ಕೋಪವನ್ನು ಗೆದ್ದವನು ಬದುಕನ್ನು ಗೆದ್ದಂತೆ

ಕೋಪವನ್ನು ಗೆದ್ದವನು ಬದುಕನ್ನು ಗೆದ್ದಂತೆ

ಇತಿಹಾಸದ ಪುಟಗಳನ್ನು ತಿರುವಿದಾಗ ಅಲ್ಲಿ ಗೋಚರಿಸುವ ಮಹಾನ್ ವ್ಯಕ್ತಿಗಳು ಹುಟ್ಟುತ್ತಲೇ ಮಹಾನ್ ವ್ಯಕ್ತಿಗಳಾಗಿ ಹುಟ್ಟಿಲ್ಲ ಬದಲಿಗೆ ಅವರು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡ ವಿಶೇಷ ಮೌಲ್ಯಗಳಿಂದಾಗಿ ಮಹಾನ್ ವ್ಯಕ್ತಿಗಳಾಗಿ ಗೋಚರಿಸಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳು ತಮ್ಮ ಬದುಕಿನಲ್ಲಿ ಅರಿಷಡ್ವೈರಿಗಳನ್ನು ಸಮರ್ಥವಾಗಿ ಗೆದ್ದಿದ್ದಾರೆ ಎನ್ನಬಹುದು.

ಮನುಷ್ಯನನ್ನು ಸದಾ ಕಾಡುವ ಅರಿಷಡ್ ವೈರಿಗಳ ಪೈಕಿ ಕಾಮ, ಕ್ರೋಧ, ಮೋಹ, ಲೋಭ, ಮದ, ಮತ್ಸರ ಇವುಗಳು ಪ್ರಮುಖವಾದದು. ಈ ಅರಿಷಡ್ವೈರಿಗಳು ಸದಾ ಯಶಸ್ವಿ ಮನುಷ್ಯನನ್ನು ಕಾಡುತ್ತಲೇ ಇರುತ್ತಿದ್ದು, ಈ ಅರಿಷಡ್ವೈರಿಗಳ ಹೊರತಾಗಿ ಮನುಷ್ಯನ್ನು ಸದಾ ಪೆಡಂಭೂತದಂತೆ ಕಾಡುತ್ತಿರುವ ಇನ್ನೊಂದು ಅಂಶವೆಂದರೆ ಅತಿಯಾದ ಕೋಪ. ಕೋಪದ ಕೈಗೆ ಬುದ್ಧಿಯನ್ನು ಕೊಡಬೇಡ, ಬದಲಿಗೆ ಬುದ್ಧಿಯ ಕೈಗೆ ಕೋಪವನ್ನು ಕೊಡು ಎಂದು ತಿಳಿದವರು ಹೇಳುವಂತೆ ಈ ಮಾತು ಅಕ್ಷರಶಃ ಸತ್ಯವೂ ಹೌದು. ಏಕೆಂದರೆ ಕೋಪದ ಹೊತ್ತಿನಲ್ಲಿ ನಾವು ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಊಹಿಸಲೂ ಅಸಾಧ್ಯ. ಅದಕ್ಕಾಗಿ ಕೋಪ ಬಂದಾಗ ಯೋಚಿಸಿ ನಿರ್ಧಾರಗಳನ್ನು ಕೈಗೊಂಡಲ್ಲಿ ಯಾವುದೇ ಅವಾಂತರಗಳು ನಡೆಯದೇ ಇರಲು ಸಾಧ್ಯ ಎಂದು ಹಿರಿಯರು ಹೇಳುತ್ತಾರೆ. ಹಾಗಂತ ಕೋಪವೇ ಇಲ್ಲದ ಮನುಷ್ಯನನ್ನು ಮನುಷ್ಯನೇ ಅಲ್ಲವೆಂದೂ ಹೇಳಬಹುದು. ಏಕೆಂದರೆ ಕೋಪ ಬರಬೇಕಾದ ಸಂದರ್ಭಗಳಲ್ಲಿ ಕೋಪವೇ ಬರದಿದ್ದಲ್ಲಿ ಆತ ಖಂಡಿತ ಯಶಸ್ವಿ ವ್ಯಕ್ತಿ ಆಗಲು ಸಾಧ್ಯವಿಲ್ಲ. ಆದರೆ ಕೋಪ ಎಲ್ಲಿ? ಹೇಗೆ? ಎಷ್ಟು? ಯಾವಾಗ? ಎಂಬ ವಿವೇಚನೆ ಸದಾ ನಮ್ಮಲ್ಲಿ ಇರುವುದು ಅತ್ಯಂತ ಒಳ್ಳೆಯದು. ಕೋಪದ ಕುರಿತು ತಿಳಿದವರು ಈ ರೀತಿಯ ವ್ಯಾಖ್ಯಾನವನ್ನು ನೀಡುತ್ತಾರೆ. ‘ಬಿಸಿಯಾದ ವರ್ತನೆಗೆ ಬಿಸಿಯಾಗಿ ವರ್ತಿಸುವುದು ರಾಕ್ಷಸಿ ಗುಣ’, ‘ಸಿಹಿಯಾದ ವರ್ತನೆಗೆ ಸಿಹಿಯಾಗಿ ವರ್ತಿಸುವುದು ಮನುಷ್ಯ ಸಹಜವಾದ ಗುಣ’, ಆದರೆ ‘ಬಿಸಿಯಾದ ವರ್ತನೆಗೆ ಸಿಹಿಯಾಗಿ ವರ್ತಿಸುವುದು ದೈವೀ ಗುಣ’ ಎಂದು ಹೇಳಿದ್ದಾರೆ. ಇದರರ್ಥ ನಮ್ಮೆದುರಿರುವ ವ್ಯಕ್ತಿಯು ಅತ್ಯಂತ ಕೋಪದಲ್ಲಿದ್ದಾಗ ಆ ವ್ಯಕ್ತಿಯೊಂದಿಗೆ ಕೋಪದಿಂದಲೇ ವರ್ತಿಸುವುದು ರಾಕ್ಷಸೀ ಪ್ರವೃತ್ತಿ ಎಂದೂ, ಶಾಂತವಾಗಿರುವ ವ್ಯಕ್ತಿಯ ಮುಂದೆ ನಾವೂ ಶಾಂತವಾಗಿಯೇ ವ್ಯವಹರಿಸುವುದು ಮನುಷ್ಯ ಸಹಜವಾದ ಗುಣವೆಂದೂ, ಕೋಪಗೊಂಡಿರುವ ವ್ಯಕ್ತಿಯನ್ನು ನಾವು ಶಾಂತ ಸ್ವಭಾವದಿಂದ ಮಾತನಾಡಿಸಿ ಆತನ ಹೃದಯವನ್ನು ಗೆಲ್ಲುವುದು ದೈವತ್ವದ ಗುಣವೆಂದು ಇದರ ಅರ್ಥ. ಹಾಗಾದರೆ ಎಲ್ಲಕ್ಕಿಂತ ಮಿಗಿಲಾಗಿ ಕೋಪವನ್ನು ಗೆಲ್ಲುವುದು ಹೇಗೆ ಎಂದು ತಿಳಿಯೋಣ ಬನ್ನಿ.

