ಕೂಡಲ ಸಂಗಮ – ಬಸವಣ್ಣನವರ ಐಕ್ಯಸ್ಥಳ

ಕೂಡಲ ಸಂಗಮ – ಬಸವಣ್ಣನವರ ಐಕ್ಯಸ್ಥಳ

ಮಹಾಮಹಿಮ ಬಸವಣ್ಣನವರು ಪಾದವಿಟ್ಟ ಅವಿಮುಕ್ತ ಕ್ಷೇತ್ರವಾಗಿ, ಬಸವಣ್ಣನವರ ವಿದ್ಯಾಭೂಮಿಯಾಗಿ, ಐಕ್ಯ ಕ್ಷೇತ್ರವಾಗಿ ಮತ್ತು ಪುಣ್ಯಭೂಮಿಯಾಗಿ ಕೂಡಲಸಂಗಮವು ಗೋಚರಿಸುತ್ತದೆ. ಮುಸಲ್ಮಾನರಿಗೆ ಮೆಕ್ಕಾ, ಸಿಖ್ಖರಿಗೆ ಅಮೃತಸರ, ಬೌದ್ಧರಿಗೆ ಬುದ್ಧಗಯಾ ಇವೇ ಮೊದಲಾದ ಮಹತ್ವದ ಧರ್ಮಕ್ಷೇತ್ರಗಳಂತೆ ಬಸವ ಧರ್ಮೀಯರಾದ ಲಿಂಗಾಯತರಿಗೆ ಕೂಡಲ ಸಂಗಮ ಪವಿತ್ರಕ್ಷೇತ್ರ. ಕಲ್ಯಾಣದಲ್ಲಿ ಬಿಜ್ಜಳನ ಪ್ರಧಾನಿಯಾಗಿದ್ದ ಬಸವಣ್ಣನವರು ಕಲ್ಯಾಣ ಕ್ರಾಂತಿಯ ಬಳಿಕ ಸಂಗಮಕ್ಕೆ ಮರಳಿ ಇಲ್ಲಿಯೇ ಐಕ್ಯರಾದರೆಂದೂ ಇತಿಹಾಸ ತಿಳಿಸುತ್ತದೆ.

ಕೂಡಲಸಂಗಮ ಗ್ರಾಮವು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನಲ್ಲಿದ್ದು, ಆಲಮಟ್ಟಿ ಅಣೆಕಟ್ಟಿನಿಂದ ಸುಮಾರು 35 ಕಿ.ಮಿ.ದೂರದಲ್ಲಿದೆ. ಬಸವಣ್ಣನವರು ಚಿಕ್ಕ ವಯಸ್ಸಿನಲ್ಲಿ ಇಲ್ಲಿಗೆ ಬಂದು ಈಶಾನ್ಯ ಗುರುಗಳೆಂದು ಖ್ಯಾತರಾಗಿದ್ದ ಜಾತವೇದ ಮುನಿಗಳಿಂದ ಶಿಕ್ಷಣ ಮತ್ತು ಮಾರ್ಗದರ್ಶನ ಪಡೆದರು. ಇಲ್ಲಿ ಕೃಷ್ಣಾ ನದಿ, ಮಲಪ್ರಭಾ ಮತ್ತು ಘಟಪ್ರಭಾ ನದಿಗಳ ತ್ರಿವೇಣಿ ಸಂಗಮವಾಗಿ ಪೂರ್ವ ದಿಕ್ಕಿನಲ್ಲಿ ಆಂಧ್ರ ಪ್ರದೇಶ ರಾಜ್ಯದ ಶ್ರೀಶೈಲದ (ಇನ್ನೊಂದು ಪುಣ್ಯ ಕ್ಷೇತ್ರ) ಕಡೆಗೆ ಹರಿಯುತ್ತದೆ. ಕರ್ನಾಟಕ ಸರಕಾರವು ಇದನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿಗೊಳಿಸಿದ್ದು, ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರವು ಈ ಪುಣ್ಯಸ್ಥಳದ ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ.

ಸ್ಥಳ ಇತಿಹಾಸ

ಕರ್ನಾಟಕದ ಬಿಜಾಪುರ ಜಿಲ್ಲೆಯ ಬಾಗೇವಾಡಿ ಎಂಬ ಹಳ್ಳಿಯಲ್ಲಿ ಮಾದರಸ ಮತ್ತು ಮಾದಲಾಂಬಿಕೆ ಎಂಬ ದಂಪತಿಗಳು ವಾಸಿಸುತ್ತಿದ್ದರು. ಈ ದಂಪತಿಗಳು ಆ ಗ್ರಾಮದ ನಂದೀಶ್ವರ ದೇವಸ್ಥಾನದ ನಂದೀಶ್ವರನ ಭಕ್ತರಾಗಿದ್ದರು. ಅದಾಗಲೇ ಇವರಿಗೆ ನಾಗಮ್ಮ ಎಂಬ ಹೆಸರಿನ ಮಗಳಿದ್ದು, ಗಂಡು ಮಗುವನ್ನು ಹೊಂದಲು ಮಾದಲಾಂಬಿಕೆ ಬಯಸಿದ್ದಳು ಇದಕ್ಕಾಗಿ ಈಕೆ ಶಿವನನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಪ್ರಾರ್ಥಿಸುತ್ತಿದ್ದಳು. ಆರಾಧನೆಯ ಒಂದು ಸಂದರ್ಭದಲ್ಲಿ ಶಿವಲಿಂಗಕ್ಕೆ ಅರ್ಪಿಸಿದ್ದ ಮಲ್ಲಿಗೆ ಹೂವು ಮಾದಲಾಂಬಿಕೆಯ ತೊಡೆಯ ಮೇಲೆ ಬಿದ್ದಿತು. ಅವಳು ಅದನ್ನು ಭಕ್ತಿಯಿಂದ ತೆಗೆದುಕೊಂಡು ಕಣ್ಣುಗಳಿಗೆ ಒತ್ತಿಕೊಂಡು ತಲೆಗೆ ಮುಡಿದುಕೊಂಡಳು. ಅಂದು ರಾತ್ರಿ ಮಾದಲಾಂಬಿಕೆಗೆ ಕೈಲಾಸದಿಂದ ಶಿವನು ಭೂಲೋಕಕ್ಕೆ ನಂದಿಯನ್ನು ಕಳುಹಿಸಿದಂತೆ, ನಂದಿಯು ಇವರ ಮನೆಗೆ ಬಂದಂತೆ ಮತ್ತು ಇದಕ್ಕೆ ಸಾಕ್ಷಿಯೆಂಬಂತೆ ಇಡೀ ಮನೆಯೆಲ್ಲೆಡೆ ದಿವ್ಯ ಪ್ರಭೆಯಂತಹ ಬೆಳಕಿರುವಂತಹ ವಿಭಿನ್ನವಾದ ಕನಸು ಬೀಳುತ್ತದೆ.

