ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ-4

–ಹಾರ್ಗೀಸಾ ಸೇರಿದೇವು–

ಇನ್ನೇನು ನಮ್ಮ ಬದುಕಿನ ಆ ಒಂದು ದಿನದ ಏಡನ್ ವಾಸದ ಅಂತಿಮ ಘಳಿಗೆ ಬಂದೇಬಿಟ್ಟಿತು ಅಂದುಕೊಂಡಾಗ, ಇಂಥ ಒಂದು ದೇಶಕ್ಕೆ, ದೇವರೇ ತೊರೆದು (godforsaken) ಹಾಳುಸುರಿವಂತೆ ತೋರುವ ನಾಡಿಗೆ, ಮತ್ತೆ ಎಂದಾದರೂ ಬರುವ ಸಾಧ್ಯತೆ ಖಂಡಿತ ಇಲ್ಲ ಎಂದು ಮನಸ್ಸು ಲೊಚಗುಡುತ್ತಿತ್ತು. ಅಷ್ಟು ಹೊತ್ತಿಗೆ ಬೋರ್ಡಿಂಗ್ ಆರಂಭ ಎಂಬ ಕರೆ ಧ್ವನಿವರ್ಧಕದಲ್ಲಿ ಪ್ರತಿಧ್ವನಿಸಿತು. ಕಮಲ ನನ್ನ ಕೈ ಹಿಡಿದೇ ಸಣ್ಣಸಣ್ಣ ಹೆಜ್ಜೆಗಳಲ್ಲೇ ನಡೆಯತೊಡಗಿದಳು. ಆ ಕಾಲಕ್ಕೆ ನಮ್ಮ ಬೆಂಗಳೂರಿನಂತೆ ಅಲ್ಲೂ ಸಹ ನಡಿಗೆಯಲ್ಲೇ ಹೋಗಿ ವಿಮಾನ ಹತ್ತಬೇಕಿತ್ತು. ಏರೋಬ್ರಿಡ್ಜ್ ಮಟ್ಟಕ್ಕೆ ಅಂತಹ ಸಣ್ಣಸಣ್ಣ ನಿಲ್ದಾಣಗಳು ಆಗಿನ್ನೂ ಏರಿರಲಿಲ್ಲ – ಅವು ಜಂಬೋ ಜೆಟ್ ಗಾತ್ರದ ವಿಮಾನಳಾದರೂ ಸಹ.


ಏಡನ್ನಿನತ್ತ ತಿರುಗಿ ಇನ್ನೆಂದೂ ಬರಲ್ಲ ಅಂತ ಬೈಬೈ ಹೇಳು ಅಂದಾಗ, ಕೈ ಹಿಡಿದ ಹಾಗೇ ನನ್ನ ಮುಖ ನೋಡಿ ನಕ್ಕಳು, ನನ್ನ ಮಡದಿ. ನಮ್ಮ ಮನಸ್ಸಿನಲ್ಲಿ ‘ಆರನೆ ಇಂದ್ರಿಯ’ದ (sixth sense) ರೀತಿ ಕೆಲವು ವಿಚಾರ ಹೊಳೆದರೂ, ಅವು ಕೆಲವು ಸಲವಾದರೂ ಜರುಗದೇ ಇರಬಹುದು. ಹಾಗೆಯೇ ನನಗೆ ಇನ್ನೆಂದೂ ಈ ದೇಶಕ್ಕೆ ಬರುವುದೇ ಇಲ್ಲ ಅನಿಸಿದ್ದೂ ಸುಳ್ಳಾಯಿತು. ಇನ್ನೊಮ್ಮೆ, ಬಹಳ ವರ್ಷಗಳ ನಂತರದ ಪ್ರಯಾಣದಲ್ಲಿ, ಬಾಂಬೆ ನೈರೋಬಿ ಮೂಲಕ ಮೊಗದಿಶುಗೆ (ಸೋಮಾಲಿ ರಾಜಧಾನಿ) ಬರುವಾಗ, ನಮಗರಿವಿಲ್ಲದೆ ಇದೇ ಮಾರ್ಗದ ಏರ್ ಇಂಡಿಯ ಫ್ಲೈಟ್ ನಲ್ಲಿ ಬಂದಿದ್ದೆವು – ಮನಸ್ಸು ನುಡಿವುದೊಂದು ಅಥವ ಎಣಿಸುವುದೊಂದು, ಆದರೆ ನಿಜದಲ್ಲಿ ನಡೆವುದೇ ಇನ್ನೊಂದು! ಆ ಸಮಯ, ಮೊದಲು ಏಡನ್ನಿನಲ್ಲಿ, ನಂತರ ಆಡಿಸ್ ಅಬಾಬದಲ್ಲಿ ಒಂದೊಂದು ಘಂಟೆ ವಿಮಾನದೊಳಗೇ ಏರ್ ಕಂಡೀಶನ್ ಇಲ್ಲದೇ ಕೂತು ಕೊಳೆ ಹಾಕಿಸಿಕೊಂಡಿದ್ದೆವು. ಸಾಮಾನ್ಯವಾಗಿ ವಿಮಾನ ಎರಡು ಮೂರು ನಿಲ್ದಾಣಗಳಲ್ಲಿ ಇಳಿದು ಮತ್ತೆ ಹೊರಡುವಂತಿದ್ದರೆ, ಅಂತಹ ಕಡೆ ಇಂಧನ ಉಳಿತಾಯಕ್ಕಾಗಿ, ಏರ್ ಕಂಡೀಶನ್ ಆಫ್ ಮಾಡುವುದು ರೂಢಿ.