ಅನಿವಾರ್ಯ ಸಮಯ, ಸಂದರ್ಭಗಳು ಹಾಗೂ ಸನ್ನಿವೇಶಗಳು ಮನುಷ್ಯನನ್ನು ಸಾಮಾನ್ಯವಾಗಿ ಇನ್ನೊಬ್ಬರ ಮೇಲೆ ಸಿಟ್ಟಿಗೇಳುವಂತೆ ಮಾಡುತ್ತವೆ. ಆಗ ತನ್ನ ಸಂಸಾರದ ಮೇಲೆ, ತಾನು ಅತಿಯಾಗಿ ಪ್ರೀತಿಸುವ ವ್ಯಕ್ತಿಗಳ ಮೇಲೆ, ನಮ್ಮ ಸಹಪಾಠಿಗಳ ಅಥವಾ ಸಹೋದ್ಯೋಗಿಗಳ ಮೇಲೆ ಕಾರಣವಿಲ್ಲದೇ ಕೋಪದಿಂದ ಹರಿಹಾಯುತ್ತೇವೆ. ಇದರಿಂದ ಅದೆಷ್ಟೋ ಅತ್ಯುತ್ತಮವಾದ ಸಂಬಂಧಗಳ ಕಡಿದು ಹೋಗುವ ಸಾಧ್ಯತೆಗಳು ಅಧಿಕವಾಗಿರುತ್ತದೆ ಆದ್ದರಿಂದ ಕೋಪವನ್ನು ನಿಯಂತ್ರಿಸಿಕೊಳ್ಳಬೇಕೇನೋ ನಿಜ, ಅದಕ್ಕೂ ಮೊದಲು ಸಿಟ್ಟಿಗೆದ್ದ ಸಂದರ್ಭದಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂಬ ವಿವೇಚನೆಯನ್ನು ನಾವು ಹೊಂದಿರಬೇಕು. ಆದ್ದರಿಂದ ಕೋಪವನ್ನು ನಿಯಂತ್ರಿಸಿಕೊಳ್ಳಲು ಈ ಕೆಳಕಂಡ ವಿಚಾರಗಳ ಕುರಿತ ವಿಶೇಷ ಗಮನವಹಿಸುವುದು ಒಳಿತು.

