ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 37

ಪಾಂಥಶಾಲೆ – ಪ್ರಯಾಣಿಕರ ತಂಗುದಾಣ

ಚಿತ್ರಕ ಹಾಗೂ ರಾಜಕುಮಾರಿ ರಟ್ಟಾ ಪಾಂಥಶಾಲೆಯನ್ನು ತಲುಪಿದಾಗ ಸೂರ್ಯಸ್ತವಾಗಲು ಇನ್ನೂ ಎರಡು ಗಂಟೆ ಬಾಕಿ ಇತ್ತು.

ಎರಡು ರಸ್ತೆಗಳು ಸೇರುವ ಜಾಗದಲ್ಲಿ ಈ ಪಾಂಥಶಾಲೆ ಇತ್ತು. ಕಪೋತ ಕೂಟದಿಂದ ಹೊರಟು ಚಷ್ಟನ ದುರ್ಗ ಸೇರುವ ರಸ್ತೆಯು ಈ ಜಾಗದಲ್ಲಿ ರಸ್ತೆಯಿಂದ ಕವಲೊಡೆದು ಅಗ್ನಿಮೂಲೆಯ ಕಡೆಗೆ ತಿರುಗಿ ಆರ್ಯಾವರ್ತದ ದಿಕ್ಕಿಗೆ ಹೋಗುತ್ತದೆ. ಆ ಕವಲು ದಾರಿಯ ನಡುವೆ ಈ ಪಾಂಥಶಾಲೆ ಇದೆ. ಇದರ ಸುತ್ತಲೂ ಕಲ್ಲಿನಿಂದ ನಿರ್ಮಿಸಿದ ಪ್ರಾಕಾರದ ಗೋಡೆ.

ಮನೋಹರವಾದ ಜಾಗ. ಉತ್ತರ ಮತ್ತು ಪೂರ್ವದಲ್ಲಿ ಎತ್ತರವಾದ ಪರ್ವತ ಶ್ರೇಣಿ. ಪಶ್ಚಿಮದ ಕಡೆ ಬಹಳ ದೂರದವರೆಗೂ ಹಬ್ಬಿರುವ ತಪ್ಪಲು ಪ್ರದೇಶ. ಈ ಬೆಟ್ಟದ ತಪ್ಪಲಿನಲ್ಲಿ ಕಲ್ಲು ಬಂಡೆಗಳ ನಡುವೆ ಒಂದು ಸಣ್ಣ ನದಿ ಹರಿಯುತ್ತಿದೆ. ಅದನ್ನು ನೋಡಿದರೆ ಪೂರ್ವದಿಕ್ಕಿಗೆ ಪರ್ವತದ ಕೊರಕಲಿನಿಂದ ಹೊರಟ ಒಂದು ಬಿಳಿಯ ಬಣ್ಣದ ಸರ್ಪವು ವಕ್ರಗತಿಯಲ್ಲಿ ನಿಧಾನವಾಗಿ ಚಲಿಸುತ್ತ ಪಶ್ಚಿಮದ ಕಡೆಯಲ್ಲಿ ಯಾವುದಾದರೂ ಹೊಸ ಬಿಲವೊಂದನ್ನು ಹುಡುಕುತ್ತ ಹೊರಟಿದೆಯೋ ಎಂಬಂತೆ ಕಾಣುತ್ತಿದೆ.