ಮರುದಿನ ಮಾದಲಾಂಬಿಕೆ ಈ ಕನಸನ್ನು ತನ್ನ ಪತಿ ಮಾದರಸನಿಗೆ ತಿಳಿಸಿದಾಗ ಇವರಿಬ್ಬರೂ ಈ ವಿಚಾರವನ್ನು ಗ್ರಾಮದ ಆಧ್ಯಾತ್ಮಿಕ ಮಾರ್ಗದರ್ಶಕ ಗುರುಗಳಿಗೆ ತಿಳಿಸುತ್ತಾರೆ. ಗುರುಗಳು ಈ ಕನಸು ಶುಭ ಸಂಕೇತ, ನಿಮಗೆ ಯೋಗ್ಯ ಮಗ ಹುಟ್ಟುತ್ತಾನೆ, ಆತ ಇಡೀ ಕುಟುಂಬವನ್ನು ಎತ್ತಿ ಹಿಡಿದು ಇಡೀ ವಿಶ್ವಕ್ಕೆ ಜ್ಞಾನೋದಯವಾಗುವ ಹಾಗೆ ಮಾಡುತ್ತಾನೆ ಎನ್ನುತ್ತಾರೆ. ಭವಿಷ್ಯವಾಣಿಯ ಈ ಮಾತುಗಳನ್ನು ಕೇಳಿದಾಗ ದಂಪತಿಗಳು ಬಹಳ ಸಂತೋಷಪಡುತ್ತಾರೆ. ಕಾಲಾನಂತರ ಮಾದಲಾಂಬಿಕೆ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ನೋಡಲು ಆಕರ್ಷಕವಾಗಿದ್ದ ಮಗುವಿನ ಮುಖದಲ್ಲಿದ್ದ ಕಾಂತಿಯನ್ನು ನೋಡಿ ಈತನು ವಿಶ್ವಕ್ಕೇ ಬೆಳಕು ಚೆಲ್ಲುತ್ತಾನೆ, ಶಿವನ ಮತ್ತು ನಂದಿಯ (ವೃಷಭ ಎಂದೂ ಕರೆಯುತ್ತಾರೆ) ಕೃಪೆಯಿಂದ ನಿಮ್ಮ ಮಗ ಹುಟ್ಟಿದ್ದು ಈತ ಮಹಾನ್ ವ್ಯಕ್ತಿಯಾಗುತ್ತಾನೆ. ಜಗತ್ತಿನಲ್ಲಿ ಧಾರ್ಮಿಕತೆಯನ್ನು ಉತ್ತೇಜಿಸಿ ಇಡೀ ವಿಶ್ವಕ್ಕೇ ಕಲ್ಯಾಣವನ್ನು ಸಾರುತ್ತಾನೆ ಆದ್ದರಿಂದ ಈತನಿಗೆ ‘ಬಸವ’ ಎಂದು ಹೆಸರಿಡಿ ಎಂದು ಗುರುಗಳು ತಿಳಿಸುತ್ತಾರೆ. ಬೆಳೆಯುತ್ತಾ ಹೋದಂತೆ ಬಸವಣ್ಣನವರು “ಕಾಯಕವೇ ಕೈಲಾಸ” (ಕೆಲಸದಲ್ಲಿ ತೊಡಗಿಸಿಕೊಳ್ಳುವುದೇ ಸ್ವರ್ಗ) ವೆಂದು ಘೋಷಿಸಿದರು ಮತ್ತು ಸರಳ ಜೀವನದ ಆದರ್ಶಗಳನ್ನು ಮತ್ತು ಪುರುಷರು ಮತ್ತು ಮಹಿಳೆಯರ ನಡುವಿನ ಸಮಾನತೆಯನ್ನು ಕಲಿಸಿದರು. ಊರಿನ ಜನರೆಲ್ಲರೂ ಈತನನ್ನು ‘ಅಣ್ಣ’ ಎಂದು ಕರೆದರು. ಏಕೆಂದರೆ ಬಸವರು ಏನು ಬೋಧಿಸಿದರೋ ಅದೆಲ್ಲವನ್ನೂ ಊರಿನ ಜನರು ಅಳವಡಿಸಿಕೊಳ್ಳಲಾರಂಭಿಸುತ್ತಾರೆ.

