ಆ ಒಂದು ಕ್ಷಣ….. ನಿಮ್ಮೊಂದಿಗೆ – ಸುನೀಲ

ಆ ಒಂದು ಕ್ಷಣ….. ನಿಮ್ಮೊಂದಿಗೆ – ಸುನೀಲ – 7

ಒಂದು ನಿಮಿಷವೆಂದರೆ ಅದು 60 ಸೆಕೆಂಡುಗಳು ಮಾತ್ರ ಎಂದುಕೊಳ್ಳಬಹುದು.
ನಾವೇನಾದರೂ 60 ಸೆಕೆಂಡುಗಳಲ್ಲಿ ಏನು ಮಾಡಲು ಸಾಧ್ಯ ಎಂದು ಸುಮ್ಮನೆ ಕುಳಿತುಬಿಟ್ಟರೆ, ಆ ಕ್ಷಣಗಳೇ ನಮ್ಮ ಬದುಕಿನ ಮಹತ್ವದ ಘಟ್ಟವೂ ಆಗಿರಬಹುದು, ಮೈ ಮರೆತು ಕುಳಿತರೆ ಆ ಕಳೆದು ಹೋದ ಕ್ಷಣವು ಮತ್ತೊಂದು ಸಾರಿ ತಿರುಗಿ ಬಾರದು.

ಬದುಕಿನಲ್ಲಿ ನಾವು ಯಾವುದಾದರೂ ಗುರಿಯನ್ನು ಇಟ್ಟುಕೊಂಡು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದರೆ ಅಂತಿಮವಾದ ಕೆಲವು ಕ್ಷಣಗಳು ಬಹಳ ಮಹತ್ವವನ್ನು ಪಡೆದುಕೊಂಡಿರುತ್ತದೆ ಆ ಕ್ಷಣಗಳಲ್ಲಿ ದಕ್ಕುವ ಗೆಲುವು ನಮ್ಮ ಜೀವಮಾನವಿಡಿ ಸಂತಸವನ್ನು ನೀಡುತ್ತದೆ.

ಗೆಲುವಿನ ಹಂತದಲ್ಲಿ ಇರುವಾಗ ನಾನು ಗೆಲುವನ್ನು ಸಮೀಪಿಸಿ ಬಿಟ್ಟೆ, ಗೆಲುವು ನನ್ನದೇ ಎನ್ನುವ ಮೈಮರೆವಿಗೆ, ಅತಿಯಾದ ಆಶಾವಾದಕ್ಕೆ ಸಿಕ್ಕಿಬಿಟ್ಟರೆ ಆ ಗೆಲುವು ಸೋಲಾಗಿ ಪರಿಣಮಿಸಬಹುದು.

ಏಕೆಂದರೆ ,ಆ ಕ್ಷಣದ ಗೆಲುವಿಗೆ ಮನಸ್ಸು ಮತ್ತು ದೇಹದ ನಡುವಿನ ಸಂವಹನ ಬಹಳ ಮುಖ್ಯ ಎನಿಸುತ್ತದೆ. ಯಾವಾಗ ಮನಸ್ಸು ವಿಚಲಿತವಾಗುತ್ತದೆಯೋ ಆವಾಗ ಇದ್ದಕ್ಕಿದ್ದಂತೆ ನಮ್ಮ …ವೇಗ ಕಡಿಮೆಯಾಗುತ್ತದೆ; ಏಕೆಂದರೆ ದೇಹದೊಡನೆ ಅದು ಸಂವಹನ ಕಳೆದುಕೊಂಡಿರುತ್ತದೆ. ಅತಿಯಾದ ನಿರೀಕ್ಷೆ ಕೊಂಚ ಸೋಮಾರಿತನ ಮನುಷ್ಯನನ್ನು ಪಾತಾಳಕ್ಕೆ ತಳ್ಳಿ ಬಿಡಬಹುದು.

ವರ್ಷ, ಗಂಟೆಗಳನ್ನು ಪಕ್ಕಕ್ಕಿಟ್ಟು ನೋಡಿದರೆ ಒಂದು ಕ್ಷಣದಲ್ಲಿ ಜಗತ್ತು ಏನೆಲ್ಲಾ ಬದಲಾವಣೆಗೆ ಒಳಗಾಗಿರುತ್ತದೆ ಅಂದರೆ ಹಿಂದಿರುಗಿ ನೋಡಿದಾಗ ಜಗತ್ತು ಹೀಗಿತ್ತಾ ಎನ್ನುವಂತಹ ಆಶ್ಚರ್ಯ ನಮಗಾಗುತ್ತದೆ.

