ಅಶ್ವ ಚೋರ – 2
ಇತ್ತ ನೀರಡಿಕೆ ಹೋಗಲಾಡಿಸಿಕೊಂಡ ಚಿತ್ರಕ ಮೊದಲಿನಂತೆ ಕಲ್ಲಿನ ಮೇಲೆ ಬಂದು ಕುಳಿತನು. ಸುಗೋಪಾ ನೋಡಿದಳು. ಅವನು ಮಂಡಿಗಳ ಮೇಲೆ ಮೊಳಕೈಗಳನ್ನಿಟ್ಟು, ಆ ಕೈಗಳ ತುದಿಗೆ ತನ್ನ ಗಲ್ಲವನ್ನಿಟ್ಟು ಅವಳನ್ನೇ ದುರುದುರು ನೋಡುತ್ತಿದ್ದಾನೆ. ಸುಗೋಪಾಳಿಗೆ ಒಂದು ಬಗೆಯ ಅಧೀರತೆಯುಂಟಾಯಿತು. ಅವಳು ಅನೇಕ ತಿಂಗಳುಗಳಿಂದ ಇಲ್ಲಿಯೇ ಏಕಾಕಿನಿಯಾಗಿ ಇರುತ್ತಿದ್ದಳು. ಎಷ್ಟೋ ಮಂದಿ ದಾರಿ ಹೋಕರು ಬರುವರು; ಹೋಗುವರು. ಕೆಲವರು ಅವಳನ್ನು ನೋಡಿ ವಿನೋದವಾಗಿ ಮಾತನಾಡಿಸುವರು. ಅವಳೂ ಕೂಡ ಹಾಗೆಯೇ ಲಲಿತವಾಗಿ ಉತ್ತರಿಸುವಳು. ಯಾರಾದರೂ ಸ್ವಲ್ಪ ದಾರಿ ಬಿಟ್ಟು ಮಾತನಾಡಿದರೆಂದರೆ ಅವರನ್ನು ತನ್ನ ಒಂದೆರಡು ವಾಕ್ಯ- ಬಾಣಗಳಿಂದ ಜರ್ಜರಗೊಳಿಸಿ ತಲೆತಗ್ಗಿಸುವಂತೆ ಮಾಡುವಳು. ಅವಳು ಎಂದೂ ತನ್ನ ಆತ್ಮಪ್ರತ್ಯಯ ಕಳೆದುಕೊಂಡವಳಲ್ಲ. ಆದರೆ ಇಂದು ಈ ಹರುಕು ಬಟ್ಟೆಯ ಓರ್ವ ಪರದೇಶಿಯ ಬಿಡುಗಣ್ಣಿನ ನೋಟ ಅವಳನ್ನು ಹುಚ್ಚಳನ್ನಾಗಿ ಮಾಡಿತ್ತು.
ಜಾರಿದ ಸೆರಗನ್ನು ಸರಿಪಡಿಸಿಕೊಂಡು ಅವಳು ‘ಕಪೋತ ಕೂಟಕ್ಕೆ ಹೋಗಬೇಕೆಂದವನು ಇನ್ನೂ ತಡ ಮಾಡುತ್ತಿರುವುದಕ್ಕೆ ಕಾರಣವೇನಿರಬಹುದೋ?’ ಎಂದು ಪ್ರಶ್ನಿಸಿದಳು.
ಚಿತ್ರಕ ಅದೇ ರೀತಿ ನೋಡುತ್ತಲೇ ಮೃದುವಾಗಿ ‘ಆಯಾಸ ಪರಿಹರಿಸಿ ಕೊಳ್ಳುತ್ತಿದ್ದೇನೆ. ನನಗೇನೂ ಆತುರವಿಲ್ಲ’ ಎಂದು ಉತ್ತರಿಸಿದನು.