ಅಹಿಂಸೆಯ ಪರ, ಅಸಮಾನತೆಯ ವಿರುದ್ಧ ನಿಲುವು ಹೊಂದಿದ್ದ ಬಸವಣ್ಣನವರು ಹುಟ್ಟುವ ಮುನ್ನ ಮೇಲ್ಜಾತಿ ಎನಿಸಿಕೊಂಡವರಲ್ಲದೆ ಮತ್ತಾರು ಕೂಡ ಶಾಲೆ ಕಲಿಯಬಾರದು, ಪೂಜೆ ನೋಡಬಾರದು, ನೋಡಿದರೆ ಕೇಳಿದರೆ ಅವರ ಕಿವಿಯಲ್ಲಿ ಕಾದ ಕಬ್ಬಿಣದ ರಸವನ್ನು ಹಾಕುತ್ತಿದ್ದರು, ಕದ್ದು ನೋಡಿದರೆ ಅವನ ಕಣ್ಣನ್ನೇ ಕೀಳುತ್ತಿದ್ದರು. ಸ್ತ್ರೀ ಸಮಾನತೆ ತನ್ನ ಮನೆಯಲ್ಲಿಯೂ ಸಹ ಇರದಿದ್ದರಿಂದ ಬಸವಣ್ಣನವರು ವ್ಯವಸ್ಥೆಯ ವಿರುದ್ಧ ಬೇಸರಿಸಿಕೊಂಡು ಮನೆಯನ್ನು ಬಿಟ್ಟು ಈಗಿನ ಕೂಡಲಸಂಗಮಕ್ಕೆ ಹೊರಟು ಬರುತ್ತಾರೆ. ಅವರ ಜೊತೆ ಅಕ್ಕ ಅಕ್ಕನಾಗಲಾಂಬಿಕೆಯವರು ಮತ್ತು ಭಾವ ಶಿವದೇವರು ಬರುತ್ತಾರೆ, ಸಂಗಮದಲ್ಲಿರುವ ಅವರ ಅಕ್ಕನ ಮನೆಯಲ್ಲಿ ವಾಸ್ತವ್ಯ ಮಾಡಿದ ಬಸವಣ್ಣನವರು, ನಂತರ ಸಂಗಮದಲ್ಲೇ ಶಿಕ್ಷಣವನ್ನು ಪಡೆದರು , ಅಲ್ಲಿನ ಕೆಲ ಮೂಢಾಚಾರಗಳನ್ನು ಕಂಡು ಅಲ್ಲಿನ ಜನರಿಗೆ ಹೀಗೆ ತಿಳಿ ಹೇಳುತ್ತಾರೆ:

ನೀರ ಕಂಡಲ್ಲಿ ಮುಳುಗುವರಯ್ಯ,
ಮರನ ಕಂಡಲ್ಲಿ ಸುತ್ತುವರಯ್ಯ,
ಬತ್ತುವ ಜಲವ ಒಣಗುವ ಮರವ ನೆಚ್ಚಿದವರು
ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವಾ,

