ಜಿಗಿ ಜಿಗಿ ಬೊಂಬೆಯಾಟ

“ಜಿಗಿ ಜಿಗಿ ಬೊಂಬೆಯಾಟ” ಇದು ನಾಟಕಕಾರರಾದ ‘ಎ ಎಸ್ ಮೂರ್ತಿ’ ರವರು ಕಿರುತೆರೆಯಲ್ಲಿ ತಂದ ಪ್ರಸಿದ್ಧ ಧಾರಾವಾಹಿಯ ಹೆಸರು. ಈ ಬೊಂಬೆಯಾಟವು ತೊಗಲು ಬೊಂಬೆಯಾಟ ನಮ್ಮ ಜನಪದಕಲೆಯಾಗಿದ್ದು ಇದರ ಬಗ್ಗೆ ತಿಳಿಯೋಣ.

ತೊಗಲು ಬೊಂಬೆಯಾಟವು ಚಿತ್ರಕಲೆ, ಹಾಡು, ನೃತ್ಯ ಮತ್ತು ಬೆಳಕಿನ ಅಂಶಗಳನ್ನು ಮೇಳೈಸಿಕೊಂಡು ಮುನ್ನಡೆಯುವ ಪ್ರದರ್ಶನ ಚಿತ್ರಕಲೆ. ವಿಜ್ಞಾನ, ಪುರಾಣ, ಇತಿಹಾಸ, ಕಾವ್ಯಗಳು ಮತ್ತು ಬದುಕಿನ ತೊಳಲಾಟವನ್ನು ಮೇಳೈಸಿಕೊಂಡ ವಿಶಿಷ್ಠವಾದ ಜನಪದ ಪ್ರಯೋಗ ಕಲೆ. ಈ ಕಲೆ ಈಗ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಅಪಾಯದಲ್ಲಿದೆ. ಕಲೆ ಮತ್ತು ಕಲಾವಿದರಿಗೆ ಇದು ಅಸ್ಮಿತೆಯ ಪ್ರಶ್ನೆ. ತೊಗಲು ಬೊಂಬೆಯ ಕಲೆಯನ್ನು ಐದು ತಲೆಮಾರುಗಳಿಂದ ಮೈಗೂಡಿಸಿಕೊಂಡಿರುವ ಜಾನಪದ ಕಲಾವಿದರು “ಬಿಳಗುಂದ ಅಪ್ಪಾಜಿಯವರು”. ತೊಗಲು ಬೊಂಬೆಯನ್ನು ಹಲವು ಭಾಷೆಗಳಲ್ಲಿ ಹಲವು ಬಗೆಯಾಗಿ ಹೇಳುತ್ತಾರೆ. ತೊಗಲುಬೊಂಬೆ- ಕನ್ನಡ, ತೋಲುಬೊಮ್ಮಲಾಟ-ತೆಲುಗು, ತೋಲುವಾವೈ ಕೊತ್ತು- ತಮಿಳು ಮತ್ತು ರಾವಣಛಾಯಾ- ಒರಿಸ್ಸಾ ಎಂದು.

ಈ ಕಲೆಯು ಟರ್ಕಿ, ಗ್ರೀಸ್ ಗಳಿಗೂ ಹಬ್ಬಿ ಹೊಸ ರೂಪವನ್ನು ಪಡೆದುಕೊಂಡಿದೆ. ತೊಗಲು ಬೊಂಬೆಯಾಡಿಸುವವರನ್ನು ಕಿಳ್ಳೇಕ್ಯಾತರು ಎಂದು ಕರೆಯುತ್ತಾರೆ. ಇವರನ್ನು ಗೊಂಬೆ ರಾಮರು ಎಂದೂ ಕರೆಯುವುದುಂಟು. ‘ಶ್ರೀರಾಮನ ಕೊನೆಯ ಸಮಯದಲ್ಲಿ ತನ್ನ ಪ್ರೀತಿಯ ಭಕ್ತರಿಗೆ ಒಂದು ಚಿತ್ರಪಟ ನೀಡಿ ಇದರಿಂದ ಜೀವಿಸಿರಿ ಎಂದು ಹೇಳಿದನಂತೆ ಅಂದಿನಿಂದ ಗುಹನ ವಂಶಕ್ಕೆ ಸೇರಿದ ಆ ಭಕ್ತರು ಗೊಂಬೆ ರಾಮರಾದರು ಅವರು ಈಗಲೂ ತಮ್ಮ ಮೊದಲ ಮಗನಿಗೆ ರಾಮ ಎಂಬ ಹೆಸರನ್ನು ಇಡುತ್ತಾರೆ.

ಗೊಂಬೆ ತಯಾರಿ
ಸಾಮಾನ್ಯವಾಗಿ ಜಿಂಕೆ, ಆಡು, ಕತ್ತೆ, ಎಮ್ಮೆಯ ಚರ್ಮದಿಂದ ಗೊಂಬೆಗಳನ್ನು ತಯಾರಿಸುತ್ತಾರೆ ದೇವರ ಗೊಂಬೆಗಳನ್ನು ಜಿಂಕೆಯ ಚರ್ಮದಿಂದಲೇ ತಯಾರಿಸಬೇಕು ಎಂಬ ನಿಯಮವಿದೆ. ಕಲಾವಿದರೇ ಸ್ವತಃ ಗೊಂಬೆಗಳನ್ನು ತಯಾರಿಸಿಕೊಳ್ಳುತ್ತಾರೆ.

