ಧಾರವಾಡದ ದೀಪಾವಳಿ-ಚಿತ್ರಾವಳಿ

ಧಾರವಾಡದಲ್ಲಿ ದೀಪಾವಳಿಯ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸುತ್ತಾರೆ. ಇಲ್ಲಿನ ವಿಶೇಷತೆ ಎಂದರೆ ಚಿತ್ರರಚನಾ ಆಚರಣೆ. ಈ ಚಿತ್ರಸಂಪ್ರದಾಯವು ಪರಂಪರಾನುಗತವಾಗಿ ನಡೆದುಕೊಂಡು ಬರುತ್ತಿದೆ. ಇಲ್ಲಿನ ಜನಸಮುದಾಯವು ಸಗಣಿಯಲ್ಲಿ ಬೊಂಬೆಗಳ ಹಾಗೆ ವಿನ್ಯಾಸ ಮಾಡಿ ಪಾಂಡವರ ಆಕಾರಗಳನ್ನು ಮನೆಯ ಅಂಗಳದಲ್ಲಿ ಸ್ಥಾಪಿಸುತ್ತಾರೆ. “ಪಾಂಡವರು ನರಕ ಚತುರ್ಥಿಯಂದು ಬನ್ನಿ ಗಿಡದಲ್ಲಿ ಅಡಗಿಸಿಟ್ಟಿದ್ದ ತಮ್ಮ ಆಯುಧಗಳನ್ನು ತೆಗೆದುಕೊಂಡು ಹೋಗಲು ಬರುತ್ತಾರೆ ಆ ಸಮಯದಲ್ಲಿ ಅವರು ನಮ್ಮ ಮನೆಗೂ ಬರುತ್ತಾರೆ” ಎಂಬ ನಂಬಿಕೆ ಇವರದು.

ಚಿತ್ರ ಕೃಪೆ : uksuddi.in

ಅವರು ಸಿಧ್ಧಪಡಿಸಿದ ಐದು ಪಾಂಡವರು ಮತ್ತು ದ್ರೌಪದಿಯ ಗೊಂಬೆಗಳನ್ನು ಮನೆಯ ದೇವರಕೋಣೆಯಲ್ಲಿ ಅಥವಾ ಮನೆಯ ಒಳಾಂಗಣದ ವಿಶಾಲ ಸ್ಥಳದಲ್ಲಿ ವೃತ್ತಾಕಾರದಲ್ಲಿ ನಿಲ್ಲಿಸಿ, ಸುಣ್ಣದ ತಿಳಿ ನೀರಿನಲ್ಲಿ ಅದರ ಸುತ್ತಲೂ ವಿವಿಧ ವಿನ್ಯಾಸದ ಆಕಾರಗಳಿಂದ ಅಲಂಕರಿಸಿ ಎರಡೂ ಕೈಗಳಿಂದ ಪಾದದ ಹಾಗೆ(ಕೃಷ್ಣ ಜನ್ಮಾಷ್ಠಮಿಯಂದು ಮಾಡುವ ಶ್ರೀಕೃಷ್ಣನ ಪಾದಗಳ ಆಕಾರಗಳನ್ನು ಮೂಡಿಸಿದಂತೆ) ಆಕಾರಗಳನ್ನು ಮನೆಯ ಸುತ್ತಲೂ ಮೂಡಿಸುತ್ತಾರೆ. ಇಡೀ ತಿಂಗಳು ಆ ಕಲಾಕೃತಿಗಳು ಮನೆ ತುಂಬಾ ಇರುತ್ತವೆ. ಈ ಬೊಂಬೆಗಳ ಸೌಂದರ್ಯ ಮತ್ತು ಅಲಂಕಾರಗಳನ್ನು ನೋಡಲು ನೆರೆ ಹೊರೆಯ ಮನೆಯವರು, ಬೀದಿಯವರೂ ಸ್ಪರ್ಧಾತ್ಮಕ ದೃಷ್ಟಿಯಿಂದ ನೋಡುತ್ತಾರೆ. ಕರ್ನಾಟಕದ ದಕ್ಷಿಣ ಭಾಗಗಳಲ್ಲಿ ಈ ಆಚರಣೆಯು ವಿರಳವಾಗಿದ್ದು ಉತ್ತರ ಕರ್ನಾಟಕದ ಭಾಗಗಳಲ್ಲಿ ಮಾತ್ರ ಈ ಚಿತ್ರಪೂಜಾ ಸಂಪ್ರದಾಯ ಕಾಣುವುದು ವಿಶೇಷವಾಗಿದೆ.