ಬಸವಣ್ಣ ತಮ್ಮ ಅರಿವಿನ ನುಡಿಗಳ ಮೂಲಕ ಜನರ ಮನ ಗೆಲ್ಲುತ್ತಾರೆ, ತಮ್ಮ ಜ್ಞಾನ ವಿಕಸಿತವಾಗಿ ಸೃಷ್ಠಿ ಸಮಷ್ಠಿಯ ಸಂಕೇತವಾದ ತನ್ನರಿವಿನ ಕುರುಹಾಗಿ ಇಷ್ಟಲಿಂಗವನ್ನು ಆವಿಷ್ಕರಿಸಿ ಎಲ್ಲರಿಗೂ ಲಿಂಗದೀಕ್ಷೆ ಕೊಟ್ಟು ಪ್ರಥಮವಾಗಿ ತನ್ನ ಅಕ್ಕ ನಾಗಲಾಂಬಿಕೆಯವರಿಗೆ ದೀಕ್ಷೆಯನ್ನಿಟ್ಟು, ಹೆಣ್ಣಿಗೂ ಸರ್ವ ಸಮಾನತೆಯ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡುತ್ತಾರೆ, ವ್ಯಕ್ತಿಯ ಶ್ರೇಷ್ಠತೆ ಹುಟ್ಟಿನಿಂದಲ್ಲ, ಅವನ ಗುಣ ನಡವಳಿಕೆಯಿಂದ ಎಂದು ಸಾರುತ್ತಾರೆ. ಎಲ್ಲರಲ್ಲೂ ಸದ್ವಿಚಾರಗಳ ಬಿತ್ತಿ ಶರಣರನ್ನಾಗಿ ಮಾಡುತ್ತಿದ್ದ ಅಣ್ಣಾ ಬಸವಣ್ಣನವರ ಕೀರ್ತಿವಾರ್ತೆ ಕಲ್ಯಾಣಕ್ಕೆ ಮುಟ್ಟುತ್ತದೆ. ಬಿಜ್ಜಳನು ಬಸವಣ್ಣನವರನ್ನು ರಾಜ ಸಭೆಗೆ ಆಹ್ವಾನಿಸಿ ಉದ್ಯೋಗವಾಗಿ ಹಣಕಾಸು ಖಾತೆಯ ಜವಾಬ್ದಾರಿ ಕೊಡ್ಡುತ್ತಾರೆ. ನಂತರ ಕಲ್ಯಾಣದಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಶುರುವಾಗುತ್ತವೆ. ಅಲ್ಲಿನ ಜನರು ಜಾತಿ ಸಂಕರದಲ್ಲಿ ಸಿಲುಕಿರಲು ಬಸವಣ್ಣನವರು ಜಾತೀಯತೆಯ ಬುಡಬೇರ ಕಿತ್ತಿದರು, ಲಿಂಗವರ್ಗವರ್ಣ ತಾರತಮ್ಯವಿರುವ ಸಮಾಜದಲ್ಲೇ ಸಮಾನತೆಯ ಪ್ರೇಮದ ಸಾಮ್ರಾಜ್ಯವನ್ನು ಸ್ಥಾಪಿಸಿದರು, ಎಲ್ಲರನ್ನೂ ಒಪ್ಪಿ ಅಪ್ಪುವ ಬಸವಣ್ಣನವರ ಲೋಹಚುಂಬಕ ವ್ಯಕ್ತಿತ್ವಕ್ಕೆ ಆಕರ್ಷಣೆಗೊಂಡು ಜಗತ್ತಿನೆಲ್ಲೆಡೆಯಿಂದ ಜನಸಾಗರವೇ ಹರಿದು ಬಂದಿತು ಕಲ್ಯಾಣಕೆ, ಅಷ್ಟರಲ್ಲೇ ಬಿಜ್ಜಳನ ಆಸ್ಥಾನದಲ್ಲಿ ಚಿನ್ನದ ಪತ್ರವೊಂದು ಸಿಕ್ಕಿತು ಯಾರಿಗೂ ಓದಲಾಗದ ಪತ್ರವನ್ನು ಬಸವಣ್ಣನವರು ಓದಿ, ಈ ರಾಜ್ಯಕ್ಕೆ ಹಿಂದಿನ ರಾಜರು ಇಟ್ಟ ಬಂಗಾರ ನಿಧಿಯ ಕುರುಹನ್ನು ಪತ್ತೆ ಹಚ್ಚಿದರು, ಅದರಂತೆ ರಾಜನ ಆಸ್ಥಾನದಲ್ಲೇ ಸಹಸ್ರ ಸಹಸ್ರ ಚಿನ್ನದ ನಾಣ್ಯಗಳು ಸಿಕ್ಕವು, ಅವುಗಳನ್ನು ಸಮಾಜಕ್ಕೆ ಜನಸಾಮಾನ್ಯರ ಕಷ್ಟಕ್ಕೆ ರಾಜ್ಯದ ಒಳಿತಿಗಾಗಿ ಬಳಸುವಂತೆ ಬಿಜ್ಜಳ ರಾಜನಿಗೆ ಬಸವಣ್ಣನವರು ಮಾರ್ಗದರ್ಶಿಸುತ್ತಾರೆ ಇದರಿಂದ ಪ್ರೇರೇಪಿತನಾದ ರಾಜ ಸತ್ಕಾರ್ಯಕ್ಕಾಗಿ ಬಳಸುತ್ತಾನೆ, ನಂತರ ತನ್ನ ರಾಜ್ಯದ ಪ್ರಧಾನಮಂತ್ರಿಯಾಗಿ ಜನ ಸೇವೆ ಮಾಡಬೇಕೆಂದು, ಬಸವಣ್ಣನವರಲ್ಲಿ ಕೇಳಿಕೊಂಡಾಗ ಜನ ಸೇವೆಯೇ ಸಂಗಯ್ಯನ ಸೇವೆಯೆಂದು ಉದ್ಧೆಯನ್ನು ಒಪ್ಪಿಕೊಳ್ಳುತ್ತಾರೆ.