ಸ್ವಲ್ಪ ಹೊತ್ತು ನೀರವವಾಗಿ ಕಳೆಯಿತು. ಚಿತ್ರಕನ ದೃಷ್ಟಿ ಮಾತ್ರ ಅತ್ತಿತ್ತ ಚಲಿಸಲಿಲ್ಲ. ಸುಗೋಪಾ ಮೇಲಿಂದ ಮೇಲೆ ಅಧೀರಳಾಗುತ್ತಿದ್ದಳು. ಸ್ವಲ್ಪಕಠೋರವಾಗಿಯೇ ‘ನೀನು ಯಾವ ಅನಾಗರಿಕ ದೇಶದವನು? ಹೆಂಗಸನ್ನು
ಎಂದೂ ನೋಡಿಯೇ ಇಲ್ಲವೆ?’ ಎಂದು ನುಡಿದಳು.
ಈಗ ದೃಷ್ಟಿಯನ್ನು ಬೇರೆ ಕಡೆಗೆ ಹರಿಸಿ, ಸುತ್ತೂ ನೋಡಹತ್ತಿದ. ತುಟಿಯನ್ನು ನಾಲಗೆಯಿಂದ ಸವರಿಕೊಳ್ಳುತ್ತ ‘ಪ್ರದೇಶವೇನೋ ನಿರ್ಜನವಾಗಿದೆ!’ ಎಂದು ಹೇಳಿದನು.
ಈ ಅಸಂಬದ್ಧ ಉತ್ತರದಿಂದ ಸುಗೋಪಾಳಿಗೆ ಕೋಪ ಬಂತು. ತುಟಿಯನ್ನು ಕಚ್ಚುತ್ತ, ನೆಲದ ಮೇಲಿದ್ದ ಮಣ್ಣಿನ ಪಾತ್ರೆಯನ್ನು ತೆಗೆದುಕೊಂಡು ತನ್ನ ಕುಟೀರದತ್ತ ಹೊರಟಳು.
ಚಿತ್ರಕ- ‘ನೀನು ಸುಂದರಿ ಹಾಗೂ ಯುವತಿ!’
ಸುಗೋಪಾ ಚಕಿತಳಾಗಿ ಕೊರಳು ತಿರುಗಿಸಿ ನೋಡಿದಳು. ಚಿತ್ರಕನ ಕಂಠಸ್ವರದಲ್ಲಿ ಸ್ವಲ್ಪವೂ ಬದಲಾವಣೆ ಕಂಡು ಬರಲಿಲ್ಲ. ಅವನು ಇನ್ನೊಮ್ಮೆ‘ನೀನು ಸುಂದರಿ ಹಾಗೂ ಯುವತಿ! ಆದರೂ ಈ ನಿರ್ಜನ ಪ್ರದೇಶದಲ್ಲಿ ಏಕಾಕಿನಿಯಾಗಿರಲು ನಿನಗೆ ಹೆದರಿಕೆಯಾಗುವುದಿಲ್ಲವೆ?’ ಎಂದು ಪ್ರಶ್ನಿಸಿದನು.
‘ಹೆದರಿಕೆ! ಯಾವ ಹೆದರಿಕೆ?’ ಹುಬ್ಬು ಗಂಟಿಕ್ಕಿ ಹೇಳಿದಳು.
‘ಕಾಡಿನಲ್ಲಿ ಹಿಂಸ್ರ ಜಂತುಗಳಿರುತ್ತವೆ.’ ‘ಹಿಂಸ್ರ ಜಂತುಗಳಿಗೆ ನಾನು ಹೆದರುವವಳಲ್ಲ.’
‘ಮತ್ತೆ… ಮನುಷ್ಯರಿಗೆ?’
‘ಅವರು ದಾರಿ ತಪ್ಪಿದರೆ ನನ್ನ ಹತ್ತಿರ ಅಸ್ತ್ರವಿದೆ.’
‘ಎಂತಹ ಅಸ್ತ್ರ?’
ಸುಗೋಪಾ ಬೆರಳು ಸೂಡಿ ಕುಟೀರದ ಅಂಗಳವನ್ನು ತೋರಿಸಿದಳು.
