ಕಿರಣ್ ನಾಯಕ್ ಬಹುಮುಖ ಪ್ರತಿಭೆ

ಲೇಖನ : ನಮಸ್ಕಾರ ಕಿರಣ್ ರವರೆ ನಿಮ್ಮ ಬಾಲ್ಯ ಹಾಗೂ ಹುಟ್ಟೂರಿನ ಬಗ್ಗೆ ಪರಿಚಯ ಮಾಡಿಕೊಡಿ.

ಕಿರಣ್ : ನಾನು ಹುಟ್ಟಿದ್ದು ತಾಳಗುಪ್ಪ ಎಂಬ ಊರಿನಲ್ಲಿ ಬೆಳೆದದ್ದು ಕರಾವಳಿ ಜಿಲ್ಲೆಯ ಹೊನ್ನಾವರದಲ್ಲಿ. ಕರಾವಳಿ ಜಿಲ್ಲೆ ಎಂದರೇ  ನದಿ, ಸಮುದ್ರ ಕಾಡುಗಳ ರಮಣೀಯ ತಾಣ. ನನ್ನ ತಂದೆಯವರು ಇಂಡಿಯನ್ ಪ್ಲೈ ವುಡ್ ಎಂಬ ಸಂಸ್ಥೆಯಲ್ಲಿ ಅರಣ್ಯ ವಿಭಾಗದಲ್ಲಿ ಕೆಲಸ ಮಾಡುತ್ತಿದರು. ಹಾಗಾಗಿ  ಓದಿದ್ದು ಹೊನ್ನಾವರದ ಸಂತ ಅಂತೋನಿ ಶಾಲೆಯಲ್ಲಿ. ಈಗ ಆ ಶಾಲೆಯಿಲ್ಲ ಕನ್ನಡ ಮಾಧ್ಯಮದಲ್ಲಿ ಓದುವವರ ಸಂಖ್ಯೆ ಇಳಿಮುಖವಾದ ಕಾರಣ ಶಾಲೆಯನ್ನು ಮುಚ್ಚಿಬಿಟ್ಟರು. ಇದು ನಿಜಕ್ಕೂ ಬೇಸರದ ವಿಷಯ.

ಲೇಖನ  : ನಟನೆಯ ನಂಟು ಹೇಗೆ ಹತ್ತಿಕೊಂಡಿತು?