ಬೇರೆ ಕಟ್ಟಡಗಳಿಗೆ ಹೋಲಿಸಿ ನೋಡಿದಾಗ ಈ ಪಾಂಥಶಾಲೆಯು ವಿಸ್ತಾರದಲ್ಲಿ ಚಿಕ್ಕದಾಗಿ ಕಂಡರೂ ಕೋಟೆಯ ಆಕಾರದಲ್ಲಿ ಇದನ್ನು ನಿರ್ಮಿಸಲಾಗಿದೆ. ಇದರ ಸುತ್ತಲೂ ಎತ್ತರವಾದ ಕಲ್ಲಿನ ಗೋಡೆ ಪ್ರಾಕಾರದ ರೂಪದಲ್ಲಿದೆ. ಜನವಸತಿಯಿಂದ ದೂರವಿದ್ದು ರಕ್ಷಣೆ ಇಲ್ಲದ ರಸ್ತೆಯ ಪಕ್ಕದಲ್ಲಿ ಪಾಂಥಶಾಲೆ ನಿರ್ಮಿಸಿದ್ದಾರೆಂದರೆ ಮಜಬೂತಾಗಿರಲೇಬೇಕಲ್ಲವೆ! ಮೊದಲನೆಯ ದಾಗಿ ಈ ಪ್ರಾಂತದಲ್ಲಿ ಸಣ್ಣ ಪುಟ್ಟ ಯುದ್ಧಗಳು ನಡೆಯುತ್ತಿರುತ್ತವೆ. ಇದರ ಮೇಲೆ ವಾಯವ್ಯ ಕಣಿವೆಯಲ್ಲಿ ವಾಸಿಸುವ ಜನ ಬಹಳ ಕ್ರೂರಿಗಳು ಬೇರೆ. ಅವರು ಕುರಿಕಾಯುತ್ತ ಬಿಡುವಿನ ವೇಳೆಯಲ್ಲಿ ಗುಂಪು ಕಟ್ಟಿಕೊಂಡು ಬಂದು ದರೋಡೆ ಮಾಡುತ್ತಾರೆ. ದಾರಿಯಲ್ಲಿ ರಕ್ಷಣೆ ಇಲ್ಲದ ಯಾತ್ರಿಕರು ಸಿಕ್ಕಿದರೆ ಊಟಿ- ಸುಲಿಗೆ ಮಾಡುತ್ತಾರೆ. ಒಳ್ಳೆಯ ಅವಕಾಶ ದೊರೆತರೆ ಪಾಂಥಶಾಲೆಯನ್ನು ಬಿಡುವುದಿಲ್ಲ. ಆದ್ದರಿಂದಲೇ ಹಗಲು ಹೊತ್ತಿನಲ್ಲಿ ಕಬ್ಬಿಣದ ಮೊಳೆಗಳಿರುವ ಬಾಗಿಲು ತೆರೆದಿದ್ದರೂ, ಸೂರ್ಯಸ್ತವಾಗುತ್ತಲೇ ಅದು ಬಂದಾಗುತ್ತಿತ್ತು. ಆಗ ಯಾರೂ ಒಳಗೆ ಬರುವ ಹಾಗಿಲ್ಲ. ಹೊತ್ತು ಮೀರಿ ಬರುವವರು ಬಾಗಿಲಿನ ಹೊರಗೇ ರಾತ್ರಿ ಕಳೆಯಬೇಕಾಗಿತ್ತು.

ಚಿತ್ರಕ ಮತ್ತು ರಟ್ಟಾ ಪಾಂಥಶಾಲೆಯ ಪ್ರಾಕಾರದ ತೋರಣ ದ್ವಾರದ ಬಳಿಗೆ ಬರುತ್ತಲೇ ಪಾಂಥ ಪಾಲನು ಓಡೋಡಿ ಒಂದು ಕೈಮುಗಿದು ‘ಬರಬೇಕು ಕುಮಾರ ಭಟ್ಟಾರಿಕಾ, ತಾವು ಪಾದ ಬೆಳೆಸಿದ್ದರಿಂದ ಈ ಜಾಗ ಪಾವನವಾಯಿತು. ದೂತ ಮಹಾಶಯರೆ, ತಮಗೂ ಸ್ವಾಗತ. ನಾನು ಭಾಗ್ಯವಂತ, ಆದ್ದರಿಂದಲೇ ಈದಿನ-’ ಎಂದು ವಿನಯದಿಂದ ಬರಮಾಡಿಕೊಂಡನು. ನಕುಲಾದಿಗಳು ಇವರು ಬರುತ್ತಾರೆಂದು ಸುದ್ದಿಯನ್ನು ಪಾಂಥಪಾಲನಿಗೆ ಈ ಮೊದಲೇ ತಿಳಿಸಿದ್ದರು. ಆದ್ದರಿಂದಲೇ ಅವನು ಇವರಿಗಾಗಿ ಕಾಯುತ್ತಿದ್ದನು.