ಏಡನ್ ವಿಮಾನ ನಿಲ್ದಾಣದಲ್ಲೂ ಸುಂಕರಹಿತ ಅಂಗಡಿಗಳು (Duty free shops) ಇದ್ದರೂ ಅವುಗಳ ಬಗ್ಗೆ ನನಗೆ ಆಗಿನ್ನೂ ತಿಳಿದಿರಲಿಲ್ಲ; ಒಳಗೆ ಕೆಲ ಅಂಗಡಿಗಳಿದ್ದದ್ದನ್ನು ಕಂಡರೂ ಸಹ. ಬಾಂಬೆಯಲ್ಲಿ ನಾವು ಏರ್ ಪೋರ್ಟ್ ತಲುಪಿದಾಗಲೆ ತಡವಾಗಿದ್ದರಿಂದ, ಅಂಥ ಅಂಗಡಿಗಳ ಕಡೆ ನೋಡಲೂ ಆಗಿರಲಿಲ್ಲ. ಗೊತ್ತಿದ್ದರೆ ಅಣ್ಣನಿಗಾಗಿ ಏಡನ್ನಿನಲ್ಲಿ ಒಂದೆರಡು ವಿದೇಶಿ ವ್ಹಿಸ್ಕಿ ಬಾಟಲುಗಳನ್ನಾದರೂ ಕೊಂಡು ಕೊಳ್ಳುತ್ತಿದ್ದೆ. ಹೇಗಿದ್ದರೂ ನನ್ನಲ್ಲಿ ಡಾಲರು ಉಳಿದಿತ್ತು. ಅಂತಹ ಅಂಗಡಿಗಳಲ್ಲಿ ಡಾಲರ್ ಮುಂತಾದ ಅಂತರರಾಷ್ಟ್ರೀಯವಾಗಿ ಚಲಾವಣೆಯಿರುವ ಹಣ ಮಾತ್ರ ಕೊಡಬೇಕು. ಇನ್ನೂ ಅನೇಕ ರೀತಿ, ಅಂತರರಾಷ್ಟ್ರೀಯ ಮಟ್ಟದ ವಸ್ತುಗಳು ಡ್ಯೂಟಿ ಫ್ರೀ ದೊರಕುತ್ತವೆ. ಅಣ್ಣ ಕೂಡ ಈ ಡ್ಯೂಟಿ ಫ್ರೀ ಅಂಗಡಿಗಳ ವಿಷಯ ತಿಳಿಸಿರಲಿಲ್ಲ. ಆಗಿನ ಕಾಲ ಎಲ್ಲವೂ ಪತ್ರವ್ಯವಹಾರದ ಮೂಲಕವೇ ಆಗಬೇಕಾಗಿದ್ದುದರಿಂದ, ಅಣ್ಣ ಆದರೂ ಏನೆಲ್ಲ ತಿಳಿಸಲು ಸಾಧ್ಯ ಇತ್ತು, ಹೇಳಿ? ಹಾಗೆಯೇ ಈಗ ಕ್ಷಣಾರ್ಧದಲ್ಲಿ ಏನೆಲ್ಲ ಲಭ್ಯ ನೋಡಿ. ಕೇವಲ ಕೆಲವೇ ದಶಕಗಳ ಉತ್ಕರ್ಷ ನಮ್ಮನ್ನು ಇಷ್ಟು ಬೆರಗು ಮಾಡುವುದಾದರೆ, ಆದಿಮಾನವ ಈಗ ಅಕಸ್ಮಾತ್ ಬಂದಿದ್ದೇ ಆದರೆ, ಏನಾಗಬಹುದು ಒಂದೇ ಕ್ಷಣ ಯೋಚಿಸಿ – ಆವಿಷ್ಕಾರಗಳೆಂಬ ಬೃಹತ್ ಶಿಖರವೇರಿರುವ ಮಾನವ
ಮತ್ತವನ ಮಹತ್ಸಾಧನೆ ಕಂಡು!