ಐದು ಕಲ್ಲಿನ ಪಾಂಡವರು ಒಂದು ಆಚರಣೆಯಾದಂತೆ ಮನೆಯ ಹಿತ್ತಲಿನ ಭರಮಪ್ಪನ ಆಚರಣೆಯು ಪ್ರಮುಖವಾಗಿದೆ. ಮನೆಯ ಹಿತ್ತಲಿನಲ್ಲಿ ಎರಡು ಕಲ್ಲುಗಳನ್ನು ಸ್ತಾಪಿಸಿರುತ್ತಾರೆ ಅದೇ ‘ಭರಮಪ್ಪ’. ಆಯಾ ಮನೆಯ ಹೆಣ್ಣುಮಕ್ಕಳು ತವರಿಗೆ ಬಂದಾಗ ಭರಮಪ್ಪನಿಗೆ ತಪ್ಪದೇ ಪುಜೆ ಮಾಡಿ ಹೊಸ ಸೀರೆ ಉಟ್ಟು ನಮಸ್ಕರಿಸಿ ಹೋಗುತ್ತಾರೆ.ನಮ್ಮ ಬದುಕು ಪರಂಪರೆಯ ವಿಶಿಷ್ಟವಾದ ಪಳೆಯುಳಿಕೆಗಳನ್ನು ಒಳಗೊಂಡು ಗತಿಶೀಲ ನಡೆಯಲ್ಲಿ ಮುನ್ನಡೆಯುತ್ತದೆ. ಬೇರೆ ಬೇರೆ ಕಾಲಗಟ್ಟಗಳ ಪ್ರದಾನ ಅಂಶಗಳನ್ನು ಆಚರಣೆಯ ಸ್ವರೂಪದಲ್ಲಿ ಜೀವಂತವಾಗಿರಿಸಿಕೊಂಡಿರುತ್ತದೆ. ಇಂತಹ ಚಲನ ಶೀಲ ಬದುಕನ್ನು, ಅಲ್ಲಿ ಬರುವ ಆಚರಣೆಗಳನ್ನು ಸೂಕ್ಶ್ಮವಾಗಿ ಅವಲೋಕಿಸಿದರೆ ಮಾತ್ರ ಪರಂಪರೆಯ ದಿಟ ಸ್ವರೂಪ ಗೋಚರಿಸುತ್ತದೆ.