ಚರ್ಮವನ್ನು ಮೊದಲು ಬಿಸಿನೀರಿನಲ್ಲಿ ಅದ್ದಿ ಬ್ರಷ್ ಅಥವ ಚಾಕುವಿನಿಂದ ಕೆರೆದು ನಯಗೊಳಿಸುತ್ತಾರೆ ನಂತರ ಕಲ್ಲಿನ ಮೇಲೆ ಒಣಗಿಸಿ ಉಳಿದ ಕೂದಲನ್ನು ಕೀಳುತ್ತಾರೆ, ನಂತರ ಒಳ ಭಾಗದಲ್ಲಿ ಮಾಂಸದ ಅಂಶ ಉಳಿದಿದ್ದರೆ, ತಣ್ಣೀರಿನಿಂದ ತೊಳೆದು ಸ್ವಚ್ಛ ಮಾಡುತ್ತಾರೆ. ನಂತರ ಪಾರದರ್ಶಕವಾಗುವಂತೆ ಹದ ಮಾಡುತ್ತಾರೆ. ಚರ್ಮವನ್ನು ಇನ್ನೊಂದು ರೀತಿಯಲ್ಲೂ ಹದ ಮಾಡುತ್ತಾರೆ. ಬಿಸಿನೀರನ್ನು ಚರ್ಮದ ಮೇಲೆ ಚಿಮುಕಿಸಿ ಅದನ್ನು ಚೆನ್ನಾಗಿ ಸುತ್ತಿ ಭಾರವಾದ ವಸ್ತುವಿನ ಕೆಳಗೆ ಇಡುತ್ತಾರೆ ಮೂರು ದಿನಗಳ ಬಳಿಕ ಅದನ್ನು ತೆಗೆದು ನೋಡಿದರೆ ಅದರಲ್ಲಿನ ಕೂದಲೆಲ್ಲಾ ಉದುರಿ ಹೋಗುತ್ತವೆ. ಹೀಗೆ ಹದ ಗೊಳಿಸಿದ ಚರ್ಮವನ್ನು ನೆರಳಿನಲ್ಲಿ ಒಣಗಿಸಲಾಗುತ್ತದೆ. ಇನ್ನು ಬಣ್ಣಗಳನ್ನು ಹಚ್ಚುವಾಗ ಆ ಬಣ್ಣಗಳನ್ನು ಆಯಾ ಕಲಾವಿದರೇ ತಯಾರಿಸಿಕೊಳ್ಳುತ್ತಾರೆ. ಕೆಂಪು, ನೀಲಿ, ಸಿಂಧೂರ, ಪಚ್ಚೆ, ನೀಲಿ ಬಣ್ಣಗಳು ಮುಖ್ಯವಾಗಿ ಬಳಕೆಯಾಗುವಂಥವು,
ಒಂದು ಕಾಲದಲ್ಲಿ ತೊಗಲು ಬೊಂಬೆಯನ್ನು ಆಡಿಸಿದರೆ ಮಳೆ ಬರುತ್ತದೆ, ದನಕರುಗಳಿಗೆ ರೋಗ ಬರುವುದಿಲ್ಲ ಮತ್ತು ಊರಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಗಳು ಇದ್ದವು. ಕೆಲವರು ಪುತ್ರ ಸಂತಾನ ಪ್ರಾಪ್ತಿಗಾಗಿ ಮತ್ತು ಉತ್ತಮ ಬೆಳೆ ಬೆಳೆಯುವುದಕ್ಕಾಗಿ ತೊಗಲು ಬೊಂಬೆ ಆಡಿಸಿದರೆ ಇನ್ನು ಕೆಲವರು ಮದುವೆ ಮತ್ತಿತರ ಸಂದರ್ಭಗಳಲ್ಲಿ, ಸುಗ್ಗಿ ಮುಗಿದ ನಂತರ ಮನರಂಜನೆಗಾಗಿ, ಸ್ವರ್ಗ ಪ್ರಾಪ್ತಿಗಾಗಿ, ದೆವ್ವ ಭೂತಗಳ ಉಚ್ಚಾಟನೆಗಾಗಿ ತೊಗಲು ಬೊಂಬೆಯನ್ನು ಮಾಡಿಸುತ್ತಾರೆ. ಅಷ್ಠೇ ಅಲ್ಲ ಯಾರಾದರೂ ತೀರಿ ಹೋದರೆ ಅವರ ಉತ್ತರಕ್ರಿಯೆಯ ಭಾಗವಾಗಿ ತೊಗಲು ಗೊಂಬೆಯ ಆಟ ನಡೆಯುತ್ತಿತ್ತು.

