ಕಿನ್ನಾಳ ಚಿತ್ತಾರ ಕಲೆ ಹಾಗು ಕಲಾವಿದರು

ಕಳೆದ ವಾರ ನಮ್ಮ ಸಂಸ್ಕೃತಿಯ ಹೆಮ್ಮೆಯ ಕಲೆ ಚನ್ನಪಟ್ಟಣದ ಬೊಂಬೆಯ ಬಗ್ಗೆ ಓದಿದ್ದೀರಿ. ಈಗ ಕಲೆ ಸಂಸ್ಕೃತಿಯ ಅಳಿವಿನಂಚಿನಲ್ಲಿದ್ದು ಈಗ ಕೇಂದ್ರ ಸರ್ಕಾರದ ಕೃಪೆ ಯಿಂದ ಮತ್ತೆ ಪುನರ್ಉದಯಿಸುತ್ತಿರುವ ಕಿನ್ನಾಳ ಕಲೆ ಹಾಗು ಅದನ್ನೇ ನೆಚ್ಚಿಕೊಂಡಿರುವ ಕಲಾವಿದರ ಬಗ್ಗೆ ತಿಳಿಯೋಣ.

ವಿಜಯನಗರ ಸಾಮ್ರಾಜ್ಯವು ಒಂದು ಕಾಲದಲ್ಲಿ ಇಡೀ ದಕ್ಷಿಣ ಭಾರತಕ್ಕೇ ಧಾರ್ಮಿಕ ರಕ್ಷಣೆಯನ್ನು ಕೊಟ್ಟ ಕರ್ನಾಟಕದ ರಾಜಮನೆತನ. ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯಂತೆ ಕುಸರಿ ಕಲೆಯು ಆ ಕಾಲದಲ್ಲಿ ಪ್ರಾಮುಖ್ಯತೆಯನ್ನು ಪಡೆದಿತ್ತು. ವಿಜಯನಗರ ಮಹಾ ಸಂಸ್ಥಾನದ ಪತನದ ನಂತರ ಆ ಸಮಯದಲ್ಲಿ ಬೇರೂರಿದ್ದ ಕಲಾವಿದರೆಲ್ಲ ಭಾರತಾದ್ಯಂತ ಚದುರಿಹೋಗಿ ವಿವಿಧ ಸ್ಥಳಗಳಲ್ಲಿ ಆಯಾ ಪ್ರಾಂತ್ಯಕನುಗುಣವಾಗಿ ನೆಲೆ ಕೊಂಡುಕೊಂಡರು. ಇದರಲ್ಲಿ ಕಿನ್ನಾಳ ಕುಸರಿ ಕಲೆಯು ಒಂದು.

