ಕಾಡುವ ತೇಜಸ್ವಿ ನೆನಪಿನಲ್ಲಿ – ಅನಂತ್ ಕುಣಿಗಲ್

ಕಾಡುವ ತೇಜಸ್ವಿ ನೆನಪಿನಲ್ಲಿ – ಅನಂತ್ ಕುಣಿಗಲ್

ಸಂಕಟ ಅಂದ್ರೆ ಏನ್ ಗೊತ್ತಾ??

ನನ್ನಿಷ್ಟದ ಲೇಖಕನನ್ನ ನೇರವಾಗಿ ಭೇಟಿಯಾಗೋಕೆ ಆಗದೆ ಇರೋದು! ಏಕಲವ್ಯನಿಗೆ ದ್ರೋಣ ಹೇಗೋ.. ಸಾಹಿತ್ಯ ಲೋಕದಲ್ಲಿ ನನಗೆ ತೇಜಸ್ವಿಯೂ ಹಾಗೇ.. ಏಕಲವ್ಯ ದ್ರೋಣನನ್ನ ನೋಡಿದ್ದ. ಆದರೆ ಅನಂತ, ತೇಜಸ್ವಿಯವರನ್ನ ನೋಡೋಕ್ ಆಗಿಲ್ಲ. ಅವರ ಬರಹ-ಬದುಕಿನ ಸ್ಪೂರ್ತಿಯಿಂದ ಅನಂತನೊಳಗೊಬ್ಬ ತೇಜಸ್ವಿ ಸದಾ ಜೀವಂತದಿಂದಿರುತ್ತಾರೆ.

ಕಾಡು-ಗುಹೆ, ಬೆಟ್ಟ-ಗುಡ್ಡ, ಹಳ್ಳ-ಕೊಳ್ಳ, ಮರ-ಗಿಡ-ಹುಲ್ಲು, ಹುಳ-ಉಪ್ಪಟ್ಟೆಗಳ ಜಂತು ಜಂತುವಿನಲ್ಲೂ ತೇಜಸ್ವಿಯ ಪರಿಸರದ ಕೂಗು ಕೇಳಿಸುತ್ತದೆ. ಮನುಷ್ಯ ಅಂದ್ರೆ ಹೀಗೆ ಜಾಲಿಯಾಗಿ ಇರ್ಬೇಕಪ್ಪಾ ಅಂತ ತೋರಿಸಿಕೊಟ್ಟವರು ನಮ್ಮ ತೇಜಸ್ವಿಯವರು. ಸಾಹಿತಿಯಾಗಿ, ಪರಿಸರ ಪ್ರೇಮಿಯಾಗಿ, ಸಾಮಾಜಿಕ ಚಿಂತಕನಾಗಿ, ಬೇಟೆಗಾರನಾಗಿ, ಕೃಷಿಕನಾಗಿ, ಛಾಯಾಗ್ರಾಹಕನಾಗಿ ನಮ್ಮನ್ನೆಲ್ಲ ಬಹುವಾಗಿ ಆವರಿಸಿದ್ದಾರೆ. “ಕೃಷ್ಣೇಗೌಡನ ಆನೆ, ಅಬಚೂರಿನ ಪೋಸ್ಟಾಫೀಸು, ಕಿರಗೂರಿನ ಗಯ್ಯಾಳಿಗಳು, ಡೇರ್ ಢೆವಿಲ್ ಮುಸ್ತಫಾ, ಜುಗಾರಿ ಕ್ರಾಸ್, ಚಿದಂಬರ ರಹಸ್ಯ, ಕರ್ವಾಲೋ, ಮಹಾಪಲಾಯನ, ಅಣ್ಣನ ನೆನಪು… ಹೀಗೆ ಪ್ರತಿ ಕೃತಿಯಲ್ಲೂ ಅದಮ್ಯ ಚೈತನ್ಯವೊಂದನ್ನು ನಮಗಾಗಿ ಅಕ್ಷರಗಳ ಮೂಲಕ ಉಳಿಸಿಹೋಗಿರುವ ತೇಜಸ್ವಿ ಎಂದಿಗೂ ನಮಗೆ ಬ್ರಾಂಡ್ ಕಣ್ರೀ…

ಅವರು ನಮ್ಮೊಂದಿಗಿದ್ದಿದ್ದರೆ ನಾನೇ ಅವರ ಕಾರ್ ಡ್ರೈವರ್ ಆಗಿಬಿಡ್ತಿದ್ದೆ ಅನ್ಸುತ್ತೆ. ಯಾಕಂದ್ರೆ ಆ ಆಪ್ತ ಜೀವದ ಜೊತೆ ಯಾರಿಗೆ ತಾನೆ ಸಮಯ ಕಳಿಬೇಕು ಅನ್ಸೋದಿಲ್ಲ ಹೇಳಿ??. ಅಷ್ಟು ಭಂಡತನ, ಧೈರ್ಯ, ಸಹನೆ, ತಾಳ್ಮೆ, ಶಿಸ್ತು, ಸಂಯಮ ಎಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ ರುಬ್ಬಿದಾಗ ಬರುವ ಒಂದು ಹೊಸ ಮಾಂತ್ರಿಕ ಶಕ್ತಿ ಅವರಲ್ಲಿತ್ತು. ಇದ್ದಷ್ಟು ದಿನ ಯಾರಿಗೂ ನೋವು ಮಾಡಲಿಲ್ಲ. ಕೊನೆಯುಸಿರಿನ ತನಕವೂ ಪರಿಸರಕ್ಕಾಗಿಯೇ ಹೋರಾಡಿದ ಆ ಜೀವ ನನಗೆ ಇನ್ನಿಲ್ಲದ ಸ್ಪೂರ್ತಿ. ಈ ದಿನ ಅವರ 84 ನೇ ವರ್ಷದ ಹುಟ್ದಬ್ಬ. ಆ ನೆನಪಿಗೆ ಒಂದೊಳ್ಳೆ ಪುಸ್ತಕ ಓದೋಣ, ತೇಜಸ್ವಿ ವಿಚಾರಗಳನ್ನ ಹಂಚೋಣ, ಕನಿಷ್ಠ ಒಂದೊಂದು ಗಿಡ ನೆಟ್ಟು ಪೊರೆಯೋಣ. ತೇಜಸ್ವಿಯ ಹಾಗೆ ಬದುಕದಿದ್ದರೂ… ಅವರು ನಡೆದ ದಾರಿಯಲ್ಲಿ ಅವರ ವಿಚಾರಗಳೊಂದಿಗೆ ಸಾಗೋಣ ಮತ್ತು ಸಾರೋಣ..

ಜೈ ಡೇರ್ ಡೆವಿಲ್ ಮುಸ್ತಫಾ..

ಅನಂತ್ ಕುಣಿಗಲ್

Related post

Leave a Reply

Your email address will not be published. Required fields are marked *