ದಖ್ಮಾ – ಪಾರ್ಸಿಗಳ ಶವಸಂಸ್ಕಾರದ ವಿಭಿನ್ನ ಪದ್ಧತಿ
ಭಾರತವನ್ನು ಸರ್ವಧರ್ಮ ಸಹಿಷ್ಣುತೆಯ ದೇಶ ಎನ್ನುತ್ತಾರೆ. ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರಿಷ್ಚಿಯನ್, ಜೈನ ಮತ್ತು ಪಾರ್ಸಿ ಇತ್ಯಾದಿ ಧರ್ಮೀಯರು ವಾಸಿಸುತ್ತಿದ್ದಾರೆ. ಪಾರ್ಸಿ ಎಂದರೆ ಭಾರತದಲ್ಲಿ ವಾಸಿಸುವ ಜೊರಾಸ್ಟ್ರಿಯನ್ ಧರ್ಮದ ಅನುಯಾಯಿಗಳ ಒಂದು ಸಮುದಾಯ. ಇವರು ಮೂಲತಃ ಇರಾನ್ ದೇಶದವರಾಗಿದ್ದು, ಅಲ್ಲಿನ ಅನುಚಿತ ರಾಜಕೀಯ ವಿದ್ಯಾಮಾನಗಳಿಂದ ಹಾಗು ದಬ್ಬಾಳಿಕೆಗಳಿಂದ ಬೇಸತ್ತು ಭಾರತಕ್ಕೆ ವಲಸೆ ಬಂದು ಮುಂಬೈ ಮತ್ತು ಗುಜರಾತ್ ರಾಜ್ಯಗಳಲ್ಲಿ ನೆಲೆನಿಂತರು. ಇವರನ್ನು ಪರ್ಷಿಯನ್ನರು ಅಥವಾ ಪಾರ್ಸಿಗಳು ಎಂದು ಕರೆಯುತ್ತಾರೆ.
ಪಾರ್ಸಿಗಳ ಸಂಪ್ರದಾಯದಲ್ಲಿ ಅಂತ್ಯ ಸಂಸ್ಕಾರ ಬಹಳ ಭಿನ್ನವಾಗಿ ನಡೆಯುತ್ತದೆ. ಪಾರ್ಸಿಗಳು ಸಾಂಪ್ರದಾಯಿಕವಾಗಿ ತಮ್ಮ ಜನಾಂಗದ ವ್ಯಕ್ತಿ ಸತ್ತಾಗ ಹಿಂದುಗಳ ರೀತಿ ಸುಡುವುದಿಲ್ಲ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರ ರೀತಿಯಲ್ಲಿ ಪೆಟ್ಟಿಗೆಯಲ್ಲಿ ಹಾಕಿ ಹೂಳುವುದಿಲ್ಲ. ಪಾರ್ಸಿಗಳ ಅಂತ್ಯಸಂಸ್ಕಾರವು ಮೂರು ಸಾವಿರ ವರ್ಷಗಳಷ್ಟು ಹಳೆಯ ಇತಿಹಾಸವನ್ನು ಹೊಂದಿದೆ. ಪಾರ್ಸಿಗಳ ಶವಸಂಸ್ಕಾರ ಮಾಡುವ ಚಿತಾಗಾರವನ್ನು ‘ಟವರ್ ಸೈಲೆನ್ಸ್’ ಎನ್ನುತ್ತಾರೆ. ಪಾರ್ಸಿಗಳ ಶವಸಂಸ್ಕಾರ ವಿಧಾನವನ್ನು ‘ದಖ್ಮಾ’ ಎಂದು ಪಾರ್ಸಿ ಭಾಷೆಯಲ್ಲಿ ಕರೆಯುತ್ತಾರೆ.