ಚಿತ್ರಕ ಆ ಕಡೆ ತಿರುಗಿ ನೋಡಿದನು. ಅಲ್ಲಿ ಒಂದು ಪೊರಕೆ ಇತ್ತು. ಅದನ್ನು ನೋಡಿ ಅವನಿಗೆ ನಗೆ ಉಕ್ಕಿ ಬಂತು. ‘ನೀನು ಸಾಹಸಿಯೇ ಸರಿ. ಆದರೆ ಈ ಅಸ್ತ್ರದಿಂದ ಲೋಲುಪ ಪುರುಷರನ್ನು ಹೆದರಿಸುತ್ತೇನೆಂದು ಬಗೆದಿರುವೆಯಾ?’ ಎಂದು ಆಶ್ಚರ್ಯ ವ್ಯಕ್ತಪಡಿಸಿದನು.
ಅಸ್ಪಷ್ಟವಾಗಿ ‘ಹೌದು’ ಎನ್ನುತ್ತ ಕುಟೀರದತ್ತ ಹೆಜ್ಜೆ ಇಡುವುದರಲ್ಲಿದ್ದಳು. ಸುಗೋಪಾ ಅಷ್ಟರಲ್ಲಿ ಕಾಡು ಬೆಕ್ಕು ನೆಗೆಯುವ ಹಾಗೆ ಒಂದೇ ನೆಗೆತಕ್ಕೆ ಅವಳ ಮುಂದೆ ಒಂದು ನಿಂತು ಬಿಟ್ಟನು. ಆ ಚಿತ್ರಕ ಅವಳ ಮುಖದ ಹತ್ತಿರಕ್ಕೆ ತನ್ನ ಮುಖವನ್ನು ಒಯ್ದು, ‘ವೀರಾಂಗನೆ, ಈಗ ನೀನು ಯಾವ ಅಸ್ತ್ರವನ್ನು ಪ್ರಯೋಗಿಸುವೆ? ಎಂದು ವ್ಯಂಗ್ಯವಾಗಿ ನುಡಿದನು. ಬೆದರುಗಣ್ಣುಗಳಿಂದ ಸುಗೋಪಾ ನೋಡುತ್ತಿದ್ದಳು. ಚಿತ್ರಕನ ಕಣ್ಣಗಳು ಮುತ್ತಿನ ಮಣಿಗಳಂತೆ ಹೊಳೆಯುತ್ತಿದ್ದವು. ಹಣೆಯ ಕೆಂಪು ಬಣ್ಣದ ಗುರುತು
ರಕ್ತತಿಲಕದಂತೆ ಕೆಂಡವಾಗಿ ಉರಿಯುತ್ತಿತ್ತು. ಕ್ಷಣಕಾಲ ದಂಗು ಬಡಿದವಳಂತೆ ಇದ್ದು, ಸ್ವಲ್ಪ ಚೇತರಿಸಿಕೊಂಡು, “ದಾರಿ ಬಿಡು, ಅನಾಗರಿಕ!” ಎಂದು ಚುಚ್ಚಿ ನುಡಿದಳು.
‘ಬಿಡದಿದ್ದರೆ?’
ಸುಗೋಪಾ ಸುತ್ತಲೂ ತನ್ನ ಅಸಹಾಯಕತೆಯ ದೃಷ್ಟಿಯನ್ನು ಬೀರಿದಳು.
ಇದೇ ಸಮಯಕ್ಕೆ ಸರಿಯಾಗಿ, ಅವಳಿಗೆ ಕಷ್ಟಕಾಲದಲ್ಲಿ ನೀಡುವ ಅಭಯ ವಚನವೋ ಎಂಬಂತೆ, ಕಲ್ಲುದಾರಿಯ ಮೇಲೆ ವೇಗವಾಗಿ ಬರುತ್ತಿರುವ ಕುದುರೆಯ ಖುರಪುಟ ಧ್ವನಿ ಕಿವಿಗೆ ಬಿತ್ತು. ಮರುಕ್ಷಣದಲ್ಲಿಯೇ ಮೃದು ಮಧುರವಾದ ದನಿಯ ಕರೆ ಕೇಳಿ ಬಂತು.