ಕಿರಣ್ : ಸಣ್ಣ ವಯಸ್ಸಿನಲ್ಲಿಯೇ ಚದ್ಮ ವೇಷ ಸ್ಪರ್ಧೆ ಯಲ್ಲಿ ಭಾಗವಸಿದ್ದೆ ಅದು ನಮ್ಮ ಶಾಲಾ ಶಿಕ್ಷಕರಿಗೆ ಇಷ್ಟವಾಗಿ ಅವರ ಪ್ರೋತ್ಸಾಹದಿಂದ ತಾಲೂಕು ಮಟ್ಟದ ಚದ್ಮವೇಷ ಸ್ಪರ್ಧೆಯಲ್ಲಿ ಬಹುಮಾನಗಳು ಬಂದವು.ಶ್ರೀ ಧರ್ಮಸ್ಥಳ ಮಂಜುನಾಥೆಶ್ವರ ಕಾಲೇಜಿನಲ್ಲಿ ಓದುವಾಗ ನೀನಾಸಂ ನಾಟಕಗಳು ಪ್ರದರ್ಶನಕ್ಕೆ ಬರುತ್ತಿದವು. “ಟಿಪ್ಪು ಸುಲ್ತಾನ್ “ನಾಟಕದಲ್ಲಿ ಮೊದಲು ಒಂದು ಸಣ್ಣ ಪಾತ್ರದ ಮೂಲಕ ಬಣ್ಣ ಹಚ್ಚಿದು. ಅದನ್ನು ನಿರ್ದೇಶನ ಮಾಡಿದ್ದು ಕಿರಣ್ ಭಟ್ ಎಂಬುವವರು ಈಗ ಮಕ್ಕಳ ರಂಗಭೂಮಿಯಲ್ಲಿ ಇದ್ದಾರೆ. ಮುಂದೆ ನೀನಾಸಂ ನಾಟಕಗಳನ್ನು ನೋಡಿದ ಮೇಲೆ ಅವರ ವಿಭಿನ್ನ ಶೈಲಿಯು ನನ್ನನು ಆಕರ್ಷಸಿತು. ಮುಂದೆ ಅಲ್ಲಿಯ ಅಚ್ಯುತ್ ರಾವ್, ಶೈಲಶ್ರೀ  ಹಾಗೂ ದರ್ಮೆಂದ್ರ ಅರಸುರವರ ಪರಿಚಯವಾಯಿತು. ಅವರುಗಳ ಸಲಹೆಯ ಮೇರೆಗೆ ನೀನಾಸಂ ಆಯ್ಕೆಯಲ್ಲಿ ಬಾಗಿಯಾದೆ. ಅಲ್ಲಿ ಆಯ್ಕೆಯಾದರೆ ಒಂದು ವರ್ಷದ ಮೇರೆಗೆ  ಒಪ್ಪಂದ ಮಾಡಿಕೊಂಡು ಊಟದ ಹಾಗೂ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಡುತ್ತಾರೆ. ಈಗ ಉಚಿತ ವ್ಯವಸ್ಥೆ ಇಲ್ಲಾ ಸರ್ಕಾರದಿಂದ ಮುಂಚೆ ಅನುದಾನ ಸಿಗುತ್ತಿದ್ದು ಈಗ ನಿಂತಿದೆ. ಆದರಿಂದ ಆಯ್ಕೆಯಾದವರಿನಿಂದ ಸಣ್ಣ ಮೊತ್ತದ ಡೊನೇಷನ್ ತೆಗೆದುಕೊಳ್ಳುತ್ತಾರೆ ಆದರೆ ನಟನಾ ತರಬೇತಿ ಎಂದಿನಂತೆ ಇದೆ. ಅಲ್ಲಿ ನಟನೆಯ ತರಬೇತಿ ಪಡೆಯುತ್ತಿದ್ದಾಗ ಚಿದಂಬರ ರಾವ್ ಜಂಬೆ,  (ಪ್ರಾಂಶುಪಾಲರಾಗಿದ್ದರು) ಮಾಡಿಸಿದ ನಾಟಕ  “ಜೆಂಟಲ್ ಮ್ಯಾನ್ ಆಫ್ YTK”  ವೆಂಕಟರಮಣ ಐತಾಳರು ಮಾಡಿಸಿದ “ಹಂಸ ದಮಯಂತಿ” ಎಂಬ ನಾಟಕ , ಬಿ ವಿ ಕಾರಂತರು ಮಾಡಿಸಿದ “ಸತ್ರು ಅಂದ್ರೆ ಸಾಯ್ತಾರ” ನಾಟಕ   ಒಳ್ಳೆ ಅನುಭವ ಕೊಟ್ಟಿತು. ಇದರ ಜೊತೆಗೆ ಲಂಕೇಶ್ ಅವರ ಬಿರಕು ಕೃತಿಯನ್ನು ನಟರಾಜ್ ಹೊನ್ನವಳ್ಳಿ ಮಾಡಿಸಿದರು ಇವುಗಳ ಜೊತೆಗೆ “ತಿರುಗಾಟ” ಎಂಬ ಪ್ರಾಯೋಗಿಕ ಅಭಿನಯ ತರಬೇತಿಗೆ ನನ್ನನು ಆಯ್ಕೆ ಮಾಡಿದರು ಆದರೆ ನನಗೆ ದೆಹಲಿಯಲ್ಲಿರುವ  ರಾಷ್ಟ್ರೀಯ ನಾಟಕ ಶಾಲೆ (National School of Drama) ಯಲ್ಲಿ ಕಲಿಯಬೇಕೆಂದು ತುಂಬಾ ಆಸೆ ಇತ್ತು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಆಗಲಿಲ್ಲ. ಆದ್ದರಿಂದ “ತಿರುಗಾಟ” ಪ್ರಾಯೋಗಿಕ ತರಬೇತಿಗೆ ಮತ್ತೆ ಸೇರಿದೆ.

ಕು ಶಿ : ರಾಷ್ಟ್ರೀಯ ನಾಟಕ ಶಾಲೆ ಯಲ್ಲಿಯ ತರಬೇತಿಯ ಪ್ರಾಮುಖ್ಯತೆ ಹಾಗೂ ಉಪಯೋಗಗಳೇನು?