ಹಟ್ಟಿ ಹಬ್ಬದ ಆಚರಣೆಯಲ್ಲಿ ಬುಡಕಟ್ಟು ಮತ್ತು ಕೃಷಿ ಸಂಸ್ಕೃತಿಯ ದಿಟವಾದ ಪಳೆಯುಳಿಕೆಗಳಿವೆ. ಹಟ್ಟಿ ಎಂಬ ಪದವು ಬುಡಕಟ್ಟು ಜನಸಮುದಾಯದ ನೆಲೆ ಎಂಬ ಅರ್ಥ ಹೊಂದಿದೆ. ಕುರಿಸಾಕಣೆ, ಪಶುಸಾಕಣೆ ಮಾಡುತ್ತಿದ್ದ ಮಾನವ ವರ್ಷದಲ್ಲಿ ಒಮ್ಮೆ ಒಂದೆಡೆ ಸೇರುತ್ತಿದ್ದ. ಹಲವು ಸಮುದಾಯಗಳಲ್ಲಿ ಹರಡಿ ಹೋದವರು ಅಂದು ತಪ್ಪದೇ ಕೂಡುತ್ತಿದ್ದರು. ತಮ್ಮ ಪಶುವಿಗೆ ರೋಗ ರುಜಿನ ಬರದಂತೆ ಕಾಪಾಡೆಂದು ದೈವ ಶಕ್ತಿಯನ್ನು ಬೇಡಿಕೊಳ್ಳುತ್ತಿದ್ದರು. ಅನಂತರದ ಕಾಲದಲ್ಲಿ ಕೃಷಿ ಮಾಡುವುದನ್ನು ಕಲಿತು, ಒಂದೆಡೆ ನೆಲೆ ನಿಂತರು. ತನ್ನ ಸುರಕ್ಷತೆಗಾಗಿ ಹಟ್ಟಿ ಕಟ್ಟಿಕೊಳ್ಳತೊಡಗಿದರು. ಪಶುಗಳಿಗೆ ಹಾಕುವ ಮೇವಿನಂತೆಯೇ ಮುಳ್ಳು ಬೇಲಿಗಳಿಂದ ಹಟ್ಟಿ ನಿರ‍್ಮಿಸಿದ. ಇನ್ನೂ ಮುಂದುವರೆದು ಮಣ್ಣು ಕಟ್ಟಿಗೆ ಬಳಸಿ ಗೋಡೆಯನ್ನು ಕಟ್ಟತೊಡಗಿದ.

ಚಿತ್ರ ಕೃಪೆ : uksuddi.in

ಹಟ್ಟಿಹಬ್ಬದಲ್ಲಿ ಕೋಟೆ(ಚೌಕ)ಯಾಕಾರದಲ್ಲಿ ಸಗಣಿಯ ಆಕೃತಿಗಳನ್ನು ಜೋಡಿಸಿ ಒಂದು ಕಡೆ ಬಾಗಿಲು ತೆರೆದಿರುತ್ತಾರೆ. ಸಗಣಿಯ ಗೋಪುರದ ಆಕೃತಿಗಳಿಗೆ ಪಾಂಡವರು ಎನ್ನುವರು. ಪಾಂಡವರು ಅಡವಿಯಲ್ಲಿಯೇ ತಮ್ಮ ಕೋಟೆಯನ್ನು ಕಟ್ಟಿಕೊಂಡ ಸಂದರ್ಭವು ಬುಡಕಟ್ಟು ನೆಲೆಯನ್ನು ಸೂಚಿಸುತ್ತದೆ. ಮನೆಯ ಒಳಗಿನ ಈ ಕೋಟೆಗೆ ಮತ್ತು ಮನೆ ಬಾಗಿಲ ಮುಂದಿಟ್ಟ ಪಾಂಡವರಿಗೆ ಹೆಜ್ಜೆ ಮೂಲಕ ಸಂಪರ್ಕ ಕಲ್ಪಿಸಿರುತ್ತಾರೆ. ಕೃಷ್ಣ ಇಂದ್ರಪ್ರಸ್ತಕ್ಕೆ ಬಂದ ಸಂಕೇತವೂ ಇಲ್ಲಿ ಸೇರಿದೆ. ಈ ಆಚರಣೆಯಯಲ್ಲಿ ಕೃಷ್ಣನು ಮತ್ತು ಗೊಲ್ಲರು ಎಂಬ ಬುಡಕಟ್ಟು ನೆಲೆಯನ್ನು ಕಾಣಬಹುದು. ಸಗಣಿಯ ಆಕೃತಿಗಳು ಪಂಚಬೂತಗಳಾದ ಗಾಳಿ, ಆಕಾಶ, ನೀರು, ಬೆಂಕಿ ಮತ್ತು ಮಣ್ಣಿನ ಪ್ರತೀಕವಾಗಿರಬಹುದು. ಐದು ಅಂಕಿ ಸಾಮ್ಯತೆ ಇರುವುದರಿಂದ ಪಾಂಡವರ ಕಥೆಗೆ ಒಳಸಂಬಂದವನ್ನು ಹೊಂದಿರುವುದರಿಂದ ಆ ಪದವು ಬಳಕೆಯಲ್ಲಿ ಬಂದಿರಬಹುದು. ಅಮವಾಸ್ಯೆಯ ದಿನ ಭೂಮಿತಾಯಿಯ ಸೀಮಂತವನ್ನು ಮಾಡುವ ರೈತರು ಬನ್ನಿ ಗಿಡದ ಬುಡದಲ್ಲಿ ಐದು ಕಲ್ಲುಗಳನ್ನಿಟ್ಟು ಪೂಜಿಸುತ್ತಾರೆ. ಅಲ್ಲಿ ಐದೂ ಪಂಚಭೂತಗಳನ್ನು ಆರಾದಿಸುವ ನೆಲೆ ಇದೆ.