‘ಸುಗೋಪಾ! ಸುಗೋಪಾ!!’
ಚಿತ್ರಕ ಸುಗೋಪಾಳಿಗೆ ದಾರಿ ಬಿಟ್ಟು ಸ್ವಲ್ಪ ದೂರ ಸರಿದು ನಿಂತನು. ಸುಗೋಪಾ ಅಶ್ವಾರೋಹಿಯನ್ನು ಎದುರುಗೊಳ್ಳಲು ಹೋದಳು. ಮಿಂಚಿನ ವೇಗದಲ್ಲಿ ಕುದುರೆ ದೇವದಾರು ಮರದ ಕೆಳಗೆ ಬಂದು ನಿಂತಿತು. ಅಶ್ವಾರೋಹಿಯು ಒಂದೇ ನೆಗೆತಕ್ಕೆ ಕೆಳಕ್ಕೆ ಇಳಿಯುತ್ತಲೇ ಸುಗೋಪಾ ಓಡಿ ಹೋಗಿ ಆ ವ್ಯಕ್ತಿಯನ್ನು ಎರಡು ಬಾಹುಗಳಿಂದಲೂ ಬಾಚಿ ತಬ್ಬಿದಳು.
ಅಶ್ವಾರೋಹಿಯ ವಯಸ್ಸು ಅಷ್ಟೇನೂ ಬಹಳವಾಗಿರಲಿಲ್ಲ. ಇನ್ನೂ ಕಿಶೋರಾವಸ್ಥೆ. ಮುಖದಲ್ಲಿ ಮೀಸೆ ಕೂಡ ಕಾಣುತ್ತಿರಲಿಲ್ಲ. ತಲೆಯ ಮೇಲೆ ಉಜ್ವಲವಾದ ಸೀಸಕ. ಎದೆಯ ಮೇಲೆ ಚರ್ಮದ ಕವಚ. ಬೆನ್ನಿನಲ್ಲಿ ಬತ್ತಳಿಕೆ ಹಾಗೂ ಬಿಲ್ಲು. ದೇವ ಸೇನಾಪತಿ ಕಿಶೋರ ಕಾರ್ತಿಕೇಯನು ಶತ್ರುಗಳನ್ನು ಜಯಿಸುವುದಕ್ಕಾಗಿ ಹೊರಟಿದ್ದಾನೆಯೋ ಎಂಬಂತೆ ತೋರುತ್ತಿದೆ- ಈ ಅಪರೂಪದ ಸುಂದರ ಆಕೃತಿ!
ತರುಣವೀರ ಸುಂದರವಾದ ಕೆಂದುಟಿಗಳ ಮೇಲೆ ನಗೆ ಮೂಡಿಸಿ ‘ಗೆಳತಿ, ಏನಾಯಿತು?’ ಎಂದು ಕೇಳಿದನು.
ಸುಗೋಪಾಳ ಮನಸ್ಸಿನ ಒಗ್ಗಡ ತಿಳಿಯಾಗಿತ್ತು. ಅವಳ ಆನಂದದಿಂದ ಗದ್ಗದಿತಳಾಗಿ ‘ಏನೂ ಇಲ್ಲ. ಈ ಗಾವಿಲ… ಪರದೇಶಿ ಸ್ವಲ್ಪ ಮರ್ಯಾದೆ ಮೀರುತ್ತಿದ್ದನು… ಅಷ್ಟೆ!ಬಾ ಒಳಕ್ಕೆ ಹೋಗೋಣ. ಬೇಟೆಗೆ ಹೊರಟಿರುವ ಹಾಗೆ ಕಾಣುತ್ತೆ. ಕೆನ್ನೆಯೆಲ್ಲ ಬಿಸಿಲಿನಿಂದ ಕೆಂಪಾಗಿ ಹೋಗಿದೆ’ ಎಂದಳು.
