ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 38
ಪರಿಚ್ಛೇದ – 13
ಚೀನೀ ಪರಿವ್ರಾಜಕ (ಚೀನೀ ಯಾತ್ರಿಕ)
ಸೂರ್ಯೋದಯವಾಗುತ್ತಲೇ ಪಾಂಥಶಾಲೆಯ ಬಾಗಿಲು ತೆರೆಯಿತು.
ಪಾರಸಿಕ ವ್ಯಾಪಾರಿಗಳು ಅಷ್ಟು ಹೊತ್ತಿಗಾಗಲೇ ಒಂಟೆ ಮತ್ತು ಕತ್ತೆಗಳ ಮೇಲೆ ಚೀಲಗಳನ್ನು ಹೇರಿ ಸಿದ್ಧತೆ ಮಾಡಿಕೊಂಡಿದ್ದರು. ಪಾಂಥಶಾಲೆಯ ಶುಲ್ಕವನ್ನು ಪಾವತಿ ಮಾಡಿ ಹೊರಗೆ ಹೊರಟರು. ಅವರು ಇಡೀ ಆರ್ಯಾವರ್ತವನ್ನೆಲ್ಲ ಸುತ್ತಾಡುವರು. ಅಲ್ಲಲ್ಲಿ ದಾರಿ ಪಕ್ಕದಲ್ಲಿ ವಿಶ್ರಮಿಸಿಕೊಂಡು ಪ್ರಯಾಣ ಮಾಡುವರು.
ಚಿತ್ರಕ ರಾತ್ರಿಯೆಲ್ಲ ನಿದ್ದೆ ಮಾಡಿರಲಿಲ್ಲ. ಇಷ್ಟಾದರೂ ಅವನಲ್ಲಿ ಎಳ್ಳಷ್ಟೂ ಆಯಾಸ ಕಾಣುತ್ತಿರಲಿಲ್ಲ. ಅವನು ಅತ್ತಿತ್ತ ನೋಡಿದನು. ಪಾಂಥ ಶಾಲೆಯೆಲ್ಲ ಬಿಕೋ ಎನ್ನುತ್ತಿದೆ. ಆದರೆ ರಟ್ಟಾಳ ಕೊಠಡಿಯ ಬಾಗಿಲು ಮಾತ್ರ ಇನ್ನೂ ತೆರೆಯಲಿಲ್ಲ. ಅವಳಿಗೆ ಇನ್ನೂ ನಿದ್ರೆ ಹರಿದಿರಲಿಲ್ಲ. ಚಿತ್ರಕನು ಕಳೆದ ರಾತ್ರಿಯ ಕಾಲ್ಪನಿಕ ಭಯದ ಭಾವನೆಯನ್ನು ಮನಸ್ಸಿನ ತುಂಬ ತುಂಬಿಕೊಂಡು ಪ್ರಾಕಾರದ ಹೊರಗೆ ಬಂದು ನಿಂತಿದ್ದರು.
ತಪ್ಪಲಿನ ಪ್ರದೇಶವೆಲ್ಲ ಬೆಳಗಿನ ಬಿಸಿಲಿಗೆ ಹೊಳೆಯುತ್ತಿತ್ತು. ರಾತ್ರಿ ಬೆಳಕಿನ ಪ್ರಭೆ ಕಂಡ ದಿಕ್ತಟದಲ್ಲಿ ನೂರಾರು ಹಕ್ಕಿಗಳು ಹಾರಾಡುತ್ತಿದ್ದವು. ಬೇರೆ ಯಾವ ದಿಕ್ಕಿನಲ್ಲಿಯೂ ಹೀಗೆ ಗುಂಪು ಗುಂಪಾಗಿ ಹಕ್ಕಿಗಳು ಹಾರಾಡುತ್ತಿರಲಿಲ್ಲ. ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಕಪ್ಪು ಚುಕ್ಕೆಗಳ ಹಾಗೆ ಕಾಣಿಸುತ್ತಿದ್ದವು.
ಚಿತ್ರಕ ಬಹಳ ಹೊತ್ತು ಅದೇ ದಿಕ್ಕನ್ನು ದಿಟ್ಟಿಸಿ ನೋಡುತ್ತಿದ್ದನು. ಅದೇ ಸಮಯಕ್ಕೆ ರಟ್ಟಾ ಹೊರಗಡೆ ಒಂದು ಅವನ ಪಕ್ಕದಲ್ಲಿ ನಿಂತಳು. ಚಿತ್ರಕ ನಗುನಗುತ್ತ ಆಕೆಯನ್ನು ಹಾರ್ದಿಕವಾಗಿ ಮಾತನಾಡಿಸಿದನು. ‘ರಾತ್ರಿ’ ಚೆನ್ನಾಗಿ ನಿದ್ದೆ ಬಂದಿತೆ?’