ಪಾಂಡವರಿಗೆ ಏರಿಸುವ ಹೂ, ಹೊನ್ನಂಬರಿ, ಹೊನ್ನ ಅವರಿ ಮತ್ತು ಉತ್ರಾಣಿ ಕಡ್ಡಿಗಳು ಒಕ್ಕಲಿಗನಿಗೆ ಸಹಜವಾಗಿ ಸಿಗುವ ವಸ್ತುಗಳಿವು. ಹೊನ್ನಂಬರಿ ನಲಿವಿಗೆ, ಉತ್ರಾಣಿ ನೋವಿಗೆ ಸಂಕೇತವಾಗಿರಬಹುದು. ದನಗಳಿಗೆ ರೋಗ ಬರಬಾರದೆಂಬ ಆಶಯದಲ್ಲಿ ಅಂಟೋಳಿ-ಪಂಟೋಳಿ ಎಂಬ ಆಚರಣೆಯೂ ರೈತ ಸಮುದಾಯದಲ್ಲಿದೆ.

ಕೊಪ್ಪಳ ತಾಲ್ಲೂಕಿನ ಅಳವಂಡಿ ಹೋಬಳಿಯಲ್ಲಿ ಹಟ್ಟಿ ಹಬ್ಬ ಆಚರಿಸುತ್ತಿರುವ ಕುರಿಗಾರರು ಚಿತ್ರ ಕೃಪೆ : ಪ್ರಜಾವಾಣಿ

ಹಂಡ ಆಕಳ
ಬಂಡ ಆಕಳ
ಗುಡದನ್ನ ಹೋರಿ ಮೇದಿರಬೇಕ
ಮಡ್ಯಾಗ ಬಂದು ಈದಿರಬೇಕ
ಮಾರ ಮಾರ ಹುಲ್ಲು, ಜೋರು ಜೋರು ಹಾಲು
ಜೋರು ಜೋರು ಹಾಲಿಗೆ ಕೆನಿ ಕೆನಿ ಮೊಸರು,
ಕೆನಿ ಕೆನಿ ಮೊಸರಿಗೆ ಗಮ ಗಮ ತುಪ್ಪ
ಗಮ ಗಮ ತುಪ್ಪಕ್ಕ ಬಳ್ಳ ಬಳ್ಳ ರೊಕ್ಕ
ಅಂಟಿಗೊ ಪಂಟಿಗೊ
ಎಣ್ಣಿ ರೊಟ್ಟಿ ಗಾಣಿಗೊ
ರೊಟ್ಟಿ ಬುತ್ತಿ ಜಾಣಿಗೊ
ನಿಮ್ಮ ಎತ್ತಿನ ಪೀಡ ಹೊಳಿಯಾಚೆಗೊ
ನಿಮ್ಮ ಆಕಳ ಪೀಡ ಹೊಳಿಯಾಚೆಗೊ.