‘ಅನುಭವ ಮಂಟಪ’ ರಚಿಸಿ ವೀರವೈರಾಗ್ಯ ಮೂರುತಿ ಅಲ್ಲಮಪ್ರಭುದೇವರನ್ನು ಅನುಭವ ಮಂಟಪಕ್ಕೆ ಅಧ್ಯಕ್ಷರನ್ನಾಗಿ ಮಾಡಿದ ಬಸವಣ್ಣನವರು, ಪ್ರತಿದಿನವೂ ಸಕಲ ಕಾಯಕ ಜೀವಿಗಳನ್ನು ಒಟ್ಟುಗೂಡಿಸಿ ಅವರಲ್ಲಿದ್ದ ಅಂಧಶ್ರದ್ಧೆ ಮೂಢನಂಬಿಕೆ ಕಂದಾಚಾರಗಳನ್ನು ಕಿತ್ತೊಗೆದು, ವೈಚಾರಿಕ ಚಿಂತನೆಗೈಯುತ್ತಿದ್ದರು, ಅರಿವೆಂಬ ಕಿಡಿ ಮುಂದೆ ಜ್ಞಾನಾಗ್ನಿಯಾಗಿ ಎಲ್ಲಡೆಯೂ ವಿಸ್ತರಿಸಿತು, ಜನರನ್ನು ಅಜ್ಞಾನದಿಂದ ಸುಜ್ಞಾನದೆಡೆಗೆ ಕೊಂಡೊಯ್ವ ಮಹಾ ಕ್ರಾಂತಿಯೇ ಅದಾಯಿತು. ಪರಿಪಕ್ವಗೊಂಡ ಶರಣ ಜೀವಿಗಳು , ಬಸವಣ್ಣನ ಗರಡಿ ಮನೆಯಲ್ಲಿ ಪಳಗಿ, ಕಾಯಕದ ಮಹತ್ವವನ್ನು ಅರಿತ ಜನರು ತಮ್ಮ ದುಡಿಮೆಯನ್ನು ಪ್ರೇಮಿಸತೊಡಗಿದರು ಮತ್ತು ದುಡಿದು ಸಂಪಾದನೆ ಮಾಡಿದ ಬಹುಪಾಲು ಸಮಾಜಕ್ಕೆ ಅರ್ಪಿಸಿ ಎಲ್ಲರೂ ನಿರಾಭಾರಿಗಳಾಗಿ, ಮತ್ತೆ ಕಾಯಕಕ್ಕೆ ಅಣಿಯಾಗುತ್ತಿದ್ದರು. ಕಲ್ಯಾಣದ ಈ ಬೆಳವಣಿಗೆ ಜಗತ್ತಿನೆಲ್ಲೆಡೆ ಸುದ್ದಿಯಾಗಿ ಕಾಶ್ಮೀರದ ಅರಸು ಮಹಾದೇವ ಭೋಪಾಲ, ಬಂದು ಕಟ್ಟಿಗೆ ಹೊರುವ ಕಾಯಕ ನೆಚ್ಚಿಕೊಂಡು ಮೋಳಿಗೆ ಮಾರಯ್ಯನಾಗಿ ಹೆಸರುವಾಸಿಯಾದ, ಅದೇ ರೀತಿಯಾಗಿ ದೂರದ ಅಫ್ಘಾನಿಸ್ಥಾನದಿಂದ ಬಂದ ಸೂಫಿ ಸಂತರು, ಮರಳ ಶಂಕರದೇವರಾಗಿ ಅಜರಾಮರರಾದರು, ಉಡುತಡಿಯಿಂದ ಅಕ್ಕಮಹಾದೇವಿ, ಗುಜರಾತಿನಿಂದ ಆದಯ್ಯ ಶರಣರು, ಆಂದ್ರಪ್ರದೇಶದಿಂದ ತೆಲುಗೇಶ ಮಸಣಯ್ಯ, ತಮಿಳುನಾಡಿನಿಂದ ಮಾದಾರ ಚೆನ್ನಯ್ಯ, ದಿಕ್ಕು ದಿಕ್ಕಿನಿಂದ ಬಂದರು 770 ಅಮರಗಣಂಗಳು , ಲಕ್ಷದ ಮೇಲೆ ತೊಂಬತ್ತಾರು ಸಾವಿರ ಅನುಯಾಯಿಗಳು ಸೇರಿದರು.

ಎಲ್ಲೆಲ್ಲೂ ಬಸವಣ್ಣನವರ ಕೀರ್ತಿವಾರ್ತೆ ಕೇಳುತಲಿತ್ತು, ಕಳ್ಳರು ವ್ಯಸನಿಗಳು ಕೂಡ ತಮ್ಮ ವೃತ್ತಿಯನ್ನು ಬಿಟ್ಟು ಕಾಯಕ ಜೀವಿಗಳಾಗಿ ಶರಣರಾಗಿ ಅನುಭಾವಿಗಳಾದದ್ದು ಇತಿಹಾಸ, ಹೀಗಿರುವಾಗ ವರ್ಣಾಶ್ರಮ ಪದ್ಧತಿಯನ್ನು ತೀವ್ರವಾಗಿ ಪ್ರತಿಪಾದಿಸುತ್ತಿದ್ದವರಿಗೆ ಹಿನ್ನಡೆಯಾಯ್ತು, ಅಣ್ಣ ಬಸವಣ್ಣನವರ ಮಾನವೀಯ ಮೌಲ್ಯಗಳ ತತ್ವ ಎಲ್ಲೆಡೆಯೂ ಪ್ರಬಲವಾಗಿ ಹಬ್ಬಿತು, ಹೀಗಿರುವಾಗ ಈ ಎಲ್ಲಾ ಬೆಳವಣಿಗೆಗಳಿಂದ ಸಹಿಸಲಾಗದ ಕುತಂತ್ರಿಗಳು ಭಯೋತ್ಪಾದಕರಿಂದಾಗಿ ಕಲ್ಯಾಣದಲ್ಲಿ ಅಸಂಖ್ಯಾತ ಶರಣರ ಹತ್ಯಾಕಾಂಡವಾಯಿತು. ಶರಣರ ಸಹಸ್ರಾರು ವಚನ ಕಟ್ಟುಗಳನ್ನು ವೈದಿಕಶಕ್ತಿಗಳು ಸುಟ್ಟು ಹಾಕಿದವು, ಸಹಸ್ರಾರು ವಚನಕಟ್ಟುಗಳು ಬೆಂಕಿಗೆ ಆಹುತಿಯಾದವು. ಸಕಲ ಮಾನವರನ್ನು ವಿಮೋಚನೆಗೊಳಿಸುವಂಥ ವಚನಸಾಹಿತ್ಯವನ್ನು ಶರಣರನ್ನು ಮನುವಾದಿಗಳು ಸಂಪ್ರದಾಯವಾದಿಗಳು ಕಂಡಲ್ಲಿ ನಾಶ ಮಾಡ ತೊಡಗಿದರು. ಶರಣರು ಮತ್ತು ಬಿಜ್ಜಳನ ಸೈನಿಕರ ನಡುವೆ ವಚನ ಸಾಹಿತ್ಯಕ್ಕಾಗಿ ಹೋರಾಟ ನಡೆಯಿತು, ನಂತರ ನಡೆದ ಆಂತರಿಕ ದಂಗೆಯಿಂದ ಕೊಂಡೆ ಮಂಚಣ್ಣನ ಕಡೆಯಿಂದ ಬಿಜ್ಜಳನು ಕೊಲ್ಲಲ್ಪಡುತ್ತಾನೆ. ಆಗ ಬಿಜ್ಜಳನ ಮಗನ ಅಧಿಕಾರದಲ್ಲಿ 12ನೇ ಶತಮಾನದ ಕಲ್ಯಾಣ ಕ್ರಾಂತಿಯಾಗುತ್ತದೆ , ಅವರ ಸೈನ್ಯ ಶಸ್ತ್ರಾಸ್ತ್ರಗಳಿಂದ ಶರಣರ ಮೇಲೆ ದಾಳಿ ಮಾಡಿದರು ಕೂಡ ಶರಣರು ಅಹಿಂಸಾ ವಾದಿಗಳಾಗಿ ಪ್ರತಿರೋಧ ವ್ಯಕ್ತಪಡಿಸಿದರೂ ಶಸ್ತ್ರಾಸ್ತ್ರ ಬಳಸದೇ ಪ್ರಾಣ ತ್ಯಾಗ ಮಾಡಿದರು ಶರಣರು, ಈ ಅನಿರೀಕ್ಷಿತ ಕ್ರಾಂತಿಯಿಂದ ಶರಣರು ಚೆಲ್ಲಾಪಿಲ್ಲಿಯಾಗುತ್ತಾರೆ. ಬಸವಣ್ಣನವರಿಗೆ ಗಡಿಪಾರು ಶಿಕ್ಷೆ ವಿಧಿಸಲಾಗುತ್ತದೆ, ರಾಜನಿಗಿಂತ ಜನಪ್ರಿಯರಾದ ಬಸವಣ್ಣನವರು ಹಗಲು ಕಲ್ಯಾಣ ತೊರೆದರೆ ಪ್ರಜೆಗಳೆಲ್ಲ ದಂಗೆ ಏಳುತ್ತಾರೆ ಎಂದು ಮಧ್ಯೆರಾತ್ರಿ 12ಕ್ಕೆ ಬಸವಣ್ಣನವರನ್ನು ಗಡಿಪಾರು ಮಾಡಲಾಗುತ್ತದೆ ಬಳಿಕ ಸಂಗಮಕ್ಕೆ ಮರಳಿ ಇಲ್ಲಿಯೇ ಐಕ್ಯರಾದರೆಂದೂ ಇತಿಹಾಸ ತಿಳಿಸುತ್ತದೆ.