ಅಂದಿನ ಪ್ರಯಾಣಿಕರಲ್ಲಿ ನಾವಿಬ್ಬರೇ ಭಾರತೀಯರು. ಅಲ್ಲದೆ, ಒಂದಿಬ್ಬರು ಅರಬ್ಬರ ರೀತಿ ಬಿಳಿ ಬಣ್ಣದ ಉದ್ದ ನಿಲುವಂಗಿ ತೊಟ್ಟವರು, ಮತ್ತು ಒಬ್ಬ ಮಾತ್ರ ಪಾಶ್ಚಿಮಾತ್ಯನನ್ನುಳಿದು
ಬಾಕಿ ಎಲ್ಲರೂ ಸೋಮಾಲಿಗಳು ಅನ್ನಿಸಿತ್ತು.

ಆ ವಿಮಾನದ ಮಾದರಿ ಫಾಕರ್ ಫ್ರೆಂಡ್ ಶಿಪ್ ಎಂದು. ನಾವು ಬಾಂಬೆಯಿಂದ ಬಂದಂಥ ದೊಡ್ಡ ಜಂಬೋ ಅಲ್ಲ, ಚಿಕ್ಕದು. ನೆದರ್ಲೆಂಡ್ ದೇಶದ ‘ಫಾಕರ್’ ಎಂಬ ಕಂಪೆನಿ (Dutch Aircraft Manufacturer Fokker) 1955 ರಲ್ಲಿ ಮೊದಲ ಬಾರಿಗೆ ‘ಫಾಕರ್ ಎಫ್ 27 ಫ್ರೆಂಡ್ ಶಿಪ್’ (Fokker F27 Friendship) ಎಂಬ ಸಣ್ಣ ವಾಣಿಜ್ಯ ವಿಮಾನ ತಯಾರಿಸಿದರು. ಅದರ ಆಸನಗಳು ಆರಂಭಕ್ಕೆ 44 ಇದ್ದದ್ದು ಕ್ರಮೇಣ 52ಕ್ಕೆ ಏರಿಕೆ ಆಯಿತು. ಇಡೀ ಯೂರೋಪ್ ಖಂಡದಲ್ಲಿ ಬಹಳ ಪ್ರಸಿದ್ಧಿಯಾಗಿ, ಆಗಿನ ಕಾಲಕ್ಕೆ ಅತೀ ಹೆಚ್ಚು ಬಿಕರಿಯಾದ ವಿಮಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. 1987ರಲ್ಲಿ ಇದರ ತಯಾರಿಕೆ ನಿಲ್ಲಿಸಲಾಗಿದೆ. ಬೋಯಿಂಗ್, ಏರ್ ಬಸ್ ಅಂತಹ ದೊಡ್ಡದೊಡ್ಡ ವಿಮಾನಗಳನ್ನೇ ತಯಾರಿಸುವ ದೈತ್ಯ ಸಂಸ್ಥೆಗಳ ಉಗಮ ಆದಮೇಲೆ, ಫಾಕರ್ ಯಾವ ಲೆಕ್ಕ!

ಇಲ್ಲಿ ನನಗೆ ಇನ್ನೊಂದು ಸಂಕಷ್ಟ ಆರಂಭ ಆಗಿತ್ತು. ಟಿಕೆಟ್ ಕೌಂಟರಿನಲ್ಲಿ ಮೊಗದಿಶು ಎಂಬ ಕೂಪನ್ನುಗಳನ್ನು ಕೈ ಚೀಲಗಳಿಗಾಗಿ ಕೊಟ್ಟಾಗ, ನಾನು ಹಾರ್ಗೀಸಾದಲ್ಲಿ ಇಳಿಯಬೇಕು ಎಂದೆ. ಆಗ ‘ನಿಮ್ಮ ಟಿಕೆಟ್ ಇರುವುದೇ ಮೊಗದಿಶುಗೆ. ಹಾಗಾಗಿ ಸೂಟ್ಕೇಸುಗಳಲ್ಲೂ ಅದೇ ಟ್ಯಾಗ್ ಹಾಕಲಾಗಿದೆ’ ಎಂದರು. ‘ಬೇಕಾದರೆ ನೀವು ಹಾರ್ಗೀಸಾದಲ್ಲಿ ಇಳಿಯಬಹುದು; ಮುಂದೆ ನೀವೇ ಟಿಕೆಟ್ ಕೊಂಡು ಮೊಗದಿಶುಗೆ ಹೋಗಬಹುದು’ ಅಂದಿದ್ದರು. ಅದುವರೆಗೂ ನಾನು ಆ ಟಿಕೆಟ್ಟನ್ನೇ ಸರಿಯಾಗಿ ಅವಲೋಕಿಸಿರಲಿಲ್ಲ! ಬಹುಶಃ ಹೊರಟ ಖುಷಿ ಅಥವ ಹಾಗೆ ಪರೀಕ್ಷಿಸಬೇಕೆಂಬ ಅರಿವೇ ಇರಲಿಲ್ಲ ಅಂದರೂ ಆದೀತು. ಆ ಕ್ಷಣದಲ್ಲಿ ಮಾತ್ರ ನಾನು ಆ ಟಿಕೆಟ್ಟುಗಳನ್ನು ವಾಸ್ತವವಾಗಿ ಪೂರ್ತಿ ನೋಡಿದ್ದು! ಅಣ್ಣ ಏರ್ಪೋರ್ಟಿಗೆ ಬಂದು ನಮ್ಮ ಕಷ್ಟ ಪರಿಹರಿಸುತ್ತಾರೆ ಅಂದುಕೊಂಡು ಹತ್ತಿದ್ದೆವು. ಅಲ್ಲದೆ ಮೊಗದಿಶುವಿನಲ್ಲಿ ಯಾರೂ ಪರಿಚಯ ಇರಲಿಲ್ಲ. ನನಗೆ ಕೆಲಸ ಕೊಟ್ಟಿದ್ದವರ ಪ್ರತಿನಿಧಿ ನಿಲ್ದಾಣಕ್ಕೆ ಬಂದಿದ್ದರೆ ಸರಿ; ನಮಗೆ ಒಂದು ದಾರಿ ತೋರಿಸಬಹುದು. ಇಲ್ಲವಾದರೆ? ಹೀಗೆಲ್ಲ ಯೋಚನೆ ದಾರದುಂಡೆ ಥರ ಸಿಕ್ಕುಸಿಕ್ಕಾಗಿ ನನ್ನ ತಲೆಯಲ್ಲಿ ಸುತ್ತುತ್ತಿತ್ತು. ಪಾಪ ಕಮಲ ಇದಾವುದರ ಪರಿವೆಯೂ ಇಲ್ಲದೆ ಆರಾಮವಾಗಿ ಕಿಟಕಿ ಕಡೆ ಸೀಟು ಸಿಕ್ಕಿದ್ದರಿಂದ ಖುಷಿಯಿಂದ ಹೊರಗೆ ನೋಡತೊಡಗಿದ್ದಳು.