ಕಿರಣ್ : ನಿನಾಸಂ ನಲ್ಲಿ ಒಂದು ವರ್ಷ ಕೊಡುವ ತರಬೇತಿಯನ್ನು ಇಲ್ಲಿ ಮೂರು ವರ್ಷ ವಿಸ್ಥಾರವಾಗಿ ತರಬೇತಿ ಕೊಡುತ್ತಾರೆ. ಹಾಗೆ ಭಾರತದ ಸುಮಾರು ಭಾಷೆಗಳಲ್ಲಿ (ಕನ್ನಡವು ಸೇರಿ) ನಾಟಕಗಳನ್ನು ಮಾಡಿಸುತ್ತಾರೆ ಜೊತೆಗೆ ವಿವಿಧ ಭಾಷೆಯ ಕಲಾವಿದರ ಜೊತೆಗೆ ಬೆರೆಯುವ ಅವಕಾಶ ಇರುತ್ತದೆ.

ಕು ಶಿ : “ತಿರುಗಾಟ” ಪ್ರಾಯೋಗಿಕ ತರಬೇತಿಯ ಮೂಲಕ ಮತ್ತೆ ನಿಮ್ಮ ನಿನಾಸಂ ಜೊತೆಗಿನ ಪಯಣ ಹೇಗಿತ್ತು.

ಕಿರಣ್ : ಪ್ರಾಯೋಗಿಕ ತರಬೇತಿಯ ಮೂಲಕ ಕುವೆಂಪುರವರ “ಸ್ಮಶಾಣ ಕುರುಕ್ಷೇತ್ರ” ಜಂಬೆ ಯವರ “ತ್ರೀ ಸಿಸ್ಟರ್” ನಾಟಕಗಳಲ್ಲಿ ಅಭಿನಯಿಸಿದೆ. ಆಮೇಲೆ ಅಲ್ಲಿ ಕೇರಳದ  “ಕಾವಲಂ ನಾರಾಯಣ ಪಣಿಕ್ಕರ್” ಎಂಬುವವರ ಪರಿಚಯವಾಯಿತು. ಅವರ ಸಂಸ್ಕೃತ ನಾಟಕಗಳು ತುಂಬಾ ಪ್ರಸಿದ್ದಿಯಾಗಿವೆ. “ಭಗವದ್ಜಿತಿಯ” ಎಂಬ ಮಹೇಂದ್ರ ವಿಕ್ರಮರವರ ನಾಟಕದಲ್ಲಿ ಒಂದು ಪಾತ್ರವನ್ನು ಕೊಟ್ಟರು ಅದರಲ್ಲೂ ಕೂಡ ಅಭಿನಯಿಸಿದೆ. ಆಮೇಲೆ ನೀನಾಸಂ ಹಳೆ ವಿದ್ಯಾರ್ಥಿ ಸಂಘದಲ್ಲಿ ಸೇರಿಕೊಂಡು ಇಕ್ಬಾಲ್ ಅಹ್ಮದ್ ರವರ ನೇತೃತ್ವದಲ್ಲಿ ಸುಮಾರು ಕಾಲೇಜುಗಳಿಗೆ ಹೋಗಿ ವಿದ್ಯಾರ್ಥಿಗಳಿಗೆ ಪಾಠವಾಗಿದ್ದ ಪ್ರತಿಮಾ ಮತ್ತು ಲೈಫ್ ಆಫ್ ಗೆಲಿಲಿಯೊ ನಾಟಕದ ಪ್ರದರ್ಶನವನ್ನು ಕೊಟ್ಟೆವು ಅದರಲ್ಲಿನ ಮುಖ್ಯ ಗೆಶ್ರೀ ರಾಮನ ಹಾಗೂ ಗೆಲಿಲಿಯೊ ಪಾತ್ರವನ್ನು ನಾನೇ ಮಾಡಿದೆ. ಈಗೆ ಅನೇಕ ನಾಟಕಗಳಲ್ಲಿ ಅಭಿನಯಿಸಿ ಅನೇಕ ದಿಗ್ಗಜರ ಜೊತೆ ಬೆರೆಯುವ ಅವಕಾಶ ಸಿಕ್ಕಿ ಒಳ್ಳೆಯ ಅನುಭವಗಳನ್ನು ಗಳಿಸಿಕೊಳ್ಳಲು ಸಹಾಯವಾಯಿತು.