ಚಿತ್ರಕನನ್ನೇ ನೋಡುತ್ತಿದ್ದ ರಟ್ಟಾ, ದೃಷ್ಟಿಯನ್ನು ಬೇರೆಡೆಗೆ ತಿರುಗಿಸಿ, ಕೆಳಗೆ ಹರಿಯುತ್ತಿದ್ದ ನದಿಯ ಕಡೆ ನೋಡುತ್ತ ‘ಹೌದು. ತಮಗೆ?’ ಎಂದು ಕೇಳಿದಳು.
ಚಿತ್ರಕ- (ಗೆಲು ಮೊಗದಿಂದ) ನನಗೂ ಹಾಗೆಯೇ. ಚೆನ್ನಾಗಿ ನಿದ್ರಿಸಿದೆ.
ರಟ್ಟಾ ನದಿಯ ಕಡೆಗೇ ನೋಡುತ್ತಿದ್ದಳು.
ಆಕೆಯ ಮನಸ್ಸಿನ ಭಾವನೆ ಈ ದಿನ ಬೇರೆಯದೇ ಆಗಿತ್ತು. ಏನೋ ಗುಟ್ಟು..! ಏನೋ ಲೆಕ್ಕಾಚಾರ! ಒಟ್ಟಿನಲ್ಲಿ ಆಕೆ ಒಂದು ರೀತಿಯಲ್ಲಿ ಅಂತರ್ಮುಖಿಯಾಗಿದ್ದಳು. ಆದರೆ ಚಿತ್ರಕನದು ಇದಕ್ಕೆ ವಿರುದ್ಧವಾಗಿತ್ತು. ಅವನ ಆಂತರ್ಯದಲ್ಲಿ ಪ್ರೀತಿ ವಿಶ್ವಾಸಗಳು ಪುಟಿಯುತ್ತಿದ್ದವು. ರಾಜಕುಮಾರಿಯು ತನ್ನವಳು ಎಂದು ಪ್ರಭುತ್ವ ಸ್ಥಾಪಿಸಲು ಹೊರಟಿತ್ತು ಅವನ ಮನಸ್ಸು. ಬಹುಶಃ ಅದಕ್ಕೆ ಇರಬೇಕು ರಾತ್ರಿಯೆಲ್ಲ ಎಚ್ಚರವಾಗಿದ್ದು ಆಕೆಯ ರಕ್ಷಣೆ ಮಾಡಿದ್ದು!
ಚಿತ್ರಕ- ತಾವು ಪ್ರಯಾಣಕ್ಕೆ ಸಿದ್ಧರಿದ್ದೀರೇನು?
ರಟ್ಟಾ- ‘ನಾನು ಸಿದ್ಧಳಾಗಿದ್ದೇನೆ. ಒಂದು ಎರಡು ಗಂಟೆಗಳ ನಂತರವಾದರೆ
ಅಡ್ಡಿ ಇಲ್ಲ’ ಎಂದು ಹೇಳಿ ಗಿರಿಯ ಮಡಿಲೊಳಗಿರುವ ಪಾಂಥಶಾಲೆಯನ್ನು ಅಭಿಮಾನದಿಂದ ಒಮ್ಮೆ ನೋಡಿದಳು.
ಚಿತ್ರಕ- (ಮುಗುಳು, ನಗುತ್ತ) ನಿಜ ಹೇಳಿರಿ, ಈ ಪಾಂಥ ಶಾಲೆಯ ಬಗ್ಗೆ ನಿಮ್ಮ ಮನಸ್ಸಿನಲ್ಲಿ ‘ಮಮತೆ’ ಉಂಟಾಗಿರಬೇಕಲ್ಲವೆ?
