ಆಸ್ಟ್ರೇಲಿಯದ ಸಂರಕ್ಷಿತ ಪಕ್ಷಿ – ಕಾಕಟೂ

ಆಸ್ಟ್ರೇಲಿಯದ ಸಂರಕ್ಷಿತ ಪಕ್ಷಿ – ಕಾಕಟೂ

“ಕ್ಯಾಕಟುಯಿಡೆ” ಕುಟುಂಬಕ್ಕೆ ಸೇರಿದ 21 ಜಾತಿಯ ಗಿಳಿಗಳಲ್ಲಿ ಕಾಕಟೂ ಹಕ್ಕಿಯು ಒಂದು. ಕಪ್ಪು ಕಾಕಟೂ ಅಥವಾ ಕಪ್ಪುರೆಕ್ಕೆಯ ಕಾಕಟೂ ಆಸ್ಟ್ರೇಲಿಯಾದ ಸ್ಥಳೀಯ ಪಕ್ಷಿ.

ಈ ಪಕ್ಷಿಗಳು ಹೊಳೆಯುವ ಕಪ್ಪುರೆಕ್ಕೆಗಳನ್ನು ಹೊಂದಿದ್ದು, ರೆಕ್ಕೆಯ ಅಂಚುಗಳು ಬಿಳಿಯಾಗಿರುತ್ತವೆ. ಅವುಗಳ ಮೇಲೆ ಸೂರ್ಯ ಬೆಳಗಿದಾಗ ಹೆಚ್ಚು ಆಕರ್ಷಕವಾಗಿ ಕಾಣುತ್ತವೆ. ಅದರಲ್ಲೂ ಕೆಂಪುಬಾಲದ ಮತ್ತು ಕಪ್ಪು ರೆಕ್ಕೆಯಿರುವ ಕಾಕಟೂಗಳು ಸುಂದರವಾಗಿರುತ್ತವೆ. ಗಂಡು ಕಾಕಟೂಗಳು ಕೆಂಪುಬಾಲವನ್ನು ಹೊಂದಿದ್ದು, ಇವುಗಳ ತೂಕ 670ರಿಂದ 920 ಗ್ರಾಮ್ ಇದ್ದರೆ ಹೆಣ್ಣು ಕಾಕಟೂಗಳು 615 ರಿಂದ 870 ಗ್ರಾಮ್ ಇರುತ್ತದೆ. ಇವು ಬುದ್ದಿವಂತ ಪಕ್ಷಿಗಳಾಗಿದ್ದು ಜನರೊಂದಿಗೆ ಸಂವಹನ ನಡೆಸುವ ಶಕ್ತಿ ಇವಕ್ಕಿರುವುದರಿಂದ ಕಾಕಟೂಗಳನ್ನು ಮನೆಗಳಲ್ಲಿ ಗಿಳಿಗಳಂತೆ ಸಾಕುವುದುಂಟು. ಇವು ಗುಂಪುಗಳಲ್ಲಿ ವಾಸಿಸುವ ಪಕ್ಷಿಗಳಾಗಿದ್ದು ಇವುಗಳ ಆಹಾರ ನೀಲಗಿರಿ ಬೀಜ ಮತ್ತು ಮಾಗಿದ ಹಣ್ಣುಗಳು.

