಿಂಗಳವರೆಗೂ ಇದರ ಗಾತ್ರವು ಹೆಚ್ಚುತ್ತಲೇ ಹೋಗುತ್ತದೆ. ಕೆಲವೊಮ್ಮೆ ಈ ಶಿವಲಿಂಗದ ಎತ್ತರವು 40 ಅಡಿಗಳನ್ನು ತಲುಪುತ್ತದೆ. ಇದನ್ನು ನೋಡಲೆಂದೇ ಪ್ರವಾಸಿಗರು ಚಳಿಗಾಲದಲ್ಲೂ ಇಲ್ಲಿಗೆ ಬರುತ್ತಾರೆ.
ಅಂಜನಿ ಮಹಾದೇವ್ ತಲುಪುವುದು ಹೇಗೆ? ಮನಾಲಿಯಿಂದ ಟ್ಯಾಕ್ಸಿಗಳ ಮೂಲಕ ಸೋಲಾಂಗ್ ಕಣಿವೆಯನ್ನು ತಲುಪಿದರೆ, ಇಲ್ಲಿಂದ 2-3 ಕಿಲೋಮೀಟರ್ ಕಠಿಣವಲ್ಲದ ಟ್ರೆಕ್ಕಿಂಗ್ ಮೂಲಕ ಕಣಿವೆಯ ಸೊಬಗನ್ನು ಆಸ್ವಾಧಿಸುತ್ತಾ ಸಾಗಬಹುದು. ಪ್ರಕೃತಿಯ ವೀಕ್ಷಣೆಯ ಜೊತೆಗೆ ಆಫ್-ರೋಡ್ ಸಾಹಸವನ್ನು ಮಾಡುತ್ತಾ ಬೈಕ್ ಮೂಲಕವೂ ಇಲ್ಲಿಗೆ ತಲುಪಬಹುದು. ಕಣಿವೆಗಳಲ್ಲಿ ಕುದುರೆ ಸವಾರಿಯ ಅನುಭವ ಪಡೆಯಲು ಬಯಸಿದರೆ ಕುದುರೆಯ ಮೇಲೂ ಕುಳಿತು ಹೋಗಬಹುದು. ತೀರಾ ಚಳಿಯ ಸಮಯದಲ್ಲಿ ಇಲ್ಲಿ ಅತಿಯಾಗಿ ಹಿಮ ಬೀಳುವುದರಿಂದ ಖಾಸಗಿ ಬೈಕ್ ಮೂಲಕ ಮಾತ್ರ ಇಲ್ಲಿಗೆ ಹೋಗಲು ಸಾಧ್ಯ. ಈ ಸ್ಥಳವು ಪ್ರವಾಸಿ ತಾಣ ಮನಾಲಿಯಿಂದ 25 ಕಿ.ಮೀ ದೂರದಲ್ಲಿ ಇದ್ದು, ಇದು ಸಮುದ್ರ ಮಟ್ಟದಿಂದ ಸುಮಾರು ಹನ್ನೊಂದು ಸಾವಿರ ಅಡಿ ಎತ್ತರದಲ್ಲಿದೆ. ಇಲ್ಲಿನ ಶಿವಲಿಂಗವು 30 ಅಡಿಗಳಿಗಿಂತಲೂ ಹೆಚ್ಚು ಎತ್ತರವಿದ್ದು, ಈ ದೇವಾಲಯದ ಅಕ್ಕಪಕ್ಕ ಹಿಮದ ಮೇಲೆ ಬರಿಗಾಲಿನಲ್ಲಿ ನಡೆಯುವ ಮತ್ತು ಮಂಜುಗಡ್ಡೆಯಲ್ಲಿ ಆಟವಾಡುವ ವಿಭಿನ್ನ ಅನುಭವ ಪಡೆಯಬಹುದು. ಮನಾಲಿಯಿಂದ ಇಲ್ಲಿಗೆ ಕಾಲ್ನಡಿಗೆಯ ಮೂಲಕ ಸಾಗುವುದಾದರೆ ಯಾವುದೇ ವೆಚ್ಚ ಇರುವುದಿಲ್ಲ. ಖಾಸಗಿ ಬೈಕ್ ಮತ್ತು ಕುದುರೆಗಳ ಮೂಲಕ ಸಾಗಲು ಮಾಲೀಕರು ರೂ.1,500/- ರಿಂದ 2,000/- ದರವನ್ನು ನಿಗದಿಪಡಿಸುವುದರಿಂದ ಎರಡು ಮಂದಿ ಜತೆಯಾಗಿ ಸಾಗುವುದು ಉತ್ತಮ.