ರಟ್ಟಾ- (ನಗುಮುಖದಿಂದ) ‘ಹೌದು, ಅದು ನಿಜ. ಹಿಂದಿರುಗುವಾಗ ಇಲ್ಲಿ ಮತ್ತೆ ಒಂದು ರಾತ್ರಿ ಕಳೆಯಬೇಕೆನಿಸಿದೆ ಎಂದು ಚಿತ್ರಕನಿಗೆ ಹೇಳಿದರೂ ವಾಪಸು ಬರಬೇಕಾದರೆ ಜೊತೆಯಲ್ಲಿ ಅನೇಕರಿರುತ್ತಾರೆ. ಇನ್ನೆಲ್ಲಿ ಇಂಥ ರಾತ್ರಿಯ ವಿಚಾರ?’ ಎಂದು ಮನಸ್ಸು ನುಡಿಯುತ್ತಿತ್ತು.
ಒಂದೆರಡು ಬೇರೆ ಮಾತುಗಳನ್ನಾಡಿದ ನಂತರ ಚಿತ್ರಕ, ಪಶ್ಚಿಮ ದಿಕ್ಕಿಗೆ ಕೈಮಾಡಿ ‘ಅಲ್ಲಿ ನೋಡಿ, ಏನಾದರೂ ಕಾಣುತ್ತಿದೆಯೇ?’ ಎಂದನು.
ರಟ್ಟಾ ಕಣ್ಣಿನ ಮೇಲೆ ಕೈಯನ್ನು ಮರೆ ಮಾಡಿ ಸ್ವಲ್ಪ ಹೊತ್ತು ನೋಡಿ ‘ಹಕ್ಕಿಗಳು ಹಾರಾಡುತ್ತಿವೆ. ಅವು ಯಾವ ಜಾತಿಯ ಪಕ್ಷಿಗಳು?’ ಎಂದಳು.
ಚಿತ್ರಕ- ರಣಹದ್ದುಗಳು
ರಟ್ಟಾ ಚಕಿತಳಾಗಿ ಚಿತ್ರಕನ ಕಡೆ ನೋಡಿದಳು. ಆದರೆ ಅವನ ಗಮನ ಬೇರೆಡೆಗೆ ಹೊರಳಿತು.
ಪಾಂಥಶಾಲೆಯ ಮುಂದೆ ಹಾದುಹೋಗಿದ್ದ ಹಾದಿಯ ಮೂರನೆಯ ಶಾಖೆಯು ಇದುವರೆಗೂ ಶೂನ್ಯವಾಗಿತ್ತು. ಪಾರಸಿಕ ವ್ಯಾಪಾರಿಗಳು ಬೆಟ್ಟದ ಹಾದಿಯಲ್ಲಿ ಹೊರಟವರು ಕಣ್ಮರೆಯಾಗಿ ಬಹಳ ಹೊತ್ತಾಗಿತ್ತು. ಈಗ ಉತ್ತರ ದಿಕ್ಕಿನಿಂದ ಯಾರೋ ಕೆಲವರು ಬರುತ್ತಿರುವ ಹಾಗೆ ಕಾಣಿಸಿತು. ಅವರ ಬಳಿ ಒಂಟೆಯಾಗಲಿ ಕತ್ತೆಗಳಾಗಲೀ ಇರಲಿಲ್ಲ. ವಿಚಿತ್ರ ವೇಷಭೂಷಣದ ಕೆಲವು ವ್ಯಕ್ತಿಗಳು ಬೆನ್ನಿನ ಮೇಲೆ ಚೀಲಗಳನ್ನು ಹೊತ್ತು ಕಾಲುನಡಗೆಯಲ್ಲಿಯೇ ಬರುತ್ತಿದ್ದಾರೆ.
ಚಿತ್ರಕನಿಗೆ ಆಶ್ಚರ್ಯವಾಯಿತು. ಸಾಮಾನ್ಯವಾಗಿ ಪಾಂಥಶಾಲೆಗೆ ಬೆಳಗಿನ ಹೊತ್ತು ಯಾವ ಪ್ರಯಾಣಿಕರೂ ಬರುತ್ತಿರಲಿಲ್ಲ. ಇವರು ಎಲ್ಲಿಂದ ಬರುತ್ತಿದ್ದಾರೆ? ಸಮೀಪದಲ್ಲಿ ಯಾವ ಊರೂ ಇಲ್ಲ. ಹಾಗಾದರೆ ಇವರು ಯಾರು?