 ಕು ಶಿ : ನಾಟಕರಂಗದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದ ತಾವು ಕಿರುತೆರೆ ಹಾಗೂ ಸಿನೆಮಾ ರಂಗಕ್ಕೆ ಬಂದ ರೀತಿ ಹೇಗೆ?

ಕಿರಣ್ : 2011 ರಲ್ಲಿ ಬಿ ಸುರೇಶ ರವರ ಪರಿಚಯವಾಗಿ ಅವರ ಸಂಸ್ಥೆಯಲ್ಲಿ ತಯಾರಾಗುತಿದ್ದ “ಅಳುಗುಳಿ ಮನೆ ಹಾಗೂ ಮದರಂಗಿ “ ಧಾರಾವಾಹಿಯಲ್ಲಿ ನಟಿಸಿದೆ. ನಂತರ ಹೊನ್ನಾವರದ ನನ್ನ ಬಾಲ್ಯದಲ್ಲಿ ಓದಿದ ಸಂತ ಅಂಥೋನಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ರೋಡರುಗೇಸ್ ರವರ ಮೂಲಕ ನಿರ್ದೇಶಕ ಮನು ನಂಜಪ್ಪರವರ ಪರಿಚಯವಾಗಿ ಅವರ “ಆತ್ಮಸಾಕ್ಷಿ” ಎಂಬ ಚಿತ್ರದಲ್ಲಿ ಮೊದಲಬಾರಿಗೆ ಖಳನಾಯಕನ ಪಾತ್ರವನ್ನು ಮಾಡಿದೆ. ಹಾಗೆ ನಿರ್ದೇಶಕ ಗಿರಿರಾಜ್ ರವರ ಜಟ್ಟ, ಮೈತ್ರಿ,ಅಮರಾವತಿ ಹಾಗೂ ತುಂಡೈಕ್ಲ ಸಹವಾಸ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಒದಗಿ ಇಲ್ಲಿಯವರೆಗೂ ಲೂಸಿಯ, ಯು ಟರ್ನ್, ಆಕ್ಟ್ 1978 ಈಗೆ ಒಟ್ಟು 40 ಸಿನಿಮಾ ಹಾಗೂ 8 ಧಾರಾವಾಹಿಯಲ್ಲಿ ಅಭಿನಯಿಸಿದ್ದೀನಿ.

 ಲೇಖನ : ಅಭಿನಯಿಸುವುದರ ಜೊತೆಗೆ ಬೇರೆ ಚಟುವಟಿಕೆಗಳಲ್ಲಿ ಅನುಭವಗಳಿಸಿದ್ದೀರಾ?

ಕಿರಣ್ : ಹೌದು ಬಿ ಸುರೇಶರವರ ಜೊತೆ ಅವರದೇ “ದೇವರ ನಾಡಲ್ಲಿ” ಚಿತ್ರಕ್ಕೆ ಸಹಾಯಕ ಸಂಭಾಷಣೆಕಾರನಾಗಿ ಕೆಲಸ ಮಾಡಿದ್ದೀನಿ.

ಕು ಶಿ : ಸರ್ ಈಗೆ ನಿರಂತರವಾಗಿ ಅಭಿನಯಿಸುತ್ತ ಇದ್ದ ನೀವು ಕರೋನ ಕಾರಣದಿಂದ ಅನುಭವಿಸಿದ ಕಷ್ಟವನ್ನು ಹೇಳುತೀರಾ?

ಕಿರಣ್ : ಹಿಂದೆ ನಮ್ಮ ಹಿರಿಯರು ಪ್ಲೇಗ್ ಮಹಾಮಾರಿಯಿಂದ ಅನುಭವಿಸಿದ ಕಷ್ಟಗಳನ್ನು ನಾವು ನಮ್ಮ ಪೀಳಿಗೆಯಲ್ಲಿ ಕರೋನ ಮೂಲಕ ನೋಡುವಂತಾಯಿತು. ನನ್ನ ಎಲ್ಲಾ ಸ್ನೇಹಿತರ ಜೊತೆಗೆ ನಾನು ಕೂಡ ಮಾನಸಿಕ ಖಿನ್ನತೆಗೊಳಗಾಗಿದ್ದೀನಿ. ಆಗ ನನಗೆ ಮಯೂರ ಪತ್ರಿಕೆಯ ಸಂದೀಪ್ ನಾಯಕ್ ವತಿಯಿಂದ ಸಹಾಯ ದೊರೆಯಿತು. ಬಾಲ್ಯದಿಂದಲೂ ನನಗೆ ಚಿತ್ರ ಬಿಡಿಸುವ ಅಭ್ಯಾಸವಿತ್ತು ಹಾಗಾಗಿ ಮಯೂರ ಪತ್ರಿಕೆಯ ಕಥೆಗಳಿಗೆ ಚಿತ್ರಗಳನ್ನು ಬರೆದುಕೊಟ್ಟೆ. ಆ ಸಮಯದಲ್ಲಿ ಖಿನ್ನತೆಯಿಂದ ಹೊರಬರಲು ನೆರವಾದ ಮಯೂರ ಬಳಗಕ್ಕೆ ವಂದನೆಗಳು.