ವಿಭಿನ್ನ ಸಂಪ್ರದಾಯ:ಮನುಷ್ಯನ ದೇಹವು ಪ್ರಕೃತಿಯ ಕೊಡುಗೆ ಎಂದೇ ಪರಿಗಣಿಸುವ ಪಾರ್ಸಿಗಳು, ತಮ್ಮ ಸಮುದಾಯದ ವ್ಯಕ್ತಿಗಳು ಮೃತಪಟ್ಟರೆ ಅವರ ದೇಹವನ್ನು ಮರಳಿ ಪ್ರಕೃತಿಗೇ ಅರ್ಪಿಸಬೇಕು ಎನ್ನುವುದು ಅವರ ನಂಬಿಕೆ. ನೀರು ಹಾಗೂ ಬೆಂಕಿ ಪಾರ್ಸಿಗಳಲ್ಲಿ ಪರಮ ಪವಿತ್ರವಾಗಿದ್ದು, ಇವುಗಳ ಮಲಿನ ಮಾಡುವುದನ್ನು ಪಾರ್ಸಿಯಲ್ಲಿ ಪಾಪವೆಂದು ಹಾಗೂ ವ್ಯಕ್ತಿಯೊಬ್ಬ ಸತ್ತ ಬಳಿಕ ಮೃತದೇಹವನ್ನು ಮಲಿನ ಎಂದು ಪರಿಗಣಿಸಲಾಗುತ್ತದೆ. ಜೊರಾಸ್ಟ್ರಿಯನ್ ನಂಬಿಕೆಗಳ ಪ್ರಕಾರ ಶವವನ್ನು ಸುಡುವುದು ಅಥವಾ ಹೂಳುವ ಪದ್ಧತಿಯು ಪ್ರಕೃತಿಯ ಮುಖ್ಯವಾದ ಅಂಶಗಳಾದ ನೀರು, ಗಾಳಿ ಹಾಗೂ ಬೆಂಕಿಯನ್ನು ಅಶುದ್ಧ ಮಾಡುತ್ತದೆ. ಮೃತದೇಹಗಳನ್ನು ಬೆಂಕಿಯಲ್ಲಿ ಸುಡುವುದು, ಅಥವಾ ಹೂಳುವುದರಿಂದ ಸತ್ತ ದೇಹದ ಮಲಿನ ಅಂಶಗಳು ಭೂಮಿಗೆ ಸೇರಿ ಮಲಿನಕ್ಕೆ ಕಾರಣವಾಗುತ್ತದೆ ಮತ್ತು ಶವಗಳನ್ನು ನದಿಗೂ ಎಸೆಯುವುದಿಲ್ಲ, ಹಾಗೆ ಮಾಡಿದಲ್ಲಿ ನೀರು ಕಲುಷಿತವಾಗುತ್ತದೆ ಎಂದು ಇವರು ನಂಬುತ್ತಾರೆ. ಹಾಗಾಗಿ ಶವಗಳ ದಹನ ಮತ್ತು ದಫನಗಳನ್ನು ಪಾರ್ಸಿ ಸಂಸ್ಕೃತಿ ನಿಷೇಧಿಸುತ್ತದೆ. ಆ ಕಾರಣದಿಂದಾಗಿ ಪಾರ್ಸಿಗಳು ಶವವನ್ನು ಹೂಳದೇ ಅಥವಾ ಬೆಂಕಿಯಲ್ಲಿ ಸುಡದೇ ಇವರು ಶವವನ್ನು ‘ದಖ್ಮಾ’ ಮಾಡುತ್ತಾರೆ.

ಏನಿದು ದಖ್ಮಾ?: ದಖ್ಮಾ ಎನ್ನುವುದು ಪಾರ್ಸಿ ಸಂಪ್ರದಾಯದಲ್ಲಿ ಮೃತದೇಹಗಳನ್ನು ಇಡುವ ಮೌನ ಗೋಪುರ ಅಥವಾ ಸ್ಮಶಾನ ಅನ್ನುವ ಅರ್ಥವಿದೆ. ಇದನ್ನು ‘ಟವರ್ ಆಫ್ ಸೈಲೆನ್ಸ್’ ಎನ್ನುತ್ತಾರೆ. ಪಾರ್ಸಿಗಳು ವೃತ್ತಾಕಾರವಾಗಿ ಅಂತ್ಯಸಂಸ್ಕಾರಕ್ಕಾಗಿ ನಿರ್ಧಿಷ್ಟವಾಗಿ ವಿನ್ಯಾಸ ಮಾಡಿರುವ ವೃತ್ತಾಕಾರದ ಟೊಳ್ಳಾದ ಕಟ್ಟಡ ರೂಪದ ಈ ಗೋಪುರದಲ್ಲಿ ಶವವನ್ನು ಸೂರ್ಯನ ಬೆಳಕಿನಲ್ಲಿ ಇಡುತ್ತಾರೆ. ಅಲ್ಲಿ ರಣಹದ್ದುಗಳು ಶವವನ್ನು ತಿನ್ನುತ್ತವೆ, ಇದನ್ನು ‘ಆಕಾಶ ಸಮಾಧಿ’ ಎಂದೂ ಕರೆಯುತ್ತಾರೆ.