ಈ ಕಲಾವಿದರು ಮೂಲತಃ ಅಲೆಮಾರಿಗಳು ಊರಿನಿಂದ ಊರಿಗೆ ಸಾಗುತ್ತ ತಮ್ಮ ಕಲೆಯನ್ನು ಪ್ರದಶಿಸುತ್ತಲೇ ಇರುತ್ತಾರೆ. ಶ್ರಾವಣ ಮಾಸ, ಶಿವರಾತ್ರಿ, ಗೌರಿ ಗಣೇಶ ಹಬ್ಬಗಳ ಸಂದರ್ಭದಲ್ಲಿ ಒಂದು ರಾತ್ರಿಯೂ ಬಿಡದಂತೆ ಶುಭ ಸಮಾರಂಭಗಳಲ್ಲಿ ಈ ಆಟ ಆಡಿಸುತ್ತಾರೆ. ತೊಗಲು ಬೊಂಬೆ ಆಡಿಸುವ ಕಲಾವಿದರನ್ನು ಮತ್ತು ಕಲೆಯನ್ನು ಶುಧ್ಧ ದೈವಸ್ವರೂಪಿ, ಗಂಧರ್ವರೆಂದೇ ಭಾವಿಸಲಾಗುತ್ತಿತ್ತು. ಅವರನ್ನು ಕೇವಲ ಹೊಟ್ಟೆ ಹೊರೆಯಲು ಬಂದ ಭಿಕ್ಷುಕರಂತೆ ಕಾಣುತ್ತಿರಲಿಲ್ಲ. ತೊಗಲು ಬೊಂಬೆ ಕಲಾವಿದರನ್ನು ಕರೆಸಿ ಗೌರವದಿಂದ ಪ್ರದರ್ಶನ ಏರ್ಪಡಿಸುತ್ತಿದ್ದರು. ಈ ಕಲೆಯ ಮತ್ತು ಕಲಾವಿದರ ಬಗ್ಗೆ ಭಕ್ತಿ ಇರುವ ಜನ ಇವರಿಗೆ ಬೊಂಬೆಗಳನ್ನು ಮಾಡಿಸಿ ಕೊಡುತ್ತಿದ್ದರು, ಗೊಂಬೆಯಾಟದವರು ಊರು ಪ್ರವೇಶಿಸಿದರೆ ಅವರು ಒಲೆ ಹಚ್ಚುವಂತೆ ಇರಲಿಲ್ಲ, ಜಾತಿಶ್ರೇಣೀಕರಣ ಇವರಿಗೆ ಅಡ್ಡಿ ಬರುತ್ತಿರಲಿಲ್ಲ ಕೊಡುವ ಧನ-ಧಾನ್ಯಗಳನ್ನು ಮೀಸಲಿರಿಸಿ ಗೌರವದಿಂದ ಕಿಳ್ಳೇಕ್ಯಾತರಿಗೆ ಸಮರ್ಪಿಸಿಕೊಳ್ಳುತ್ತಿರು. ರಾಜಮನೆತನದವರು ಈ ಕಲಾವಿದರಿಗೆ ರಾಜಾಶ್ರಯ ನೀಡಿ ಪ್ರೋತ್ಸಾಹಿಸುತ್ತಿದ್ದುದನ್ನು ನಾವು ಅನೇಕ ಉಲ್ಲೇಖಗಳಿಂದ ತಿಳಿಯಬಹುದು. ನಂತರದ ಕಾಲ ಘಟ್ಟದಲ್ಲಿ ಈ ಕಲೆಯು ದೈವೀ ಸ್ವರೂಪವನ್ನು ಕಳೆದುಕೊಂಡು ಕೇವಲ ಮನರಂಜನೆ ಮತ್ತು ನೀತಿಭೋದನೆ ಮಾಡುವ ಮಾಧ್ಯಮವಾಗಿ ಬದಲಾಯಿತು.

ತೊಗಲು ಬೊಂಬೆ- ನಂಬಿಕೆ
ಎಲ್ಲಾ ತೊಗಲು ಬೊಂಬೆಯಾಟದ ಕಲಾವಿದರ ಮನೆಗಳಲ್ಲಿ ಒಂದೊಂದು ಬಿದಿರಿನ ಪೆಟ್ಟಿಗೆ ಇರುತ್ತಿತ್ತು. ಇದರಲ್ಲಿ ಅವರು ಪ್ರದರ್ಶಿಸುವ ಆಟದ ಪಾತ್ರಗಳಿರುತ್ತವೆ, ಒಬ್ಬೊಬ್ಬ ಕಲಾವಿದನ ಮನೆಯಲ್ಲಿ ಸುಮಾರು ಇನ್ನೂರು- ಮುನ್ನೂರು ವರ್ಷಗಳಷ್ಟು ಹಳೆಯದಾದ ಇಂಥಾ ಅಪೂರ್ವ ಖಜಾನೆಯೊಂದು ಇರುತ್ತದೆ. ಅಲ್ಲಿ ದೊರೆಯುವ ಬೊಂಬೆಗಳೆಲ್ಲಾ ಅವರ ತಾತ-ಮುತ್ತಾತಂದಿರು, ಪೂರ್ವಜರು ಸಿಧ್ಧಪಡಿಸಿದ ಬೊಂಬೆಗಳು. ಆಗಾಗ ಅವುಗಳಿಗೆ ಬಣ್ಣದ ಸ್ಪರ್ಶ ನೀಡಿ ತಾಜಾತನವನ್ನು ಉಳಿಸಿಕೊಂಡು ಬಂದಿದ್ದಾರೆ. ಈ ಪಾತ್ರಗಳು ಪುರಾಣದ ಪಾತ್ರಗಳನ್ನು ತೆರೆದಿಡುವುದಲ್ಲದೆ ಅವುಗಳ ಜೊತೆ ಬೆಸೆದುಕೊಂಡ ಕಲಾವಿದರ ಬದುಕನ್ನು ಹೇಳುತ್ತದೆ.

