ಕಾಣೆಯಾದಿರೆಲ್ಲಿ?
ಮಗುವಿನಂದದಿ ಬಂದು
ಚಂದದಲಿ ಹೆಗಲೇರಿ,
ತೋಳಲ್ಲಿ ನಾ ಬಳಸುವಾ
ಮುನ್ನವೇ ಹೀಗೇಕೆ
ನೀವು ಕಾಣೆಯಾಗುವಿರಿ?
ಕೈಗೆ ಸಿಕ್ಕಿಯೇ ಬಿಟ್ಟಿತೆಂದು
ಕಾಣುವ ನೀರಗುಳ್ಳೆಯಂತೆ,
ಒಮ್ಮೆ ಕಣ್ಮುಂದೆ ಬಂದು
ಮತ್ತೊಂದು ಕ್ಷಣದಲೇಕೆ
ಮಾಯವಾಗುತ್ತಿರುವಿರಿ ?
ಹಳೆಯ ಹೆಂಚಿನ ಮನೆಯ
ಸಂದಿಯಿಂದ ಇಣುಕುವ
ಬಿಸಿಲು ಕೋಲಿನಂತೆ,
ಸಿಕ್ಕಿಯೂ ಸಿಗದಂತೆನ್ನ
ಹೀಗೇಕೆ ಸತಾಯಿಸುತ್ತಿರುವಿರಿ?
ಮಳೆಹನಿಯುದುರಲು,
ಆಗಸದಂಚಿನಲಿ ಬಣ್ಣ
ಬಣ್ಣದಿ ಮೂಡಿ, ಮನದಲಾಸೆ
ತೋರಿ ಮೋಸಗೊಳಿಸುವ
ಕಾಮನಬಿಲ್ಲಿನಂತೇಕಾದಿರಿ ?
ಹೇಳಿಬಿಡಿ ಒಮ್ಮೆ ನೀವೆಂದು
ಬರುವಿರೆನ್ನೆಡೆಗೆ, ಚಂದದ
ಕವಿತೆ ನೀವಾಗಲು ನನ್ನ
ಸುಂದರ ಕನಸಿನ ಅಂದದ
ಪದಗಳೆ !!
ಶ್ರೀವಲ್ಲಿ ಮಂಜುನಾಥ