ಚಿತ್ರಕ ಮತ್ತು ರಟ್ಟಾ ಕುದುರೆಗಳಿಂದ ಕೆಳಗಿಳಿದರು. ಪಾಂಥಪಾಲನು ಗಡಿಬಿಡಿಯಿಂದ ‘ಅರೇ ಅಲ್ಲಿ ಯಾರಿದ್ದೀರೋ- ಕಂಕ, ಡುಂಡುಭ- ಬನ್ನಿರೋ ಇಲ್ಲಿ, ಈ ಕಾಂಬೋಜದ ಕುದುರೆಗಳನ್ನು ಲಾಯಕ್ಕೆ ಕರೆದುಕೊಂಡು ಹೋಗಿರಿ. ಜೋಳದ ಹಿಟ್ಟಿನ ಉಂಡೆ, ಶಾಲಿ-ಪ್ರಿಯಂಗುಗಳನ್ನು ತಿನ್ನಲು ಕೊಟ್ಟು, ಉಪಚರಿಸಿರಿ?’ ಎಂದು ಹೇಳಿದನು. ಇಬ್ಬರು ಆಳುಗಳು ಬಂದು ಕುದುರೆಗಳ ಲಗಾಮು ಹಿಡಿದು ಒಳಕ್ಕೆ ಕರೆದುಕೊಂಡು ಹೋದರು.

ರಟ್ಟಾ- (ಪಾಂಥಪಾಲನನ್ನು ಕುರಿತು) ನಮ್ಮ ಅಂಗರಕ್ಷಕರು ಹೊರಟು ಹೋದರೇನು?

ಪಾಂಥಪಾಲ- ಹೌದು, ತಾಯಿ. ನಕುಲ ಮಹಾಶಯರಿಗೆ ಇಷ್ಟವಿರಲಿಲ್ಲ. ಆದರೆ ಕುಮಾರ ಭಟ್ಟಾರಿಕಾ ಅವರ ಆಜ್ಞೆ ಮೀರಬಾರದಲ್ಲ! ಅವರು ಮಧ್ಯಾಹ್ನವೇ ಹೊರಟು ಹೋದರು.

ಪಾಂಥಪಾಲನು ನಡುಹರಯದವನು. ಸ್ಥೂಲಕಾಯ. ಆದರೆ ಬೋಳೆ ಸ್ವಭಾವದವನು. ಒಳ್ಳೆಯ ಮಾತುಗಾರ. ಚಿತ್ರಕ ಅವನನ್ನು ಚೆನ್ನಾಗಿ ನೋಡಿ ‘ಇಲ್ಲಿ ರಾಜಕುಮಾರಿಯವರು ರಾತ್ರಿ ಕಳೆಯಬೇಕಾಗಿದೆ. ಏನೂ ಭಯವಿಲ್ಲವೆ?’ ಎಂದು ಪ್ರಶ್ನಿಸಿದನು.

‘ಭಯ! ನಮ್ಮ ಈ ಪಾಂಥಶಾಲೆಯ ಬಾಗಿಲು ಮುಚ್ಚಿತೆಂದರೆ ಒಂದು ಇಲಿಯೂ ಕೂಡ ಒಳಗೆ ಬರುವಂತಿಲ್ಲ’ ಸ್ವಲ್ಪ ತಗ್ಗಿದ ಧ್ವನಿಯಲ್ಲಿ ‘ಆದರೆ ಒಳಗೆ ಕೆಲವರು ಪ್ರಯಾಣಿಕರಿದ್ದಾರೆ. ಅವರು ಬೇರೆ ದೇಶದ ವ್ಯಾಪಾರಿಗಳು. ಪರ್ಶಿಯಾ ದೇಶದಿಂದ ಬಂದಿದ್ದಾರೆ. ಮಗಧಕ್ಕೆ ಹೋಗುವವರಿದ್ದಾರೆ ಎಂದು ಪಾಂಥಪಾಲನು ಉತ್ತರಿಸಿದನು.

‘ಅವರು ನಂಬಿಕಸ್ಥರವಲ್ಲವೆ?’