ಚಿತ್ರಕ ಈ ಮಧ್ಯೆ ಮೌನವಾಗಿ ಅಲ್ಲಿಂದ ಸರಿದು ದೇವದಾರು ವೃಕ್ಷದ ಕಾಂಡದ ಮೇಲೆ ಒಂದು ಕೈಯನ್ನೂ, ತಾತ್ಸಾರ ಭಾವದಿಂದ ಇನ್ನೊಂದು ಕೈಯನ್ನು ಕತ್ತಿಯ ಮೇಲೂ ಇಟ್ಟು ಗಂಭೀರವಾಗಿ ನಿಂತಿದ್ದನು. ತರುಣ ಸ್ವಲ್ಪ ವಿಸ್ಮಯದಿಂದಲೇ ಚಿತ್ರಕನ ಕಡೆ ನೋಡಿದನು. ಕ್ಷಣ ಕಾಲ ಇಬ್ಬರ ನೋಟವೂ ಬೆರೆಯಿತು. ಅನಂತರ ತಿರಸ್ಕಾರದಿಂದ, ಕುದುರೆಯ ಲಗಾಮನ್ನು ಚಿತ್ರಕನ ಕಡೆಗೆ ಎಸೆದು ‘ಕುದುರೆಯನ್ನು ನೋಡಿಕೊಳ್ಳುತ್ತಿರು. ಕೂಲಿ ಕೊಡುತ್ತೇವೆ’ ಎಂದು ಹೇಳುತ್ತ ಆ ಯುವಕನು ಸುಗೋಪಾಳ ಸೊಂಟಕ್ಕೆ ಕೈ ಹಾಕಿ ನಗು-ನಗುತ್ತಾ ಮಾತನಾಡಿಕೊಂಡು ಕುಟೀರದತ್ತ ನಡೆದನು.
ಸುಗೋಪಾ ಹರ್ಷೋದ್ಗಾರ ತೆಗೆದಳು- ‘ನೀನು ನನ್ನನ್ನು ನೋಡಲು ಈ ನಿರ್ಜನ ಪ್ರದೇಶಕ್ಕೆ ಬಂದುದರಿಂದ ನನ್ನ ಕಷ್ಟವೆಲ್ಲ ಪರಿಹಾರವಾಯಿತು.’
ತರುಣ- (ಮೃದುವಾಗಿ ನಕ್ಕು) “ಪ್ರಪಾಪಾಲಿಕೆಯು ಯಾವ ರೀತಿ ಕರ್ತವ್ಯಪಾಲನೆ ಮಾಡುತ್ತಿದ್ದಾಳೆ ಎಂಬುದನ್ನು ಪರೀಕ್ಷೆ ಮಾಡಲು ರಾಜರ ಪರವಾಗಿ ನಾನೇ ಖುದ್ದಾಗಿ ಇಲ್ಲಿಗೆ ಬಂದಿದ್ದೇನೆ.”
ಹೀಗೆ ಮಾತನಾಡುತ್ತ ಅವರು ಕುಟೀರದೊಳಕ್ಕೆ ಹೊರಟು ಹೋದರು. ಇತ್ತ ಚಿತ್ರಕ ನಿಧಾನವಾಗಿ ಕುದುರೆಯ ಬಳಿಗೆ ಹೋಗಿ ನಿಂತನು. ಕಾಂಬೋಜ ದೇಶದ ಸುಂದರವಾದ ಕುದುರೆ- ಶಿಲಾವಿಗ್ರಹದಂತೆ ಸ್ಥಿರವಾಗಿ ನಿಂತಿದೆ. ಕೆಂಪು ಹಳದಿ ಮಿಶ್ರಿತವಾದ ಚರ್ಮ, ರೇಷ್ಮೆಯಂತೆ ನವುರಾದ ಕೊರಳ ಕೇಸರ- ಕೊರಳಲ್ಲಿ ಮುತ್ತಿನ ಮಾಲೆ. ಬೆನ್ನ ಮೇಲೆ ಕೋಮಲ ರೋಮದಿಂದ ಮಾಡಿದ ಜೀನು, ಲಗಾಮು ಕೂಡ ಸ್ವರ್ಣಾಲಂಕೃತವಾದದ್ದು.