ಭೇಟಿಗೆ ಯಾವ ಸಮಯ ಉತ್ತಮ? ಮನಾಲಿಯ ಭೇಟಿಯಲ್ಲಿ ನಿಸರ್ಗವೇ ಪ್ರಮುಖ ಅಂಶವಾದ್ದರಿಂದ ಇಲ್ಲಿಗೆ ಯಾವಾಗ ಬೇಕಿದ್ದರೂ ಭೇಟಿ ನೀಡಬಹುದು. ಇಲ್ಲಿಗೆ ಸಾಗುವ ಮಾರ್ಗದಲ್ಲಿ ಸುತ್ತಲೂ ಹಸಿರು ಮತ್ತು ಸುಂದರವಾದ ಹರಿಯುವ ಅಂಜನಿ ನದಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಆದ್ದರಿಂದ ಬೇಸಿಗೆ ಮತ್ತು ಮಳೆಗಾಲದಲ್ಲಿ ಇಲ್ಲಿಗೆ ಬಂದರೆ ಸುಂದರವಾದ ಹರಿದ್ವರ್ಣದ ಕಾಡುಗಳ ಸೌಂದರ್ಯವನ್ನು ಆಸ್ವಾಧಿಸಬಹುದು. ಚಳಿಗಾಲದಲ್ಲಿ ಇಲ್ಲಿಗೆ ಹೋದರೆ, ಪೂರ್ತಿ ಇಲ್ಲಿನ ಪ್ರದೇಶವೇ ಹಿಮದಿಂದ ಆವೃತವಾಗಿದ್ದು, ಅದ್ಭುತವಾದ ನೈಸರ್ಗಿಕ ಹಿಮ ಶಿವಲಿಂಗವನ್ನು ನೋಡಬಹುದು. ಚಳಿಗಾಲದಲ್ಲಿ ಇಲ್ಲಿ ತಾಪಮಾನವು ಶೂನ್ಯಕ್ಕಿಂತ ಕಡಿಮೆ ಇರುವುದರಿಂದ ಸೂಕ್ತ ಯೋಜನೆಯನ್ನು ಹಾಕಿಕೊಂಡು ಪ್ರವಾಸವನ್ನು ಯೋಜಿಸುವುದು ಉತ್ತಮ.
ಮಂಜುಗಡ್ಡೆಯ ಮೇಲೆ ಬರಿಗಾಲಿನ ನಡಿಗೆಯ ಸೇವೆ: ಶಿವನ ಕುರಿತು ಹರಕೆಯನ್ನು ಹೊತ್ತ ಭಕ್ತರು ಇಲ್ಲಿನ ಮಂಜುಗಡ್ಡೆಯಿಂದ ತುಂಬಿದ ಹಾದಿಯಲ್ಲಿ ಬರಿಗಾಲಿನಲ್ಲಿ ನಡೆಯುವ ಮೂಲಕ ಅಂಜನಿ ಮಹಾದೇವನ ದರ್ಶನ ಮಾಡುತ್ತಾರೆ ಮತ್ತು ಇಲ್ಲಿನ ಹಿಮವು ಭಕ್ತರಿಗೆ ಯಾವುದೇ ಆರೋಗ್ಯ ಸಮಸ್ಯೆಯನ್ನು ಇಲ್ಲಿಯವರೆಗೆ ಮಾಡಿಲ್ಲ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ.
ನಿಸರ್ಗ ಸೌಂದರ್ಯದ ಬೀಡು: ಚಾರಣದ ಮೂಲಕ ಇಲ್ಲಿಗೆ ಹೋಗುವಾಗ ದಟ್ಟವಾದ ಕಾಡುಗಳು, ಹೊಳೆಯುವ ಜಲಪಾತಗಳು ಮತ್ತು ಸುಂದರವಾದ ಕಣಿವೆಗಳ ಸೌಂದರ್ಯವನ್ನು ಸವಿಯಬಹುದು. ಬೆಟ್ಟದ ಮೇಲಕ್ಕೆ ಏರುತ್ತಿದ್ದಂತೆ, ಕಾಡು ಹೂವುಗಳಿಂದ ತುಂಬಿದ ಸುಂದರ ಹುಲ್ಲುಗಾವಲುಗಳನ್ನು ನೋಡುತ್ತಾ ಅಲ್ಲಿ ವಿಶ್ರಾಂತಿಯನ್ನೂ ಪಡೆಯಬಹುದು. ದಾರಿಯುದ್ದಕ್ಕೂ ಹಿಮದಿಂದ ಆವೃತವಾದ ಪರ್ವತಗಳನ್ನು ನೋಡಬಹುದು ಮತ್ತು ಛಾಯಾಗ್ರಹಣ ಮಾಡಬಹುದು. ಅಂಜನಿ ಮಹಾದೇವನ ಮಹತ್ವ ಮತ್ತು ಪ್ರದೇಶದ ಸಾಂಸ್ಕೃತಿಕ ಪರಂಪರೆಯ ಬಗ್ಗೆ ತಿಳಿಯಲು ಸ್ಥಳೀಯರು ಅಥವಾ ಗೈಡ್ಗಳಲ್ಲಿ ಚರ್ಚಿಸಬಹುದು. ಇಲ್ಲಿನ ಸೋಲಾಂಗ್ ಕಣಿವೆಯು ಸುಂದರವಾದ ಭೂದೃಶ್ಯಗಳು, ಹಿಮನದಿಗಳನ್ನು ವೀಕ್ಷಿಸುತ್ತಾ ಸ್ಕೀಯಿಂಗ್ ಸಾಹಸ ಮಾಡಬಹುದು. ದೇವಸ್ಥಾನದ ಬಳಿ ಇರುವ ಬಿಯಾಸ್ ನದಿಗೆ ನಿರ್ಮಿಸಿರುವ 110 ಮೀಟರ್ ಉದ್ದದ ಪಲ್ಚನ್ ಸೇತುವೆಯು ಮತ್ತೊಂದು ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಅದರ ಮೇಲೆ ನಡೆದಾಡುವುದೂ ವಿಶಿಷ್ಟ ಅನುಭವ ನೀಡುತ್ತದೆ.
