ಅವಕಾಶಗಳ ಆಯ್ಕೆ

ಅವಕಾಶಗಳ ಆಯ್ಕೆ

ಒಂದು ದಟ್ಟವಾದ ಕಾಡಿನಲ್ಲಿ ಸಿಂಹಗಳ ಸುಂದರವಾದ ಕುಟುಂಬವೊಂದು ವಾಸಿಸುತ್ತಿತ್ತು. ಪ್ರತೀ ದಿನವೂ ತನ್ನ ಕುಟುಂಬದ ಸದಸ್ಯರಿಗೆ ಅಗತ್ಯವಿರುವ ಆಹಾರವನ್ನು ಗಂಡು ಸಿಂಹವೇ ಬೇಟೆಯಾಡಿ ತಂದು ಎಲ್ಲಾ ಸದಸ್ಯರಿಗೂ ನೀಡುತ್ತಿತ್ತು. ಗಂಡು ಸಿಂಹವು ಪ್ರತೀ ದಿನ ಬೇಟೆಯಾಡಿ ಮಾಂಸವನ್ನು ತಂದರೆ ಹೆಣ್ಣು ಸಿಂಹವು ಬೇಟೆಯನ್ನು ಹಂಚಿ ಎಲ್ಲಾ ಸದಸ್ಯರಿಗೂ ನೀಡುತ್ತಿತ್ತು.

ಒಂದು ದಿನ ಸುಂದರವಾದ ಸಂಸಾರದಲ್ಲಿ ಅಪಸ್ವರ ಎದುರಾಯಿತು. ಗಂಡು ಸಿಂಹ ಮತ್ತು ಹೆಣ್ಣು ಸಿಂಹ ಇಬ್ಬರ ನಡುವೆ ಯಾರು ಮೇಲು ಎಂಬ ಚರ್ಚೆಯು ಪ್ರಾರಂಭವಾಯಿತು. ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದವು. ಮರದ ಮೇಲೆ ಕುಳಿತು ಸಿಂಹಗಳ ಜಗಳವನ್ನು ಗಮನಿಸಿದ ರಣಹದ್ದೊಂದು ಎರಡು ಸಿಂಹಗಳ ಪೈಕಿ ಯಾರು ಮೇಲೆಂದು ನಿರ್ಧರಿಸಲು ಒಂದು ಉಪಾಯವನ್ನು ಹೇಳಿಕೊಟ್ಟಿತು. ಅದೇನೆಂದರೆ ಪ್ರತಿ ದಿನವೂ ಬೇಟೆಯನ್ನು ಹಿಡಿಯಲು ಗಂಡು ಸಿಂಹವು ಹೋದರೆ, ಈ ಬಾರಿ ಹೆಣ್ಣು ಸಿಂಹ ಬೇಟೆಯನ್ನು ಹಿಡಿದು ತರಲಿ ಆಗ ಯಾರು ಶ್ರೇಷ್ಠ ಎಂದು ನಿರ್ಧರಿಸೋಣ ಎಂದಿತು. ಎರಡೂ ಸಿಂಹಗಳು ಒಪ್ಪಿದವು.

ಅದರಂತೆ ಹೆಣ್ಣು ಸಿಂಹವು ಬೇಟೆಗೆ ದಟ್ಟಾರಣ್ಯದ ಒಳಗೆ ಹೊಕ್ಕಿತು. ಪ್ರತಿದಿನ ಗಂಡು ಸಿಂಹವು ಬೇಟೆಗೆ ಹೊಂಚು ಹಾಕಿ ಕುಳಿತುಕೊಳ್ಳುತ್ತಿದ್ದ ಸ್ಥಳದಲ್ಲೇ ಹೆಣ್ಣು ಸಿಂಹವೂ ಕುಳಿತಿತು. ಬಹಳ ಸಮಯದ ನಂತರ ಜಿಂಕೆಗಳ ಗುಂಪೊಂದು ಅದೇ ದಾರಿಯಲ್ಲಿ ಓಡಿಕೊಂಡು ಬಂದವು. ಸಿಂಹಿಣಿಯು ನಾನು ಯಾವ ಜಿಂಕೆಯನ್ನು ಹಿಡಿಯಲಿ ಎಂದು ಯೋಚಿಸುತ್ತಾ ಮೊದಲನೆಯ ಜಿಂಕೆಯನ್ನು ಬಿಟ್ಟಿತು, ಎರಡು, ಮೂರು ನಾಲ್ಕು ಹೀಗೆ ಬರೋಬ್ಬರಿ 60-70 ಜಿಂಕೆಗಳನ್ನೂ ಹಿಡಿಯದೇ ಯಾವುದನ್ನು ಹಿಡಿಯಲಿ ಎಂದು ನಿರ್ಧರಿಸುವುದರಲ್ಲೇ ಸಮಯ ಕಳೆದುಬಿಟ್ಟಿತು.