ವಿಮಾನದ ಮೇಲೆ ‘ಸೋಮಾಲಿ ಏರಲೈನ್ಸ್’ ಎಂದು ಬರೆದಿದ್ದುದನ್ನು ಮೆಟ್ಟಿಲೇರುವ ಮುನ್ನ ಗಮನಿಸಿ, ಎಲ್ಲ ದೇಶಗಳಲ್ಲೂ ಬಹುಶಃ ಅವರವರ ವಿಮಾನ ಸಂಸ್ಥೆಗಳೇ ರಾರಾಜಿಸುತ್ತವೆ ಅನಿಸಿತ್ತು.

ಅಂದಿನ ಆ ಫ್ರೈಟ್ ಭರ್ತಿ ಆಗಿತ್ತು. ಆದರೆ, ಏರ್ ಇಂಡಿಯಾ ವಿಮಾನದ ಒಳಗೆ ಕೇಳಿಸಿದ್ದ ಸುಶ್ರಾವ್ಯ ಶಾಸ್ತ್ರೀಯ ಸಂಗೀತ ಅಥವ ಅಂಥದೇ ಇನ್ನಾವುದೂ, ಅವರದೇ ದೇಶದ್ದಾದರೂ ಕೇಳಿಸಲಿಲ್ಲ. ಬದಲಿಗೆ ಬರೀ ಗಲಾಟೆ. ಈ ಜನ ತುಂಬ ಮಾತಿನ ಮಲ್ಲರು ಅನ್ನಿಸಿತ್ತು. ಸ್ವಲ್ಪ ಸಮಯ ಕುಳೆದು ವಿಮಾನ ಹೊರಟಾಗ ಎಂದೂ ಕೇಳರಿಯದ ಭಾಷೆಯಲ್ಲಿ, ಅಂತರರಾಷ್ಟ್ರೀಯ ವೈಮಾನಿಕಯಾನ ನಿಯಮದಂತೆ, ಅಕಸ್ಮಾತ್ ಯಾವುದಾದರೂ ದುರಂತ ಆದಲ್ಲಿ ಆಮ್ಲಜನಕದ ಉಪಯೋಗ ಮುಂತಾಗಿ, ಏರ್ ಇಂಡಿಯಾದ ರೀತಿ ಇಲ್ಲೂ ಸಹ ಗಗನ ಸಖಿಯೊಬ್ಬಳು ಎಲ್ಲರಿಗೂ ಕಾಣುವ ಹಾಗೆ ನಿಂತು ನಿರೂಪಿಸಿದಳು. ಈಗ ಗಗನ ಸಖಿಯರ ಬದಲಿಗೆ, ಎಲ್ಲ ಕಡೆ ಅದನ್ನೂ ಸಹ ಟಿವಿ ಪರದೆಯ ಮೇಲೆ ನಿರೂಪಿಸಲಾಗುತ್ತದೆ. ಅಂತೂ ವಿಮಾನ ಟೇಕ್ ಆಫ್ ಆಗಿ ಹಾರ್ಗೀಸಾದತ್ತ ಹಾರಿದಾಗ, ಮುಂದೆ ಬರುವುದನ್ನು ಬಂದ ನಂತರ ಎದುರಿಸೋಣ ಅನ್ನಿಸಿ, ನೆಮ್ಮದಿಯ ಉಸಿರು ಹೊರ ಹಾಕಿದೆ. ಏಡನ್ನಿನಿಂದ ಹಾರ್ಗೀಸಾ ಕೇವಲ ಒಂದು ಗಂಟೆಗೂ ಕಡಿಮೆ ಅವಧಿಯ ಪ್ರಯಾಣ.