‘ನಂಬಲಿಕ್ಕೆ ಅನರ್ಹರೆಂದು ಹೇಳಲಾಗುವುದಿಲ್ಲ. ಇವರು ಬಹಳ ವರ್ಷ ಗಳಿಂದ ಇಲ್ಲಿಗೆ ಒಂದು- ಹೋಗಿ ಮಾಡುತ್ತಾರೆ. ಉಣ್ಣೆಯ ಜಮಖಾನೆ, ಕಂಬಳಿ ಮುಂತಾದವುಗಳನ್ನು ಆರ್ಯಾವರ್ತದ ವಿಭಿನ್ನ ಪ್ರಾಂತಗಳಲ್ಲಿ ಮಾರಾಟ ಮಾಡುತ್ತಾರೆ. ಇವರು ಅಗ್ನಿಉಪಾಸಕರು; ಮ್ಲೇಚ್ಛರು ಸ್ವಲ್ಪ ಎಚ್ಚರಿಕೆಯಿಂದ ಇದ್ದರೆ ಅಪಾಯವಿಲ್ಲ’.
‘ಯಾವ ರೀತಿ ಎಚ್ಚರಿಕೆ ವಹಿಸಬೇಕು?’

‘ಇವರು ರಾಜಕುಮಾರಿ ಎಂಬ ವಿಷಯ ಯಾರಿಗೂ ಗೊತ್ತಾಗಬಾರದು; ಇಂಥವರು ಬಂದಿದ್ದಾರೆಂಬುದು ನನಗಲ್ಲದೆ ಮತ್ತಾರಿಗೂ ತಿಳಿದಿಲ್ಲ.’

ಪಾಂಥಪಾಲನು ಒಳ್ಳೆಯ ಚತುರ ಹಾಗೂ ಪ್ರತ್ಯುತ್ಪನ್ನಮತಿ ಎಂಬ ವಿಷಯ ಚಿತ್ರಕನ ಗಮನಕ್ಕೆ ಬಂತು.
ಚಿತ್ರಕ- ಒಳ್ಳೆಯದು ಪಾಂಥಪಾಲ, ನಿನ್ನ ಹೆಸರೇನು?

ಪಾಂಥಪಾಲ- (ವಿನಮ್ರನಾಗಿ) ದೇವ ದ್ವಿಜರ ದಯೆಯಿಂದ ಈ ದಾಸನ ಹೆಸರು ಜಯಕಂಬು. ಆದರೆ ಆರ್ಯಭಾಷೆ(ಸಂಸ್ಕೃತ)ಯ ಉಚ್ಚಾರಣೆ ಎಲ್ಲರಿಗೂ ಸಾಧ್ಯವಿಲ್ಲ. ಅವರಿವರು ‘ಜಂಬುಕ’ ಎಂಬುದಾಗಿ ಕರೆಯುತ್ತಾರೆ.

ಚಿತ್ರಕ- (ನಗುತ್ತ) ಒಳ್ಳೆಯದು, ಜಂಬುಕ! ನಮ್ಮನ್ನು ಒಳಕ್ಕೆ ಕರೆದುಕೊಂಡು ಹೋಗು. ನಮಗೆ ಆಯಾಸವಾಗಿದೆ. ಜಂಬುಕ- ಪೂಜ್ಯರೆ ಬರೋಣವಾಗಲಿ. ದೇವಿ ಬರೋಣವಾಗಲಿ. ತಮಗಾಗಿ ಶ್ರೇಷ್ಠವಾದ ಎರಡು ಸುಸಜ್ಜಿತ ಕೋಣೆಗಳನ್ನು ಕಾದಿರಿಸಿದ್ದೇನೆ. ಆಯಾಸ ಪರಿಹಾರಕ್ಕಾಗಿ ಪಾನಕ ಸಿದ್ಧವಾಗಿದೆ. ಅಪ್ಪಣೆಯಾದರೆ…