ಸೋಲಾಂಗ್ ರೋಪ್ವೇ: ಮನಾಲಿಯಲ್ಲಿ ಆಧುನಿಕ ಕೇಬಲ್ ಕಾರ್ ಸವಾರಿ ಮಾಡಬಹುದಾಗಿದ್ದು, ಇದರಲ್ಲಿ ತಲಾ 8 ಜನರು ಕುಳಿತುಕೊಳ್ಳಲು ಅವಕಾಶ ಇರುವ 15 ಕ್ಯಾಬಿನ್ಗಳಿವೆ. 500 ಮೀಟರ್ಗಳ ಎತ್ತರಕ್ಕೆ ಏರುವ ಮತ್ತು ಸೆಕೆಂಡಿಗೆ 6 ಮೀಟರ್ ವೇಗದಲ್ಲಿ 1.5 ಕಿಮೀ ದೂರವನ್ನು ತಲುಪುವ ಸೋಲಾಂಗ್ ರೋಪ್ವೇಯ ರೋಮಾಂಚಕ ಅನುಭವವನ್ನು ಪಡೆಯಬಹುದು. ಇಲ್ಲಿಗೆ ಹೋಗುವಾಗ ಸೂಕ್ತ ಟ್ರೆಕ್ಕಿಂಗ್ ಬೂಟುಗಳನ್ನು ಧರಿಸಬೇಕು. ಚಾರಣದ ಸಮಯದಲ್ಲಿ ಮಾನ್ಯವಾದ ವಿಳಾಸದ ಗುರುತಿನ ಚೀಟಿ ಇರಲಿ. ಸಾಕಷ್ಟು ತಿಂಡಿಗಳು, ಒಣ ಆಹಾರ ಮತ್ತು ನೀರಿನ ಬಾಟಲಿಗಳು ಜೊತೆಗಿರಲಿ. ಪರಿಸರವನ್ನು ಗೌರವಿಸಿ ಮತ್ತು ಎಲ್ಲೆಂದರಲ್ಲಿ ಕಸ ಹಾಕಬೇಡಿ. ಟ್ರೆಕ್ಕಿಂಗ್ ಸಂದರ್ಭ ಆದಷ್ಟು ಸಾಮಾನು ಸರಂಜಾಮುಗಳನ್ನು ಕನಿಷ್ಠವಾಗಿ ಇರಿಸಿ. ಇಲ್ಲಿನ ಪರಿಸರವು ಹವಾಮಾನವನ್ನು ಅವಲಂಬಿಸಿದ್ದು, ಸೂಕ್ತ ಯೋಜನೆಯನ್ನು ಹಾಕಿಕೊಂಡು ಪ್ರವಾಸದ ಯೋಜನೆಯನ್ನು ಮಾಡುವುದು ಉತ್ತಮ. ಒಂದು ಪ್ರವಾಸದಲ್ಲಿ ಟ್ರಕ್ಕಿಂಗ್, ಕ್ವಾಡ್ ಬೈಕ್ ರೈಡಿಂಗ್, ಹಿಮನದಿಗಳ ವೀಕ್ಷಣೆ, ಪ್ರಕೃತಿಯ ಸೌಂದರ್ಯದ ಆಸ್ವಾದ, ಸೇತುವೆಯ ಮೇಲಿನ ನಡಿಗೆ, ಹಿಮದ ನಡಿಗೆ, ಸ್ಕೀಯಿಂಗ್, ರೋಪ್ ವೇ ಪ್ರಯಾಣ ಮತ್ತು ಸೋಲಾಂಗ್ ಕಣಿವೆಗಳ ವಿಕ್ಷಣೆ ಇವೇ ಮೊದಲಾದ ವೈವಿಧ್ಯಮಯ ಅನುಭವವನ್ನು ಅಂಜನಿ ಮಹಾದೇವ ಪ್ರವಾಸವು ನೀಡುವುದರಿಂದ ನಿಸ್ಸಂದೇಹವಾಗಿ ಪ್ರಕೃತಿ ಪ್ರಿಯರಿಗೆ ಮತ್ತು ಆಧ್ಯಾತ್ಮಿಕ ಅನ್ವೇಷಕರಿಗೆ ಇದೊಂದು ವಿಭಿನ್ನ ಪ್ರವಾಸ ಆಗುವುದರಲ್ಲಿ ಅನುಮಾನವಿಲ್ಲ.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160