ಆ ಪ್ರಯಾಣಿಕರು ಇನ್ನೂ ಹತ್ತಿರ ಬರುತ್ತಿದ್ದಂತೆ, ಇವರ ವೇಷಭೂಷವೇ ಅಲ್ಲ, ಇವರ ಆಕೃತಿಯೂ ವಿಚಿತ್ರವೆನಿಸಿತು. ಅಷ್ಟು ಎತ್ತರವಲ್ಲದ ಶರೀರ. ದುಂಡನೆಯ ಮುಖ ಉಬ್ಬಿದ ದವಡೆ ಕಿರಿದಾದ ಕಣ್ಣುಗಳು. ಚಿತ್ರಕನು ಅನೇಕ ದೇಶಗಳಲ್ಲಿ ಸುತ್ತಾಡಿದ್ದನು. ಆದರೆ ಈ ರೀತಿಯ ವ್ಯಕ್ತಿಗಳನ್ನು ಅವನು ಎಲ್ಲಿಯೂ ಎಂದೂ ನೋಡಿರಲಿಲ್ಲ.
ಆ ವ್ಯಕ್ತಿಗಳು ಪಾಂಥಶಾಲೆಯು ಮುಂದೆ ಬಂದು ನಿಂತರು. ನಾಲ್ವರು ಯಾತ್ರಿಕರು. ಅವರಲ್ಲಿ ಒಬ್ಬ ವಯಸ್ಸಾದವನು. ಆತನ ಮುಖದಲ್ಲಿ ಸ್ವಲ್ಪವೇ ಆದ ಮೀಸೆ. ಕೃಶ ಶರೀರ. ಆದರೆ ಕಷ್ಟ ಸಹಿಷ್ಣು ದೃಢತೆಯನ್ನು ಬಿಂಬಿಸುವ ಮುಖಭಾವ. ಆತನೇ ಆ ಗುಂಪಿನ ಯಜಮಾನ ಎಂಬುದರಲ್ಲಿ ಸಂದೇಹವಿಲ್ಲ. ಚಿತ್ರಕ ಮತ್ತು ರಟ್ಟಾ ಹೆಚ್ಚು ಕುತೂಹಲದಿಂದ ಅವನನ್ನು ನೋಡಿದರು. ಆ ಮುದುಕನೂ ಇವರನ್ನು ನೋಡಿ ಹತ್ತಿರ ಬಂದು ಇವರನ್ನು ಮಾತನಾಡಿಸಿದನು.
ರಟ್ಟಾ ಮತ್ತು ಚಿತ್ರಕ ಅವಾಕ್ಕಾಗಿ ನೋಡುತ್ತ ನಿಂತು ಬಿಟ್ಟರು. ಮುದುಕನ ಕಂಠಧ್ವನಿ ಮಧುರವೂ ಮಂದ್ರವಾಗಿಯೂ ಇತ್ತು. ಆದರೆ ಆತನ ಭಾಷೆ ಚಿತ್ರಕನಿಗೆ ಅರ್ಥವಾಗಲಿಲ್ಲ. ಪರಿಚಿತ ಭಾಷೆಯೇ ಆಗಿದ್ದರೂ ವಿಕೃತ ಉಚ್ಚಾರಣೆಯಿಂದ ಅರ್ಥಗ್ರಹಣ ಕಷ್ಟವಾಯಿತು.
ಚಿತ್ರಕ ತಗ್ಗಿದ ಧ್ವನಿಯಲ್ಲಿ ರಟ್ಟಾಳನ್ನು ಕುರಿತು ‘ನಿಮಗೇನಾದರೂ ಅರ್ಥವಾಯಿತೆ?’ ಎಂದು ಕೇಳಿದನು.
ರಟ್ಟಾ- ಇಲ್ಲ. ಬಹುಶಃ ಇವರು ಚೀನಾದವರಿರಬೇಕು.
ಚಿತ್ರಕ- (ಮುದುಕನನ್ನು ಕುರಿತು) ತಾವು ಯಾರು? ತಮಗೆ ಏನು ಬೇಕು?
ಮುದುಕನು ಉತ್ತರಿಸಿದರೂ ಚಿತ್ರಕನಿಗೆ ಈ ಬಾರಿಯೂ ಏನೂ ಅರ್ಥವಾಗಲಿಲ್ಲ. ಅವನು ತಲೆ ಕೆರೆದುಕೊಂಡು ಕೊನೆಗೆ ಜಂಬುಕನನ್ನು ಕರೆದು ‘ನಿಮ್ಮ ಪಾಂಥಶಾಲೆಗೆ ಹೊಸ ಅತಿಥಿಗಳು ಬಂದಿದ್ದಾರೆ. ಇವರು ಯಾರು?’ ಎಂದು ಕೇಳಿದನು.
