ದಿನಕರನ ಸೋಜಿಗದಲಿ…

ದಿನಕರನ ಸೋಜಿಗದಲಿ…

ಕತ್ತಲು ಕವಿದಿಹ ಲೋಕದಲಿ
ಸುತ್ತಲೂ ಬೆಳಕನು ನೀಡುತಾ!
ಎತ್ತೆತ್ತಲೂ ಹಸಿರ ಚಿಗುರಿಸುತಲಿ..
ಸೊಗದಿ ಆ ಅಹಸ್ಕರನು ಬಂದಿಹನಲ್ಲಾ!!

ನೀಲಾಗಸದಿ ಹೊಂಗಿರಣವ ಬೀರಿ
ಸರಾಗದಿ ಕೆಂಬಣ್ಣವ ಪಸರಿಸುತಾ!
ಅನುರಾಗದಿ ಕಾಯ್ವ ಧರಣಿಯಲಿ..
ತನ್ನೊಲವ ಅರುಹಲು ರವಿ ಆಗಮಿಸಿಹನಲ್ಲಾ!!

ಕಾನನಕೆ ಹೊನ್ನಿನ ಚಾದರ ಹೊದಿಸಿ
ಮನನ ಮಾಡುವಂತೆ ಬಾನಲಿ ಚಲಿಸುತಾ!
ಶಮನ ಮಾಡಿ ಕಾರ್ಗತ್ತಲನು ಜಗದಲಿ..
ನೇಸರನು ಸಕಲರ ಕಂಗಳ ತೆರೆಸಿಹನಲ್ಲಾ!!

ದೊಡ್ಡ ನಕ್ಷತ್ರವಾದರೂ ಬ್ರಹ್ಮಾಂಡದಲಿ
ಅಡ್ಡವಾದ ಮೋಡದ ಮರೆಯಲಿ ಅಡಗುತಾ!
ಹೆಡ್ಡ ಮನುಜನಿಗೆ ಕರ್ತವ್ಯವ ತಿಳಿಸೇ ಮನದಲಿ..
ದಿನಕರನು ತನ್ನ ಬೆಳಕಲಿ ಬಾಳ ಬೆಳಗಿಹನಲ್ಲಾ!!

ಸುಮನಾ ರಮಾನಂದ

Related post

Leave a Reply

Your email address will not be published. Required fields are marked *