ಕಣ್ಮನ ಸೆಳೆಯುವ ನಟನಾ ಪ್ರತಿಭೆ – ಲಕ್ಷ್

ಬಹಳ ಹಿಂದೆ ಚಿತ್ರರಂಗದ ಕದ ತಟ್ಟಬೇಕಾದರೆ ಆಗಿನ ನಟನಾಸಕ್ತರು ರಂಗಭೂಮಿ ತಂಡದಲ್ಲಿ ಸೇರಿಕೊಂಡು ರಂಗ ದಿಗ್ಗಜರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ಹತ್ತು ಹಲವಾರು ಪಾತ್ರಗಳಲ್ಲಿ ನಟಿಸಿ ಅಥವಾ ತೆರೆಯ ಹಿಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ರಂಗಭೂಮಿಯಲ್ಲಿ ಗುರುತಿಸಿಕೊಂಡು ಅವಕಾಶಕ್ಕಾಗಿ ಎದುರು ನೋಡುತ್ತಿದ್ದರು, ರಂಗಭೂಮಿಯ ಜೊತೆಗೆ ಕಿರುತೆರೆಯಲ್ಲಿ ಸಣ್ಣ ಪುಟ್ಟ ಪಾತ್ರವಹಿಸಿ ಅದರಲ್ಲೇ ತಮ್ಮ ಪ್ರತಿಭೆಯನ್ನು ತೋರಿಸಿ ನಂತರ ಚಿತ್ರರಂಗದ ನಿರ್ದೇಶಕ ನಿರ್ಮಾಪಕರ ಕಣ್ಸೆಳೆದು ಚಿತ್ರರಂಗಕ್ಕೆ ಪ್ರವೇಶ ಪಡೆಯುತ್ತಿದ್ದರು.

ಡಾ. ರಾಜಕುಮಾರ್, ಅನಂತನಾಗ್, ಶಂಕರ್ ನಾಗ್, ಇಂದಿನ ಯಶ್, ಶರಣ್, ನಿರ್ದೇಶನದ ವಿಭಾಗದಲ್ಲಿ, ಟಿ. ಎಸ್. ನಾಗಾಭರಣ, ಟಿ.ಎನ್. ಸೀತಾರಾಮ್, ಜಯತೀರ್ಥ, ಇನ್ನು ಅನೇಕ ದಿಗ್ಗಜರು ರಂಗಭೂಮಿ ಹಾಗು ಕಿರುತೆರೆಯಲ್ಲಿ ಅನುಭವ ಪಡೆದುಕೊಂಡು ನಂತರ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದು. ಚಿತ್ರರಂಗಕ್ಕೆ ಪ್ರವೇಶಿಸುವದಕ್ಕೆ ಈಗ ಇನ್ನೂ ಅನೇಕ ದಾರಿಗಳು ನಟನಾಸಕ್ತರಿಗೆ ಒಲಿದು ಬಂದಿದೆ. ರಂಗಭೂಮಿ, ಕಿರುತೆರೆಯಲ್ಲದೆ ಯುಟ್ಯೂಬ್ , ಫೇಸ್ ಬುಕ್ ಹಾಗು ಇನ್ಸ್ಟಾಗ್ರಾಮ್ ಮೂಲಕ ಕಿರುತೆರೆಗಳನ್ನು ನಿರ್ದೇಶಿಸಿ ಅಥವಾ ಸಣ್ಣ ಪುಟ್ಟ ರೀಲ್ಸ್ ಗಳನ್ನೂ ಮಾಡುತ್ತಾ ಈಗಿನ ಯುವ ಪೀಳಿಗೆ ಸದಾ ಚಿತ್ರರಂಗದ ಕದವನ್ನು ತಟ್ಟುತ್ತಲೇ ಇದ್ದಾರೆ. ರಂಗಭೂಮಿ, ಕಿರುತೆರೆ ಹಾಗು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತನ್ನ ಪ್ರತಿಭೆಗೆ ಅವಕಾಶ ಹುಡುಕುತಿರುವವರಲ್ಲಿ “ಲಕ್ಷ್” ಕೂಡ ಒಬ್ಬರು.