ಸತ್ತಂತಹ ಪಾರ್ಸಿ ಸಮುದಾಯದ ವ್ಯಕ್ತಿಯ ಅಂತ್ಯಸಂಸ್ಕಾರದ ಮುಂಜಾನೆ, ಅಂತ್ಯಕ್ರಿಯೆಯ ವಿಧಿವಿಧಾನ ನಡೆಸಲು ಮೃತದೇಹವನ್ನು ಸಿದ್ಧ ಮಾಡಲಾಗುತ್ತದೆ. ಮೃತದೇಹಗಳನ್ನು ನಿರ್ವಹಿಸುವ ವಿಶೇಷ ಪಾಲಕರು ಮತ್ತು ನಸ್ಸೆಲಾರ್‌ಗಳು ದೇಹವನ್ನು ತೊಳೆದು ಸಾಂಪ್ರದಾಯಿಕ ಪಾರ್ಸಿ ಉಡುಗೆಯನ್ನು ಮೃತದೇಹಕ್ಕೆ ಉಡಿಸುತ್ತಾರೆ. ನಂತರ ದೇಹವನ್ನು ಬಿಳಿಯ ಹೊದಿಕೆಯಲ್ಲಿ ಸುತ್ತಲಾಗುತ್ತದೆ, ಇದನ್ನು ‘ಸುದ್ರೆ’ (ಹತ್ತಿಯ ಉಡುಪನ್ನು) ಮತ್ತು ‘ಕುಸ್ತಿ’ (ಇದು ಸೊಂಟದ ಸುತ್ತ ಧರಿಸಿರುವ ಪವಿತ್ರ ಬಳ್ಳಿ) ಎಂದು ಕರೆಯಲಾಗುತ್ತದೆ. ನಂತರ ಮೃತದೇಹವನ್ನು ಅಂತಿಮ ವಿಶ್ರಾಂತಿ (ದಖ್ಮಾ) ಸ್ಥಳಕ್ಕೆ ಕೊಂಡೊಯ್ಯುವ ಮೊದಲು, ಪಾರ್ಸಿ ಪುರೋಹಿತರು ಶವದ ಆತ್ಮದ ಶಾಂತಿಗಾಗಿ ಪ್ರಾರ್ಥನೆ ಮಾಡಿ ಆಶೀರ್ವದಿಸುತ್ತಾರೆ. ಸತ್ತವರ ಆತ್ಮವು ಮರಣದ ನಂತರದ ಸ್ವರ್ಗಪ್ರಾಪ್ತಿಗೆ ಈ ಆಚರಣೆ ಮಾಡುತ್ತಾರೆ. ಕುಟುಂಬಿಕರು ಮತ್ತು ಸಂಬಂಧಿಗಳು ಶವಕ್ಕೆ ಗೌರವವನ್ನು ಸಲ್ಲಿಸಲು ಮತ್ತು ಈ ಪ್ರಾರ್ಥನೆಯಲ್ಲಿ ಭಾಗವಹಿಸಲು ಒಟ್ಟು ಸೇರುತ್ತಾರೆ. ನಂತರ ‘ದಖ್ಮಾ’ ಅಥವಾ ಮೌನ ಗೋಪುರಕ್ಕೆ ದೇಹವನ್ನು ಕೊಂಡೊಯ್ದು ‘ದಖ್ಮಾ’ದ ಮೇಲೆ ಇರಿಸುತ್ತಾರೆ. ಇಲ್ಲಿ ಮೃತದೇಹವನ್ನು ಪ್ರಕೃತಿಯಲ್ಲಿರುವ ಹುಳಗಳು ಹಾಗೂ ರಣಹದ್ದುಗಳು ತಿನ್ನುತ್ತವೆ. ‘ದೋಖ್ಮೆನಾಶಿನಿ’ ಎಂದು ಕರೆಯುವ ಈ ಪ್ರಕ್ರಿಯೆಯು ಬೆಂಕಿ, ಭೂಮಿ ಮತ್ತು ನೀರಿನ ಪವಿತ್ರ ಅಂಶಗಳನ್ನು ಕಲುಷಿತಗೊಳಿಸದೆ ದೇಹವು ಪ್ರಕೃತಿಗೆ ಮರಳಿಸುವ ವಿಭಿನ್ನ ಕ್ರಮವಾಗಿದೆ. ಇಲ್ಲಿ ರಣಹದ್ದುಗಳು ಶವದ ಮಾಂಸವನ್ನು ತಿನ್ನುತ್ತವೆ ಮತ್ತು ಮೂಳೆಗಳು ಗೋಪುರದ ಒಳಗಿನ ಕೇಂದ್ರ ಬಾವಿಗೆ ಬಿದ್ದು, ಅಲ್ಲಿ ಅವು ಮತ್ತಷ್ಟು ಕೊಳೆಯುತ್ತವೆ. ಈ ಮೂಲಕ ವ್ಯಕ್ತಿಯ ಶವವು ಮರಳಿ ಪ್ರಕೃತಿಯನ್ನು ಸೇರುತ್ತದೆ.