ಜಂಬುಕನು ಹೊಸಬರನ್ನು ನೋಡಿದ ಕೂಡಲೆ ‘ಇವರು ಚೀನಾ ದೇಶದ ಯಾತ್ರಿಕರು. ಇಂಥವರು ಆಗಾಗ್ಗೆ ಈ ದಾರಿಯಲ್ಲಿ ಬರುತ್ತಿರುತ್ತಾರೆ’ ಎಂದು ಹೇಳಿದನು.
ಚಿತ್ರಕ- ಇವರ ಭಾಷೆ ನಿನಗೆ ಗೊತ್ತೇ?
ಜಂಬುಕ- ಗೊತ್ತು. ಇವರು ಪಾಳಿ ಭಾಷೆಯಲ್ಲಿ ಮಾತನಾಡುತ್ತಾರೆ. ಒಳ್ಳೆಯದು. ನಮ್ಮಿಂದ ಇವರಿಗೇನಾಗಬೇಕು ಎಂದು ಕೇಳು’
ಜಂಬುಕ ವೃದ್ಧವನ್ನು ಪ್ರಶ್ನಿಸಿ, ಉತ್ತರ ಪಡೆದು ‘ಇವರು ರಾಜಕುಮಾರಿ ರಟ್ಟಾ ಯಶೋಧರಾ ಅಲ್ಲವೇ ಎಂದು ಭಿಕ್ಷು ತಿಳಿಯ ಬಯಸಿದ್ದಾರೆ’ ಎಂದು ಹೇಳಿದನು.
ಚಿತ್ರಕ ಸಂದೇಹದ ದೃಷ್ಟಿಯಿಂದ ನೋಡಿ ‘ಈ ಪ್ರಶ್ನೆಗೆ ಉತ್ತರ ಆಮೇಲೆ ಮೊದಲು ನಮ್ಮ ಪ್ರಶ್ನೆಗೆ ಉತ್ತರ ಹೇಳಲಿ’ ಎಂದನು.
ನಂತರ ಜಂಬುಕನ ಮಧ್ಯಸ್ಥಿಕೆಯಲ್ಲಿ ಚಿತ್ರಕ ಹಾಗೂ ಭಿಕ್ಷುವಿನ ನಡುವೆ ಮಾತುಕತೆ ಈ ಕೆಳಕಂಡಂತೆ ನಡೆಯಿತು.
ಚಿತ್ರಕ- ತಾವು ಯಾರು? ಎಲ್ಲಿಂದ ಬರುತ್ತಿದ್ದೀರಿ?
ಭಿಕ್ಷು- ನನ್ನ ಹೆಸರು ಟೋ-ಇಂಗ್. ನಾವು ಚೀನಾ ದೇಶದಿಂದ ಬರುತ್ತಿದ್ದೇವೆ. ಇವರೆಲ್ಲ ನನ್ನ ಶಿಷ್ಯರು.
ಚಿತ್ರಕ- ಚೀನಾ ದೇಶ ಎಷ್ಟು ದೂರದಲ್ಲಿದೆ?
ಭಿಕ್ಷು- ಎರಡು ವರ್ಷಗಳ ದಾರಿ.
ಚಿತ್ರಕ- ಎಲ್ಲಿಗೆ ಹೋಗುತ್ತಿದ್ದೀರಿ?
ಭಿಕ್ಷು- ಕುಶೀನಗರಕ್ಕೆ ಹೋಗುತ್ತಿದ್ದೇವೆ. ಭಗವಾನ್ ಬುದ್ಧರು ಬಾಳಿ ಬದುಕಿದ ಪವಿತ್ರ ಸ್ಥಾನದಲ್ಲಿ ಬಾಳನ್ನು ಸವೆಸಬೇಕೆಂಬ ಆಸೆಯಿಂದ ಹೊರಟು ಬಂದಿದ್ದೇವೆ. ಇನ್ನು ಬುದ್ಧನ ಇಚ್ಛೆ.
ಚಿತ್ರಕ- ಇದಕ್ಕಾಗಿಯೇ ಅಷ್ಟು ದೂರದಿಂದ ನಡೆದು ಬಂದಿದ್ದೀರೇನು? ಬೇರೇನೂ ಉದ್ದೇಶವಿಲ್ಲವೆ?