1. ಸಂಬಂಧಗಳು ಅತ್ಯಂತ ಪವಿತ್ರವಾದುದು ಎನ್ನುವುದನ್ನು ಮರೆಯಬೇಡಿ: ಯಾವುದೇ ಕಾರಣಕ್ಕೂ ಸಿಟ್ಟು ನೆತ್ತಿಗೇರಿರುವ ಸಂದರ್ಭದಲ್ಲಿ ಯಾವುದೋ ವ್ಯಕ್ತಿಯ ನಡುವಿನ, ತಮ್ಮ ಸಂಬಂಧಿಗಳ ನಡುವಿನ ಅಥವಾ ತಮ್ಮ ಗೆಳೆಯರ ನಡುವಿನ ಸಂಬಂಧಗಳನ್ನು ಕಡಿದುಕೊಳ್ಳುವ ಮಾತನ್ನು ಯಾವತ್ತೂ ಆಡಬಾರದು. ಕೋಪದ ವೇಗದಲ್ಲಿ ಸಂಬಂಧವನ್ನು ಕಡಿದುಕೊಳ್ಳುವ ಮಾತನಾಡಿದಾಗ ನಾವು ಆ ಸಂದರ್ಭದಲ್ಲಿ ಗೆದ್ದೆವೆಂದು ಬೀಗಬಹುದು, ಆದರೆ ಇದರಿಂದ ದೀರ್ಘಕಾಲಿಕವಾಗಿ ನಾವೇ ವ್ಯಕ್ತಿಯನ್ನು ಅಥವಾ ಸಂಸ್ಥೆಯನ್ನು ಕಳೆದುಕೊಂಡು ಮುಂದೊಂದು ದಿನ ದುಃಖ ಪಡಬೇಕಾದ ಸಂದರ್ಭಗಳು ಒದಗಿ ಬರಬಹುದು ಎನ್ನುವುದನ್ನು ಎಂದೂ ಮರೆಯಬಾರದು.

2. ಕೋಪದ ರಭಸದಲ್ಲಿ ಯಾವುದೇ ಕಾರಣಕ್ಕೂ ಕೆಟ್ಟ ಭಾಷೆಯನ್ನು ಬಳಸಬೇಡಿ: ಕೆಟ್ಟದಾಗಿ ಕೋಪ ಬಂದು ಇನ್ನೇನು ಎರಡೇಟು ಬಿಗಿದು ಬಿಡಬೇಕು ಎನ್ನುವಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕೆಟ್ಟ ಭಾಷೆಯಿಂದ ಇತರರನ್ನು ಬಯ್ಯಬೇಡಿ. ಏಕೆಂದರೆ ನಾವು ಬಳಸುವ ಒಂದು ಶಬ್ದವು ಎರಡು ಮನಸ್ಸುಗಳನ್ನು ಒಂದುಗೂಡಿಸಬೇಕೇ ವಿನಃ ಅದೇ ಶಬ್ದವು ಎರಡು ಮನಸ್ಸುಗಳನ್ನು ವಿಘಟಿಸಬಾರದು. ನಮ್ಮ ಸಿಡುಕು ಬುದ್ಧಿಯನ್ನು ತಿಳಿದಿರುವವರು ನಮಗೆ ಕೋಪ ಬಂದಿರುವ ಸಂದರ್ಭದಲ್ಲಿ ನಮಗೆ ಹೊಂದಿಕೊಂಡು ಹೋಗಬಹುದು. ಆದರೆ ಸಿಟ್ಟು ಬಂದಾಗ ಅವಾಚ್ಯ ಶಬ್ದಗಳನ್ನು ಬಳಸಿದ ಪರಿಸ್ಥಿತಿಯನ್ನು ವಿಕೋಪಕ್ಕೆ ತಳ್ಳಬಹುದು ಹಾಗೂ ನಮ್ಮ ಮೇಲೆ ಆ ವ್ಯಕ್ತಿ ಇಟ್ಟಿರುವ ಅಭಿಪ್ರಾಯವನ್ನು ನಕಾರಾತ್ಮಕವಾಗಿ ಬದಲಾಯಿಸಬಹುದು ಜೋಕೆ.