ಚಿತ್ರಕ ಮತ್ತು ರಟ್ಟಾ ಪ್ರಾಕಾರದ ಒಳಕ್ಕೆ ಹೋದರು. ಇನ್ನೂ ಸೂರ್ಯಾಸ್ತವಾಗಿರಲಿಲ್ಲ. ಆದರೂ ಜಂಬುಕನ ಆದೇಶದಂತೆ ಇಬ್ಬರು ಬಾಗಿಲು ಕಾಯುವವರು ಬಾಗಿಲನ್ನು ಮುಚ್ಚಿ, ಇತರರಾರೂ ತೆಗೆಯಲಾರದಂಥ ಒಂದು ವಿಚಿತ್ರ ಬೀಗ (ಇಂದ್ರ ಕೀಲಕ)ವನ್ನು ಹಾಕಿ ಭದ್ರಪಡಿಸಿದರು. ಇನ್ನು ಮರುದಿನ ಬೆಳಗಿನವರೆಗೂ ಯಾರೂ ಪ್ರವೇಶ ಮಾಡುವ ಹಾಗಿಲ್ಲ.

ರಟ್ಟಾ ಈ ಮೊದಲು ಪಾಂಥಶಾಲೆಯನ್ನು ನೋಡಿರಲಿಲ್ಲ. ಆಕೆ ಕುತೂಹಲದಿಂದ ಸುತ್ತಲೂ ದೃಷ್ಟಿ ಹರಿಸುತ್ತ ಹೋಗುತ್ತಿದ್ದಳು. ಗೋಡೆಗಳಿಂದ ಸುತ್ತುವರಿದ ಆ ಜಾಗ ಚೌಕಾಕಾರವಾಗಿತ್ತು. ಮೂರು ಕಡೆ ಗೋಡೆಗೆ ಸೇರಿಕೊಂಡಂತೆ ಸಾಲು ಸಾಲು ಕೊಠಡಿಗಳು. ಕೊಠಡಿಗಳ ಮುಂಭಾಗದಲ್ಲಿ ಒರಟು ನೆಲದ ಹಜಾರ. ಮಧ್ಯ ಭಾಗದಲ್ಲಿ ಕಲ್ಲುಚಪ್ಪಡಿ ಹಾಸಿರುವ ಅಂಗಳ. ಅಂಗಳದ ಕೇಂದ್ರ ಭಾಗದಲ್ಲಿ ಚಕ್ರಾಕಾರದ ಒಂದು ದೊಡ್ಡ ನೀರಿನ ತೊಟ್ಟಿ.

ಅಂಗಳದ ಒಂದು ಮೂಲೆಯಲ್ಲಿ ಕೆಲವು ಒಂಟೆ ಹಾಗೂ ಕತ್ತೆಗಳಿದ್ದವು. ಅವು ಪಾರಸಿಕ ವ್ಯಾಪಾರಿಗಳ ಮಾರಾಟ ವಸ್ತುಗಳನ್ನು ಹೊರುವ ಪ್ರಾಣಿಗಳು ಪಾರಸಿಕರು ಪಕ್ಕದಲ್ಲಿಯೇ ಕಂಬಳಿ ಹಾಸಿಕೊಂಡು ಕುಳಿತು ತಮ್ಮ ತಮ್ಮಲ್ಲಿ ಏನೋ ಗುಟ್ಟಾಗಿ ಮಾತನಾಡಿಕೊಳ್ಳುತ್ತಿದ್ದರು. ಮೀಸೆಗಳಿಂದ ಕಂಗೊಳಿಸುತ್ತಿರುವ ಮುಖ, ಹಣ್ಣಾದ ದಾಳಿಂಬೆಯAಥ ಬಣ್ಣ. ಕಣ್ಣು ಮತ್ತು ತಲೆಗೂದಲು ಕಪ್ಪು.