ಭಿಕ್ಷು- ಇಲ್ಲ. ಬೇರೆ ಯಾವ ಉದ್ದೇಶವೂ ಇಲ್ಲ.
ಚಿತ್ರಕ- ಕ್ಷಮಿಸಿ. ತಾವುಗಳು ಬೆಳಗ್ಗೆ ಬೆಳಗ್ಗೆಯೇ ಇಲ್ಲಿಗೆ ಬಂದಿದ್ದೀರಲ್ಲ, ಅದು ಹೇಗೆ?
ಭಿಕ್ಷು- ನಾವು ಅಹಿಂಸಾ ಧರ್ಮದಲ್ಲಿ ನಂಬಿಕೆ ಇರುವ ಬೌದ್ಧರು. ಶಾಸ್ತ್ರಧಾರಣ ಮಾಡುವುದು. ನಮಗೆ ನಿಷೇಧ. ಆದರೆ ಈ ದಾರಿಯಲ್ಲಿ ಕಳ್ಳಕಾಕರು ಇರುತ್ತಾರೆ. ಆದ್ದರಿಂದ ನಾವು ರಾತ್ರಿ ವೇಳೆಯಲ್ಲಿ ಪ್ರಯಾಣ ಮಾಡಿ, ಹಗಲಿನಲ್ಲಿ ವಿಶ್ರಾಂತಿ ಪಡೆಯುತ್ತೇವೆ. ಕಳೆದ ರಾತ್ರಿ ಚಂದ್ರೋದಯವಾದ ಮೇಲೆ ಪ್ರಯಾಣ ಬೆಳೆಸಿದೆವು.
ಚಿತ್ರಕ- ಎಲ್ಲಿಂದ ಪ್ರಯಾಣ ಬೆಳೆಸಿದಿರಿ?
ಭಿಕ್ಷು- ಚಷ್ಟನ ದುರ್ಗದಿಂದ.
ರಟ್ಟಾ ಇದುವರೆಗೂ ಸದ್ದಿಲ್ಲದೆ ಕೇಳಿಸಿಕೊಳ್ಳುತ್ತಿದ್ದಳು. ಚಷ್ಟನ ದುರ್ಗದ ಹೆಸರು ಕೇಳಿದ ಕೂಡಲೆ ಹತ್ತಿರ ಬಂದು ಚಷ್ಟನ ದುರ್ಗ! ಹಾಗಾದರೆ ನಮ್ಮ ತಂದೆಯವರನ್ನು ತಾವು ಭೇಟಿ ಮಾಡಿದ್ದಿರಾ?’ ಎಂದು ಕೇಳಿದಳು.
ಭಿಕ್ಷುವಿಗೆ ನಗು ಬಂತು. ‘ತಾವೇ ರಾಜಕುಮಾರಿ ರಟ್ಟಾ ಯಶೋಧರಾ ಎಂದು ನನಗೆ ಅನುಮಾನ ಬಂದಿತ್ತು… ನಾನು ತಮ್ಮ ತಂದೆಯವರಿಂದ ಒಂದು ಸುದ್ದಿ ತಂದಿದ್ದೇನೆ. ನಾವು ಕಪೋತಕೂಟಕ್ಕೆ ಹೋಗಬೇಕಾಗಿತ್ತು. ದಾರಿಯ ನಡುವೆಯೇ ತಮ್ಮ ಭೇಟಿಯಾದುದು ಒಳ್ಳೆಯದೇ ಆಯಿತು. ಇಲ್ಲಿ ನಮ್ಮ ಕರ್ತವ್ಯ ಮುಗಿಸಿ, ಮುಂದಿನ ದಾರಿ ಹಿಡಿಯುತ್ತೇವೆ. ಎಂದು ಹೇಳಿದನು.
ರಟ್ಟಾ- ತಂದೆಯವರು ಏನು ಸುದ್ದಿ ಕಳುಹಿಸಿದ್ದಾರೆ?
ಭಿಕ್ಷು- ಧರ್ಮಾದಿತ್ಯರ ಸುದ್ದಿಯನ್ನು ಎಲ್ಲರ ಮುಂದೂ ಹೇಳಲಾಗುವುದಿಲ್ಲ.