ಕು ಶಿ : ಅಭಿನಯದ ಸೆಳೆತದಿಂದ ಅವಕಾಶಕ್ಕಾಗಿ ಹಾತೊರೆಯುವ ಯುವಪೀಳಿಗೆಗೆ ನಿಮ್ಮ ಸಲಹೆ ಏನು?

ಕಿರಣ್ : ಯುವಪೀಳಿಗೆಗೆ ನಾನು ಹೇಳುವುದ್ದಿಸ್ಟೇ, ಮೊದಲು ಅಭಿನಯ ಶಾಲೆಯಲ್ಲಿ ಪ್ರಾಥಮಿಕ ವಿದ್ಯೆಗಳನ್ನು ಕಲಿಯಿರಿ, ಹಾವ ಬಾವಗಳನ್ನು ಹೇಳಿಕೊಡುತ್ತಾರೆ ಆ ಮೂಲಕ ಸಣ್ಣ ಮಟ್ಟದಲ್ಲಿ ಅಭಿನಯಿಸುತ್ತ ಹೋದರೆ ತಾನಾಗೆ ಅನುಭವಗಳು ದೊರೆಯುತ್ತದೆ. ಮುಂದೆ ಅವಕಾಶಗಳು ಹುಡುಕಿ ಬರುತ್ತದೆ ಆದರೆ ನಿಮ್ಮ ಪ್ರಯತ್ನ ಇಲ್ಲಿ ಬಹು ಮುಖ್ಯ.

ಲೇಖನ : ನಿಮ್ಮ ಸಾಹಿತ್ಯದ ಬಗ್ಗೆ ಇರುವ ಆಸಕ್ತಿಯನ್ನು ವಿವರಿಸಿ

ಕಿರಣ್ : ಬಿಡುವಿನ ವೇಳೆಯಲ್ಲಿ ಎಲ್ಲಾ ಬಗೆಯ ಸಾಹಿತ್ಯವನ್ನು ಓದುತ್ತೇನೆ. ಪ್ರತಿಯೊಬ್ಬ ನಟನಿಗೂ ಸಾಹಿತ್ಯ ಬಲು ಮುಖ್ಯ, ಓದುವ ಅಭಿರುಚಿ ಬೆಳೆಸಿಕೊಂಡರೆ ಭಾಷೆಯ ಪರಿಶುದ್ಧತೆಯನ್ನು ಬೆಳೆಸಿಕೊಳ್ಳುತ್ತೇವೆ. ಆ ಮೂಲಕ ಪ್ರೇಕ್ಷಕರನ್ನು ಬೇಗನೆ ತಲುಪುತ್ತೆವೆ.

ಧನ್ಯವಾದಗಳು ಕಿರಣ್ ರವರೆ ನಿಮ್ಮ ಈ ಸಣ್ಣ ಬಿಡುವಿನ ವೇಳೆಯನ್ನು ನಿಮ್ಮ ಪರಿಚಯಕ್ಕಾಗಿ ನಮ್ಮ ಅಕೃತಿ ಕನ್ನಡಕ್ಕೆ ಒದಗಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಹಾಗೂ ಮುಂದೆ ಇನ್ನು ಹೆಚ್ಚು ಚಿತ್ರಗಳು ಹಾಗೂ ವಿವಿಧಬಗೆಯ ಪಾತ್ರಗಳಲ್ಲಿ ಅಭಿನಯಿಸಿ ಎಂದು ಆಶಿಸುತ್ತೇವೆ.

ಕು ಶಿ ಚಂದ್ರಶೇಖರ್

ಹಾಗೂ

ಲೇಖನ ನಾಗರಾಜ್

Related post