ಬಾದಾಮಿಯಿಂದ 77 ಕಿ.ಮೀ ದೂರದಲ್ಲಿರುವ ಕೂಡಲ ಸಂಗಮವು ಕೃಷ್ಣಾ, ಮಲಪ್ರಭಾ ಮತ್ತು ಘಟಪ್ರಭಾ ನದಿಗಳು ಕೂಡುವ ಸ್ಥಳವಾಗಿದ್ದು, ಇಲ್ಲಿನ ಬೃಹತ್ ಗೋಪುರವು ಸುಮಾರು 5-6 ಕಿ.ಮೀ ದೂರದಿಂದಲೇ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತದೆ. ಬಸವಣ್ಣನವರ ಐಕ್ಯಮಂಟಪ ಮತ್ತು ಹೊಸ ವಿನ್ಯಾಸದಿಂದ ಕಂಗೊಳಿಸುತ್ತಿರುವ ಸಂಗಮೇಶ್ವರ ದೇವಾಲಯದ ಸುತ್ತಲೂ ಉದ್ಯಾನವನಗಳಿವೆ. ಕಪ್ಪಡ ಸಂಗಮ ಎಂಬ ಇನ್ನೊಂದು ಹೆಸರಿನಿಂದ ಕರೆಯಲ್ಪಡುವ ಇಲ್ಲಿ ಚಾಲುಕ್ಯ ಶೈಲಿಯಲ್ಲಿ ನಿರ್ಮಿತವಾಗಿರುವ ಸಂಗಮೇಶ್ವರ ಶಿವಲಿಂಗವು ಪ್ರಸಿದ್ಧವಾಗಿದೆ. ಇಲ್ಲಿ 65 ಅಡಿ ಎತ್ತರ, 100 ಅಡಿ ಅಗಲ ಮತ್ತು 12 ಅಡಿ ದಪ್ಪವಿರುವ 26 ಕಂಬಗಳ ಮೇಲೆ ನಿಂತಿರುವ ಚಾಲುಕ್ಯ ಶೈಲಿಯ ಮಹಾದ್ವಾರವಿದ್ದು, ಇದರೊಳಗೆ ಪ್ರವೇಶಿಸುವಾಗಲೇ 7 ಅಡಿ ಎತ್ತರದ ಪೂಜಾ ನಿರತನಾಗಿರುವ ಬಾಲಬಸವಣ್ಣನ ಪ್ರತಿಮೆಯು ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಸುಮಾರು 24 ಎಕರೆಯಷ್ಟು ವಿಶಾಲವಾದ ಜಾಗದಲ್ಲಿರುವ ಈ ಕ್ಷೇತ್ರದಲ್ಲಿ ಪೂಜಾ ವನ, ಬಾಲವನ ಹಾಗೂ ಜಲವನಗಳಿದ್ದು, ಇವುಗಳಲ್ಲಿ ವಿವಿಧ ಬಗೆಯ ಫಲಪುಷ್ಪಗಳ ವನಗಳಿದ್ದು, ಪ್ರವಾಸಿಗರು ಕುಟುಂಬ ಸಮೇತರಾಗಿ ಇಲ್ಲಿ ಸಮಯವನ್ನು ಕಳೆಯಬಹುದು. ಪ್ರಸಿದ್ಧ ಶೈವ ಯತಿ ಜಾತವೇದ ಮುನಿಯು ಕ್ರಿ.ಶ.12 ನೇ ಶತಮಾನದಲ್ಲಿ ಇಲ್ಲಿ ವಿದ್ಯಾಕೇಂದ್ರ ಸ್ಥಾಪಿಸಿದರೆಂಬ ಪ್ರತೀತಿ ಇದೆ. ಇಲ್ಲಿನ ಅಂತಾರಾಷ್ಟ್ರೀಯ ಬಸವ ಕೇಂದ್ರವು 6 ಅಂತಸ್ತು ಹಾಗೂ ಅಷ್ಟಕೋನದ ಭಿನ್ನವಾದ ಶೈಲಿಯಲ್ಲಿದ್ದು, ಈ ಗೋಪುರ 200 ಅಡಿ ಎತ್ತರ, 150 ಅಡಿ ಅಗಲವಿದೆ. ಅಷ್ಟಾವರಣ ಮತ್ತು ಷಟ್‌ಸ್ಥಲಗಳನ್ನು ಬಿಂಬಿಸುವ ಈ ಗೋಪುರಕ್ಕೆ ಹೊಂದಿಕೊಂಡು ಅಲಂಕೃತ ಉದ್ಯಾನವನ ನಿರ್ಮಿಸಲಾಗಿದ್ದು, ಇಲ್ಲಿ ಮೂರು ಪೌಳಿಗಳು ಹಾಗೂ ರಾಜ ಗೋಪುರಗಳನ್ನು ನಿರ್ಮಿಸಲಾಗಿದೆ.