3. ಕೋಪದ ಕಪಿಮುಷ್ಟಿಯೊಳಗೆ ಇರುವಾಗ ನಕಾರಾತ್ಮಕ ಚಿಂತನೆ ಸಲ್ಲದು: ಸಂದರ್ಭವೊಂದರಲ್ಲಿ ನಮ್ಮ ಒಡನಾಡಿ, ಸಹೋದ್ಯೋಗಿ ಅಥವಾ ಗೆಳೆಯನೇ ಆದರೂ ಕೋಪದ ಸಂದರ್ಭದಲ್ಲಿ ಅವರು ಕೆಟ್ಟ ವ್ಯಕ್ತಿಯಾಗಿ ನಮಗೆ ಕಂಡು ಬಂದರೂ ಪರವಾಗಿಲ್ಲ ಎಂದಿಗೂ ಅವರೊಂದಿನ ಸಂಬಂಧವನ್ನು ಶಾಶ್ವತವಾಗಿ ಕಳೆದುಕೊಳ್ಳಬೇಡಿ. ಏಕೆಂದರೆ ಒಂದು ಬಾರಿ ಸಂಬಂಧ ಕಡಿದು ಹೋಯಿತೆಂದರೆ ಆ ಸಂಬಂಧವನ್ನು ಮತ್ತೆ ವಾಪಾಸು ಪಡೆಯಲು ಖಂಡಿತಾ ಸಾಧ್ಯವಿಲ್ಲ. ಅದೇ ರೀತಿ ಕೋಪ ಬಂದಿರುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ನಕಾರಾತ್ಮಕವಾದಂತಹ ಚಿಂತನೆಯನ್ನು ಮಾಡಬೇಡಿ ಹಾಗೂ ಅಂತಹ ಸಂದರ್ಭದಲ್ಲಿ ಕೋಪಗೊಂಡಿರುವ ವ್ಯಕ್ತಿಯೊಂದಿಗೆ ಕಳೆದಿರುವ ಮಧುರ ಕ್ಷಣಗಳನ್ನು ನೆನಪಿಸಿಕೊಂಡು ನಮ್ಮ ಕೋಪವನ್ನು ನಿಧಾನವಾಗಿ ತಾಳಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು.

4. ಕೋಪ ಬಂದ ತಕ್ಷಣದಲ್ಲಿ ಯಾರಿಗೂ ಯಾವ ಪ್ರತಿಕ್ರಿಯೆಯನ್ನೂ ನೀಡಬೇಡಿ: ಕೋಪ ಬಂದಿರುವ ವಿಚಾರ ಎಷ್ಟೇ ತೀಕ್ಷ್ಣವಾಗಿದ್ದರೂ ಸರಿ ಯಾವುದೇ ಕಾರಣಕ್ಕೂ ಆ ಕ್ಷಣದಲ್ಲಿ ನಿಮ್ಮ ಭಾವನೆಯನ್ನು ತಿಳಿಸುವ ಮೂಲಕ ಯಾವುದೇ ಪ್ರತಿಕ್ರಿಯೆಯನ್ನೂ ನೀಡಬೇಡಿ. ಬದಲಾಗಿ ಆ ಸಂದರ್ಭದಲ್ಲಿ ಮನಸ್ಸಿನಲ್ಲಿ ಒಂದರಿಂದ ನೂರರವರೆಗಿನ ಅಂಕೆಗಳನ್ನು ನಿರಂತರವಾಗಿ ಗಣನೆ ಮಾಡುತ್ತಾ ನಿಮ್ಮ ಏಕಾಗ್ರತೆಯನ್ನು ಬೇರೆಡೆಗೆ ತಿರುಗಿಸುವ ಪ್ರಮಾಣಿಕ ಪ್ರಯತ್ನವನ್ನು ಮಾಡಿ. ಇದರಿಂದ ನಿಧಾನವಾಗಿ ನಿಮ್ಮ ಕೋಪವನ್ನು ನೀವೇ ತಣಿಸಿಕೊಳ್ಳುವ ಮೂಲಕ ಕೋಪ ಬಂದಿರುವ ವಿಚಾರವನ್ನು ಆ ಕ್ಷಣದಲ್ಲಿ ಆ ಘಟನೆ ನಡೆದೇ ಇಲ್ಲವೆಂಬಂತೆ ಇದ್ದುಬಿಡಿ. ಇದರಿಂದ ವ್ಯಕ್ತಿಯಾಗಿ ನಿಮ್ಮ ಘನತೆಯೂ ಉಳಿಯುವುದರೊಂದಿಗೆ ವ್ಯಕ್ತಿಗಳ ನಡುವಿನ ಸಂಬಂಧಗಳೂ ಶಾಶ್ವತವಾಗಿ ಉಳಿದು ಬಿಡುತ್ತದೆ.

