ದೇಶದ ರಕ್ಷಣಾ ಗೂಡಚರ್ಯೆಗಿನ್ನು ರುಸ್ತುಂ ಶಕ್ತಿ
‘ರುಸ್ತುಂ-2’ ಎಂದಾಕ್ಷಣ ಇದೇನಪ್ಪಾ ಎಂದು ಹುಬ್ಬೇರಿಸಬೇಡಿ. ಏಕೆಂದರೆ ಇದು 2016ರ ನವೆಂಬರ್ 15ರಂದು ತನ್ನ ಹದಿನಾರನೇ ಪರೀಕ್ಷಾರ್ಥ ಹಾರಾಟದಲ್ಲಿ ಯಶಸ್ವಿಯಾಗಿ ಭಾರತೀಯ ಸೇನೆಯ ಬತ್ತಳಿಕೆಗೆ ಸೇರಲು ಹಾತೊರೆಯುತ್ತಿರುವ ಸ್ವದೇಶಿ ನಿರ್ಮಿತ ಸರ್ವೇಕ್ಷಣಾ ಡ್ರೋನ್ ವಿಮಾನ. (ಡ್ರೋನ್ ಎಂದರೆ ಮಾನವರ ರಹಿತವಾಗಿ ರಿಮೋಟ್ ಮೂಲಕ ನಿಯಂತ್ರಿಸಲ್ಪಡುವ ವಿಮಾನ) ಇದನ್ನು ವಿಶೇಷವಾಗಿ ಶತ್ರು ಸೈನ್ಯದ ವಿವರಗಳನ್ನು ಕಲೆಹಾಕಲು, ಕಣ್ಗಾವಲು ನಡೆಸಲು ಮತ್ತು ಶತ್ರು ಪಾಳಯದ ಮೇಲೆ ಗುಪ್ತವಾಗಿ ದಾಳಿ ಮಾಡುವ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.
ಇಲ್ಲಿಯವರೆಗೂ ‘ಡ್ರೋನ್’ ಎಂಬ ಮಾತೆತ್ತಿದರೆ ಅಮೇರಿಕಾ ಮತ್ತು ರಷ್ಯಾ ಎಂಬೆರಡು ರಾಷ್ಟ್ರಗಳ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿತ್ತು. ಆದರೆ ಇಂದು ಕಾಲ ಬದಲಾಗಿದ್ದು, ದೇಶ ಕಂಡ ಮಹಾನ್ ಕ್ಷಿಪಣಿ ಮಾನವ, ಖ್ಯಾತ ಅಣು ವಿಜ್ಞಾನಿ ಡಾ|| ಎ.ಪಿ.ಜೆ ಅಬ್ದುಲ್ ಕಲಾಂರವರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಇಂದು ಚಾಲಕ ರಹಿತ ಡ್ರೋನ್ ವಿಮಾನವನ್ನು ತಯಾರಿಸಿ, ಯಶಸ್ವೀ ಪರೀಕ್ಷಾರ್ಥ ಹಾರಾಟವನ್ನೂ ನಡೆಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರನ್ನು ಪ್ರಜ್ವಲಿಸುವಂತೆ ಮಾಡಿದೆ. ಅದರಲ್ಲೂ ವಿಶೇಷವಾಗಿ ಗಮನಿಸಬೇಕಾದ ವಿಚಾರವೆಂದರೆ ಇಲ್ಲಿ ಬಳಸಿಕೊಂಡಿರುವುದು ಸ್ವದೇಶಿ ತಂತ್ರಜ್ಞಾನ ಎಂಬುವುದು ವಿಶೇಷ. ಈ ರೀತಿಯಾಗಿ ದೇಶದ ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಯೋಜನೆಯ ಯಶಸ್ಸಿಗೆ ಬಲು ದೊಡ್ಡ ಕೊಡುಗೆಯನ್ನೇ ನೀಡಿದೆ ಎನ್ನಬಹುದು. ಈ ಡ್ರೋನ್‌ಗೆ ‘ರುಸ್ತುಂ-2’ (ಮೂಲ ಹೆಸರು ತಾಪಸ್-201) ಎಂದು ನಾಮಕರಣ ಮಾಡಿದ್ದು ಈ ವಿಮಾನವನ್ನು ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗಳು ವಿವಿಧ ಸನ್ನಿವೇಶ ಹಾಗೂ ಸಂದರ್ಭಗಳಲ್ಲಿ ಮಾನವ ರಹಿತ ಕಾರ್ಯಾಚರಣೆಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಹಕಾರಿಯಾಗುವಂತೆ ನಿರ್ಮಿಸಲಾಗಿದೆ. ಈ ಮಾದರಿಯ ಡ್ರೋನ್ ನಿರ್ಮಾಣದ ಪ್ರಯತ್ನಗಳು ‘ರುಸ್ತುಂ-1’ ನ ಹೆಸರಿನಲ್ಲಿ ನಡೆದಿತ್ತು. ಈ ಪ್ರಯತ್ನವು ಅಷ್ಟೊಂದು ಪರಿಣಾಮಕಾರಿ ಕಾರ್ಯನಿರ್ವಹಣೆಯನ್ನು ಹೊಂದಿರಲಿಲ್ಲವಾದ್ದರಿಂದ ಇದರಲ್ಲಿ ತಕ್ಕಮಟ್ಟಿನ ಹಿನ್ನಡೆಯಾಗಿದ್ದೂ ಸುಳ್ಳಲ್ಲ. ಆದರೆ 2009 ರಲ್ಲಿ ತಯಾರಿಸಲು ಪ್ರಾರಂಭಿಸಿದ ರಸ್ತುಂ-2 ಅಮೇರಿಕಾ ಡ್ರೋನ್ ದರ್ಜೆಯ ಆಧುನೀಕೃತ ಮಾದರಿಯಾಗಿದೆ ಎಂದರೆ ತಪ್ಪಾಗಲಾರದು.
ಈ ಯೋಜನೆಗಾಗಿ ಭಾರತ ಸರಕಾರ ಆಖಆಔ ಮೂಲಕ ಸುಮಾರು ರೂ.67,000 ಕೋಟಿ ವೆಚ್ಚದಲ್ಲಿ 598 ಡ್ರೋನ್‌ಗಳನ್ನು ನಿರ್ಮಿಸಲು ನಿರ್ಧರಿಸಿದ್ದು, ಈ ಮೂಲಕ ವಿದೇಶಗಳಿಂದ ದುಬಾರಿ ಡ್ರೋನ್ ಖರೀದಿಯನ್ನು ಕಡಿಮೆ ಮಾಡಲು ಉದ್ದೇಶಿಸಿದೆ.
ರುಸ್ತುಂ-2 ಏನಿದರ ವಿಶೇಷತೆಗಳು
ಚಾಲಕ ರಹಿತವಾದ ಈ ಸ್ವದೇಶಿ ತಂತ್ರಜ್ಞಾನ ನಿರ್ಮಿತ ರುಸ್ತುಂ-2 ವನ್ನು ಸೇನೆಯು ತನ್ನ ಗಮ್ಯ ಸ್ಥಾನದಿಂದಲೇ ಅವಶ್ಯಕತೆಗನುಗುಣವಾಗಿ ವಿವಿಧ ಸಂದರ್ಭಗಳಲ್ಲಿ ವಿವಿಧ ಉದ್ದೇಶಗಳಿಗೆ ಬಳಸಬಹುದಾಗಿದ್ದು, ಸ್ವಯಂಚಾಲಿತ ‘ಟೇಕ್‌ಆಫ್’ ಮತ್ತು ‘ಲ್ಯಾಂಡಿಂಗ್’ ವ್ಯವಸ್ಥೆಯನ್ನು ಹೊಂದಿದೆ. ರುಸ್ತುಂ-2 ವನ್ನು ಸಂಪೂರ್ಣ ಸ್ವದೇಶೀ ತಂತ್ರಜ್ಞಾನದೊಂದಿಗೆ ತಯಾರಿಸಿದ್ದು, ಇದರ ಮುಖ್ಯ ಭಾಗಗಳಾದ ವಿಮಾನದ ಹೊರ ರಚನೆ, ಲ್ಯಾಂಡಿಂಗ್ ಗೇರ್, ಹಾರಾಟ ನಿಯಂತ್ರಣ ವ್ಯವಸ್ಥೆ ಮತ್ತಿತರ ಭಾಗಗಳನ್ನು ಭಾರತೀಯ ಕೈಗಾರಿಕೆಗಳಲ್ಲೇ ತಯಾರಿಸಿರುವುದು ಮತ್ತೊಂದು ವಿಶೇಷತೆಯಾಗಿದೆ. ಇದು 7.9 ಮೀಟರ್ ಅಗಲದ ಬಲಿಷ್ಠ ರೆಕ್ಕೆಗಳನ್ನು ಹೊಂದಿದ್ದು, ಒಟ್ಟು 800 ಕೆ.