ತರೀಕೆರೆ ಮೂಲದವರಾದ ಜಿ.ಸಿ. ಎಂ ಪ್ರಸಾದ್ ಹಾಗು ಶ್ರೀಮತಿ ಚಂದ್ರಕಲಾ ಪ್ರಸಾದ್ ರವರ ಕುಡಿಯಾದ “ಲಕ್ಷ್” ರವರ ಮೂಲ ಹೆಸರು ಅಂಕಿತ್ ಪ್ರಸಾದ್ ಎಂದು. ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾದ ಲಕ್ಷ್ ತನ್ನ ಚಿಕ್ಕವಯಸ್ಸಿನಿಂದಲೇ ಚಿತ್ರರಂಗದತ್ತ ಆಕರ್ಷಿತನಾಗಿ ನಟನಾಗಬೇಕೆಂಬ ಆಸೆ ಹೊತ್ತು ಶಾಲೆಯ ಅವಧಿಯಲ್ಲೇ ಹಲವಾರು ರಂಗರೂಪದಲ್ಲಿ ಹಾಗು ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ “ಜೂಲಿಯಸ್ ಸೀಸರ್” ನಾಟಕದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಶಿಕ್ಷಕರು, ಸ್ನೇಹಿತರು ಹಾಗು ಇಡೀ ಶಾಲೆಯ ಗಮನ ಸೆಳೆದಿದ್ದರು ಲಕ್ಷ್.

ಆದರೂ ಇಂಜಿನೀಯರಿಂಗ್ ಮೊದಲ ವರ್ಷದಿಂದಲೂ ನಟನೆಯ ಕಡೆಗೆ ಒಲವು ಇನ್ನಷ್ಟು ಹೆಚ್ಚಾಗಲು ತಮ್ಮ ಹಿರಿಯ ಸಹಪಾಠಿಯೊಬ್ಬರು ನಿರ್ದೇಶಿಸಿದ “ಅಂಜು” ಎಂಬ ಕಿರುಚಿತ್ರದಲ್ಲಿ ನಟಿಸುವ ಅವಕಾಶ ಒದಗಿಬಂದು ನಂತರ ಕಿರುಚಿತ್ರಗಳನ್ನೇ ನಿರ್ಮಿಸುವ “ಕನಸಿನ ಕೂಸು” ಎಂಬ ತಂಡವೊಂದಕ್ಕೆ ಪರಿಚಯವಾಗಿ “ಬಿಜ್ ಬಾಯ್” ಎಂಬ ಮತ್ತೊಂದು ಕಿರುಚಿತ್ರದಲ್ಲಿ ನಟಿಸಿದರು. ಶ್ರೀಜಿತ್ ವೈ ಎಸ್ ರವರ ಗೂಗ್ಲಿ “2020”, ಐಲು ಪ್ರೀತಿಯಲ್ಲಿ, ಇನ್ನೂ ಅನೇಕ ಕಿರುಚಿತ್ರಗಳಲ್ಲಿ ಅಭಿನಯಿಸತೊಡಗಿದರು. ವಿಧ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎನ್ನುವ ಉದ್ದೇಶದಿಂದ, ಓದಿನ ಕಡೆ ಹೆಚ್ಚು ಗಮನ ಕೊಡುವಂತೆ ಲಕ್ಷ್ ರವರ ತಂದೆ ತಾಯಿ ತಮ್ಮ ಕಳವಳವನ್ನು ತೋರ್ಪಡಿಸಿದಾಗ ಪದವಿ ಶಿಕ್ಷಣ ಬಹಳ ಮುಖ್ಯ ಎನ್ನುವ ಉದ್ದೇಶದಿಂದ ಪೋಷಕರ ಮಾತಿಗೆ ಬೆಲೆ ಕೊಟ್ಟು ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದರು ಲಕ್ಷ್.

ವಿಶಾಲ್ ಮತ್ತು ಪ್ರಜ್ವಲ್ ನಿರ್ದೇಶನದ “ದ್ವಾರಕಾ” ಎಂಬ ಕಿರುಚಿತ್ರದಲ್ಲಿ ಲಕ್ಷ್ ನಾಯಕನಾಗಿ ನಟಿಸಿದ್ದು 2023 ಸೆಪ್ಟೆಂಬರ್ 9 ಮತ್ತು 10 ರಂದು ಈ ಕಿರುಚಿತ್ರ ರೆಂಟ್ ಮೈ ಥೀಯೇಟರ್ ನಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಇದನ್ನ ಯುಟ್ಯೂಬ್ ಚಾನೆಲ್ “ಶಂಕ್ರಣ್ಣ ಟಾಕೀಸ್” ನಲ್ಲಿ ಕೂಡ ಬಿಡುಗಡೆ ಮಾಡಿದ್ದಾರೆ. ನಟನೆಯಷ್ಟೇ ಅಲ್ಲದೇ, ಮಾಲೂರು ಶ್ರೀನಿವಾಸ್, ಶಿವಮಣಿ ಅವರ ಮಾರ್ಗದರ್ಶನದಲ್ಲಿ ಫೈಟ್ ಮತ್ತು ಡ್ಯಾನ್ಸ್ ಕೂಡ ಕಲಿತು, ಕುಂಗ್ ಫೂ ಚಂದ್ರು, ಶ್ರೀಮತಿ ಶೈಲಜಾ, ವಾಲ್ಟರ್ ಡಿಸೋಜಾ, ಮತ್ತು ರಾಮಕೃಷ್ಣ ಬೆಲ್ತೂರ್ ಅವರ ಮಾರ್ಗದರ್ಶನದಲ್ಲಿ ನಟನಾ ಶಾಲೆಯಲ್ಲಿ ನಿರ್ಮಿಸಿದ “ಕಾಲಾಯಾ ತಸ್ಮೈ ನಮಃ” ಮತ್ತು ಮೌನ ಎಂಬ ಎರಡು ಕಿರುಚಿತ್ರಗಳಲ್ಲಿ ನಾಯಕನಾಗಿ ನಟಿಸಿ ಪೂರ್ಣಚಂದ್ರ ತೇಜಸ್ವಿ ಯವರ ಪ್ರಸಿದ್ಧ ಕೃತಿ “ಕಿರಗೂರಿನ ಗಯ್ಯಾಳಿಗಳು” ನಾಟಕದಲ್ಲಿ ಶಂಕ್ರಣ್ಣನ ಪಾತ್ರವನ್ನು ನಿರ್ವಹಿಸಿ ಎಲ್ಲರ ಮೆಚ್ಚುಗೆ ಕೂಡ ಪಡೆದಿದ್ದಾರೆ.