5. ಮನಸ್ಸೆಂಬುದು ಕನ್ನಡಿ ಹಾಗೂ ಹಾಲು ಇದ್ದಂತೆ ಎನ್ನುವುದನ್ನು ಮರೆಯಬೇಡಿ: ಮನಸ್ಸನ್ನು ಸಾಮಾನ್ಯವಾಗಿ ಕನ್ನಡಿ ಮತ್ತು ಹಾಲಿಗೆ ಹೊಲಿಸುತ್ತಾರೆ. ಏಕೆಂದರೆ ಮನಸ್ಸು, ಹಾಲು ಮತ್ತು ಕನ್ನಡಿ ಒಂದು ಬಾರಿ ಒಡೆದರೆ ಮತ್ತೆ ಅವುಗಳನ್ನು ಯಾವುದೇ ಕಾರಣಕ್ಕೂ ಜೋಡಿಸಲು ಸಾಧ್ಯವಿಲ್ಲ ಎನ್ನುವುದೇ ಇದಕ್ಕೆ ಪ್ರಮುಖ ಕಾರಣ. ಅದರಿಂದ ಮುನಿಸಿಕೊಳ್ಳುವ ಮುನ್ನ ಹತ್ತು ಬಾರಿ ಯೋಚಿಸಿ ಹಾಗೂ ಕೋಪವನ್ನು ಮುಂದೂಡುವುದು ಒಳಿತು.

6. ವ್ಯಕ್ತಿಯ ನಡತೆಯ ಬಗ್ಗೆ ಯಾವುದೇ ರೀತಿಯ ಮಾತುಗಳನ್ನು ಆಡಬೇಡಿ: ಕೋಪದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಎದುರಿಗಿರುವ ವ್ಯಕ್ತಿಯ ಬಗ್ಗೆ ಅಥವಾ ಯಾವುದೇ ವ್ಯಕ್ತಿಯ ನಡತೆಯ ಬಗ್ಗೆ ಯಾವುದೇ ರೀತಿಯ ನಕಾರಾತ್ಮಕ ಅಥವಾ ಕೆಟ್ಟದಾದ ಮಾತುಗಳನ್ನು ಆಡಲೇ ಬೇಡಿರಿ. ಏಕೆಂದರೆ ‘ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’ ಎಂಬ ಗಾದೆ ಸದಾ ನಮ್ಮ ಮನಸ್ಸಿನಲ್ಲಿ ಇರಬೇಕು. ನಮ್ಮ ವಿಚಾರದಲ್ಲಿ ಆ ವ್ಯಕ್ತಿಯ ಮನಸ್ಸು ನಕಾರಾತ್ಮಕವಾಗಿ ತಿರುಗಿದರೆ ಅಥವಾ ಮನಸು ಒಡೆದರೆ ಮತ್ತೆ ಯಾವುದೇ ಕಾರಣಕ್ಕೆ ಆ ಸಂಬಂಧವನ್ನು ವಾಪಾಸು ಗಳಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಯಾವತ್ತೂ ಮರೆಯಬಾರದು.