ಅಲ್ಲಿಗೆ ಜಿಂಕೆಗಳ ಇಡೀ ಗುಂಪೇ ಕಾಡಿನಲ್ಲಿ ಕಣ್ಮರೆಯಾಯಿತು. ಸಂಜೆಯಾದರೂ ಸಿಂಹಿಣಿಯು ಬೇಟೆಯನ್ನು ತರದೇ ಇದ್ದುದರಿಂದ ಕೊನೆಗೆ ಗಂಡು ಸಿಂಹ ತಾನೇ ಬೇಟೆಗೆ ಹೊರಟು ತನ್ನ ಮಾಮೂಲಿ ಬೇಟೆಯ ಸ್ಥಳ ತಲುಪಿತು. ಆಗ ಪೊದೆಯ ಮರೆಯಲ್ಲಿ ಸಿಂಹಿಣಿಯು ಬೇಟೆಗೆ ಹೊಂಚು ಹಾಕಿ ಕುಳಿತಿರುವುದು ಕಂಡಿತು. ಅದೇ ಸಮಯಕ್ಕೆ 100-200 ಕಾಡೆತ್ತುಗಳ ಗುಂಪೊಂದು ಅದೇ ದಾರಿಯಾಗಿ ವೇಗವಾಗಿ ಓಡುತ್ತಿದ್ದವು. ಅವುಗಳ ಓಟದ ವೇಗಕ್ಕೆ ಸಿಂಹಿಣಿಗೆ ಯಾವ ಕಾಡೆತ್ತನ್ನು ಹಿಡಿಯುವುದೆಂದೇ ತಿಳಿಯಲಿಲ್ಲ. ಸರಿ ಸುಮಾರು 50-60 ಕಾಡೆತ್ತುಗಳು ಸಾಗಿದರೂ ಸಿಂಹಿಣಿಗೆ ಒಂದನ್ನೂ ಹಿಡಿಯಲಾಗಲಿಲ್ಲ. ಆಗ ಅಲ್ಲೇ ಮರೆಯಲ್ಲಿದ್ದ ಗಂಡು ಸಿಂಹವು ವೇಗವಾಗಿ ಓಡುತ್ತಿದ್ದ ಕಾಡೆತ್ತುಗಳ ಗುಂಪಿಗೆ ನುಗ್ಗಿ ಒಂದು ಕಾಡೆತ್ತನ್ನು ಹಿಡಿದೇ ಬಿಟ್ಟಿತು. ಸಿಂಹಿಣಿಯು ಪಿಳಿಪಿಳಿ ಕಣ್ಣುಬಿಟ್ಟು ಇದನ್ನು ನೋಡುತ್ತಿತ್ತು.

ಜೀವನದಲ್ಲಿ ಇದೇ ರೀತಿ ನಾವೂ, ಇದೋ ಅಥವಾ ಅದೋ ಎಂದು ನಿರ್ಧರಿಸುವ ಗೊಂದಲದಲ್ಲಿ ಸಿಕ್ಕ ಅವಕಾಶಗಳನ್ನೆಲ್ಲ ಕಳೆದುಕೊಂಡು ಬಿಡುತ್ತೇವೆ. ಸಿಕ್ಕಂತಹ ಸಣ್ಣ ಅವಕಾಶವನ್ನು ಬಳಸಿಕೊಂಡರೆ ಮುಂದಕ್ಕೆ ಬೃಹತ್ ಅವಕಾಶಗಳನ್ನು ಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತದೆ. ಯಾರು ಶ್ರೇಷ್ಠರೆನ್ನುವುದು ಮುಖ್ಯವಲ್ಲ, ಬದಲಿಗೆ ಯೋಚಿಸುವ ರೀತಿ, ಯಶಸ್ಸಿಗಾಗಿ ಹಾಕಿಕೊಳ್ಳುವಂತಹ ಕಾರ್ಯ ಯೋಜನೆಗಳು ಶ್ರೇಷ್ಠವಾಗುತ್ತವೆ. ‘ಒಮ್ಮೆ ತನ್ನ ಕೆಲಸದಲ್ಲಿ ಭಯರಹಿತರಾದರೆ ಮುಂದೆ ಬದುಕೇ ಅಂತ್ಯವಿಲ್ಲದಷ್ಟು ವಿಶಾಲವಾಗುತ್ತದೆ.’

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160


Related post