ಮಧ್ಯಾಹ್ನದ ಉಟದ ಸಮಯ ಕೂಡ. ಇನ್ನೇನು ಬರಬಹುದು ಎಂದು ನನ್ನ ಹೆಂಡತಿಯ ಕಿವಿಯಲ್ಲಿ ಉಸುರಿದೆ. ಬೆಳಿಗ್ಗೆ ಬೇಗ ತಿಂಡಿ ತಿಂದಿದ್ದು ಬೇರೆ. ಜೊತೆಗೆ ಉಸಿರುಕಟ್ಟಿದಂಥ ತದೇಕ ಓಟ, ವೀಸಾ ಎಂಬ ರಹದಾರಿಗಾಗಿ. ಈ ಎಲ್ಲ ಒಟ್ಟುಗೂಡಿ ಜಠರದೊಳಗೆ ಹೊರಳುಕಲ್ಲಾಗಿ ಅರೆದು, ಹಸಿವಿನ ಬಾಧೆ ಚುಚ್ಚುತ್ತಿತ್ತು. ಜೊತೆಯಲ್ಲೇ ದಣಿದ ಪತ್ನಿಗೂ ಸಹ ಇರಬಹುದು. ಆದರೆ ಇಪ್ಪತ್ತು ನಿಮಿಷ ಕಳೆದರೂ, ಗಗನ ಸಖಿಯರ ಮಿಸುಕಾಟ ಇಲ್ಲದೆ ಬಹುಶಃ, ಕುಡಿಯಲೂ ಸಹ ಕಾಫಿ, ಟೀ ಅಥವ ಸಾಫ್ಟ್ ಡ್ರಿಂಕ್ಸ್ ಏನೂ ಸಿಗದು ಎಂಬುದು ಖಾತ್ರಿ ಆಗತೊಡಗಿತು. ಅನತಿ ಕಾಲದಲ್ಲೇ, ಸೀಟ್ ಬೆಲ್ಟ್ ಚಿಹ್ನೆಯು ಬೆಳಗಿತು. ಅಲ್ಲಿಗೆ ಪೂರ್ಣ ಕಾಫಿ-ತಿಂಡಿ ಇಲ್ಲದ ಚಿಹ್ನೆ ನಮ್ಮೊಳಗೂ ಹೊತ್ತಿಕೊಂಡಿತು! ಕೆಲವೇ ನಿಮಿಷಗಳಲ್ಲಿ ವಿಮಾನ ಇಳಿಯಲು ಆರಂಭಿಸಿತು.
ಲ್ಯಾಂಡ್ ಆದ ನಂತರ, ನಿಲ್ದಾಣದತ್ತ ವಿಮಾನ ನಿಧಾನ ಹೋಗುವಾಗಲೆ, ಧ್ವನಿವರ್ಧಕಕ್ಕೆ ಜೀವ ಬಂದು, ‘ನಾವೀಗ ಹಾರ್ಗೀಸಾ ಏರ್ಪೋರ್ಟ್ ತಲಪಿದ್ದಾಗಿದೆ; ಕಾರಣಾಂತರದಿಂದ ಮೊಗದಿಶುಗೆ ನಮ್ಮ ಮುಂದಿನ ಪ್ರಯಾಣ ಈ ದಿನ ಅಸಾಧ್ಯ ಆಗಿದೆ. ಆದ್ದರಿಂದ ಮೊಗದಿಶು ಪ್ರಯಾಣಿಕರಿಗೆ, ಈ ರಾತ್ರಿ ಹಾರ್ಗೀಸಾ ಹೋಟೆಲೆನಲ್ಲಿ ವಾಸ್ತವಕ್ಕೆ ಸೋಮಾಲಿ ಏರ್ ವೇಸ್ ಅವಕಾಶ ಮಾಡಿಕೊಡುವುದು. ಆದ ಅನಾನುಕೂಲಕ್ಕೆ ಕ್ಷಮೆ ಇರಲಿ’ ಎಂದು ಪ್ರಕಟಿಸಿದಾಗ, ನಮಗೆ ತುಂಬಾ ಖುಷಿಯಾಯಿತು. ಸದ್ಯ ಒಂದು ಸಂಕಷ್ಟಕ್ಕೆ ತೆರೆ ಬಿದ್ದಿತ್ತು.