7. ಯಾರೊಂದಿಗೂ ಯಾವತ್ತೂ ಕೈ ಮಾಡಬೇಡಿ: ಸಿಟ್ಟು ಯಾವತ್ತೂ ನಾವು ಯಾರನ್ನು ಹೆಚ್ಚಾಗಿ ಇಷ್ಟಪಡುತ್ತೇವೋ ಅವರ ಮೇಲೆಯೇ ಬರುತ್ತಿರುತ್ತದೆ. ಆದ್ದರಿಂದ ಆತ್ಮೀಯರಲ್ಲಿ ಸಿಟ್ಟಾಗುವುದು ಸಹಜವಾಗಿದ್ದು, ಹಾಗೆಂದು ಯಾವುದೇ ಕಾರಣಕ್ಕೂ ಯಾವುದೇ ವ್ಯಕ್ತಿಯ ಮೇಲೆ ಬಲ ಪ್ರಯೋಗ ಮಾಡುವ ಹಕ್ಕು ಯಾರಿಗೂ ಇರುವುದಿಲ್ಲ ಎನ್ನುವುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಸಿಟ್ಟಿನ ರಭಸದಲ್ಲಿ ಎದುರಿಗಿದ್ದ ವ್ಯಕ್ತಿಯ ಮೇಲೆ ಕೈ ಮಾಡುವುದು, ಹೊಡೆಯುವುದು ಹಾಗೂ ಕೈಗೆ ಸಿಕ್ಕ ಸಿಕ್ಕ ವಸ್ತುಗಳನ್ನು ಎಸೆಯುವುದನ್ನು ಮಾಡಬೇಡಿ ಇದರಿಂದ ನಮಗೇ ಹೆಚ್ಚಿನ ನಷ್ಟ ಎನ್ನುವುದನ್ನು ಮರೆಯಬಾರದು. ಈ ರೀತಿಯ ವರ್ತನೆಯು ಆಕಾಶವನ್ನು ನೋಡುತ್ತಾ ಮೇಲಕ್ಕೆ ಉಗಿದಂತೆ ಎನ್ನುವುದನ್ನು ಮರೆಯಬಾರದು. ಇದರಿಂದ ಮೇಲಕ್ಕೆ ಉಗುಳಿದ ಉಗುಳು ನಮ್ಮ ಮುಖಕ್ಕೇ ಬೀಳುತ್ತದೆ ಎನ್ನುವುದು ಸದಾ ನೆನಪಿನಲ್ಲಿ ಇರಬೇಕು. ಅಂದರೆ ನಮ್ಮ ಸಿಡುಕುತನದ ಆವಾಂತರಗಳು ನಮಗೆ ಋಣಾತ್ಮಕವಾದ ಫಲಿತಾಂಶವನ್ನು ಅಥವಾ ನಷ್ಟವನ್ನುಂಟುಮಾಡುತ್ತದೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು.

