ಏಳು ಬೀಳಿನ ದಾರಿ

ಏಳು ಬೀಳಿನ ದಾರಿ

ನಡೆಯುತ್ತೇನೆ ನಾನು
ನನ್ನದೇ ಲಯದಲ್ಲಿ
ಮನದೊಳಗಿನ
ಆಲಯದೊಳಗಿಳಿಯುವ
ಪ್ರಯತ್ನ ಮಾಡುತ್ತಾ
ಕೆಲವೊಮ್ಮೆ ತಪ್ಪುತ್ತೇನೆ
ಹೆಜ್ಜೆಗಳ ಲೆಕ್ಕಾಚಾರವನ್ನೂ

ಇಣುಕುತ್ತೇನೆ ಅಲ್ಲಿ ಇಲ್ಲಿ
ಕಣ್ಣಿಗೆ ಬೀಳುವ
ಮೂಲೆ ಕಂದರಗಳಲ್ಲಿ
ಎಳೆಯುತ್ತೇನೆ ಪರದೆ
ಆಗಾಗ ಮನದ ಭಾವನೆಗಳಿಗೂ

ಹತ್ತುತ್ತೇನೆ ಇಳಿಯುತ್ತೇನೆ
ಗಟ್ಟಿಯಾಗಿ ಹೆಜ್ಜೆಯೂರಲಾರದೇ
ಕಣ್ಣಿನ ಪೊರೆ ಕಳಚಿ
ಹೊಸ ದಾರಿ ಹುಡುಕಲಾಗದೇ
ಯಾವುದೋ ಅರ್ಥ
ಕಂಡುಕೊಳ್ಳುವಲ್ಲಿ ಸೋಲುತ್ತೇನೆ

ಆದರೂ ಗೆಲ್ಲುತ್ತೇನೆ
ಸದಾಕಾಲವಲ್ಲದಿದ್ದರೂ
ಸಾವಕಾಶವಾಗಿ
ಆಗೊಮ್ಮೆ ಈಗೊಮ್ಮೆ
ಯಾವುದೋ ಸಣ್ಣ ಬೆಳಕು
ಹಿಡಿದು ದಾರಿ ಸಾಗುವಾಗ

ಸೌಜನ್ಯ ದತ್ತರಾಜ

Related post