ಅಂತ್ಯಕ್ರಿಯೆಗೆ ಅಧುನಿಕ ವಿಧಾನ: ರಣಹದ್ದುಗಳು ಶವವನ್ನು ಅತಿವೇಗವಾಗಿ ತಿನ್ನುತ್ತವೆ. ಪ್ರಸ್ತುತ ರಣಹದ್ದುಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಆಗಿದ್ದು, ನಗರೀಕರಣದ ವೇಗ ಮತ್ತು ಮನುಷ್ಯ ಉಪಯೋಗ ಮಾಡುವ ಡಿಕ್ಲೊಫೆನ್ಸ್ ಎನ್ನುವ ವಿಷಪೂರಿತ ಔಷಧಿಯ ಅತಿಯಾದ ಬಳಕೆಯ ಕಾರಣಕ್ಕೆ ಈ ಪಕ್ಷಿ ಸಂಕುಲ ನಶಿಸಲು ಕಾರಣವಾಗಿದೆ. ಇದರಿಂದ ಪಾರ್ಸಿಗಳ ಅಂತ್ಯಸಂಸ್ಕಾರಕ್ಕೂ ಸಮಸ್ಯೆಯಾಗುತ್ತಿದೆ. ಇದರಿಂದಾಗಿ ಮೃತದೇಹಗಳು ಪೂರ್ತಿ ಪ್ರಕೃತಿಯಲ್ಲಿ ಲೀನವಾಗಲು ಬಹಳ ಸಮಯ ಹಿಡಿಯುತ್ತದೆ. ಇಷ್ಟೇ ಅಲ್ಲದೇ ಇತರ ಸಮುದಾಯಗಳು ಈ ರೀತಿಯ ಶವಸಂಸ್ಕಾರ ಮಾಡುವುದರ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿವೆ. ಪ್ರಸ್ತುತ ಮೃತವ್ಯಕ್ತಿಯ ದೇಹವು ಕೂಡಲೇ ಕೊಳೆಯಲು ದಖ್ಮಾದ ಒಳಗಡೆ ಸೌರ ಪ್ಯಾನಲ್‌ಗಳನ್ನು ಅಳವಡಿಸಿದ್ದು, ಅದು ಯಶಸ್ವಿಯಾಗಿದೆ. ಸಮುದಾಯದಲ್ಲಿ ಹೂಳುವುದು ಅಥವಾ ಸಂಸ್ಕಾರದ ನಿಷೇಧಗಳನ್ನು ತೆಗೆದು ಹಾಕುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇನ್ನು ಪಾರ್ಸಿ ಸಮುದಾಯದ ಕೆಲವರು ಹಿಂದೂ ವಿಧಿವಿಧಾನಗಳಂತೆ ಅಂತ್ಯಸಂಸ್ಕಾರ ಮಾಡಲೂ ಆರಂಭಿಸಿದ್ದಾರೆ.