ಗೌರವ
‘ಸಮಾಜದಲ್ಲಿ ಚರ್ಮದ ಕೆಲಸ ಮಾಡುವವರಿಗೆ ಹಲವು ಸ್ಥಳಗಳಲ್ಲಿ ಪ್ರವೇಶದ ಅವಕಾಶವೇ ಇರುವುದಿಲ್ಲ. ದೇವಸ್ಥಾನಗಳಲ್ಲಂತೂ ಪ್ರವೇಶ ನಿಷಿದ್ಧ ಆದರೂ ತೊಗಲು ಬೊಂಬೆ ಕಲಾವಿದರಿಗೆ ವಿನಾಯಿತಿ. ದೇವರ ಪ್ರತಿನಿಧಿಗಳೆಂದೇ ಭಾವಿಸುವ ಗ್ರಾಮ ಸಮಾಜ ಅವರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕಲ್ಪಿಸುತ್ತದೆ. ಬಹುಮಾನವಾಗಿ ಹೊಲಗದ್ದೆಗಳನ್ನೂ ನೀಡಿ ಸತ್ಕರಿಸುತ್ತದೆ. ಅಷ್ಟೇ ಅಲ್ಲದೆ ಅವರನ್ನು ಗೂಢಚಾರಿಗಳಾಗಿಯೂ ಬಳಸಿದ್ದ ಉದಾಹರಣೆಗಳು ಇತಿಹಾಸದಲ್ಲಿ ಉಲ್ಲೇಖವಾಗಿವೆ. ಶಿವಾಜಿಯು ಹನ್ನೆರಡನೇ ಶತಮಾನದಲ್ಲಿ ಹಾಗು ಸಿಲೋನಿ ರಾಜ ಗಜಬಾಹು ತೊಗಲು ಬೊಂಬೆ ಆಟಗಾರರನ್ನು ಗೂಢಚಾರಿಗಳನ್ನಾಗಿ ನೇಮಿಸಿದ್ದರಂತೆ. ತೊಗಲು ಬೊಂಬೆಯಾಟದ ಅಧ್ಯಯನಕ್ಕೆ ಬಂದಿದ್ದ ಪ್ರೊ. ಮೇಲ್ ಹೆಲ್ ಸ್ಟನ್ ಅವರ ಪ್ರಯತ್ನದಿಂದ 1980 ರಲ್ಲಿ ಅಮೆರಿಕದಲ್ಲಿ ನಡೆದ ಜಾಗತಿಕ ಗೊಂಬೆ ಆಟದ ಮೇಳದಲ್ಲಿ ನಮ್ಮ ರಾಜ್ಯದ ‘ಹೊಂಬಯ್ಯ’ ಭಾಗವಹಿಸಿದ್ದರು. ನಂತರ ಬೋಸ್ಟನ್, ಹೋಸ್ಟನ್ ಸೇರಿದಂತೆ ಹಲವಾರು ಭಾಗಗಳಲ್ಲಿ ‘ಹೊಂಬಯ್ಯ’ ಭಾರತದ ಈ ಕಲೆಯನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ’ .

ತೊಗಲು ಬೊಂಬೆಯ ಇಂದಿನ ಸ್ಥಿತಿ ಗತಿ
ಎಲ್ಲ ಕಲೆಗಳಿಗೂ ಆಧುನಿಕತೆಯು ತಂದೊಡ್ಡಿದ ಸವಾಲುಗಳ ಹಾಗೂ ಸಂಕಟದ ಪರಿಣಾಮ ಈ ಕಲೆಗೂ ತಟ್ಟಿದೆ. ಒಂದು ಕಾಲದಲ್ಲಿ ಸಾವಿರಾರು ಸಂಖ್ಯೆಗಳಲ್ಲಿ ಇದ್ದ ಈ ಕಲೆಯು ಇಂದು ನೂರಕ್ಕೆ ಬಂದು ಇಳಿದಿದೆ. ತೊಗಲು ಬೊಂಬೆಯಾಟವು ಜನಸಾಮಾನ್ಯರ ಜೀವನದ ಸಮಗ್ರ ಕಲ್ಪನೆಯ ಪರಿಧಿಯೊಳಗೆ ಪ್ರವೇಶಿಸಿ ಆತನ ಆತ್ಮ ವಿಮರ್ಶೆಯೊಂದಿಗೆ ಹೊಸ ಮೌಲ್ಯಗಳನ್ನು ಪೋಣಿಸುತ್ತಾ ಈ ಆಟಕ್ಕೊಂದು ಸೈಧ್ಧಾಂತಿಕ ನೆಲೆಯೊಂದು ರೂಪುಗೊಂಡಿರುತ್ತದೆ. ಆಧುನಿಕತೆಯ ಅವಿಷ್ಕಾರಗಳು ಎಲ್ಲ ರೀತಿಯ ಬದುಕುಗಳನ್ನು ಹಾಗು ಅದರೊಂದಿಗೆ ಹುಟ್ಟಿದ ಸೃಜನಶೀಲತೆಯನ್ನೂ ನುಂಗುತ್ತದೆ.

ತೊಗಲು ಬೊಂಬೆಯಾಟ- ವಿಧಾನ “ಕಿಳ್ಳೇಕ್ಯಾತ-ಬಂಗಾರಕ್ಕ”
ಕಿಳ್ಳೇ ಕ್ಯಾತ ಬಂಗಾರಕ್ಕ ಇಲ್ಲದೆ ತೊಗಲು ಬೊಂಬೆಯಾಟವೇ ಇಲ್ಲ. ಕಪ್ಪು ಅಥವಾ ಕೆಂಪು ಬಣ್ಣದ ಡೊಳ್ಳು ಹೊಟ್ಟೆಯ ಬೋಳು ತಲೆಯ ಪಿಳ್ಳ ಜುಟ್ಟಿನ ದಪ್ಪ ತುಟಿಯ ವಕ್ರ ವ್ಯಕ್ತಿ ಕಿಳ್ಳೇಕ್ಯಾತ. ಈತನ ಹೆಂಡತಿಯೇ ಬಂಗಾರಕ್ಕ ಇವರಿಬ್ಬರ ನಡುವೆ ನಡೆಯುವ ಸಂಭಾಷಣೆಯೇ ಗೊಂಬೆಯಾಟದ ರಂಜನೆ ಅಂಶ. ಪುರಾಣ ಪಾತ್ರಗಳಿದ್ದರೂ ಸೂತ್ರಧಾರ ಈ ಪಾತ್ರಗಳ ಹಿನ್ನೆಲೆಯಲ್ಲಿ ಅವುಗಳ ಪ್ರಾಮುಖ್ಯತೆಯನ್ನು ಗಾದೆಗಳು, ಒಗಟುಗಳ ಮೂಲಕ ಪರಿಚಯಿಸಿ ಸಂದರ್ಭಕ್ಕನುಗುಣವಾಗಿ ದೃಶ್ಯಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿ ಹಾಡು, ನೃತ್ಯ, ವಾದ್ಯ ಮತ್ತು ತೊಗಲು ಬೊಂಬೆಗಳ ಇಷ್ಟವನ್ನು ಒಂದೇ ಕ್ಷಣದಲ್ಲಿ ನೋಡುಗರಿಗೆ ತಲುಪುವಂತೆ ಮಾಡುತ್ತಾರೆ.
ತೊಗಲು ಬೊಂಬೆಯಾಟಕ್ಕೆ ಬೇಕಾದ ಸಲಕರಣೆಗಳನ್ನು, ಹಾರಮೋನಿಯಂ, ತಬಲಾ, ಗೆಜ್ಜೆ, ಮೃದಂಗ, ತಾಳ ಇತ್ಯಾದಿಗಳನ್ನು ಕತ್ತೆಗಳ ಮೇಲೆ ಹೇರಿಕೊಂಡು ಊರೂರು ಅಲೆದು ರಾವಣ, ಹೈರಾವಣ, ಮೈರಾವಣ., ಮಹಾಭಾರತ, ವೀರಾಭಿಮನ್ಯು, ಸುಧಾಮ, ಶಿವ ಜಲಂದರ, ದೇವಿ ಮಹಾತ್ಮೆ, ರೇಣುಕಾ ಮಹಾತ್ಮೆ, ಸತ್ಯ ಹರಿಶ್ಚಂದ್ರ ಮತ್ತು ಇತರೆ ಪುರಾಣ ಪುಣ್ಯ ಕಥೆಗಳ ನಾಟಕಗಳನ್ನು ಪ್ರದರ್ಶಿಸಿತ್ತಿದ್ದರು.

ಕಲಾವಿದರು ನೆಲಕ್ಕೆ ಕೂತು ಎರಡು ಅಡಿ ಎತ್ತರದ ಮೂರುವರೆ ಅಡಿ ಅಗಲದ ಬಿದಿರಿನ ಪೆಟ್ಟಿಗೆ ಬಿಚ್ಚಿದರೆ ಸಾಕು ಅಲ್ಲಿಯವರೆಗೆ ಇದ್ದ ವಾತಾವರಣ ಇದ್ದಕ್ಕಿದ್ದಂತೆ ಹೊಸ ಕಳೆಯನ್ನು ಪಡೆದುಕೊಂಡುಬಿಡುತ್ತದೆ. ಪೆಟ್ಟಿಗೆಯೊಳಗಿನಿಂದ ಮಹಾಭಾರತದ ಕರ್ಣ, ಅರ್ಜುನ, ಕೃಷ್ಣ, ದ್ರೌಪದಿ, ಭೀಮ, ರಾಮಾಯಣದ ಸೀತ, ರಾಮ, ಲಕ್ಷ್ಮಣ, ಹನುಮಂತ, ರಾವಣ ಪಾತ್ರಗಳ ಬೊಂಬೆಗಳು ಹೊರಬರುತ್ತವೆ. ಪಾತ್ರಗಳಿಗೆ ತಕ್ಕಂತೆ ಆಯಾ ಪಾತ್ರಗಳ ಆಕಾರಗಳನ್ನು ನಿಖರವಾಗಿ ಕತ್ತರಿಸಿ ಸೂಕ್ತ ಬಣ್ಣಗಳನ್ನು ಹೊಂದಿಸುತ್ತಾರೆ. ಬಿದಿರಿನ ಕಡ್ಡಿಯನ್ನು ಪೆನ್ನಿನ ರೀತಿಯಲ್ಲಿ ಬಳಸಿ ಚಿತ್ರರೂಪ ರಚಿಸುತ್ತಾರೆ. ಸುತ್ತಿಗೆ-ಉಳಿಗಳನ್ನು ಬಳಸಿ ಚಿತ್ರಗಳಲ್ಲಿ ರಂಧ್ರಗಳನ್ನು ಮಾಡಿ ಬೆಳಕು ತೂರಿ ಬರುವಂತೆ ಮಾಡುತ್ತಾರೆ ಬೊಂಬೆಗಳು ಚಲಿಸಲು ಅನುಕೂಲವಾಗುವಂತೆ ಕೀಲುಗಳನ್ನು ಅಳವಡಿಸಿರುತ್ತಾರೆ. ಕೈ ಚಳಕದಿಂದ ಆಡಿಸಲು ಬಿದಿರಿನ ಕಡ್ಡಿಯನ್ನು ಹಿಂದಕ್ಕೆ ಅಳವಡಿಸಿರುತ್ತಾರೆ ಆ ಕಡ್ಡಿಗಳನ್ನು ಬೆರಳುಗಳಿಗೆ ಅಳವಡಿಸಿಕೊಂಡು ಚಮತ್ಕಾರಯುತವಾಗಿ ಕುಣಿಸುತ್ತಾರೆ. ಪರದೆಯ ಹಿಂದೆ ನರ್ತಿಸುವ ಈ ಬೊಂಬೆಗಳು ನೋಡುಗರಿಗೆ ಕಾಣುವಂತೆ ಪರದೆಯ ಹಿಂದೆ ವಿದ್ಯುತ್ ಬೆಳಕನ್ನು ಅಳವಡಿಸಿ ಮಂದವಾದ ಬೆಳಕನ್ನು ಮೂಡಿಸಿ ಆ ಚಮತ್ಕಾರಗಳು ಪರದೆಯ ಮೇಲೆ ಸ್ಪಷ್ಠವಾಗಿ ಗೋಚರಿಸುವಂತೆ ಮಾಡುತ್ತಾರೆ. ಕೆಲವೊಮ್ಮೆ ಈ ಬೊಂಬೆಗಳು ಮಾನವಾಕೃತಿಯ ಎತ್ತರವೂ ಇರುತ್ತವೆ.