ಜಿ ಭಾರದೊಂದಿಗೆ ಯಶಸ್ವಿಯಾಗಿ ಟೇಕ್-ಆಫ್ ಆಗುವುದರೊಂದಿಗೆ ಸುಮಾರು 200 ಕೆ.ಜಿ ಭಾರದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲುದು. ಗಾತ್ರದಲ್ಲಿ ಸಾಧಾರಣವಾಗಿರುವ ಈ ಡ್ರೋನ್ 9.5 ಮೀಟರ್ ಉದ್ದ ಮತ್ತು 2.40 ಮೀಟರ್ ಎತ್ತರವನ್ನು ಹೊಂದಿದ್ದು, ಇದಕ್ಕೆ ಅಮೆರಿಕಾ ಮೂಲದ ಒಂದು ಸಂಸ್ಥೆಯ 0-320 ಸರಣಿಯ 150 ಅಶ್ವಶಕ್ತಿಯ ನಾಲ್ಕು ಸಿಲಿಂಡರ್‌ಯುಕ್ತ ಎಂಜಿನ್‌ಗಳನ್ನು ಅಳವಡಿಸಲಾಗಿದೆೆ.
ತನ್ನ ದರ್ಜೆಯ ಡ್ರೋನ್‌ಗಳ ಪೈಕಿ ಅತ್ಯಧಿಕ ಭಾರವನ್ನು ಹೊತ್ತೊಯ್ಯುವುದರ ಜೊತೆಗೆ ಸುಮಾರು 250 ಕೀ.ಮೀ ವ್ಯಾಪ್ತಿಯ ಪ್ರದೇಶದ ಕಣ್ಗಾವಲಿನೊಂದಿಗೆ ಅತ್ಯಂತ ಉತ್ತಮ ದರ್ಜೆಯ ನಿಖರ ಛಾಯಾಚಿತ್ರಗಳನ್ನು ತೆಗೆದು ಸಂಗ್ರಹಿಸಿಟ್ಟುಕೊಳ್ಳಬಲ್ಲದು. ಇದು 22,000 ಅಡಿ ಎತ್ತರದಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿದ್ದು, ಗಂಟೆಗೆ ಸರಾಸರಿ 225 ಕಿ.ಮೀ ವೇಗದಲ್ಲಿ ಹಾರಾಟ ನಡೆಸಬಲ್ಲುದು. ಹಿಮಚ್ಛಾಧಿತ ಪ್ರದೇಶಗಳಲ್ಲಿ ಹಾರಾಟ ನಡೆಸುವ ಸಂದರ್ಭಗಳಲ್ಲಿ ಹಿಮದಿಂದ ರಕ್ಷಣೆ ಪಡೆಯುವ ನಿಟ್ಟಿನಲ್ಲಿ ಹಿಮನಿವಾರಕ ರೆಕ್ಕೆಯನ್ನು ಇದಕ್ಕೆ ಅಳವಡಿಸಲಾಗಿದ್ದು ವಾಯುಬಲ ವೈಜ್ಞಾನಿಕ ಸಂರಚನೆಯನ್ನು ಹೊಂದಿದೆ. ತನ್ನ ಆಕಾರಕ್ಕೆ ಅನುಗುಣವಾದ ಬಲಿಷ್ಟ ರೆಕ್ಕೆಯ ಕಾರಣದಿಂದ ಇದು ಅತ್ಯಧಿಕ ಭಾರದ ಶಸ್ತ್ರಾಸ್ತ್ರ ಹಾಗೂ ಕಣ್ಗಾವಲು ಕ್ಯಾಮರಾಗಳನ್ನು ತನ್ನೊಂದಿಗೆ ಹೊತ್ತೊಯ್ಯಬಲ್ಲದು. ಅಮೇರಿಕಾ ತಂತ್ರಜ್ಞಾನದ ಪ್ರೇಡೇಟರ್ ಡ್ರೋನ್‌ಗಿಂತಲೂ ಹೆಚ್ಚು ಅಂದರೆ ನಿರಂತರವಾಗಿ ಸುಮಾರು 24 ಗಂಟೆಗಳ ಕಾಲ ಆಕಾಶದಲ್ಲಿ ಹಾರಾಡಬಲ್ಲದು ಮತ್ತು ಗಾಳಿಯು ಚಲಿಸುವ ವೇಗವನ್ನು ಸಮರ್ಪಕವಾಗಿ ಬಳಸಿಕೊಂಡು ಸಮರ್ಪಕವಾಗಿ ಇಂಧನದ ನಿರ್ವಹಣೆಯೊಂದಿಗೆ ಮುಂದಕ್ಕೆ ಸಾಗುವ ವಿಶೇಷ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಮಾನವ ರಹಿತವಾದ ಡ್ರೋನ್ ಇದಾಗಿರುವ ಕಾರಣದಿಂದ ನಿಯಂತ್ರಣ ಕೊಠಡಿಯೊಂದಿಗೆ ಕಂಪ್ಯೂಟರಿಕೃತ ವ್ಯವಸ್ಥೆಯ ಸಂವಹನದೊಂದಿಗೆ ಸಂಗ್ರಹಿಸಲಾದ ದತ್ತಾಂಶಗಳ ಕ್ರೋಢೀಕರಣ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಲಾಗಿದೆ. ಈ ವಿಶೇಷ ಡ್ರೋನ್ ನನ್ನು ಸೈನ್ಯವು ವೈವಿಧ್ಯಮಯ ಉದ್ದೇಶಗಳಾದ ನಿರ್ದಿಷ್ಟ ಪ್ರದೇಶಗಳನ್ನು ಪರಿಶೀಲಿಸಲು, ರಾತ್ರಿ ಮತ್ತು ಹಗಲು ಕಣ್ಗಾವಲು ನಡೆಸಲು, ಗುಪ್ತಚರ ಮಾಹಿತಿ ಸಂಗ್ರಹಣೆ, ವೈಮಾನಿಕ ಯುದ್ಧ ಕಾರ್ಯಾಚರಣೆಗೆ ಬಳಸಿಕೊಳ್ಳಲು ಉದ್ದೇಶಿಸಿದೆ. ಮಾನವ ಸಹಿತ ವಿಮಾನಗಳಿಗಿಂತಲೂ ಕಡಿಮೆ ವೆಚ್ಚದಲ್ಲಿ ಇವುಗಳನ್ನು ನಿರ್ವಹಿಸಬಹುದಾಗಿರುವುದರಿಂದ ಯುದ್ಧ ಸಂದರ್ಭ ಮತ್ತು ಇತರ ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ದೇಶದ ಹೆಮ್ಮೆಯ ಸೈನಿಕರ ಜೀವ ಹಾನಿಯನ್ನು ತಪ್ಪಿಸಬಹುದಾಗಿದೆ. ಈ ಡ್ರೋನ್ ನನ್ನು ಸೇನೆಯ ವಿವಿಧ ಸಂದರ್ಭಗಳಲ್ಲಿ ಅದರ ಅವಶ್ಯಕತೆಗೆ ಅನುಗುಣವಾಗಿ ಸರಳ ಮತ್ತು ಶೀಘ್ರವಾಗಿ ಬದಲಾವಣೆಗೆ ಅನುಕೂಲವಾಗುವಂತೆ ನಿರ್ಮಿಸಲಾಗಿದೆ. ವಿಶೇಷವಾಗಿ ಭಾರತದಲ್ಲಿ ಈ ರುಸ್ತುಂ-2 ವನ್ನು ಸೇನೆಯು ಸರ್ಜಿಕಲ್ ದಾಳಿಯನ್ನು ಉಗ್ರರ ಅಡಗುದಾಣಗಳ ಮೇಲೆ ಜಮ್ಮು ಕಾಶ್ಮೀರ ಗಡಿಯುದ್ದಕ್ಕೂ ನಡೆಸುವಲ್ಲಿ ಅಲ್ಲಿನ ಭೂಪ್ರದೇಶಗಳ ಚಿತ್ರಿಕರಣ ನಡೆಸಿ ನಿರ್ವಹಿಸುವಲ್ಲಿ ಬಳಸಿಕೊಳ್ಳಲು ಉದ್ದೇಶಿಸಿದೆ.