ಆದರೆ ಇಲ್ಲಿ ದುಭಾಷಿಯ ಮೂಲಕ ಮಾತುಕತೆ ನಡೆಯುತ್ತಿರುವುದರಿಂದ ಗೌಪ್ಯ ಹೇಗೆ ಸಾಧ್ಯವಾದೀತು? ಇದರಿಂದ ಹಾನಿ ಏನೂ ಇಲ್ಲವೆಂದು ನನಗೆ ನಂಬಿಕೆ ಇದೆ.
ರಟ್ಟಾಳ ಮುಖದಲ್ಲಿ ಶಂಕೆಯ ಛಾಯೆ ಕಾಣಿಸಿತು. ಆಕೆ ಕ್ಷೀಣ ಸ್ವರದಲ್ಲಿ ‘ಇಲ್ಲ. ಏನೂ ಹಾನಿ ಇಲ್ಲ. ತಾವು ಹೇಳಿರಿ’ ಎಂದಳು.
ಭಿಕ್ಷು- ‘ನೀನು ಚಷ್ಟನ ದುರ್ಗಕ್ಕೆ ಖಂಡಿತಾ ಎಂದಿಗೂ ಬರಬೇಡ. ಬಂದರೆ ಘೋರ ವಿಪತ್ತು ಸಂಭವಿಸುತ್ತದೆ’- ಇದು ಧರ್ಮಾದಿತ್ಯರು ನಿಮಗೆ ಕಳುಹಿಸಿರುವ ಸುದ್ದಿ.
ರಟ್ಟಾ ಗಾಬರಿಯಿಂದ ಬಿಡುಗಣ್ಣು ಬಿಟ್ಟು, ಭಿಕ್ಷುವನ್ನು ನೋಡಿ, ಗದ್ಗದ ಸ್ವರದಲ್ಲಿ’ ವಿಪತ್ತು ಸಂಭವಿಸುತ್ತದೆ ಎಂದರೆ ಎಂಥ ವಿಪತ್ತು?’ ಎಂದು ಕೇಳಿದಳು.
ಭಿಕ್ಷು- ನಾವು ಪ್ರಯಾಣ ಹೊರಡುವುದಕ್ಕೆ ಮುಂದೆ ಸ್ವಲ್ಪ ಹೊತ್ತು ಮಾತ್ರ ಧರ್ಮಾದಿತ್ಯರನ್ನು ಸಂದರ್ಶಿಸುವ ಅವಕಾಶ ದೊರಕಿತ್ತು. ದುರ್ಗಾಧಿಪತಿ ಕಿರಾತನು ಬಹಳ ದುಷ್ಟ. ಅವನು ನಿಮ್ಮನ್ನು ಮೋಸದಿಂದ ಚಷ್ಟನ ದುರ್ಗಕ್ಕೆ ಬರಮಾಡಿಕೊಂಡು ಬಲಾತ್ಕಾರವಾಗಿ ವಿವಾಹ ಮಾಡಿಕೊಳ್ಳುವ ದುರಾಲೋಚನೆ ಅವನಿಗಿದೆ. ಧರ್ಮಾದಿತ್ಯರನ್ನು ಸೆರೆ ಹಿಡಿದು ಇಟ್ಟುಕೊಂಡಿದ್ದಾನೆ.
ರಟ್ಟಾ- ಏನು! ತಂದೆಯವರನ್ನು ಸೆರೆ ಹಿಡಿದು ಇಟ್ಟುಕೊಂಡಿದ್ದಾನೆಯೇ?
ಭಿಕ್ಷು- ಹಾಗೆಂದು ಕಾರಾಗಾರದಲ್ಲಿ ಅವರನ್ನು ಸೆರೆ ಹಿಡಿದು ಇಟ್ಟಿಲ್ಲ. ಆದರೆ ಅವರು ದುರ್ಗದಿಂದ ಹೊರಗೆ ಹೋಗುವ ಹಾಗಿಲ್ಲ. ಪತ್ರ ವ್ಯವಹಾರ ಮಾಡುವ ಅಧಿಕಾರವೂ ಅವರಿಗಿಲ್ಲ. ಕಪೋತಕೂಟಕ್ಕೆ ಕಳುಹಿಸಿದ್ದ ಪತ್ರ ಧರ್ಮಾದಿತ್ಯರ ಸ್ವಇಚ್ಛೆಯಿಂದ ಬರೆದ ಪತ್ರವಲ್ಲ.