ಅನುಭವೀ ಕಲಾವಿದ ಬೊಂಬೆಗಳನ್ನು ಆಡಿಸಿದರೆ ಇನ್ನುಳಿದ ಕಲಾವಿದರು ಅವಕ್ಕೆ ಧ್ವನಿ, ಬೆಳಕು ಮತ್ತು ಸಂಗೀತದ ನೆರವನ್ನು ನೀಡುತ್ತಾರೆ. ಕಲಾವಿದರು ಮತ್ತು ಎಲ್ಲ ಸಲಕರಣೆಗಳು ಬಿಳಿ ಪರದೆಯ ಹಿಂಭಾಗದಲ್ಲಿ ಇದ್ದು ಪ್ರೇಕ್ಷಕರಿಗೆ ಕಾಣದ ಹಾಗೆ ಮರೆಯಲ್ಲಿರುತ್ತಾರೆ. ಈ ಪ್ರದರ್ಶನಕ್ಕೆ ಎತ್ತರವಾದ ವೇದಿಕೆ ಮೇಲೆ ಎತ್ತರವಾದ ಮಂಟಪ ರಚಿಸಿ ಉದ್ದವಾದ ಬಿಳಿ ಬಟ್ಟೆಯನ್ನು ಮುಂಭಾಗಕ್ಕೆ ಕಟ್ಟಿ ಉಳಿದ ಮೂರು ಬದಿಗಳಲ್ಲಿ ಚಾಪೆ ಅಥವಾ ಕಂಬಗಳಿಂದ ಮುಚ್ಚುತ್ತಾರೆ. ಈ ಪ್ರದರ್ಶನಗಳು ಇಡೀ ರಾತ್ರಿ ನಡೆಯುವ ಕಾಲವೊಂದಿತ್ತು ಈಗ ಮೂರು ಗಂಟೆಗೆ ಸೀಮಿತಗೊಂಡಿದೆ.
ಬೊಂಬೆರಾಮರು ತಮ್ಮ ಪ್ರಸಂಗಗಳನ್ನು ಕೆಲವು ನಿರ್ದಿಷ್ಠ ಉದ್ದೇಶಕ್ಕೆ ಅನುಗುಣವಾಗಿ ಪ್ರದರ್ಶಿಸಲಾಗುತ್ತದೆ. ಉದಾಹರಣೆಗೆ ಲವಕುಶ ಪ್ರಸಂಗ-ಸಂತಾನ ಪ್ರಾಪ್ತಿಗಾಗಿ, ರಾಮಾಯಣದ ಸ್ವರ್ಗಾರೋಹಣ ಪ್ರಸಂಗ- ಅಪರಕರ್ಮ ಕೊನೆಯ ದಿನದ ಸ್ವರ್ಗಪ್ರಾಪ್ತಿಗಾಗಿ, ವಿರಾಟ ಪರ್ವ- ಮಳೆಗಾಗಿ, ದೇವಿ ಮಹಾತ್ಮೆ- ಊರಿಗೆ ಉತ್ತಮ ಉಲುಸಾಗಲೆಂದು ನಡೆಸಲಾಗುತ್ತದೆ.

ಕಥೆಗಳ ಮೂಲ: ತೊಗಲು ಬೊಂಬೆಯಾಟದ ಕಥೆಗಳ ಮೂಲ ಪ್ರಧಾನವಾಗಿ ರಾಮಾಯಣ, ಮಹಾಭಾರತ, ಭಾಗವತ ಮತ್ತಿತರ ಪುರಾಣಗಳ ಮೂಲಗಳಿಂದ ಕಥೆಗಳನ್ನು ಬಳಸಿಕೊಳ್ಳುತ್ತಾರೆ. ಆಧುನಿಕ ಸಂಧರ್ಭಕ್ಕೆ ಅಗತ್ಯವಾಗಿರುವ ಜಾಗೃತಿ ಕಾರ್ಯಕ್ಕಾಗಿ ಈ ಕಲೆಯನ್ನು ಬಳಸಿಕೊಳ್ಳುತ್ತಾರೆ. ಆ ಪರಿಣಾಮದ ದೃಷ್ಟಿಯಿಂದ ಸ್ವತಃ ಕಲಾವಿದರ ಅನುಕೂಲಕ್ಕೆ ಅನುಗುಣವಾಗಿ ಕಲೆಯನ್ನು ರೂಪಿಸುವ ಪ್ರಯತ್ನವಾಗಿ ಕೆಲವು ಸಾಮಾಜಿಕ ಹಾಗೂ ಐತಿಹಾಸಿಕ ಕಥಾವಸ್ತುಗಳನ್ನು ಬಳಸಿಕೊಳ್ಳಲಾಗಿದೆ ಒಟ್ಟಾರೆ ಈ ಕಲಾ ಪ್ರದರ್ಶನಗಳಿಗೆ ಬಳಕೆಯಾಗುವ ಕಥಾವಸ್ತುಗಳನ್ನು ಈ ಮುಂದಿನಂತೆ ಕಾಣಬಹುದು.

ರಾಮಾಯಣ: ರಾವಣ ದಿಗ್ವಿಜಯ, ಕೌಸಲ್ಯ ಕಲ್ಯಾಣ, ಪಂಚವಟಿ, ಶತಕಂಠ ರಾವಣ, ಐರಾವಣ, ಮೈರಾವಣ, ವೈಕುಂಟ ರಾಮಾಯಣ, ಲವ-ಕುಶ.

ಮಹಾಭಾರತ: ಭೀಮಸೇನ ಪ್ರತಿಜ್ಞೆ, ಪಾಂಡವ ವಿಲಾಸ, ತ್ರಿಪುರ ಸಂಹಾರ, ಕೃಷ್ಣರ್ಜುನರ ಕಾಳಗ.

ಜನಪದ: ದೇವಿಮಹಾತ್ಮೆ, ಸಮುದ್ರ ಮಂಥನ, ಶಿವಜಲಂಧರ, ತ್ರಿಪುರ ಸಂಹಾರ, ಕೃಷ್ಣ ಪಾರಿಜಾತ.