8. ದೊಡ್ಡ ಕಂಪನಿಯಲ್ಲಿರುವ ಗಂಡನು ತನ್ನ ಮಾಲೀಕ ಕೆಲಸದ ನಿಮಿತ್ತ ಬೈದಿರುತ್ತಾನೆ, ಆದರೆ ತನ್ನ ಮಾಲೀಕನಿಗೆ ತಿರುಗಿ ಬೈಯೋಕೆ ಆಗದೇ ಸಿಟ್ಟಿನೊಂದಿಗೆ ಮನೆಗೆ ಬರುತ್ತಾನೆ. ಮನೆಗೆ ಬಂದ ಗಂಡನ ಕುಶಲೋಪರಿಗಳನ್ನು ವಿಚಾರಿಸಲು ಮನೆಯಲ್ಲಿದ್ದ ಹೆಂಡತಿ ಮನೆ ಬಾಗಿಲಿಗೆ ಓಡೋಡಿ ಬರುತ್ತಾಳೆ. ಆದರೆ ಅದಾಗಲೇ ಮಾಲೀಕನ ಬೈಗುಳದಿಂದ ಸಿಟ್ಟಿಗೆದ್ದಿದ್ದ ಗಂಡ ತನ್ನ ಸಿಟ್ಟನ್ನು ಜೋರಾಗಿ ಬೈಯುವ ಮೂಲಕ ಹೆಂಡತಿಯ ಮೇಲೆ ತೀರಿಸಿಕೊಳ್ಳುತ್ತಾನೆ. ಹೆಂಡತಿಯು ಗಂಡನಿಗೆ ತಿರುಗಿ ಬೈಯೋಕೆ ಆಗದೇ ಸಿಟ್ಟಿನಿಂದಲೇ ಅಡುಗೆ ಮನೆ ಸೇರಿಕೊಳ್ಳುತ್ತಾಳೆ. ಆ ಸಂದರ್ಭದಲ್ಲಿ ಹೊಟ್ಟೆ ಹಸಿದುಕೊಂಡು ತನ್ನ ಮಗು ಅಮ್ಮನ ಸೆರಗು ಹಿಡಿದುಕೊಂಡು ಅಮ್ಮಾ ಅಮ್ಮಾ ತಿನ್ನಲು ಏನಾದರೂ ಕೊಡು ಎಂದು ದುಂಬಾಲು ಬೀಳುತ್ತದೆ. ಗಂಡನ ಮೇಲಿನ ಸಿಟ್ಟಿನ ರಭಸದಲ್ಲಿದ್ದ ತಾಯಿಯು ಮಗುವನ್ನು ಹಿಡಿದುಕೊಂಡು ಸರಿಯಾಗಿ ಬಾರಿಸುತ್ತಾಳೆ. ಮಗುವು ಜೋರಾಗಿ ಅಳುತ್ತಾ ಅಮ್ಮನ ಮೇಲಿನ ಸಿಟ್ಟಿನಿಂದ ಹೊರಗೆ ಜಗುಲಿಯಲ್ಲಿ ಕಟ್ಟಿ ಹಾಕಿದ್ದ ನಾಯಿಯನ್ನು ಜೊರಾಗಿ ಹೊಡೆಯುವ ಮೂಲಕ ತನ್ನ ಸಿಟ್ಟನ್ನು ತೀರಿಸಿಕೊಳ್ಳುತ್ತದೆ. ನೋವಿನಿಂದ ಚೀರಾಡುತ್ತಾ ನಾಯಿಯು ಮನೆಯ ಜಗುಲಿಯಲ್ಲಿ ಸಿಟ್ಟಿನಿಂದ ಕೂತಿದ್ದು, ಹಾಕಲೆಂದು ನಾಯಿಯ ಬಳಿಗೆ ಹೊದಾಗ ಅದಾಗಲೇ ಮಗುವಿನ ಹೊಡೆತ ತಿಂದು ಸಿಟ್ಟಿಗೆದ್ದಿದ್ದ ನಾಯಿಯು ತನ್ನ ಸಿಟ್ಟನ್ನು ಮನೆಯ ಯಜಮಾನನನ್ನು ಕಚ್ಚುವ ಮೂಲಕ ತೀರಿಸಿಕೊಳ್ಳುತ್ತದೆ. ಇಲ್ಲಿ ತಿಳಿಯಬೇಕಾದ ಪ್ರಮುಖ ಅಂಶವೆಂದರೆ ತನ್ನ ಸಿಟ್ಟು ತನ್ನ ಅಂತ್ಯವನ್ನೇ ತರುತ್ತದೆ ಎನ್ನುವುದು. ಕಂಪನಿಯ ಯಜಮಾನನ ಸಿಟ್ಟನ್ನು ಗಂಡ ಅಲ್ಲೇ ನಿವಾರಿಸಕೊಳ್ಳುವ ಪ್ರಯತ್ನವನ್ನು ಮಾಡಿದ್ದಿದ್ದರೆ ಗಂಡ ಹೆಂಡತಿಯ ಮೇಲೆ, ಹೆಂಡತಿ ಮಗುವಿನ ಮೇಲೆ, ಮಗು ನಾಯಿಯ ಮೇಲೆ, ನಾಯಿಯು ಮರಳಿ ಮನೆಯ ಯಜಮಾನನ ಮೇಲೆ ಸಿಟ್ಟಾಗಿ ಕಚ್ಚುವ ಸಂದರ್ಭವೇ ಬರುತ್ತಿರಲಿಲ್ಲ. ಅದಕ್ಕೇ ಹೇಳುವುದು ಕೋಪವನ್ನು ಗೆದ್ದಲ್ಲಿ ಸರ್ವವನ್ನೂ ಗೆದ್ದಂತೆ ಎಂದು.

9. ಕೋಪವು ಮೇಲ್ನೋಟಕ್ಕೆ ಮನಸ್ಸಿನ ಭಾವನೆಯ ಒಂದು ಪ್ರಕಾರವಾಗಿ ಕಾಣಿಸಿದರೂ ಕೋಪ ಬಂದಾಗ ಮನುಷ್ಯನ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳಾಗುತ್ತವೆ. ಕೋಪ ಬಂದಾಗ ಮೆದುಳಿನಲ್ಲಿ ‘ಆಡ್ರಿನಲಿನ್’ ಹಾಗೂ ‘ನಾರ್ ಆಡ್ರಿನಲಿನ್’ ಎಂಬ ಹಾರ್ಮೋನ್ ಹೆಚ್ಚಾಗಿ ಸ್ರವಿಸಿ, ಹೃದಯದ ಬಡಿತ ಹಾಗೂ ರಕ್ತದ ಒತ್ತಡವೂ ಅಧಿಕವಾಗುತ್ತದೆ. ಈ ಹಾರ್ಮೋನ್ ಸ್ರವಿಕೆಯು ಕ್ಷಣಿಕವಾದರೂ ಆಗಿಂದಾಗ್ಗೆ ಈ ಹಾರ್ಮೋನ್ ಸ್ರವಿಕೆಯಿಂದ ದಿರ್ಘಕಾಲಿಕವಾಗಿ ದೇಹಕ್ಕೆ ಗಾಢ ಪರಿಣಾಮವನ್ನು ಬೀರುವ ಸಾಧ್ಯತೆಗಳು ಅಧಿಕವೆಂದು ಒಂದು ಅಧ್ಯಯನವು ತಿಳಿಸುತ್ತದೆ. ಆದ್ದರಿಂದ ಕೋಪವನ್ನು ನಿಯಂತ್ರಿಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬರಿಗೂ ಒಳ್ಳೆಯದು.

