ಟ್ರೋಗಾನ್ ಎಂಬ ಸೌಂದರ್ಯದ ಖನಿ!

ಪಶ್ಚಿಮ ಹಾಗೂ ಘಟ್ಟಗಳ, ಒಟ್ಟಾರೆ ದಕ್ಕನ್ಪ್ರಸ್ಥ ಭೂಮಿಯ ರಮಣೀಯ ಸೌಂದರ್ಯದಲ್ಲಿ  ಈ ಹಕ್ಕಿಯದ್ದು ವಿಶಿಷ್ಟಪಾಲಿದೆ. ಕನ್ನಡದಲ್ಲಿ ಕಾಕರಣೆ ಹಕ್ಕಿ ಎಂದು ಕರೆಯಲಾಗುವ ಇದಕ್ಕೆ ಸ್ಥಳೀಯವಾಗಿ ಕಕ್ಕರಣೆ ಹಕ್ಕಿ ಎಂಬ ಹೆಸರೂ ಇದೆ. ಇಂಗ್ಲಿಷಿನಲ್ಲಿ ಮಲಬಾರ್ ಟ್ರೋಗಾನ್ (Malabar Trogon Harpactes fasciatus)ಎಂದು ಕರೆಯುತ್ತಾರೆ. ಗಂಡು ಹಾಗೂ ಹೆಣ್ಣು ಎರಡೂ ವಿಶಿಷ್ಟವಾದ ಸೌಂದರ್ಯದಿಂದ ಕೂಡಿದೆ. ಗಂಡು ಪ್ರಧಾನವಾಗಿ ಕೆಂಪಾಗಿದ್ದು ಕಪ್ಪು ತಲೆ, ಕುತ್ತಿಗೆಯನ್ನು ಹೊಂದಿರುತ್ತದೆ, ಈ ಕಪ್ಪು ಎದೆಯ ಮೇಲ್ಭಾಗದವರೆಗೂ ವ್ಯಾಪಿಸಿರುತ್ತದೆ. ದೇಹದ ಕೆಳಭಾಗ  ಕೆಂಪು! ಈ ಕೆಂಪು-ಕಪ್ಪನ್ನು ಬೇರ್ಪಡಿಸುವುದು ಬಿಳಿಯ ಉಂಗುರ! ಇನ್ನು ಹೆಣ್ಣು ಇದಕ್ಕಿಂತಲೂ ಹೆಚ್ಚು ಎಂಬತೆ ಕಪ್ಪು ತಲೆ ಮತ್ತು ಬಂಗಾರದ ಬಣ್ಣದ ಬೆನ್ನುಭಾಗವನ್ನು ಹೊಂದಿರುತ್ತದೆ. ಪಶ್ಚಿಮಘಟ್ಟಗಳ ಆ ದಟ್ಟ ಅರಣ್ಯದ ಮಧ್ಯೆ ಇವು ಕಣ್ಣಿಗೆ ಬಿದ್ದರೆ ಆಯಾಸವೆಲ್ಲ ಪರಿಹಾರವಾಗಿ ಗಾಳಿಯಲ್ಲಿ ತೇಲಾಡುವಂತಾಗುತ್ತದೆ. ಮಾನವನಿಗೆ ಸಿಗುವ ನಿಜವಾದ ಆನಂದಗಳಲ್ಲಿ ಇದೂ ಒಂದು.

ಅಪರೂಪವಾಗಿ ಹಣ್ಣನ್ನು ತಿನ್ನುವ ಇದು ಕೀಟಾಹಾರಿ ಹಕ್ಕಿ. ಇಂತಹ ಕೀಟಾಹಾರಿ ಹಕ್ಕಿಗಳು ಕಾಡಿಗೆ ಸಲ್ಲಿಸುವ ಸೇವೆ ಅನನ್ಯ. (ಜಗತ್ತಿನ ಟ್ರೋಗನ್‍ಗಳಲ್ಲಿ ಕೇವಲ ಕೀಟಾಹಾರಿ, ಮಿಶ್ರಾಹಾರಿ ಹಾಗೂ ಕಶೇರುಕಗಳನ್ನು ತಿನ್ನುವಂತಹ ಮಾಂಸಾಹಾರಿಗಳೂ ಇವೆ).

ಭಾರತ ಉಪಖಂಡದಲ್ಲಿ ಮೂರು, ಜಗತ್ತಿನಾದ್ಯಂತ 39 ಬಗೆಯ ಟ್ರೋಗಾನ್‍ಗಳು ಕಂಡು ಬರುತ್ತವೆ, ವರ್ಣವೈವಿಧ್ಯದ ಒಂದು ಉದಾಹರಣೆ ಈ ಹಕ್ಕಿ. ಮರಗಳಲ್ಲಿ ತೀರಾ ಎತ್ತರವಲ್ಲದ ಕಡೆ ಆದರೆ ಎಲೆಗಳ ನಡುವೆ ಮೌನವಾಗಿ ಕುಳಿತುಬಿಟ್ಟಿರುತ್ತದೆ. ಚಿಕ್ಕ ಕಾಲು ಹಾಗೂ ಪಾದಗಳನ್ನು ಹೊಂದಿರುವ ಇವು ನೆಲದ ಮೇಲಾಗಲೀ ಕೊಂಬೆಯ ಮೇಲಾಗಲೀ ನಡೆಯುವುದು ಅಪರೂಪದಲ್ಲಿ ಅಪರೂಪ. ಇವುಗಳ ಧ್ವನಿಯೂ ಹೆಚ್ಚು ದೂರಕ್ಕೆ ಕೇಳದು ಹಾಗಾಗಿ, ಇವು ವರ್ಣರಂಜಿತ ಹಕ್ಕಿಗಳಾದರೂ ಗಮನಕ್ಕೆ ಬಾರದೇ ಹೋಗುವುದೇ ಹೆಚ್ಚು. ಇವುಗಳ ಇನ್ನೊಂದು ವಿಶೇಷವೆಂದರೆ ಇವುಗಳ ಕಾಲಬೆರಳುಗಳು ಎರಡು ಮುಂದಕ್ಕೂ ಎರಡು ಹಿಂದಕ್ಕೂ ಇರುತ್ತವೆ. ಇದರಿಂದಾಗಿ ಅವು ಮರದ ಮೇಲೆ ಉದ್ದುದ್ದ ಹಿಡಿತ ಸಾಧಿಸಬಲ್ಲವು. 

ಇಂತಹ ಹಕ್ಕಿ  ನಿಮಗೆ ಕಂಡರೆ ನಮಗೆ ಬರೆದು ತಿಳಿಸಿ.

ಕಲ್ಗುಂಡಿ ನವೀನ್

ಚಿತ್ರ: ಶ್ರೀ ಜಿ ಎಸ್ ಶ್ರೀನಾಥ

Related post

Leave a Reply

Your email address will not be published. Required fields are marked *