ಪ್ರಥಮ ಯಶಸ್ವಿ ಹಾರಾಟ
ಭಾರತೀಯ ತಂತ್ರಜ್ಞಾನದ ಮೂಲಕ ನಿರ್ಮಿತವಾದ ರುಸ್ತುಂ-2 ತನ್ನ ಪ್ರಥಮ ಪರೀಕ್ಷಾರ್ಥ ಹಾರಾಟವನ್ನು 2016 ರ ನವೆಂಬರ್‌ನಲ್ಲಿ ನಡೆಸಿದ್ದು ಕರ್ನಾಟಕದ ಬೆಂಗಳೂರಿನಿಂದ ಸುಮಾರು 250 ಕೀ.ಮೀ ದೂರದ ಚಿತ್ರದುರ್ಗದ ವೈಮಾನಿಕ ಪರೀಕ್ಷಾ ಕೇಂದ್ರದಲ್ಲಿ ಎನ್ನವುದೇ ಹೆಮ್ಮೆಯ ವಿಚಾರ. ಈ ಮೂಲಕ ಭಾರತವೂ ಅಮೇರಿಕಾ, ಇಸ್ರೇಲ್ ಮತ್ತು ರಷ್ಯಾಗಳ ಡ್ರೋನ್ ತಂತ್ರಜ್ಞಾನದ ಸಾಲಿಗೆ ಸೇರಿರುವುದು ಮಹತ್ವದ ಅಂಶವಾಗಿದೆ.
ಒಟ್ಟಿನಲ್ಲಿ ರುಸ್ತುಂ-2 ವಿಶ್ವದ ಉನ್ನತ ದರ್ಜೆಯ ಡ್ರೋನ್‌ಗಳ ಪೈಕಿ ಪ್ರಮುಖವಾದ ಅಮೆರಿಕಾ ತಂತ್ರಜ್ಞಾನದ ‘ಪ್ರೆಡೇಟರ್’ ಮತ್ತು ಇಸ್ರೇಲಿ ತಂತ್ರಜ್ಞಾನದ ‘ಐ.ಎ.ಐ-ಹೆರೋನ್’ ಗಳನ್ನೂ ಮೀರಿಸಿದ್ದು, ಭಾರತೀಯ ರಕ್ಷಣಾ ಕ್ಷೇತ್ರ ಮತ್ತಷ್ಟು ಬಲಗೊಳ್ಳುತ್ತಿದೆ ಎಂದರೆ ತಪ್ಪಾಗಲಾರದು. ಸಧ್ಯ ಇದರ ಇನ್ನೂ ಒಂಬತ್ತು ಹಂತಗಳ ಪರೀಕ್ಷೆಗಳು ಬಾಕಿ ಉಳಿದಿದ್ದು, ಪ್ರಮಾಣ ಪತ್ರವನ್ನು ಪಡೆಯುವ ಪೂರ್ವದಲ್ಲಿ ಸುಮಾರು ಹತ್ತು ರುಸ್ತುಂ-2 ಡ್ರೋನ್ ತಯಾರಿಸಿ ಅವುಗಳ ವಿವಿಧ ಹಂತಗಳ ಯಶಸ್ವಿ ಪರೀಕ್ಷಾರ್ಥ ಹಾರಾಟವನ್ನು ಕೈಗೊಳ್ಳಬೇಕಿದೆ. ಒಟ್ಟಾರೆಯಾಗಿ ರಕ್ಷಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾಗಿ ಬೆಳೆಯುತ್ತಿರುವುದು ಹೆಮ್ಮೆಯ ವಿಷಯವೇ ಸರಿ.
ಸಂತೋಷ್ ರಾವ್ ಪೆರ್ಮುಡ
“ಪಟ್ರಮೆ ಗ್ರಾಮ” ಮತ್ತು ಅಂಚೆ, ಬೆಳ್ತಂಗಡಿ ತಾಲೂಕು
ದೂ: 9742884160
ಚಿತ್ರಗಳು: ಅಂತರ್ಜಾಲ