10. ಕೋಪ ಬಂದಾಕ್ಷಣದಲ್ಲಿ ಆ ಪ್ರದೇಶದಿಂದ ಬೇರೆಡೆಗೆ ಹೋಗಿ ದೀರ್ಘವಾಗಿ ಉಸಿರನ್ನು ಎಳೆದುಕೊಂಡು ಪ್ರಾಣಾಯಾಮದ ಕ್ರಮದಲ್ಲಿ ಉಸಿರಾಟದ ಪ್ರಕ್ರಿಯೆಯನ್ನು ನಡೆಸುವ ಮೂಲಕ ಮನಸ್ಸಿನ ಗಮನವನ್ನು ಬೇರೆಡೆ ತಿರುಗಿಸಿ ಒಂದರಿಂದ ನೂರರ ವರೆಗಿನ ಅಂಕೆಗಳನ್ನು ಅವರೋಹಣ ಕ್ರಮದಲ್ಲಿ ಎಣಿಸಬೇಕು. ಇದರಿಂದ ಬಂದಿರುವ ನಮ್ಮ ಕೋಪವನ್ನು ನಿಧಾನವಾಗಿ ಶಮನ ಮಾಡಿಕೊಳ್ಳಬೇಕು.

11. ಕೋಪ ಶಮನಗೊಂಡ ನಂತರದಲ್ಲಿ ಡೈರಿಯಲ್ಲಿ ಕೋಪ ಬಂದಿರುವ ವಿಚಾರವನ್ನು ವಿಸ್ತೃತವಾಗಿ ಹಾಗೂ ವಸ್ತುನಿಷ್ಟವಾಗಿ ಮತ್ತು ಕೋಪದ ಸಂದರ್ಭದಲ್ಲಿ ಮನಸ್ಸಿನೊಳಗೆ ಮೂಡಿರುವ ವಿವಿಧ ವಿಚಾರಗಳನ್ನು ಬರೆಯಿರಿ ಮತ್ತು ಆ ವಿಚಾರದ ಕುರಿತು ನಿಮ್ಮನ್ನು ನೀವೇ ವಿಮರ್ಷಿಸಿಕೊಂಡು ಅಂತಿಮ ನಿರ್ಧಾರಕ್ಕೆ ಬರಬೇಕು. ಈಗಲೂ ಕೋಪ ನಿಯಂತ್ರಣಕ್ಕೆ ಬಾರದೇ ಇದ್ದಲ್ಲಿ ಅಂತಿಮವಾಗಿ ಮನೋವೈದ್ಯರನ್ನು ಭೇಟಿಯಾಗಿ ಆಪ್ತ ಸಮಾಲೋಚನೆಯನ್ನು ಪಡೆದುಕೊಳ್ಳಲು ಮರೆಯಬಾರದು. ಒಟ್ಟಿನಲ್ಲಿ ಕೋಪವೆನ್ನುವುದು ಮನುಷ್ಯನ ಬಹುದೊಡ್ಡ ಶತ್ರುವೆನ್ನುವುದನ್ನು ಎಂದೂ ಮರೆಯಬಾರದು. ಕೊಪವು ಮನುಷ್ಯನಿಗೆ ಕೆಡುಕನ್ನುಂಟು ಮಾಡುವುದೇ ವಿನಃ ಒಳಿತನ್ನಂತೂ ಮಾಡಲಾರದು ಎನ್ನುವುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಆದ್ದರಿಂದ ಕೊಪವನ್ನು ಗೆದ್ದ ವ್ಯಕ್ತಿಯು ಸಮಾಜದೆಲ್ಲಾ ಮಜಲುಗಳನ್ನು ಹಾಗೂ ಎಲ್ಲಾ ಸ್ಥರದ ಜನರನ್ನು ಸುಲಭವಾಗಿ ಗೆಲ್ಲುವುದರೊಂದಿಗೆ ಬದುಕಿನಲ್ಲಿ ಯಶಸ್ಸನ್ನೂ ಸಾಧಿಸಬಲ್ಲ.

ಸಂತೋಷ್ ರಾವ್ ಪೆರ್ಮುಡ

Related post

Leave a Reply

Your email address will not be published. Required fields are marked *