ಇಳಿದು ಹೊರಗೆ ಕಣ್ಣಾಡಿಸಿದರೆ, ವಾಸ್ತವವಾಗಿ ಅದೊಂದು ‘ಏರ್ ಸ್ಟ್ರಿಪ್’ ಮಾದರಿ ಮಾತ್ರವಾಗಿತ್ತು. ವಿಸ್ತಾರವಾದ ರನ್ ವೇ ಇಲ್ಲದೆ, ಏರ್ಪೋರ್ಟ್ ಸೌಧ ಸಹ ದೊಡ್ಡದಾಗಿ ಕಾಣದೆ, ಅತಿ ಸಣ್ಣ ನಿಲ್ದಾಣ. ಅನತಿ ದೊರದಲ್ಲೇ ಇಮ್ಮಿಗ್ರೇಶನ್, ಕಸ್ಟಮ್ಸ್ ಮುಂತಾದ ಅನುಕೂಲಕ್ಕಾಗಿ, ಚಿಕ್ಕದೊಂದು ಕಟ್ಟಡ, ಸಣ್ಣಪುಟ್ಟ ವಿಮಾನಗಳ ಹಾರಾಟದ ನಿರ್ವಹಣೆಗಾಗಿ ಸಾಕು ಎಂಬಷ್ಟು ಮಾತ್ರ ಇತ್ತು. ಎಲ್ಲರೊಡನೆ ನಾವೂ ಸೇರಿ ಕ್ಯೂ ಇರಬಹುದು ಎಂದು ಅವರ ಹಿಂದೆ ಸೇರಿಕೊಂಡು, ನಮ್ಮ ಮುಂದೆಯೇ ಜರುಗುವುದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸತೊಡಗಿದೆವು. ಅಲ್ಲಿ ಶಿಸ್ತುಬದ್ಧ ಅಂತ ಯಾವುದೂ ಸಾಗುತ್ತಿರಲಿಲ್ಲ, ಪ್ರಯಾಣಿಕರಲ್ಲಾಗಲಿ ಅಥವ ಅಧಿಕಾರಿಗಳಲ್ಲಾಗಲಿ. ಅಷ್ಟು ಹೊತ್ತಿಗೆ ಅಲ್ಲಿಯ ಕೆಲವರಿಗೆ ನನ್ನ ಮಡದಿ ಒಂದು ರೀತಿಯ ‘ಗಿನ್ನಿಪಿಗ್’ ಥರ ಆಗಿದ್ದಳು! ಒಬ್ಬೊಬ್ಬರೂ ತಂತಮ್ಮ ಕೈಚಳಕ ಆರಂಭಿಸಿದ್ದರು! ಒಬ್ಬ ಹೆಂಗಸು ಇವಳ ಜಡೆ ಹಿಡಿದು (ಎಳೆದು ಅಂದರೂ ಆದೀತು!), ಅಳೆದಳೆದು ನೋಡಿದ ಹಾಗೆ, ತಮಗಿರದಂತಹ ಉದ್ದುದ್ದ ಕೂದಲು ಕಂಡು ಆಶ್ಚರ್ಯದಿಂದ ವಿಶೇಷ ಎಂಬಂತೆ ನೋಡಿದರೆ, ಇನ್ನೊಬ್ಬಳು ಇವಳ ಸೀರೆ, ಮತ್ತೊಬ್ಬಳು ಮೂಗುತಿ ಮುಂತಾಗಿ ಮುಟ್ಟಿಮುಟ್ಟಿ ನೋಡುತ್ತಾ, ಸಣ್ಣ ಅವಾಂತರವನ್ನೇ ಸೃಷ್ಟಿಸಿ ತಮ್ಮ ತಮ್ಮಲ್ಲೇ ಏನೇನೋ ಮಾತನಾಡಿಕೊಂಡು ಕುಶಾಲುಪಡತೊಡಗಿದ್ದರು. ಅದರ ನಡುವೆ, ಒಬ್ಬ ಹೆಂಗಸು, ಎದ್ದು ಕಾಣುತ್ತಿದ್ದ ಇವಳ ಹೊಟ್ಟೆಯ ಮೇಲೆ ಇವಳದೇ ಸೀರೆ ಎಳೆದೆಳೆದು ಮುಚ್ಚುವ ಪ್ರಯತ್ನ ಮಾಡುತ್ತಿದ್ದಳು (ಕಾರಣ ಅವರಲ್ಲಿ ಸ್ತನಗಳೇ ಹೊರಗೆ ಕಂಡರೂ ಸಹ ಪರವಾಗಿಲ್ಲ, ಆದರೆ ಹೊಟ್ಠೆ ಕಾಣಕೂಡದಂತೆ; ಹೊಟ್ಟೆ ಅವರ ಗಂಡಸರನ್ನು ಉದ್ರೇಕಿಸುವುದಂತೆ! ಅದೇ ಸ್ತನ ಆದರೆ ಎಳೆಮಕ್ಕಳು ಹಾಲುಣ್ಣುವ ಭಾಗವಾದ್ದರಿಂದ, ಅದು ಆ ರೀತಿಯಲ್ಲಿ ಮುಖ್ಯ ಅಲ್ಲವಂತೆ. ಈ ವಿಷಯ ಅಲ್ಲಿ ವಾಸ ಆರಂಭಿಸುತ್ತಾ ಹೋದಂತೆ ಮುಂದಿನ ದಿನಗಳಲ್ಲಿ ನಮಗೆ ಅರಿವಾಯ್ತು! ಅವರೆಲ್ಲರೂ ಇಂಥ ಒಂದು ನಮೂನೆ ‘ಅನ್ಯ ಜಗದ ಜೀವಿ’ಯನ್ನು ಪ್ರಪ್ರಥಮ ಬಾರಿ ನೋಡುತ್ತಿದ್ದ ಹಾಗೆ! ಆದರೆ, ನನ್ನ ಅದೃಷ್ಟಕ್ಕೆ ಇವಳೇನೂ ಪ್ರತಿಕ್ರಿಯೆ ತೋರಿಸಲಿಲ್ಲ. ನಾನೂ ಸಹ ಅಸಹಾಯಕನಾಗಿದ್ದೆ.