ಕಿನ್ನಾಳ ಕಲೆ…! ಇವು ಎಲ್ಲೋ ಕಂಪ್ಯೂಟರಿನ ಕಿಟಕಿಗಳಲ್ಲಿ ಮೂಡುವ ಚಿತ್ರಗಳಲ್ಲ, ಮಷೀನುಗಳು ಉತ್ಪಾದಿಸುವ ಆಕೃತಿಗಳೂ ಅಲ್ಲ, ಈ ದೇಸೀ ಕಲಾರಚನೆ ಹೊರಹೊಮ್ಮುವುದೇ ಅದ್ಭುತವಾದ ಕೈಚಳಕಗಳಿಂದ. ಇಲ್ಲಿ ಯಂತ್ರಗಳ ಬಳಕೆಯಿಲ್ಲ ಚೀನೀ ಆಟಿಕೆಗಳಂತೆ ಇವು ಬೇಗನೆ ಪಟಕ್ಕೆಂದು ಮುರಿಯುವುದೂ ಇಲ್ಲ. ಮಾರುಕಟ್ಟೆಯಲ್ಲಿ ತನ್ನ ಕಲಾಕರ್ಷಣೆ, ಗಟ್ಟಿತನದಿಂದಲೇ ದೇಶೀಯವಾಗಿ ಬ್ಯಾಂಡ್ ಆದ ಕಲೆ ಕಿನ್ನಾಳ, ಇಂದು ಬಡವರ ಮನೆಯ ಕಿಟಕಿಗಳಿಂದ ಹಿಡಿದು ಸಿರಿವಂತರ ಮನೆಯ ಶೋಕೇಸ್ ವರೆಗೂ ಅಲಂಕೃತಗೊಂಡ ಕಿನ್ನಾಳ ಕಲೆ ತನ್ನದೇ ಆದ ಮಾರುಕಟ್ಟೆಯನ್ನು ಕಟ್ಟಿಕೊಂಡಿದೆ. ಹುಣಸೆ ಬೀಜ, ಸಣುವ ಚಿಂದಿ, ಮರದ ಧೂಳು, ಉರುಟು ಕಲ್ಲುಗಳು, ಸ್ಥಳೀಯವಾಗಿ ಸಿಗುವ ಇಂಥ ಕಚ್ಚಾವಸ್ತುಗಳಿಂದಲೇ ಅರಳುವ ಕಿನ್ನಾಳ ಕಲೆಗೆ ಅಲ್ಪ ಬಂಡವಾಳ ಸಾಕು. ನೈಸರ್ಗಿಕ ಬಣ್ಣಗಳಿಂದ ಇವು ಅಂದ ಪಡೆದು ಮಾರುಕಟ್ಟೆ ಸೇರುತ್ತವೆ. ಮಷೀನುಗಳು ಒಂದೇ ತಾಸಿನಲ್ಲಿ ನೂರಾರು ಆಟಿಕೆ ತಯಾರಿಸಿದರೆ, ಇಲ್ಲಿ ಒಬ್ಬ ಕಲಾವಿದ ಹತ್ತು ದಿನ ಕುಳಿತು ಒಂದು ಆಟಿಕೆ ತಯಾರಿಸುತ್ತಾನೆ. ಹಾಗಾಗಿ, ಈ ಆಟಿಕೆಗಳಿಗೆ ಬೆಲೆ ಸಹಜವಾಗಿಯೇ ಹೆಚ್ಚಾಗಿರುತ್ತದೆ.. ಸುಮಾರು ಅರವತ್ತು ಕುಟುಂಬಗಳು ಈ ಕಲೆಯನ್ನೇ ನಂಬಿ ಬದುಕುತ್ತಿದ್ದು ‘ಕಾರ್ಯಕ್ರಮಗಳ ಸ್ಮರಣಿಕೆ ಫಲಕಗಳು, ಬೊಂಬೆಗಳು, ಮಣೆಗಳು, ದೇವರ ಮೂರ್ತಿ, ಹಳ್ಳಿ ಸೊಗಡಿನ ಕಲಾಕೃತಿ ಗಳಾದ ಬಂಡಿ, ಎತ್ತು, ರೈತ ಮಹಿಳೆ, ನೇಗಿಲು, ಒಕ್ಕಲು, ಮಡಿಕೆ, ಕುಡಿಕೆ, ಬೀಸುಗಲ್ಲು, ಪ್ರಾಣಿ-ಪಕ್ಷಿಗಳ ಕಲಾರಚನೆಗಳಿಗೆ ಹೆಚ್ಚು ತಯಾರಿಸುತ್ತಾರೆ ಮತ್ತು ಈ ಕಲೆಗಳಿಗೆ ಬೇಡಿಕೆಯೂ ಹೆಚ್ಚು.