ಇಲ್ಲಿ ಬಸವ ಸಾಗರ ಜಲಾಶಯದ ನಿರ್ಮಾಣದಿಂದಾಗಿ ಪ್ರಾಕೃತಿಕ ಚೆಲುವಿನಿಂದ ಶೋಭಿಸುತ್ತಿರುವ ಈ ಸುಂದರ ತಾಣ ಚಿನ್ನಕ್ಕೆ ಮುಕುಟವಿಟ್ಟಂತಿರುವುದು ವಿಶ್ವವಿಖ್ಯಾತಿಯನ್ನು ಹೊಂದಿರುವ ವಿಶ್ವಗುರು ಬಸವಣ್ಣನವರ ಪಾದದ ಸ್ಪರ್ಶದಿಂದಾಗಿ. ಇಂದು ಕೂಡಲಸಂಗಮವು ಅಂತಾರಾಷ್ಟ್ರೀಯ ಬಸವ ಕೇಂದ್ರವಾಗಿ ಹೊರಹೊಮ್ಮಿದ್ದು, ಇಲ್ಲಿ ಕರ್ನಾಟಕ ಸರಕಾರ ಬಸವ ಗೋಪುರ ಮತ್ತು ಬಸವ ಅಂತಾರಾಷ್ಟ್ರೀಯ ಕೇಂದ್ರವನ್ನು ನಿರ್ಮಿಸಿದೆ. ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಮಂಟಪವನ್ನು ವಿಶಿಷ್ಟ ರೀತಿಯ ಆಧುನಿಕ ವಾಸ್ತುಶಿಲ್ಪದಲ್ಲಿ ನಿರ್ಮಿಸಿ ಸಂರಕ್ಷಿಸಲಾಗಿದ್ದು, ಜೀವಿತಾವಧಿಯಲ್ಲಿ ಒಮ್ಮೆಯಾದರೂ ಸಂದರ್ಶಿಸಬೇಕಾದ ಸ್ಥಳವಿದು. ಮಲಪ್ರಭಾ ಮತ್ತು ಕೃಷ್ಣಾ ನದಿಗಳ ಸಂಗಮ ಸ್ಥಳವಾಗಿರುವ ಇಲ್ಲಿ ವೃತ್ತಾಕಾರವಾದ ಗೋಪುರವನ್ನು ನಿರ್ಮಿಸಲಾಗಿದ್ದು, ಪ್ರವಾಸಿಗರು ಆಳಕ್ಕೆ ವೃತ್ತಾಕಾರವಾಗಿ ನಿರ್ಮಿಸಲಾಗಿರುವ ಮೆಟ್ಟಿಲುಗಳ ಮೂಲಕ ಇಳಿಯಬೇಕು, ಮತ್ತು ಮೇಲಕ್ಕೆ ಏರಲು ಪ್ರತ್ಯೇಕವಾದ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಈ ಗೋಪುರವು ಮಳೆಗಾಲದಲ್ಲಿ ಉಭಯ ನದಿಗಳ ಸಂಗಮದಿಂದಾಗಿ ಮುಕ್ಕಾಲು ಬಾಗ ಮುಳುಗಡೆಯಾಗುತ್ತದೆ. ಅಗಾಧವಾದ ಜಲರಾಶಿಯ ಮಧ್ಯದಲ್ಲಿ ಪ್ರವಾಸಿಗರು ನೀರನ್ನು ಕೊರೆಯುತ್ತಾ ಆಳಕ್ಕೆ ಇಳಿದಂತೆ ಭಾಸವಾಗುತ್ತದೆ. ಕೆಳಗೆ ಇಳಿದಾಗ ವಿಭಿನ್ನವಾದ ಮಂಟಪದಲ್ಲಿ ಲಿಂಗವೊಂದನ್ನು ಪ್ರತಿಷ್ಠಾಪಿಸಿದ್ದು, ಇಲ್ಲೇ ಬಸವಣ್ಣನವರು ಐಕ್ಯಗೊಂಡರೆಂದು ಹೇಳಲಾಗುತ್ತದೆ.