ನಮ್ಮ ಬದುಕಿಗೆ ವರದಾನವಾಗಬಲ್ಲ ಬದುಕನ್ನೇ ಬದಲಿಸಬಲ್ಲ ಶಕ್ತಿ ಆ ಒಂದು ಕ್ಷಣಕ್ಕೆ ಇದೆ.
ಸಂಪದ್ಭರಿತ ದೇಶವಾಗಿದ್ದ ಜಪಾನ್ ದೇಶದ ನಗರಗಳಾದ ಹಿರೋಶಿಮಾ ಮತ್ತು ನಾಗಸಾಕಿ ಕೆಲವೇ ಕ್ಷಣಗಳಲ್ಲಿ ಅಣುಬಾಂಬನಿಂದ ನಿರ್ನಾಮವಾಯಿತು. ಅತ್ಯಂತ ಎತ್ತರದಲ್ಲಿ ಹಾರುತ್ತಿರುವ ನಾಗರಿಕ ವಿಮಾನದ ಪೈಲೆಟ್ ಒಬ್ಬ ಒಂದು ಕ್ಷಣ ತೂಕಡಿಸಿದ್ದರ ಪರಿಣಾಮ ಇಡೀ ವಿಮಾನವೇ ಅಪಘಾತಕೀಡಾಗಿ ನಾಶವಾಗಬಹುದು.
ನಾವು ಒಂದು ನಿಮಿಷ ತಡವಾಗಿ ಹೋಗಿದ್ದರಿಂದಾಗಿ ತಪ್ಪಿದ ರೈಲು ಮುಂದೆಲ್ಲೋ ಒಂದು ಕಡೆ ಅಪಘಾತಕ್ಕೆ ಈಡಾಗಿ ನೂರಾರು ಜನ ಸಾವಿಗೀಡಾಗಿರುತ್ತಾರೆ. ಆದರೆ ನಾವು ತಪ್ಪಿಸಿಕೊಂಡ ಒಂದು ನಿಮಿಷ ನಮ್ಮ ಜೀವವನ್ನು ಉಳಿಸಿರುತ್ತದೆ.

ಒಂದು ಕ್ಷಣವೆಂದರೆ ಹೀಗೆ ಜಗತ್ತಿನ ಅದೆಷ್ಟೋ ಸಂಗತಿಗಳು ಕ್ಷಣ ಕ್ಷಣಕ್ಕೆ ಬದಲಾಗಿ ಬಿಟ್ಟಿರುತ್ತದೆ ಹೊಸತನವನ್ನು ಪಡೆದುಕೊಂಡಿರುತ್ತದೆ ಆ ಕ್ಷಣಗಳು ನಮ್ಮ ಬದುಕಿನ ಭಾಗವೂ ಆಗಿರುತ್ತದೆ ನಮ್ಮ ಬದುಕಿನ ಬಹಳ ಮುಖ್ಯವೆನಿಸುವ ಸಂಗತಿಗಳು ಆ ಕ್ಷಣಗಳಲ್ಲೇ ನಡೆದಿರುತ್ತವೆ.

ಈ ವಿಶ್ವವೆಂಬ ಬ್ರಹ್ಮಾಂಡದಲ್ಲಿ ಕಾಲ, ದೇಶ ಮತ್ತು ದೇವರು ಎಂಬ ಸ್ಥಿತಿಯಿದೆ ಇದನ್ನು ನಾವು ಅನಂತ ಎಂದು ಕರೆಯುತ್ತೇವೆ ಕಾಲಕ್ಕೆ ಭೂತ ವರ್ತಮಾನ ಮತ್ತು ಭವಿಷ್ಯತ್ಕಾಲ ಎಂಬ ಹಂತಗಳನ್ನು ಕಲ್ಪಿಸಿದ್ದೇವೆ.

ಒಂದು ಕ್ಷಣ ಎನ್ನುವುದು ಕಾಲನೊಂದಿಗೆ ಅಂತರ್ಗತವಾಗಿದೆ ಇದು ಎಂದಿಗೂ ಮನುಷ್ಯನ ಇತಿಮಿತಿಗೆ ನಿಲುಕುವುದೇ ಇಲ್ಲ….

ಮುಂದುವರೆಯುವುದು….

ಸುನೀಲ್ ಹಳೆಯೂರು

Related post

Leave a Reply

Your email address will not be published. Required fields are marked *