ಯುವಕರು ಹಣಜಿ ಹುಲ್ಲಿನಿಂದ ನಾಗಪ್ಪನ ಹೆಡೆ ಮಾಡಿ, ಹೆಡೆ ನಡುವೆ ದೀಪದ ಪಣತಿ ಹಚ್ಚಿ, ತಲೆ ಮೇಲೆ ಹೊತ್ತು ಮನೆ ಮನೆಗೆ ಹಟ್ಟಿ ಹಟ್ಟಿಗೆ ಹೋಗಿ ಈ ಹಾಡು ಹಾಡಿ ಸಂತಸಪಡುವರು.
ಪಾಂಡವರನ್ನು ಸಗಣಿಯಿಂದಲೇ ಮಾಡುತ್ತಾರೆ. ಏಕೆಂದರೆ ಸಗಣಿ ಸಹಜವಾಗಿ ಸಿಗುವ ವಸ್ತು, ಪೂಜನೀಯವೂ ಹೌದು. ಪಾಂಡವರ ಆಕಾರ ಮೇಟಿ ಸುತ್ತಲಿನ ರಾಶಿಯಂತೆ, ಮೊದಲ ರೈತ ಗಣಪತಿಯಂತೆ ಇರುತ್ತದೆ. ಮುಂಜಾನೆ ತಲೆಬಾಗಿಲ ಮುಂದೆ ಮತ್ತು ಮನೆಯ ಒಳಗೆ ಹಕ್ಕಿಯ ಹತ್ತಿರ ಇರಿಸಿದ ಪಾಂಡವರನ್ನು ಸಾಯಂಕಾಲ ಮಾಳಿಗೆಯ ಮೇಲೆ ಕುಂಬಿಯಲ್ಲಿ ಸಾಲಾಗಿ ಜೋಡಿಸುವರು. ತೊಟ್ಟಿಲನ್ನು ಮಾಡುವ ವಿದಾನ ಬಳಕೆಯಲ್ಲಿದೆ. ಪಾಂಡವರಿಗೆ ಬೆಳಕು ಮಾಡಲು ಎತ್ತರದ ಕಂಬ ನೆಡಿಸಿ ಶಿವನ ಪುಟ್ಟಿಯನ್ನು ಏರಿಸುತ್ತಾರೆ. ಇದೇ ಸಂದರ್ಭದಲ್ಲಿ ಆಕಾಶ ಪುಟ್ಟಿಯನ್ನೂ ಮಾಡಿ ಹಾರಿಸುತ್ತಾರೆ. ಮಾನವನ ನಾಗರಿಕತೆಯ ಹಾದಿಯಲ್ಲಿ ಪುರಾಣ ಕಾಲಕ್ಕಿಂತಲೂ ಮೊದಲು ಬುಡಕಟ್ಟು ಜನರ ಹಬ್ಬ ತನ್ನ ಪಳಯುಳಿಕೆಯನ್ನು ಈಗಲೂ ಜೀವಂತವಾಗಿರಿಸಿಕೊಂಡಿದೆ. ನಾಗರಿಕತೆ ಬೆಳೆದಂತೆ ಪುರಾಣದ ಅಂಶಗಳು ಸೇರಿಕೊಂಡಿವೆ. ಅದೇ ರೀತಿ ವರ್ತಕರ ಹಬ್ಬವಾಗಿ ಪರಿವರ್ತನೆ ಹೊಂದುತ್ತ ಸಾಗುತ್ತಿದೆ.

ಜಾನಪದವು ಪುರಾಣಕ್ಕೆ ಪ್ರೇರಣೆ ನೀಡಿರುತ್ತದೆ. ಮತ್ತೊಮ್ಮೆ ಪುರಾಣದಿಂದ ಅನೇಕ ಸಂಗತಿಗಳನ್ನು ಜಾನಪದ ಮರಳಿ ಪಡೆಯುತ್ತದೆ.

ಟಿ. ಲಕ್ಷ್ಮೀನಾರಾಯಣ

ಚಿತ್ರಕಲಾವಿದರು ಮತ್ತು ಬರಹಗಾರರು

Related post

Leave a Reply

Your email address will not be published. Required fields are marked *