ನಮ್ಮ ಕಿನ್ನಾಳದ ಆಟಿಕೆ, ಮೂರ್ತಿ, ಬಗೆ ಬಗೆಯ ವಸ್ತುಗಳು ಹೊರರಾಜ್ಯಗಳಲ್ಲೂ ಮಾರಾಟಗೊಳ್ಳುತ್ತಿವೆ. ಕಿನ್ನಾಳದಲ್ಲಿ ತಯಾರಾಗುವ ಬೊಂಬೆಗಳಿಗೆ ರಾಜಸ್ಥಾನ, ಮಹಾರಾಷ್ಟ್ರ ದೆಹಲಿ, ಬೆಂಗಳೂರು, ಮೈಸೂರು ಭಾಗಗಳಲ್ಲಿ ಹೆಚ್ಚು ಬೇಡಿಕೆಯಿದೆ. ಮುಂಗಡ ಹಣ ನೀಡಿ ಖರೀದಿಸುವವರೂ ಇದ್ದಾರೆ.’ ಗದಗ, ಬಳ್ಳಾರಿ, ಬಾಗಲಕೋಟೆ ಸೇರಿದಂತೆ ಇತರೆ ಭಾಗದ ಜಾತ್ರೆ, ಉತ್ಸವಗಳಲ್ಲಿ, ದೀಪಾವಳಿಯಲ್ಲಿ ಲಕ್ಷ್ಮೀ, ದಸರಾದಲ್ಲಿ ನವ ದುರ್ಗೆಯರು, ಮೊಹರಂನಲ್ಲಿ ಮಣಿಗಳು ಹೀಗೆ ಈ ಕಲೆ ನಾನಾ ಅವತಾರ ತಾಳುತ್ತದೆ. ಚಿತ್ರಕಾರರ ಕುಟುಂಬವು ಮಾಸಿಕವಾಗಿ ಹತ್ತರಿಂದ ಇಪ್ಪತ್ತು ಸಾವಿರ ರೂ. ಆದಾಯ ಪಡೆಯುತ್ತಿದೆ. ಕರಕುಶಲ ನಿಗಮದ ಮೂಲಕ ನಾವು ತಯಾರಿಸಿದ ಆಟಿಕೆಗಳ ಖರೀದಿ ಮಾಡಿದರೆ ನಮಗೆ ನೆರವಾಗಲಿದೆ ಎಂದು ಈ ಕಲಾವಿದರು ಅಭಿಪ್ರಾಯಪಡುತ್ತಾರೆ.

ಕೊಪ್ಪಳದ ಆಟಿಕೆಗಳ ತಯಾರಿಕಾ ಸಮೂಹಕ್ಕೆ ಮರುಜೀವ

ಪ್ರಧಾನ ಮಂತ್ರಿಗಳ ಪ್ರಸ್ತಾಪದ ಬೆನ್ನಿಗೇ ಮುಖ್ಯಮಂತ್ರಿಗಳು ಸ್ಪಂದನೆಯನ್ನು ವ್ಯಕ್ತಪಡಿಸಿದ್ದು ದೇಶದ ಮೊಟ್ಟ ಮೊದಲ ಹಾಗೂ ಬೃಹತ್ ಆಟಿಕೆ ತಯಾರಿಕೆ ಕ್ಲಸ್ಟರ್ ಒಂದನ್ನು (cluster) ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ೪೦೦ ಎಕರೆ ಪ್ರದೇಶದ ವಿಶೇಷ ಆರ್ಥಿಕ ವಲಯದಲ್ಲಿ ರೂಪುಗೊಳ್ಳುತ್ತಿದೆ. ಬಹುತೇಕ ಈ ವರ್ಷಾಂತ್ಯಕ್ಕೆ ಉತ್ಪಾದನೆ ಆರಂಭಿಸುವ ಸಾಧ್ಯತೆ ಇದ್ದು ದೇಶದಲ್ಲಿ ಆಟಿಕೆ ಉದ್ಯಮ ಅಭಿವೃದ್ಧಿಗೆ ಇರುವ ವಿಫುಲ ಅವಕಾಶಗಳನ್ನು ಬಳಸಿಕೊಂಡು ಭಾರತವನ್ನು ಜಾಗತಿಕ ಆಟಿಕೆ ಉದ್ಯಮದ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಬಹುದಾಗಿದೆ. ಭಾರತದಲ್ಲಿ ಕೆಲವೊಂದು ಕ್ಷೇತ್ರಗಳು ಕ್ಲಸ್ಟರ್(ಆಟಿಕೆ ಸಮೂಹ)ಗಳಾಗಿ ಗುರುತಿಸಿ ಕೊಂಡಿವೆ ಎಂದು ಪ್ರಧಾನಿ ಮೋದಿ ‘ಮನ್ ಕಿ ಬಾತ್’ನಲ್ಲಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ಆಟಿಕೆ ತಯಾರಿಕೆಯನ್ನು ಉಲ್ಲೇಖಿಸಿ ಮಾತನಾಡಿದ್ದರು. ಇದರ ಬೆನ್ನಲ್ಲೇ ಕೊಪ್ಪಳದಲ್ಲಿ ದೇಶದ ಮೊದಲ ಆಟಿಕೆ ಉತ್ಪಾದನಾ ಕ್ಲಸ್ಟರ್ ಪ್ರಾರಂಭಿಸಲಾಗುತ್ತಿದೆ. ಈ ಮೂಲಕ ಕೊಪ್ಪಳ ಈಗ ದೇಶದ ಗಮನ ಸೆಳೆದಿದೆ.