ಐತಿಹಾಸಿಕ: ಚಿತ್ರಕೇತು, ಮಹಾರಾಜ, ಸಾರಂಗಧರ, ಸುವರ್ಣವತಿ ಪರಿಣಯ, ಪ್ರಭಾವತಿ, ಮಂಜುಘೋಷ, ಕರಿಭಂಟನ ಕಾಳಗ, ನಗಿಸಿದವರ ಕಥೆ, ವಿಧಿವಿಲಾಸ.

ಸಾಮಾಜಿಕ: ಪ್ರವಾದಿ ಬಸವೇಶ್ವರ, ಬಾಪು ಕಥೆ, ಸ್ವತಂತ್ರö್ಯ ಹೋರಾಟ, ಕಿತ್ತೂರು ರಾಣಿ ಚೆನ್ನಮ್ಮ, ಛತ್ರಪತಿ ಶಿವಾಜಿ, ಝಾನ್ಸಿರಾಣಿ ಲಕ್ಷ್ಮಿಭಾಯಿ, ಮಹಾತ್ಮ ಕಬೀರ, ಸಿಪಾಯಿ ದಂಗೆ’.

ಸಂದರ್ಭೋಚಿತವಾಗಿ ಹಲವು ಕಥಾಹಂದರಗಳನ್ನು ಈ ಕಲಾವಿದರು ಪ್ರದರ್ಶಿಸುತ್ತಾರೆ.

ಪ್ರಾಚೀನತೆ ಮತ್ತು ಪ್ರದೇಶ
ತೊಗಲು ಬೊಂಬೆಯಾಟದ ಮೂಲ ಚೀನ ಎಂದು ಕೆಲವರು ಭಾರತ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಬಹಳಷ್ಟು ಜನ ಊಹಿಸಿದಂತೆ ಭಾರತವೇ ತೊಗಲು ಬೊಂಬೆಗೆ ಮೂಲ ನೆಲೆ. ಇಲ್ಲಿಂದ ಈ ಕಲೆ ಬೇರೆ ಬೇರೆ ದೇಶಗಳಿಗೆ ವಲಸೆ ಹೋಗಿರಬಹುದು ಆನಂತರ ಅಲ್ಲಿನ ಜನಪ್ರಿಯ ಕಲೆ ಹಾಗಿರಬಹುದು. ಈ ಕಲೆಯು ಪುರಾಣ ಕಾಲಕ್ಕಿಂತ ಮೊದಲೇ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಅನೇಕ ಪುರಾವೆಗಳಿವೆ. ಇದರ ಪ್ರಾಚೀನತೆಯನ್ನು ಕ್ರಿ.ಪೂ. ಸುಮಾರು ೩೦೦೦ ವರ್ಷಗಳ ಭಗವದ್ಗೀತೆಯ ಕಾಲಕ್ಕೆ ಗುರುತಿಸಲಾಗಿದೆ. ಜರ್ಮನಿಯ ವಿದ್ವಾಂಸರು ಹೇಳುವಂತೆ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ತೊಗಲು ಬೊಂಬೆ ಆಟದ ಉಲ್ಲೇಖವಿದೆ, ಮಹಾಭಾರತ ಗ್ರಂಥದಲ್ಲೂ ಇದರ ಪ್ರಸ್ತಾಪವಿದೆ, ಈ ಕಲೆಯನ್ನು ಕಿಳ್ಳೇಕ್ಯಾತರ ಸಮುದಾಯವು ತಮ್ಮ ಪಾರಂಪರಿಕ ಕಲೆಯಾಗಿಸಿಕೊಂಡಿದ್ದು ಈ ಕಿಳ್ಳೇಕ್ಯಾತರ ಮೂಲ ಪುರುಷ ಪಾಂಡವರ ಜೊತೆ ವನವಾಸ ಮಾಡಿದನೆಂಬುದು ನಂಬಿಕೆ. ಮೂಲತಃ ತಮಿಳುನಾಡಿನ ಮೂಲದ ಈ ಕಲೆಯು ಕರ್ನಾಟಕಕ್ಕೆ ಸಮುದಾಯಗಳ ಮೂಲಕ ವಲಸೆ ಬಂದುದಾಗಿ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಕನ್ನಡದ “ಧನಪಾಲ ತಿಲಕ ಮಂಜರಿ”, ವಿದ್ಯಾರಣ್ಯರ ಪಂಚಾದಶಿ, ಪಾಲ್ಕುರಿಕೆ ಸೋಮನಾತನ ಪಂಡಿತಾರಾಧ್ಯ ಚರಿತ, ಭೀಮಕವಿಯ ಬಸವ ಪುರಾಣ, ನೇಮಿಚಂದ್ರನ ನೇಮಿನಾಥ ಪುರಾಣಗಳಲ್ಲಿ ತೊಗಲು ಬೊಂಬೆಯಾಟದ ಉಲ್ಲೇಖವಿರುವುದು ಕಂಡುಬರುತ್ತದೆ. ಮುಖ್ಯವಾಗಿ ಕನ್ನಡ ವಚನ ಯುಗದಲ್ಲಿ ಅನೇಕ ವಚನಕಾರರು ಈ ಕಲೆಯ ಬಗ್ಗೆ ತಮ್ಮ ವಚನಗಳಲ್ಲಿ ಪ್ರಸ್ತಾಪಿಸಿದ್ದಾರೆ. ಕಲಕೇತ ಬೊಮ್ಮಯ್ಯ ಎಂಬ ವಚನಕಾರನು ಬೊಂಬೆಯಾಟವು ಶಿಳ್ಳೇಕ್ಯಾತ ಸಮುದಾಯಕ್ಕೆ ಸೇರಿದ ಕಲೆಯಾಗಿದೆ ಎಂದು ಊಹಿಸಿದ್ದಾರೆ. ಧಾರವಾಡ, ಕೋಲಾರ, ಬಳ್ಳಾರಿ, ರಾಯಚೂರು ಗಳಲ್ಲಿ ಕಿಳ್ಳೇಕ್ಯಾತ , ಬೀದರ್ ನಲ್ಲಿ ತೋಲುಬೊಮ್ಮಲಾಟ , ಕಟ-ಬರಾಟ ಎಂದು ಗುಲ್ಬರ್ಗದಲ್ಲಿ, ಹಳೇ ಮೈಸೂರು ಭಾಗಗಳಲ್ಲಿ ಗೊಂಬೇರಾಮರ ಆಟಗಲೆಂದು ಈ ಕಲೆ ಅಸ್ತಿತ್ವದಲ್ಲಿದೆ.ಕರ್ನಾಟಕದಲ್ಲಿ ಈ ಕಲೆಯನ್ನು ಉತ್ತುಂಗಕ್ಕೇರಿಸಿದ ಅನೇಕ ಕಲಾವಿದರಿದ್ದಾರೆ ಅವರಲ್ಲಿ ಹೊಂಬಯ್ಯ, ಗುಡ್ಡಪ್ಪ ಶಟವಾಜಿ, ಎಡ್ರಮನಹಳ್ಳಿ ಭರಮಪ್ಪ, ಶಿಂಧೆ ರಾಮಮೂರ್ತಿ, ಮೊರನಾಳ ಭೀಮವ್ವ ದೊಡ್ಡಬಾಳಪ್ಪ, ಬೆಳಗಲ್ಲು ವೀರಣ್ಣ, ಹನುಮಯ್ಯ, ಅಪ್ಪಾಜಿ, ಒಡೆಲಡುಕಿನ ಕೆ. ತಿಪ್ಪೇಸ್ವಾಮಿ, ಮೊದಲಾದವರು ಪ್ರಮುಖರು.