ರಟ್ಟಾ ಮತ್ತು ಚಿತ್ರಕ ಜಂಜುಕನ ಜೊತೆಯಲ್ಲಿ ಅವರ ಪಕ್ಕದಲ್ಲಿ ಹೋಗು ವಾಗ, ಅವರು ಒಂದು ಸಲ ತಲೆಎತ್ತಿ ನೋಡಿ, ಮತ್ತೆ ತಮ್ಮ ಪಾಡಿಗೆ ತಾವು ಮೊದಲಿನಂತೆ ಮಾತಿನಲ್ಲಿ ಮುಳುಗಿದರು. ಇವರು ಏನೂ ಅರಿಯದ ಮುಗ್ಧ ವ್ಯಾಪಾರಿಗಳು. ವೇಷ ಮರೆಸಿಕೊಂಡಿರುವ ದರೋಡೆಕೋರರಾಗಲೀ ಕಳ್ಳರಾಗಲೀ ಅಲ್ಲ. ಆದರೆ ಚಿತ್ರಕನಿಗೆ ಸಂದೇಹ. ಹೆಂಗಸರನ್ನು ಕರೆದುಕೊಂಡು ದಾರಿ ನಡೆಯುವುದು ಎಷ್ಟು ಅಪಾಯಕಾರಿ ಎಂದು ಅವನಿಗೆ ಈ ಮೊದಲು ಗೊತ್ತಿರಲಿಲ್ಲ.

ಚಿತ್ರಕ- (ತಗ್ಗಿದ ದನಿಯಲ್ಲಿ) ಜಂಬುಕ, ಇವರು ಎಷ್ಟು ಜನರಿದ್ದಾರೆ?

ಜಂಬುಕ- ಐದು ಜನ.

‘ಜೊತೆಯಲ್ಲಿ ಆಯುಧಗಳೇನಾದರೂ ಇವೆಯೆ?’

‘ಇವೆ. ಆಯುಧಗಳಿಲ್ಲದೆ ಈ ಪ್ರದೇಶದಲ್ಲಿ ಯಾರೂ ದಾರಿ ನಡೆಯುವುದಿಲ್ಲ’.

‘ನಿಮ್ಮ ಜೊತೆಯಲ್ಲಿ ಸಿಬ್ಬಂದಿ, ಆಳುಕಾಳು ಎಷ್ಟು ಜನರಿದ್ದಾರೆ?’

‘ನಮ್ಮಲ್ಲಿ ಎಂಟು ಜನ ಗಂಡಸರಿದ್ದಾರೆ.’

‘ಹೆಂಗಸರು ಯಾರಾದರೂ ಇದ್ದಾರೆಯೋ ಇಲ್ಲವೋ?’

ಜಂಬುಕ ಅಂಗಳದ ಎದುರುಗಡೆಗೆ ದೃಷ್ಟಿಹಾಯಿಸಿ ‘ನಮ್ಮಲ್ಲಿ ನಾಲ್ವರು ಹೆಂಗಸರಿದ್ದಾರೆ’ ಎಂದನು.

ಚಿತ್ರಕನಿಗೆ ಸ್ವಲ್ಪ ಸಮಾಧಾನವಾಯಿತು.

ಅಂಗಳದ ಬೇರೆ ಕಡೆ ನಾಲ್ಕು ಜನ ಹೆಂಗಸರು ಕುಳಿತು ಮನೆಗೆಲಸ ಮಾಡುತ್ತಿದ್ದರು. ರಟ್ಟಾ ಅಲ್ಲಿಗೆ ಹೋಗಿ ಸ್ವಲ್ಪ ಹೊತ್ತು ನಿಂತು ನೋಡಿದಳು. ಜಗಲಿಯನ್ನು ಶುಚಿ ಮಾಡಿ ಆ ಹೆಂಗಸರು ರಾತ್ರಿ ಭೋಜನಕ್ಕೆ ಸಿದ್ಧತೆ ನಡೆಸಿದ್ದರು. ಒಬ್ಬಾಕೆ ಬೀಸುವ ಕಲ್ಲಿನ ಮುಂದೆ ಕುಳಿತು ಗೋಧಿ ಬೀಸುತ್ತಿದ್ದಳು. ಆಗ ತಾನೇ ಬೀಸಿ ಗೋಧಿ ಹಿಟ್ಟಿನಿಂದ ರೊಟ್ಟಿ ತಯಾರಿಸುತ್ತಿದ್ದರು. ಎರಡನೆಯವಳು ತರಕಾರಿ ಹಚ್ಚುತ್ತಿದ್ದಳು. ಮೂರನೆಯವಳು ಕಲ್ಲಿನ ಒರಳಿನಲ್ಲಿ ಸುವಾಸನೆಯಿಂದ ಕೂಡಿದ ಮಸಾಲೆ ಪದಾರ್ಥಗಳನ್ನು ಕುಟ್ಟುತ್ತಿದ್ದಳು. ನಾಲ್ಕನೆಯವಳು ಚಾಕುವಿನಿಂದ ಕುರಿ ಮಾಂಸವನ್ನು ಕತ್ತರಿಸಿ ಕತ್ತರಿಸಿ ಬೇರೆ ಇಡುತ್ತಿದ್ದಳು. ಅವರು ನಡುನಡುವೆ ಕುತೂಹಲದಿಂದ ತಲೆ ಎತ್ತಿ ಪುರುಷ ವೇಷಧಾರಿಯಾದ ಚಲುವೆಯನ್ನು ನೋಡುತ್ತಿದ್ದರು. ಆದರೂ ಅವರ ಕೆಲಸ ಶೀಘ್ರಗತಿಯಲ್ಲಿ ಸಾಗುತ್ತಲೇ ಇತ್ತು.

ರಟ್ಟಾ ಸ್ವಲ್ಪ ಹೊತ್ತು ಅವರ ನಯ- ನಾಜೂಕು- ಕಾರ್ಯದಕ್ಷತೆಗಳನ್ನು ನಿರೀಕ್ಷಿಸಿದಳು. ಸ್ವಲ್ಪ ಹೊತ್ತಿನ ನಂತರ ಆಕೆ ಏನೋ ಜ್ಞಾಪಿಸಿಕೊಂಡವಳಂತೆ ನಟಿಸಿ ‘ಜಂಬುಕ, ನೀನು ಒಂದು ಕೆಲಸ ಮಾಡಬೇಕಲ್ಲ’ ಎಂದು ಜಂಬುಕನ ಕಡೆಗೆ ತಿರುಗಿ’ ಹೇಳಿದಳು.

ಜಂಬುಕ- (ಕೈಮುಗಿದುಕೊಂಡು) ಅಪ್ಪಣೆ ಮಾಡೋಣವಾಗಲಿ.

‘ಕಪೋತ ಕೂಟದ ದಾರಿಯಲ್ಲಿ ಬೆಟ್ಟದ ಮೇಲೆ ಒಂದು ಬೌದ್ಧವಿಹಾರವಿದೆ. ನಿನಗೆ ಗೊತ್ತಿದೆಯೇ?’

‘ಹೌದು ತಾಯಿ, ಗೊತ್ತಿದೆ. ಚಿಲ್ಲಕೂಟ ವಿಹಾರ.’

‘ಅಲ್ಲಿಗೆ ಭಿಕ್ಷುಗಳಿಗಾಗಿ ಎರಡು ‘ಆಢಕ’ದಷ್ಟು ಒಳ್ಳೆಯ ಗೋಧಿಯನ್ನು ಕಳುಹಿಸಿಕೊಡಬೇಕು.’

‘ಅಪ್ಪಣೆ. ಕಳುಹಿಸಿಕೊಡುತ್ತೇನೆ. ನಾಳೆ ಬೆಳಗ್ಗೆ ಕತ್ತೆಗಳ ಬೆನ್ನ ಮೇಲೆ ಹೇರಿಸಿ ಗೋಧಿ ಕಳುಹಿಸಿಕೊಡುತ್ತೇನೆ. ಸೂರ್ಯಾಸ್ತದ ಒಳಗಾಗಿ ಭಿಕ್ಷುಗಳಿಗೆ ಅದು ತಲುಪುತ್ತದೆ.

‘ಒಳ್ಳೆಯದು. ಅದರ ಬೆಲೆಯನ್ನು ನಾನು ಕೊಡುತ್ತೇನೆ.’

ಮುಂದುವರೆಯುವುದು….

ಎನ್. ಶಿವರಾಮಯ್ಯ (ನೇನಂಶಿ)

Related post

Leave a Reply

Your email address will not be published. Required fields are marked *