‘ಕೊಪ್ಪಳದ ವಿಶೇಷ ಆರ್ಥಿಕ ವಲಯದಲ್ಲಿ ಸುಮಾರು ೫ ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ನಿರೀಕ್ಷೆಯಿದೆ. ಮುಂದಿನ ಐದು ವರ್ಷಗಳಲ್ಲಿ ನಲವತ್ತು ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ಆಟಿಕೆ ಉದ್ಯಮಕ್ಕೆ ಉತ್ತಮ ಭವಿಷ್ಯವಿದ್ದು ಸದ್ಯ ವಾರ್ಷಿಕ ೧,೨೦೦ ಕೋಟಿ ರೂ.ಗಳ ವಹಿವಾಟು ನಡೆಯುತ್ತಿದೆ. ೨೦೨೩ರ ವೇಳೆಗೆ ೨೩೦೦ ಕೋಟಿ ರೂ. ವಹಿವಾಟು ನಡೆಯುವ ಸಾಧ್ಯತೆಗಳಿವೆ. ವಿಶೇಷ ಆರ್ಥಿಕ ವಲಯಗಳ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಏಕಸ್ ಕಂಪನಿಯು ಕೊಪ್ಪಳದ ಕುಕನೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ ೬೩ರ ಬಳಿ ೪೦೦ ಎಕರೆಯ ವಿಶೇಷ ಆರ್ಥಿಕ ವಲಯ ಅಭಿವೃದ್ಧಿ ಎಕರೆ ಪ್ರದೇಶದ ಕೆಲಸದಲ್ಲಿ ನಿರತವಾಗಿದೆ. ಗ್ರಾಹಕರ ಸರಳ ಸಂಪರ್ಕಕಕ್ಕಾಗಿ ಬೆಳಗಾವಿ ವಿಮಾನ ನಿಲ್ದಾಣ ಯೋಜನೆಯನ್ನೂ ರೂಪಿಸಿದೆ. ಹೂಡಿಕೆಯಾಗಲಿರುವ ಮೊತ್ತ ೫೦೦ ಕೋಟಿ ರೂಪಾಯಿ ಆಟಿಕೆ ಉದ್ಯಮದ ೧೮% ಪ್ರಗತಿ ಹೊಂದಲಿದ್ದು ಗೊಂಬೆಗಳ ಉತ್ತಮ ವ್ಯಾಪಾರಕ್ಕಾಗಿ ೨೦೨೩ರೊಳಗೆ ಮಾರುಕಟ್ಟೆಯ ಗಾತ್ರ. ಈ ಕ್ಷೇತ್ರದಲ್ಲಿ ಸುಮಾರು ೫ ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯಾಗುವ ನಿರೀಕ್ಷೆಯಿದೆ.

ಈ ಸುಸಮಯದಲ್ಲಿ ಸುಮಾರು ಸುಧಾರಣೆಗಳಾಗಬೇಕಿದೆ. ಈ ಕಲಾವಲಯದಲ್ಲಿ ಮೊದಲಿನ ಹಾಗೆ ಇಲಿನ್ಲ ಕಲಾವಿದರಲ್ಲಿ ಸಂಘಟನೆ ಇಲ್ಲ.ಕೆಲವರು ತಾವೂ ಚಿತ್ರಗಾರರೆಂದು ಹೇಳಿಕೊಂಡು ಕೆಲಸಗಳನ್ನು ಪಡೆಯುತ್ತಾರೆ ಮತ್ತು ಅಂಥವರು ಬೇರೆ ಕಲಾವಿದರಿಂದ ಕಲಾಕೃತಿಗಳನ್ನು ಪಡೆದು ಮಾರಿಕೊಳ್ಳುತ್ತಾರೆ ಇದರಿಂದ ಮೂಲ ಕಲಾವಿದನಿಗೆ ದೊರೆಯಬೇಕಾದ ಮೌಲ್ಯ ಸಿಗುವುದಿಲ್ಲ. ಇತ್ತೀಚೆಗೆ ಇಂಥಾ ಮಾತು ಕಲಿತ ಮಧ್ಯವರ್ತಿಗಳು ಹೆಚ್ಚಾಗಿದ್ದು ಅಂಥವರಿಂದ ಕಿನ್ನಾಳ ಕಲೆಯ ಕಲಾವಿದರು ಕಷ್ಟಕ್ಕೆ ಸಿಲುಕಿದ್ದಾರೆ. ಪರಂಪರೆಯನ್ನು ಉಳಿಸಿ ಎಂದು ಪ್ರಾಜ್ಞರು ಹೇಳುತ್ತಾರೆ. ಆದರೆ ಪರಂಪರೆಯನ್ನು ಉಳಿಸಿದರೆ ನಮಗೇನು ಸಿಗುತ್ತದೆ ಎನ್ನುತ್ತಾರೆ ಇಂದಿನ ಯುವಕರು.