ಲಕ್ಷ್ ರವರ ಚಿಕ್ಕಪ್ಪನವರಾದ ಖ್ಯಾತ ಪತ್ರಕರ್ತ ಶಿವಾನಂದ ತಗಡೂರು ರವರ ಸಲಹೆಯ ಮೇರೆಗೆ ನಟನೆಯಲ್ಲಿ ನೈಪುಣ್ಯತೆಯನ್ನು ಪಡೆಯುವ ಉದ್ದೇಶದಿಂದ ನವರಸ ನಟನಾ ಅಕಾಡೆಮಿಯಲ್ಲಿ ನಟನಾ ಕಾರ್ಯಾಗಾರಕ್ಕೆ ಸೇರಿಕೊಂಡು ಮತ್ತಷ್ಟು ಅನುಭವ ಪಡೆಯುತ್ತಿದ್ದಾಗ ನಿರ್ದೇಶಕ ನಂಜುಂಡೇಗೌಡ ರವರ ಕಣ್ಣಿಗೆ ಬಿದ್ದು ಅವರ “ಮೈ ಚಿಲ್ಡ್ರನ್ಸ್ ಅಟ್ ಜಿಮೇಲ್ ಡಾಟ್ ಕಾಮ್” ಎಂಬ ಚಿತ್ರದಲ್ಲಿ ಹಿರಿಯ ಕಲಾವಿದರಾದ ಹನುಮಂತೇಗೌಡರ ಎದುರು ನ್ಯೂಸ್ ಆಂಕರ್ ಪಾತ್ರವನ್ನು ನಿರ್ವಹಿಸುವ ಅವಕಾಶ ದೊರೆಯಿತು. ನಂತರ “ನಸಾಬ್” ಹಾಗು ನಟ ವಿಜಯ ರಾಘವೇಂದ್ರ ಜೊತೆ “ಕಾಸಿನ ಸರ” ಚಿತ್ರದಲ್ಲಿ ನಟಿಸುವ ಮತ್ತೆರಡು ಅವಕಾಶ ಒದಗಿಬಂತು. ಪ್ರಸ್ತುತ ಲಕ್ಷ್ ನಟ ರವಿಚಂದ್ರನ್ ರವರು ನಟಿಸುತ್ತಿರುವ “ಜಡ್ಜ್ ಮೆಂಟ್” ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

ನಟನೆಯನ್ನೇ ಕನಸು ಮನಸಲ್ಲೂ ನೆನೆದು ಅದರಲ್ಲೇ ತಮ್ಮನ್ನು ತಾವು ಸಮರ್ಪಿಸಿಕೊಂಡಿರುವ ನಟ ಲಕ್ಷ್ ರಿಗೆ ಇನ್ನೂ ಹೆಚ್ಚಿನ ಅವಕಾಶಗಳನ್ನು ಒದಗಿ ಬಂದು ಜನಪ್ರಿಯ ನಟನಾಗಲೆಂದು ಸಾಹಿತ್ಯಮೈತ್ರಿ ತಂಡದಿಂದ ಹಾರೈಸುತ್ತೇವೆ.

ಸಾಹಿತ್ಯಮೈತ್ರಿ ತಂಡ

Related post

2 Comments

  • I wish you a all the very best

  • ಹ್ಯಾಪಿ ಯುವರ್ ಲೈಫ್ ಸಕ್ಸೆಸ್ಫುಲ್ಲಿ ಇವರು ಫಿಲಂ ಇಂಡಸ್ಟ್ರಿ

Leave a Reply

Your email address will not be published. Required fields are marked *