ಇಂತಹ ಪಾರ್ಸಿ ದಖ್ಮಾಗಳು (ಚಿತಾಗಾರ) ಮುಂಬೈ ನಗರದ ಮಲ್‌ಬಾರ್ ಹಿಲ್ಸ್ ಹಾಗೂ ದೊಂಗರ್ವಾಡಿಯ ದಟ್ಟ ಕಾಡಿನಲ್ಲಿದೆ. ಇಲ್ಲಿನ ಜನರು ಇಲ್ಲಿ ಮಾಡುವ ದಖ್ಮಾ ಬಗ್ಗೆ ತಮ್ಮ ದೂರುಗಳನ್ನು ಸಲ್ಲಿಸಿದ್ದು, ಸದ್ಯ ಪಾರ್ಸಿಗಳಿಗೆ ಈ ಟವರ್‌ನಲ್ಲಿ ದಖ್ಮಾ ಬದಲು ಶವದ ಹೂಳುವಿಕೆಗೆ ಅವಕಾಶದ ಅನುಮತಿ ನೀಡಲಾಗಿದೆ. ದಖ್ಮಾಗೆ ಪರ್ಯಾಯವಾಗಿ ಕೆಲವು ಪಾರ್ಸಿ ಕುಟುಂಬಗಳು ಈಗ ವಿದ್ಯುತ್ ಶವಸಂಸ್ಕಾರವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಇದು ಹೆಚ್ಚು ಪ್ರಾಯೋಗಿಕ ಮತ್ತು ಪರಿಸರ ಸ್ನೇಹಿ ಆಯ್ಕೆಯಾಗಿದೆ. ‘ದಖ್ಮಾ’ ವಿಧಾನದ ಮೂಲಕ ಶವಸಂಸ್ಕಾರ ಅಸಾಧ್ಯವಾದರೆ ಮೃತದೇಹವನ್ನು ವಿದ್ಯುತ್ ಚಿತಾಗಾರಕ್ಕೆ ಕೊಂಡೊಯ್ಯಲಾಗುತ್ತದೆ. ಇಲ್ಲಿ, ಭೂಮಿ, ಬೆಂಕಿ ಅಥವಾ ನೀರನ್ನು ಕಲುಷಿತ ಮಾಡದೇ ಇರುವ ಜೊರಾಸ್ಟ್ರಿಯನ್ ತತ್ವಗಳನ್ನು ಗೌರವಿಸುವ ರೀತಿಯಲ್ಲಿ ದೇಹವನ್ನು ಸುಡಲಾಗುತ್ತದೆ. ಇಂಥದೊಂದು ದಖ್ಮಾ ನಮ್ಮ ಬೆಂಗಳೂರಿನ ಪ್ಯಾಲೇಸ್ ಗುಟ್ಟಹಳ್ಳಿಯಲ್ಲೂ ಒಂದು ಇದೆ.

ಮನುಷ್ಯನ ಮರಣಾನಂತರ ಶವವನ್ನು ಈ ಭೂಮಿಯಿಂದ ಸಕಲ ಗೌರವ ಮತ್ತು ಮರ್ಯಾದೆಗಳೊಂದಿಗೆ ಬೀಳ್ಕೋಡುವ ‘ಶವಸಂಸ್ಕಾರ’ ವನ್ನು ಮಾಡಲೇಬೇಕು. ನಮ್ಮ ದೇಶವನ್ನು ಸರ್ವ ಜನಾಂಗದ ಶಾಂತಿಯ ತೋಟವೆಂದು ಕರೆಯುವುದರಿಂದ ಇಲ್ಲಿ ವಿಭಿನ್ನ ಮತಗಳ ವಿಭಿನ್ನ ಸಂಪ್ರದಾಯಗಳನ್ನು ಅನುಸರಿಸುವ ವಿವಿಧ ಧರ್ಮೀಯರಿದ್ದು, ಅವರ ಪೈಕಿ ಪಾರ್ಸಿ ಜನಾಂಗದ ಜನರ ಅತ್ಯಂತ ವಿಭಿನ್ನ ಅಂತ್ಯಸಂಸ್ಕಾರ ಕ್ರಮವಾದ ‘ದಖ್ಮಾ’ ಸಂಪ್ರದಾಯವು ನಮ್ಮ ದೇಶದ ಸಂಸ್ಕೃತಿಗೆ ಹೆಚ್ಚು ಮಹತ್ವದ್ದು.

ಸಂತೋಷ್ ರಾವ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160
ಚಿತ್ರಗಳು: ಅಂತರ್ಜಾಲ