‘ಕಲಾವಿದರಿಗೆ ಆಪ್ತ ಸಮಾಲೋಚನೆ ದೊರೆಯಬೇಕು. ಸ್ವಸಹಾಯ ಸಂಘಗಳ ರೂಪದಲ್ಲಿ ಹಣದ ನೆರವು ಸಿಗಬೇಕು. ವೃತ್ತಿ ದೌರ್ಬಲ್ಯವಿರುವ ಕಡೆ ಹೊಸ ವಿನ್ಯಾಸಗಳ ರಚನೆಗೆ ವೇದಿಕೆ ನಿರ್ಮಾಣವಾಗಬೇಕು. ಕಿನ್ನಾಳ ಕಲೆಯ ಆಳವಾದ ಅಧ್ಯಯನವಾಗಬೇಕು, ದಾಖಲೀಕರಣವಾಗಬೇಕು. ಈ ಕಲಾವಿದರು ಕೇವಲ ಕಲೆಯಿಂದ ಮಾತ್ರ ಬದುಕು ನಡೆಸುವ ಆತ್ಮ ಸ್ಥೈರ್ಯವನ್ನು ಪಡೆಯುವಂತಾಗಬೇಕು. ಆಧುನಿಕ ಕಲಾ ಮಾಧ್ಯಮಗಳ ಮೊರೆ ಹೋಗಿ ಇವರು ವಾರ್ನಿಷ್, ಎನಾಮಲ್ ಮೊದಲಾದ ರಸಾಯನಿಕ ಬಣ್ಣಗಳನ್ನು ಬಳಸಿ ಕಲೆಯ ಮೂಲ ರೂಪವನ್ನೇ ಬದಲಾಯಿಸುತ್ತಿದ್ದಾರೆ. ಮೂಲ ರೂಪದ ಕಲಾಕೃತಿಗಳಿಗೆ ಎಂದಿಗೂ ಬೆಲೆ ಇದೆ ಆದರೆ ಅಂಥಾ ಕೃತಿಗಳ ತಯಾರಿಕೆ ಆಗುತ್ತಿಲ್ಲ’ . ಗ್ರಾಮೀಣ ಪ್ರದೇಶದ ದೇವರುಗಳು ಅರಳ ಬೇಕಾದದ್ದು ನಮ್ಮ ಕೈಯಲ್ಲೇ ಇದೆ ಮಾನವ ಗಾತ್ರದ ಕಾಷ್ಟ ಶಿಲ್ಪಗಳನ್ನು ನಾವೇ ತಯಾರಿಸಬೇಕು ಕಿನ್ನಾಳ ಕಲೆಗೆ ಪುನಶ್ಚೇತ ಬೇಕಷ್ಟೇ, ಕಿನ್ನಾಳ ಕಲೆಗೆ ಅವನತಿ ಇಲ್ಲ. ಕಿನ್ನಾಳ ಚಿತ್ರಗಾರರ ಕಾಲೋನಿಯ ಹಿರಿಯ ಕಲಾವಿದರು “ಹಂಪಿಯ ಪ್ರವಾಸಿ ಬಸ್ ವಾರಕ್ಕೆ ಎರಡು ಬಾರಿ ನಮ್ಮೂರಿಗೆ ಬರುತ್ತಿತ್ತು, ಪ್ಯಾಕೇಜ್ ಪ್ರವಾಸಿ ಪಟ್ಟಿಯಲ್ಲಿ ನಮ್ಮೂರೂ ಇತ್ತು, ವಿದೇಶೀಯರು ಒಂದೆರಡು ದಿನ ನಮ್ಮಲ್ಲಿ ಉಳಿದು ನಮ್ಮ ಕಲೆಯ ಬಗ್ಗೆ ಮಾಹಿತಿ ಪಡೆದು ಹೋಗುತ್ತಿದ್ದರು, ಈಗ ಹಿರೇಹಳ್ಳದಲ್ಲಿ ಒಡಲು ಬಗೆದು ಮರಳು ತುಂಬಿಕೊಳ್ಳಲು ದೈತ್ಯ ಟಿಪ್ಪರ್ಗಳು ಓಡಾಡುತ್ತಿವೆ” ಎಂದು ಬಹಳ ನಿರಾಸೆಯಿಂದ ಹೇಳಿಕೊಳ್ಳುತ್ತಾರೆ. ಇಂದು ಬಹುತೇಕ ಎಲ್ಲ ಚಿತ್ರಕಾರರೂ ಚೆದುರಿ ಹೋಗಿದ್ದಾರೆ. ಖರೀದಿ ಕೇಂದ್ರ, ತರಬೇತಿ ಇಲಾಖೆ ಎಲ್ಲವೂ ಮುಚ್ಚಿ ಹೋಗಿವೆ. ಇಂದಿನ ತಲೆಮಾರಿನ ಯುವಜನತೆ ಈ ಕಲೆಯಿಂದ ವಿಮುಖರಾಗಿ ಹೊಸ ಸಂಪಾದನೆಗಳತ್ತ ಮುಖ ಮಾಡಿದ್ದಾರೆ. ಕೊಪ್ಪಳದಲ್ಲಿ ಕೆಲವು ಕಲಾವಿದ ಕುಟುಂಬಗಳು ಬೆಳ್ಳಿ ಬಂಗಾರದ, ರಿಯಲ್ ಎಸ್ಟೇಟ್ ದಂದೆಗಳಲ್ಲಿ ಬಟ್ಟೆ ವ್ಯಾಪಾರಿಗಳಾಗಿದ್ದಾರೆ. ಇನ್ನೂ ಕೆಲವರು ಸರ್ಕಾರಿ ಉದ್ಯೋಗ ಅರಸಿ ಹೋಗಿದ್ದಾರೆ. ಬದುಕು ಕಷ್ಟವಾಗಿ ಅವರ ಕಲಾ ಪರಂಪರೆಯ ಉಳಿವಿಗೆ ಹಸಿವು ಸಹಕರಿಸುತ್ತಿಲ್ಲ. ಮಧ್ಯವರ್ತಿಗಳು ಕಲೆಯನ್ನು ಅಳಿವಿನ ಅಂಚಿಗೆ ತಳ್ಳಿದ್ದಾರೆ ಇವರ ಜೊತೆಗೆ ಅವರ ದುಶ್ಚಟಗಳ ಅಮಲೂ ಕೂಡಾ ಬಿಡುತ್ತಿಲ್ಲ. ಹೊಸ ತಲೆಮಾರಿನ ಕಲಾವಿದರು ಸಮಕಾಲೀನ ಕಲೆಗಳತ್ತ ವಾಲಿದರು. ಮೂರು ವರ್ಣಗಳ ಬದಲಾಗಿ ಮಾರುಕಟ್ಟೆಯಲ್ಲಿ ಸಿಗುವ ಆಧುನಿಕ ಬಣ್ಣಗಳನ್ನು ಬಳಸಿದರು ಎನಾಮಲ್ ಪೈಂಟ್, ವಾರ್ನಿಷ್, ಇತ್ಯಾದಿ. ಇದರಿಂದ ಕಿನ್ನಾಳ ಕಲೆಯ ಮೂಲ ಸ್ವರೂಪ ಬದಲಾಗುತ್ತಾ ಹೋಯಿತು.