ಈ ಪಕ್ಷಿಗಳು ಮುಖ್ಯವಾಗಿ ಪಶ್ಚಿಮ ಹಾಗೂ ದಕ್ಷಿಣ ಆಸ್ಟ್ರೇಲಿಯದ ಉಷ್ಣವಲಯದ ಕಾಡುಗಳಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದರೂ, ಕ್ವೀನ್ಸ್ ಲ್ಯಾಂಡ್ ಮತ್ತು ವಿಕ್ಟೋರಿಯದ ಕರಾವಳಿ ಪ್ರದೇಶಗಳಲ್ಲಿ ಕಂಡುಬರುತ್ತವೆ, ಕಾರಣ ಇಲ್ಲಿ ವರ್ಷವಿಡೀ ಆಹಾರ ನೀಡುವ ಹಣ್ಣಿನ ಮರಗಳಿವೆ. ಈ ಕಾಕಟೂಗಳು ಎತ್ತರವಾದ ಮರಗಳಲ್ಲಿ ಮೂರರಿಂದ ಏಳು ಅಡಿ ಆಳವಿರುವ ಪೊಟರೆಗಳಲ್ಲಿ ವಾಸಿಸುತ್ತವೆ. ಇವುಗಳು ದೂರದೇಶ ಅಥವ ಪ್ರದೇಶಗಳಿಗೆ ವಲಸೆ ಹೋಗದೆ ಒಂದು ನಿರ್ದಿಷ್ಟ ಪ್ರದೇಶದ ಆಸುಪಾಸಿನಲ್ಲೇ ವಾಸ್ತವ್ಯವಿರುತ್ತವೆ. ವಂಶೋಭಿವೃದ್ಧಿಗಾಗಿ ಗಂಡು ಕಾಕಟೂಗಳು ಜೀವನಪೂರ್ತಿ ಒಂದೇ ಸಂಗಾತಿಯೊಡನೆ ಸಂಪರ್ಕ ಇಟ್ಟುಕೊಂಡ ಆದರ್ಶ ಜೀವಿಗಳು ಇವು. ಇವುಗಳ ಜೀವಿತಾವಧಿ 45 ರಿಂದ 50 ವರ್ಷಗಳು.

ಕಾಡ್ಗಿಚ್ಚು ಮತ್ತಿತರ ಕಾರಣಗಳಿಂದ ಅರಣ್ಯದ ಮರಗಳು ಕಡಿಮೆಯಾಗಿರುವುದರಿಂದ, ಈ ಕಾಕಟುಗಳನ್ನು ಸಂರಕ್ಷಿಸಲು ದಕ್ಷಿಣ ಆಸ್ಟ್ರೇಲಿಯದ ಸರ್ಕಾರ ಮರಗಳನ್ನು ನೆಟ್ಟು ಅರಣ್ಯ ಬೆಳೆಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಆಸ್ಟ್ರೇಲಿಯದಲ್ಲಿ 2009 ರಿಂದ ಪ್ರತಿ ವರ್ಷವೂ ಕಾಕಟೂಗಳ ಗಣತಿ ನಡೆಸುತ್ತಿದ್ದು, ಇತ್ತೀಚಿನ ಗಣತಿಯ ಪ್ರಕಾರ ಕೆಂಪುಬಾಲದ ಕಾಕಟೂಗಳ ಸಂಖ್ಯೆ ಕೇವಲ 1230 ಇದ್ದು, ಕಪ್ಪುಬಾಲದ ಕಾಕಟೂಗಳ ಸಂಖ್ಯೆ 10000 ಇರುತ್ತದೆ. ಆದ್ದರಿಂದ ಆಸ್ಟ್ರೇಲಿಯದಲ್ಲಿ ಸಂರಕ್ಷಿತ ಪಕ್ಷಿ ಎಂದು ಇವುಗಳನ್ನು ಪರಿಗಣಿಸಿದ್ದು ಇವುಗಳ ಭೇಟೆಯನ್ನು ನಿಷೇಧಿಸಲಾಗಿದೆ. ಅಲ್ಲದೇ ಇವುಗಳನ್ನು ಮನೆಗಳಲ್ಲಿ ಸಾಕಲು ಪರವಾನಗಿಯ ಅಗತ್ಯವಿದೆ.

ಕಾಕಟೂಗಳ ಬೆಲೆ ಲಿಂಗ ಮತ್ತು ವಯಸ್ಸನ್ನಾಧರಿಸಿ ನಿಗದಿಯಾಗುತ್ತದೆ. ಇವುಗಳ ಬೆಲೆ ಆಸ್ಟ್ರೇಲಿಯದಲ್ಲಿ 1750 ಡಾಲರ್, ಹಾಗೂ ಹೊರದೇಶಗಳಲ್ಲಿ 8900 ಡಾಲರ್ ಗಳಾಗಿವೆ. ಕೆಲವು ಸಾಕಿದ ಕಾಕಟೂಗಳ ಬೆಲೆ ಅಮೆರಿಕದಲ್ಲಿ 15000 ದಿಂದ 40000 ಡಾಲರ್ ವರೆಗೂ ಉಂಟು.

ಹನುಮಂತಯ್ಯ ಎಲಿಯೂರು

Related post

Leave a Reply

Your email address will not be published. Required fields are marked *