ಬಹಳ ಹೊತ್ತಿನವರೆಗೂ ಮೌನವಾಗಿದ್ದ ರಟ್ಟಾ ಚಿತ್ರಕನ ಕಡೆ ತಿರುಗಿದಳು. ಅವಳ ಮುಖ ರಕ್ತಹೀನವಾಗಿತ್ತು. ಆದರೆ ಕಣ್ಣುಗಳಲ್ಲಿ ಬೆಂಕಿ ಸುಪ್ತವಾಗಿತ್ತು. ಧ್ವನಿ ಸರಿಯಾಗಿ ಹೊರಡುತ್ತಿಲ್ಲ. ಆದರೂ ‘ಕಿರಾತ ಇಷ್ಟು ಮುಂದುವರಿಯುತ್ತಾನೆಂದು ಸ್ವಪ್ನದಲ್ಲಿಯೂ ಭಾವಿಸಿರಲಿಲ್ಲ. ಈಗ ಏನು ಮಾಡಬೇಕು?’ ಎಂದಳು.
ಚಿತ್ರಕ- (ಸ್ವಲ್ಪ ಹೊತ್ತು ಸುಮ್ಮನಿದ್ದು ಭಿಕ್ಷುವನ್ನು ಕುರಿತು) ಮಹಾರಾಜರು ಇನ್ನೂ ಏನಾದರೂ ತಿಳಿಸಿದ್ದಾರೆಯೆ?
ಭಿಕ್ಷು- ಇಲ್ಲ. ಅವರು ರಟ್ಟಾ ಯಶೋಧರಾ ಚಷ್ಟನ ದುರ್ಗಕ್ಕೆ ಬರುವುದು ಬೇಡವೆಂದು ಮಾತ್ರ ಹೇಳಿದ್ದಾರೆ. ಈಗ ದುಷ್ಟನ ಕೈಯಿಂದ ಧರ್ಮಾದಿತ್ಯರ ಬಿಡುಗಡೆಯೇ ನಿಮ್ಮ ಮೊದಲ ಕರ್ತವ್ಯವಾಗಬೇಕು. ಕಿರಾತನು ಒಳ್ಳೆಯ ಮಾತಿಗೆ ಬಗ್ಗುವವನಲ್ಲ. ಅಷ್ಟು ಮಾತ್ರದಿಂದಲೇ ಧರ್ಮಾದಿತ್ಯರನ್ನು ಬಿಡುಗಡೆ ಮಾಡುವವನಲ್ಲ. ಅವನ ಕಪಟೋಪಾಯ ಫಲ ಕೊಡುವುದಿಲ್ಲವೆಂದು ತಿಳಿದ ಕೂಡಲೆ ಅವನು ಮತ್ತಷ್ಟು ಉಗ್ರನಾಗುವುದು ಖಚಿತ. ಧರ್ಮಾದಿತ್ಯರಿಗೆ ಕೇಡು ಬಗೆಯುವುದಕ್ಕೂ ಅವನು ಹೇಸುವುದಿಲ್ಲ.
ರಟ್ಟಾ ವ್ಯಾಕುಲತೆಯಿಂದ ಚಿತ್ರಕನ ಕಡೆ ನೋಡಿದಳು. ಚಿತ್ರಕ ಶಾಂತಚಿತ್ತನಾಗಿ; ತಾವು ಅಧೀರರಾಗಬೇಡಿ. ಕಷ್ಟಕಾಲದಲ್ಲಿ ಬುದ್ಧಿಯನ್ನು ಸ್ಥಿಮಿತದಲ್ಲಿಟ್ಟುಕೊಳ್ಳಬೇಕು ಎಂದು ರಟ್ಟಾಳಿಗೆ ಸಮಾಧಾನ ಹೇಳಿ, ಭಿಕ್ಷುವನ್ನು ಕುರಿತು’ ಮಹಾಶಯರೆ. ತಾವು ಆಯಾಸಗೊಂಡಿದ್ದೀರಿ. ಈಗ ವಿಶ್ರಮಿಸಿಕೊಳ್ಳಿರಿ’ ಎಂದನು. ಜಂಬುಕನನ್ನು ಕರೆದು ‘ನೀನು ಇವರ ಯೋಗ ಕ್ಷೇಮ ವಿಚಾರಿಸು’
ಎಂದು ಸೂಚಿಸಿದನು.
ಮುಂದುವರೆಯುವುದು….
ಎನ್. ಶಿವರಾಮಯ್ಯ (ನೇನಂಶಿ)