ಈ ಹೊತ್ತಿನ ಕಲಾಶಿಕ್ಷಣ ಸಂದರ್ಭದಲ್ಲಿ ನಮ್ಮ ನಾಡಿ ಸಾಂಪ್ರದಾಯಿಕ ಕಲೆಯ ಪರಂಪರೆಯನ್ನು ಅಧ್ಯಯನ ಮಾಡುವುದು ಬಹು ಮುಖ್ಯವಾದ ಅಗತ್ಯ. ಈ ನೆಲದ ಸಂವೇದನೆಯ ಜೊತೆಗೆ ಹುಟ್ಟಿ ಬೆಳೆದ ಕಲಾಬುಡದ ಸಂಸ್ಕೃತಿಯ ದೃಶ್ಯಕಲಾ ಶೈಲಿಗಳು ಶತಶತಮಾನಗಳಿಂದ ಇಲ್ಲಿಯವರೆಗೂ ಸಾಗಿ ಬಂದಿರುವುದೇ ಕೌತುಕದ ವಿಷಯ. ದೃಶ್ಯ ಕಲೆಯ ಸರ್ವತೋಮುಖ ಬೆಳವಣಿಗೆಯ ದೃಷ್ಟಿಯಿಂದ ಜನಪದರ ಅಭಿವ್ಯಕ್ತಿ ಮಾಧ್ಯಮವಾದ ಸಾಂಪ್ರದಾಯಿಕ ಕಲೆಗಳ, ಎಲ್ಲ ಪ್ರಕಾರಗಳ ಕೌಶಲ್ಯವನ್ನು ಅಭ್ಯಸಿಸುವುದರಿಂದ ನಮ್ಮ ಕಲಾ ಶಿಕ್ಷಣದ ಕ್ಷೇತ್ರವನ್ನು ಪುನಶ್ಚೇತಗೊಳಿಸಬಹುದು. ಕೌಶಲ್ಯ ಗಳ ಪ್ರೇರಣೆ ನೀಡುವ ಉದ್ದೇಶಗಳನ್ನು ನಶಿಸಿಹೋಗುತ್ತಿರುವ ನಮ್ಮ ಜನಪದ, ಪರಂಪರೆಗಳ ದೇಸೀ ನೆಲೆಯ ವಿವಿಧ ಪ್ರಕಾರಗಳ ಅಧಿಕೃತ ಧ್ಯಾನಸ್ಥ ಕಲಾವಿದರ ಪರಿಣಿತಿಯನ್ನು, ಇತಿಹಾಸವನ್ನು ಮುಂದಿನ ತಲೆಮಾರಿಗೆ ಆಯಾ ಕಲಾ ಪ್ರಕಾರಗಳ ಹಿರಿಯ ಕಲಾವಿದರ ಕಲಾಕೌಶಲ್ಯವನ್ನು ಪ್ರಾತ್ಯಕ್ಷಿಕೆಯ ಮೂಲಕ ದಾಟಿಸುವ ವಿಶಿಷ್ಠ ಕೆಲಸವಾಗಬೇಕಿದೆ. ಇದರೊಟ್ಟಿಗೇ ಇಂಥಾ ಪರಂಪರಾಗತ ಕಲೆಯ ಎಲ್ಲ ಆಯಾಮಗಳನ್ನೂ ಒಳಹೊಕ್ಕು ಅವುಗಳ ತಾತ್ವಿಕತೆ, ಉದ್ದೇಶ ಅವುಗಳ ಅನನ್ಯತೆಗಳ ಬೌಧ್ಧಿಕ ಅಧ್ಯಯನ, ಸಂಶೋಧನೆಗಳ ಕಡೆಗೆ ನಮ್ಮ ಯುವ ಮನಸ್ಸುಗಳು ಈಗಲಾದರೂ ಗಮನ ಕೊಡಬೇಕಿದೆ.

ಮಾಹಿತಿ ಸಂಗ್ರಹ ಹಾಗು ಬರಹ : ಲಕ್ಷ್ಮೀನಾರಾಯಣ ಟಿ

ಚಿತ್ರ ಸಂಗ್ರಹ : ಗೂಗಲ್

Related post

1 Comment

  • ಸರ್ ನಿಮಗೆ ನನ್ನ ನಂಬರ ರೀಚ್ ಆದ್ರೆ ಕಾಲ್ ಮಾಡಿ ಸರ್ ನಾನು ಕಿನ್ನಾಳ ಕಲೆಯ ಬಗ್ಗೆ ಪ್ರೊಜೆಕ್ಟ್ ಮಾಡ್ತಾ ಇದೀನಿ 6363982663

Leave a Reply

Your email address will not be published. Required fields are marked *