ಚಿತ್ರಕ ಒಮ್ಮೆ ಕುದುರೆಯ ಕುತ್ತಿಗೆಯನ್ನು ಮೃದುವಾಗಿ ನೇವರಿಸಿದ. ಅದು ಸಂತೋಷದಿಂದ ಮೇಲುದನಿಯಲ್ಲಿ ಕೆನೆಯಿತು. ಈಗ ಅವನು ಮೈಯೆಲ್ಲ ಕಣ್ಣಾಗಿ ಸುತ್ತಲೂ ದೃಷ್ಟಿಹರಿಸಿದ. ಸದ್ದಡಗಿದ ನಡುಹಗಲು. ಕುಟೀರದೊಳಗಿಂದ ಮಾತ್ರ ಆಗಾಗ್ಗೆ ನಗುವಿನ ‘ಕಿಲಕಿಲ’ ನಡುಹಗಲಿನ ಮೌನವನ್ನು ಮುರಿಯುತ್ತಿದೆ. ದಾರಿಯಲ್ಲಿ ಜನರ ಸುಳಿವೂ ಇಲ್ಲ.
ಚಿತ್ರಕನ ತುಟಿಗಳ ಮೇಲೆ ತಿರಸ್ಕಾರದ ನಗೆ ಮೂಡಿತು. ಅದರಲ್ಲಿ ಆನಂದವಾಗಲೀ ಕುತೂಹಲವಾಗಲೀ ಲೇಶಮಾತ್ರವೂ ಇರಲಿಲ್ಲ. ಅವನ ಹಣೆಯ ಮೇಲಿನ ತಿಲಕ ಚಿಹ್ನೆ ಮತ್ತಷ್ಟು ಆರಕ್ತವಾಯಿತು.
ಲಗಾಮು ಹಿಡಿದು ನಿಧಾನವಾಗಿ ದಾರಿಯ ಕಡೆಗೆ ಕುದುರೆಯನ್ನು ಕರೆದುಕೊಂಡು ಹೋದನು. ಅಲ್ಲಿ ಹುಲ್ಲು ಬೆಳೆದಿದ್ದುದರಿಂದ ಸಪ್ಪಳವಾಗಲಿಲ್ಲ. ಮತ್ತೊಮ್ಮೆ ಹಿಂದಿರುಗಿ ಕುಟೀರದ ಕಡೆಗೆ ನೋಡಿ, ಒಂದೇ ನೆಗೆತಕ್ಕೆ ಕುಪ್ಪಳಿಸಿ, ಕುದುರೆಯ ಬೆನ್ನ ಮೇಲೇರಿ ಕುಳಿತನು. ಜೀನಿನ ಮೇಲೆ ಬಾಗಿ ಕುಳಿತು ಕುದುರೆಯ ಹೊಟ್ಟೆಯನ್ನು ತನ್ನ ಕಾಲ ಮೊಳೆಯಿಂದ ತಿವಿದುದೇ ತಡ ವಿದ್ಯುತ್ ಸ್ಪರ್ಶವಾದಂತಾಗಿ ಕುದುರೆ ಕಣ್ಣಿಗೆ ಕಾಣದಷ್ಟು ವೇಗವಾಗಿ ಓಡಿತು. ಮೊದಮೊದಲು ಗೊರಸಿನ ಸಪ್ಪಳ ಕೇಳಿ ಬರುತ್ತಿದ್ದು, ಕ್ರಮೇಣ ಕ್ಷೀಣವಾಯಿತು.
ಕ್ಷಣಾರ್ಧದಲ್ಲಿ ಕುದುರೆಯೂ ಅದರ ಸವಾರನೂ ತುಂಬಿದ ಕಾಡಿನ ಬಸುರಿನಲ್ಲಿ ಕಣ್ಮರೆಯಾಗಿ ಹೋದರು.
ಮುಂದುವರೆಯುವುದು…
ಎನ್. ಶಿವರಾಮಯ್ಯ (ನೇನಂಶಿ)
ತುಮಕೂರು
ಚಿತ್ರಗಳು : ಮಂಜುಳಾ