ಏಡನ್ನಿನ ರೀತಿ ಇಲ್ಲಿಯೂ ಸಹ ನಾವೇ ಕೊನೆಯವರಾಗಿ ಕಸ್ಟಮ್ಸ್ ಹಾಗೂ ಇಮ್ಮಿಗ್ರೇಶನ್ ಕೌಂಟರ್ ತಲಪಿದ್ದು. “ಯೂ ಹಿಂದಿ?” ಎಂದು ಅವರಲ್ಲಿ ಒಬ್ಬ ಪ್ರಶ್ನಿಸಿದ್ದ ತಕ್ಷಣಕ್ಕೆ, ನಾನು ತಬ್ಬಿಬ್ಬಾದದ್ದು ಕಂಡ ಅವನೇ, “ಆರ್ ಯೂ ಇಂಡಿಯನ್?” ಎಂದ. ನಾನು ಖುಷಿಯಾಗಿ ಹೌದೆಂದಾಗ, “ಓಕೆ, ಕಸ್ಟಮ್ಸ್ ಓವರ್, ಯೂ ಕೆನ್ ಟೇಕ್ ಲಗ್ಗೇಜ್ ಅಂಡ್ ಗೋ” ಎಂದ. ಅದೇ ವೇಗದಲ್ಲಿ, ಅವನ ಪಕ್ಕ ನಿಂತಿದ್ದ ಇಮ್ಮಿಗ್ರೇಶನ್ ವ್ಯಕ್ತಿ, ಎರಡೂ ಪಾಸ್ಪೋರ್ಟ್ ಗಳಲ್ಲಿ “Entry/Gelid” (ಪ್ರವೇಶ/ಗೇಲಿದ್ – ಗೇಲಿದ್ ಅಂದರೆ ಸೋಮಾಲಿ ಭಾಷೆಯಲ್ಲಿ ಪ್ರವೇಶ ಎಂದು ನಂತರ ತಿಳಿಯಿತು) ಎಂಬ ಸೀಲ್ ಒತ್ತಿ, ಹೊರಗಿನ ಬಾಗಿಲತ್ತ ಕೈ ತೋರಿಸಿ, “ದಿಸ್ ವೇ” ಎಂದ.