ಇಲ್ಲಿನ ಚಾಲುಕ್ಯ ಶೈಲಿಯ ಸಂಗಮನಾಥ ದೇವಾಲಯ, ಬಸವೇಶ್ವರ ಐಕ್ಯ ಮಂಟಪ, ಬಸವ ಧರ್ಮಪೀಠದ ಅರಮನೆ ಆವರಣ ಪೂಜಾವನ, ಆರು ಸಾವಿರ ಮಂದಿ ಕುಳಿತುಕೊಳ್ಳಲು ಸ್ಥಳಾವಕಾಶವಿರುವ ಸಭಾ ಭವನ, (ಇದರ ನಾಲ್ಕು ದ್ವಾರಗಳನ್ನು ಗಂಗಾಂಬಿಕೆ, ನೀಲಾಂಬಿಕೆ, ಚನ್ನಬಸವಣ್ಣ ಮತ್ತು ಅಕ್ಕನಾಗಮ್ಮ ಎಂದು ಹೆಸರಿಸಲಾಗಿದೆ.) ಬಸವ ಗೋಪುರ, ಬಸವ ಅಂತಾರಾಷ್ಟ್ರೀಯ ಕೇಂದ್ರ, ಬಸವಾದಿ ಶರಣರ ಕಾಲದ ಶಿಲ್ಪಗಳು ಮತ್ತು ಕರ್ನಾಟಕ ಇತಿಹಾಸ ಸಂಬಂಧಪಟ್ಟ ವಸ್ತುಗಳ ವಸ್ತು ಸಂಗ್ರಹಾಲಯಗಳನ್ನು ಪ್ರವಾಸಿಗರು ವೀಕ್ಷಿಸಬಹುದು. ನದಿಯ ದಡದಲ್ಲಿರುವ ಕಲ್ಲು ಕಟ್ಟಡದ ಈ ದೇವಾಲಯದ ಮೇಲೆ ಗಾರೆಗಚ್ಚಿನ ಗೋಪುರಗಳಿವೆ. ಪ್ರತಿ ಗೋಪುರದ ಮೇಲೂ ಕಳಶವಿದೆ. ವಿಶಾಲವಾದ ಪ್ರಾಕಾರವುಳ್ಳ ದೇವಾಲಯ ನಯನ ಮನೋಹರವಾಗಿದೆ. ಇಲ್ಲಿನ ಪ್ರಧಾನ ಗರ್ಭಗೃಹದಲ್ಲಿ ಸುಂದರ ಶಿವಲಿಂಗವಿದೆ. ಇಲ್ಲಿ ಪ್ರಮುಖವಾದ ಎರಡು ತಾಣಗಳೆಂದರೆ ಐಕ್ಯ ಮಂಟಪ ಮತ್ತು ಕೂಡಲ ಸಂಗಮದೇವನ ದೇವಾಲಯ. ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಈ ಎರಡೂ ತಾಣಗಳು ಮುಳುಗಡೆಯಾಗುವ ಭೀತಿ ಎದುರಿಸಿದ್ದವು. ದೇವಾಲಯವನ್ನು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆಯೂ ಆಗಿನ ಸರ್ಕಾರ ಚಿಂತಿಸಿತ್ತು. ಆದರೆ ರಾಜ್ಯದಾದ್ಯಂತ ನಡೆದ ವ್ಯಾಪಕ ಹೋರಾಟದಿಂದಾಗಿ ಸರ್ಕಾರ ತನ್ನ ನಿರ್ಧಾರವನ್ನು ಕೈಬಿಟ್ಟು, ಕೂಡಲ ಸಂಗಮ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಈ ಕ್ಷೇತ್ರವನ್ನು ಆಕರ್ಷಣೀಯ ತಾಣವನ್ನಾಗಿ ಮಾಡಲು ನಿರ್ಧರಿಸಿತು. ಹೀಗಾಗಿ 1994 ರಿಂದ ಈಚೆಗೆ ಇಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಲಿದೆ.

ಬಸವಣ್ಣರ ಐಕ್ಯ ಕ್ಷೇತ್ರವಾದ ಕೂಡಲ ಸಂಗಮಕ್ಕೆ ಸೆಪ್ಟೆಂಬರ್ ತಿಂಗಳಿನಿಂದ ಫೆಬ್ರವರಿ ತಿಂಗಳಿನ ಅವಧಿಯಲ್ಲಿ ಹೋದಲ್ಲಿ ಅಗಾಧ ಜಲರಶಿ ಮಧ್ಯೆಯಿರುವ ಐಕ್ಯ ಮಂಟಪವನ್ನು ನೋಡುವ ವಿಭಿನ್ನ ಅನುಭವವನ್ನು ಪಡೆಯಬಹುದು. ಉಳಿದ ಅವಧಿಯಲ್ಲಿ ಗಾಢ ಬಿಸಿಲಿರುವ ಕಾರಣ ನದಿಯಲ್ಲಿ ನೀರೂ ಇಲ್ಲದೆ ಇರುವುದರಿಂದ ಈ ಅವಧಿಯಲ್ಲಿ ಹೋಗುವುದು ಅಷ್ಟೊಂದು ಸೂಕ್ತವಲ್ಲ.

ಸಂತೋಷ್ ರಾವ್ ಪೆರ್ಮುಡ
ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160

Related post

Leave a Reply

Your email address will not be published. Required fields are marked *