ಕಿವಿ – ನ್ಯೂಜಿಲ್ಯಾಂಡ್ ನ ರಾಷ್ಟ್ರೀಯ ಪಕ್ಷಿ
ನ್ಯೂಜಿಲೆಂಡಿನ ರಾಷ್ಟ್ರೀಯ ಪಕ್ಷಿ “ಕಿವಿ” ಎನ್ನುವ ವಿಷಯ ಕ್ರಿಕೆಟ್ ನೋಡುಗರಿಗೊಂದೇ ಅಲ್ಲಾ ತುಂಬಾ ಜನರಿಗೂ ತಿಳಿದೇ ಇದೆ . 14 ರಿಂದ 18 ಇಂಚು ಉದ್ದ , 1 kg ಯಿಂದ 2 kg ತೂಗುವ ಈ ಪಕ್ಷಿಯ ಕುರಿತಾಗಿ ಅನೇಕ ಕುತೂಹಲಕಾರಿಯಾದ ಸಂಗತಿಗಳಿವೆ .
ತುಪ್ಪಳದಂತ ಗರಿಗಳನ್ನ ಹೊಂದಿರುವ ಇದು ಕೊಕ್ಕಿನ ಮುಂಬಾಗದಲ್ಲಿ ಮೂಗಿನ ಹೊರಳೆಗಳನ್ನ ಹೊಂದಿರುವ ಜಗತ್ತಿನ ಏಕೈಕ ಪಕ್ಷಿ . ಭೂಮಿಯ ಅಡಿಯಲ್ಲಿ ಬಿಲ ಕೊರೆದು ವಾಸಿಸುವ ಇದು ರಾತ್ರಿಯ ಹೊತ್ತಿನಲ್ಲಿ ಕ್ರಿಮಿ ಕೀಟಗಳನ್ನ ಭೇಟೆಯಾಡುತ್ತದೆ . ಇತರೇ ಪಕ್ಷಿಗಳಂತೆ ದೃಷ್ಟಿ ಚುರುಕಾಗಿರದಿದ್ದರೂ ತನ್ನ ಸೂಕ್ಷ್ಮ ಆಘ್ರಾಣ ಶಕ್ತಿ ಮತ್ತು ಸ್ಪರ್ಷ ಶಕ್ತಿಯಿಂದಲೇ ಬದುಕಬಲ್ಲದು.
ಪಕ್ಷಿಯಂತೆ ಕಂಡುಬಂದರೂ ಹಾರಲಾರದ “ಕಿವಿ” ವಿಚಿತ್ರವಾಗಿ ಸಸ್ತಿನಿಗಳ ಲಕ್ಷಣಗಳನ್ನ ಹೋಲುತ್ತವೆಯಾದ್ದರಿಂದ ಇವನ್ನ (Honorary mammals) ಗೌರವಾರ್ಥ “ಸಸ್ತಿನಿಗಳು” ಎಂದು ಕರೆಯುತ್ತಾರೆ . ಸಾಮಾನ್ಯವಾಗಿ ಪಕ್ಷಿಗಳ ಎಲುವುಗಳಲ್ಲಿ ಟೊಳ್ಳಾಗಿದ್ದು ಅಸ್ಥಿಮಜ್ಜೆ ಕಡಿಮೆ ಇರುವುದರಿಂದ ಹಗುರವಾಗಿರುತ್ತವೆ. ಆದರೆ “ಕಿವಿ”ಯ ಎಲುವುಗಳು ಹೆಚ್ಚಿನ ಅಸ್ಥಿಮಜ್ಜೆಯಿಂದ ಕೂಡಿದ್ದು ಬಾರವಾಗಿರುತ್ತವೆ ( Bone marrow ).
ಇತರೇ ಪಕ್ಷಿಗಳ ದೇಹದಲ್ಲಿ ಮೊಟ್ಟೆಗಳು ಉತ್ಪತ್ತಿಯಾಗಿ ಪೂರ್ಣ ಪ್ರಮಾಣದಲ್ಲಿ ಬೆಳೆಯಲು ಒಂದು ದಿನ ಹಿಡಿದರೆ “ಕಿವಿ” ಪಕ್ಷಿಯಲ್ಲಿ ಮೊಟ್ಟೆ ಉತ್ಪತ್ತಿಯಾಗಲು 8 ದಿನ ಹಿಡಿಯುತ್ತದೆ. ಮೊಟ್ಟೆಯೊಡೆದು ಮರಿಯಾಗಲು ಸಾಮಾನ್ಯ ಪಕ್ಷಿಗಳಲ್ಲಿ 40 ದಿನ ಹಿಡಿದರೆ “ಕಿವಿ”ಪಕ್ಷಿಗಳಲ್ಲಿ 80 ದಿನ ಹಿಡಿಯುತ್ತದೆ .120 mm ಉದ್ದ 80 mm ದಷ್ಟು ಅಗಲ ಗಾತ್ರದ ಮೊಟ್ಟೆಗಳು ಕೋಳಿ ಮೊಟ್ಟೆಯಷ್ಟೇ ಗಾತ್ರದ್ದಾಗಿರುತ್ತವೆ .. ಇತರೇ ಪಕ್ಷಿಗಳಿಗಿಂತ ಎರೆಡು ಪಟ್ಟು ಸುದೀರ್ಘ ಅಂದರೇ 80 ದಿನ ಗರ್ಭಧರಿಸುವ “ಕಿವಿ” ಮೊಟ್ಟೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶಗಳನ್ನ ಸಂಗ್ರಹಿಸುತ್ತದೆ.
ದೇಹದ ಗಾತ್ರಕ್ಕೆ ಹೋಲಿಸಿ ಮೊಟ್ಟೆಯ ಗಾತ್ರವನ್ನ ಅಳೆಯುವುದಾದರೇ “ಕಿವಿ” ಯ ಮೊಟ್ಟೆ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಗಾತ್ರದ್ದು ಎನಿಸಿಕೊಳ್ಳುತ್ತದೆ. ದೇಹದ ಗಾತ್ರ ಚಿಕ್ಕದಾಗಿರುತ್ತದೆಯಾದ್ದರಿಂದ ಮೊಟ್ಟೆಯ ಪ್ರಮಾಣ ಹೆಚ್ಚಿಗೆ ಬೆಳೆದಂತೆಲ್ಲಾ “ಕಿವಿ”ಗೆ ಆಹಾರ ಸೇವಿಸಲು ಕಷ್ಟವಾಗತೊಡಗುತ್ತದೆ.
” ಕಿವಿ” ಪಕ್ಷಿಗಳು ಮರಿಗಳಿಗೆ ಗುಟುಕು ಕೊಡುವುದಿಲ್ಲ .
ಮರಿ ಸಂಪೂರ್ಣ ಬೆಳೆದೇ ಮೊಟ್ಟೆಯಿಂದ ಹೊರಬರುವಷ್ಟು ಪ್ರೋಟೀನ್ ಮತ್ತು ಪೋಶಕಾಂಶಗಳನ್ನ ಮೊಟ್ಟೆಯಲ್ಲಿ ಸಂಗ್ರಹಿಸಿರುತ್ತವೆ .
ಇದು ಮಾನವತಾಯಿ ಒಂದೇ ಸಲ ನಾಲ್ಕು ವರ್ಷ ಬೆಳವಣಿಗೆ ಹೊಂದಿದ ಶಿಶುವಿಗೆ ಜನ್ಮನೀಡಿದ ಹಾಗಾಗುತ್ತದೆ ..
ಮೃತ್ಯುಂಜಯ ನಾರಾ