ಬಾಗಿಲ ಬಳಿ ಇದ್ದ ಇನ್ನೊಂದು ಕೌಂಟರಿನಲ್ಲಿ ನಮ್ಮ ಟಿಕೆಟ್ ನೋಡಿ, ಹೊರಗೆ ನಿಂತಿದ್ದ ಗಾಡಿಯ ಚಾಲಕನನ್ನು ಕರೆದು, ನಮ್ಮನ್ನೂ ಹೋಟೆಲಿಗೆ ಕರೆದೊಯ್ಯಲು ಹೇಳಿದ. ನಾನು ಆತನಿಗೆ, ನಮ್ಮಣ್ಣ ಇಲ್ಲೇ ಗ್ರೂಪ್ ಆಸ್ಪತ್ರೆಯಲ್ಲಿ ಕಣ್ಣಿನ ವೈದ್ಯರಾಗಿದ್ದಾರೆ; ನಮ್ಮನ್ನು ಅವರ ಮನೆಗೆ ಬಿಡಿಸಲಾದೀತೆ ಎಂದು ಕೇಳಿದಾಗ, ಚಾಲಕನಿಗೆ ಅವರ ಭಾಷೆಯಲ್ಲಿ ತಿಳಿಸಿ, “ಓಕೆ, ಹಿ ವಿಲ್ ಟೇಕ್ ಯೂ” ಅಂದು ಕಳಿಸಿಕೊಟ್ಟ. ನನಗೆ ಇದೂ ನಂಬಲು ಸಾಧ್ಯವೇ ಅನ್ನಿಸಿತು!
ಹೊರಗೆ ನಿಂತಿದ್ದ ಫೋಕ್ಸ್ ವ್ಯಾಗನ್ ಕ್ಯಾಂಪರ್ ವ್ಯಾನ್ ಹತ್ತಿ ನೋಡಿದಾಗ, ಮೊದಲು ಬಂದಿದ್ದವರು ನಮಗಾಗೇ ಕಾಯುತ್ತಿದ್ದ ಹಾಗಿತ್ತು. ಸುಮಾರು ಹದಿನೈದು ನಿಮಿಷದ ಪ್ರಯಾಣದ ನಂತರ, ಸೀದ ಹೋಟೆಲೊಂದರ ಮುಂದೆ ನಿಲ್ಲಿಸಿ, “ಯೂ ಬಿ ಸೀಟೆಡ್” ಅಂತ ನಮಗೆ ಹೇಳಿ, ಉಳಿದವರನ್ನು ಇಳಿಸಿದ ನಂತರ “HARGEISA GROUP HOSPITAL” ಎಂಬ ದೊಡ್ಡ ಫಲಕ ಎದ್ದು ತೋರುತ್ತಿದ್ದ ವಿಶಾಲವಾಗಿದ್ದ ಆಸ್ಪತ್ರೆಯ ಮುಂದೆ ನಿಲ್ಲಿಸಿ, ಒಳಗೆ ಹೋಗಿ ಯಾರೋ ಇನ್ನೊಬ್ಬರ ಜೊತೆಗೂಡಿ ಬಂದು, ಇಬ್ಬರೂ ಮುಂದೆ ಕೂತು ಹೊರಟರು. ಅನತಿ ದೂರದಲ್ಲಿ ಆ ವಾಹನ ಮಿನಿ ಕಾಡಿನಂತಿದ್ದ ರಸ್ತೆಯತ್ತ ತಿರುಗಿತು. (ಇಂದಿನ ದಿನಗಳ ಹಾಗೆ, ಆಗ ಭಯ ಆಗಲಿಲ್ಲ; ಅಥವ ಅಂತಹ ವಾತಾವರಣ ಕೂಡ ಆ ದಿನಗಳಲ್ಲಿ ಇರಲಿಲ್ಲ). ಆ ವಾತಾವರಣ ಆನಂದಮಯ ಆಗಿದ್ದು, ನಡುನಡುವೆ ಒಂದೊಂದು ಸಣ್ಣಸಣ್ಣ ಬಂಗಲೆಗಳು ಕಂಡವು. ಅನತಿ ದೂರದಲ್ಲೇ ಅಂಥ ಮನೆಯೊಂದರ ಹತ್ತಿರ ವ್ಯಾನನ್ನು ನಿಲ್ಲಿಸಿ ಹಾರ್ನ್ ಮಾಡಿ ಇಬ್ಬರೂ ಕೆಳಗಿಳಿದರು. ಅಷ್ಟು ಹೊತ್ತಿಗೆ ಅಣ್ಣ ಅತ್ತಿಗೆ ಇಬ್ಬರೂ ಹೊರಬಂದರು. ಅಣ್ಣ ಆ ಸಹಾಯಕನಿಗೆ ಥ್ಯಾಂಕ್ಸ್ ಹೇಳುತ್ತಾ ಸ್ವಲ್ಪ ನೋಟುಗಳನ್ನು ಅವನ ಕೈಗಿತ್ತು, ಬಹುಶಃ ಚಾಲಕನಿಗೂ ಕೊಡಲು ಹೇಳಿ ಕಳಿಸಿದರು. ಖುಷಿಯ ಹೆಬ್ಬಾಗಿಲ ಹೊಸ್ತಿಲ ತುಳಿಯುತ್ತಿದ್ದಂತೆ ಭಾಸವಾಗಿ ಒಳನಡೆದೆವು!

ಮುಗಿದಿಲ್ಲ…

ಡಾ. ಅರಕಲಗೂಡು ನೀಲಕಂಠ ಮೂರ್ತಿ

Related post

4 Comments

  • ಬಹಳ ಚೆನ್ನಾಗಿ ಮೂಡಿಬರುತ್ತಿದೆ, ಮುಂದುವರೆಸಿ. ಅಭಿನಂದನೆಗಳು.

  • ರೊಚಕವಾಗಿ ಮೂಡಿಬರುತಿದೇ
    ಮುಂದಿನ ಕಂತುಗಳಿಗಾಗೀ ಕಾಯುವಂತೆ ಮಾಡಿದೆ
    ಡಾ.ಜಗನ್ಥಾಥ್.

  • ರೊಚಕವಾಗಿ ಮೂಡಿಬರುತ್ತಿದೆ,ಮುಂದಿನ ಕಂತುಗಳಿಗೇ
    ಕಾಯುವಂತೆ ಮಾಡಿದೆ .ಡಾ.ಜಗನಾಥ್.

  • Nicely coming out

Leave a Reply

Your email address will not be published. Required fields are marked *