ನರಹರಿ ಶಾಸ್ತ್ರಿಗಳು

ಚೀನಾ, ಟರ್ಕಿ, ಗ್ರೀಸ್, ಥಾಯ್‌ಲ್ಯಾಂಡ್, ಮಲೇಷಿಯಾ, ಇಂಡೋನೇಷಿಯಾ, ಪರ್ಷಿಯಾ, ಇಟಲಿ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ತೊಗಲು ಬೊಂಬೆಯಾಟ ಪ್ರಚಲಿತದಲ್ಲಿರುವುದನ್ನು ಕಾಣಬಹುದು, ವಿದೇಶಗಳಲ್ಲಿ ಅನೇಕ ವೃತ್ತಿಪರ ಸಂಸ್ಥೆಗಳೂ ಇದರಲ್ಲಿ ತೊಡಗಿಸಿಕೊಂಡಿವೆ. ಅಲ್ಲದೆ, ಅನಂತಪುರ ಜಿಲ್ಲೆಯ ಧರ್ಮವರಂನ ನಿಮ್ಮಲಕುಂಟ, ಗುಂಟೂರು ಜಿಲ್ಲೆಯ ನರಸರಾವ್ ಪೇಟ ತಾಲ್ಲೂಕಿನ ಕಟ್ಟುಬಾಟಿವೈಪಾಲೆಂ, ನೆಲ್ಲೂರು ಜಿಲ್ಲೆಯ ಡಿ. ಸಿ. ಪಲ್ಲೆ. ಪೂರ್ವ ಗೋದಾವರಿಯ ಕಾಕಿನಾಡ ಬಳಿಯ ಮಾಧವ ಪಟ್ನಂ.ನಿಮ್ಮಲಕುಟದಲ್ಲಿ ಮೂರು ಮಂದಿ ರಾಷ್ಟ್ರ ಪ್ರಶಸ್ತಿ ವಿಜೇತರು, ಇಪ್ಪತ್ತು ಮಂದಿ ರಾಜ್ಯ ಪ್ರಶಸ್ತಿ ವಿಜೇತರು, ಇಬ್ಬರು ಶಿಲ್ಪಗುರು ಪ್ರಶಸ್ತಿವಿಜೇತ ಕುಶಲ ಕರ್ಮಿಗಳಿದ್ದಾರೆ. ಸುಮಾರು ನೂರು ಮಂದಿ ಕಲಾವಿದರಿರುವ ಈ ಪ್ರಾಂತ್ಯದದವರು ತಮ್ಮ ಈ ತೊಗಲು ಬೊಂಬೆ ಕಲೆಯನ್ನು ಕೇವಲ ಪ್ರದರ್ಶನ ಬೊಂಬೆಗಳಿಗೆ ಮೀಸಲಿಡದೆ ಆಧುನಿಕ ಕಲಾ ಪ್ರಕಾರಗಳಾದ ದೀಪದ ಹೊದಿಕೆ, ಮರೆಯ ಗೋಡೆ ಪರದೆ, ಗೋಡೆ ಚಿತ್ರಗಳು, ಆಕಾಶ ಬುಟ್ಟಿಗಳು, ಬ್ಯಾಗುಗಳು ಮೊದಲಾದ ವಿನ್ಯಾಸಗಳನ್ನು ಸಿಧ್ಧಪಡಿಸುತ್ತಿದ್ದಾರೆ.

ಪ್ರಸ್ತುತ ವಿದ್ಯಾಮಾನಗಳನ್ನು ತೊಗಲು ಬೊಂಬೆಯಾಟದ ಮೂಲಕ ಪ್ರಸ್ತುತ ಪಡಿಸಿದರೆ ಹೆಚ್ಚು ಪರಿಣಾಮಕಾರಿಯಾಗಿರುವುದು ಹಾಗು ಅಳಿವಿನಂಚಿನಲ್ಲಿರುವ ಈ ಕಲೆಯನ್ನು ರಕ್ಷಿಸಬಹುದು.

ಲಕ್ಷ್ಮೀನಾರಾಯಣ ಟಿ

ಚಿತ್ರಗಳು : ಗೂಗಲ್

Related post

Leave a Reply

Your email address will not be published. Required fields are marked *