ನಾಚಿಕೆಯ ಮುಟ್ಟಿದರೆ ಮುನಿ

ನಾಚಿಕೆಯ ಮುಟ್ಟಿದರೆ ಮುನಿ

ಪ್ರಕೃತಿಯಲ್ಲಿ ಹಲವು ವಿಧದ ಮರ ಗಿಡಗಳು ಮತ್ತು ಜೀವಿಗಳಿದ್ದು, ಅವುಗಳ ಪೈಕಿ ಮುಟ್ಟಿದರೆ ಮುನಿ ಎನ್ನುವ ಗಿಡವು ವಿಭಿನ್ನವಾದ ವೈಶಿಷ್ಟ್ಯತೆಯನ್ನು ಹೊಂದಿದೆ. ಇದಕ್ಕೆ ಆಡುಭಾಷೆಯಲ್ಲಿ ನಾಚಿಗೆ ಮುಳ್ಳು, ಮುಟ್ಟಿದರೆ ಮುಚಕ, ಮುಚ್ಗನ್ ಮುಳ್ಳು, ಪತಿವ್ರತೆ, ಮುಟ್ಟಿದರೆ ಮುನಿ, ಲಜ್ಜಾವತಿ, ಸಂಸ್ಕೃತದಲ್ಲಿ ‘ಅಂಜಲೀ ಕಾರಿಕೆ’ ಆಂಗ್ಲದಲ್ಲಿ ‘ಟಚ್ ಮಿ ನಾಟ್’, ಹಿಂದಿಯಲ್ಲಿ ಚುಯ್ ಮುಯ್, ಸಸ್ಯಶಾಸ್ತ್ರೀಯ ಹೆಸರು ‘ಮಿಮೊಸ ಪುಡಿಕಾ’ (Mimosa Pudica) ಎಂದೆಲ್ಲಾ ಕರೆಸಿಕೊಂಡು ((Touch me not) ಯಾರಿಗೂ ಬೇಡವಾಗಿ ಬೆಳೆಯುವ ಈ ಗಿಡದಲ್ಲಿ ಅಮೋಘವಾದ ಔಷಧೀಯ ಗುಣವಿದೆ. ಈ ಗಿಡಕ್ಕೆ ಹಲವಾರು ಹೆಸರು. ಕೆಲವು ಪ್ರದೇಶದಲ್ಲಿ ನಾಚಿಕೆ ಮುಳ್ಳು ಅಂತಲೂ ಕರೆಯುತ್ತಾರೆ. ಈ ಗಿಡವನ್ನು ಮುಟ್ಟಿದ ಕೂಡಲೆ ಇದರ ಎಲೆಗಳು ಮಡಚಿಕೊಳ್ಳುತ್ತದೆ. ಅದರೆ ಈ ಗಿಡವನ್ನು ಮುಟ್ಟಿದಾಗ ಗಿಡಕ್ಕೆ ನಾಚಿಕೆ ಆಗಿ ಹೀಗಾಗೋದಲ್ಲ.

ಈ ಗಿಡದ ಮೂಲ ದಕ್ಷಿಣ ಹಾಗೂ ಮಧ್ಯ ಅಮೆರಿಕ. ಇದರ ಮೈತುಂಬ ಮುಳ್ಳಿದ್ದು, ಎಲೆಗಳನ್ನು ಮುಟ್ಟಿದ ಕೂಡಲೇ ಮುದುಡಿಕೊಳ್ಳುತ್ತದೆ ಸ್ಪರ್ಶ ತಾಕಿದೊಡನೆ ನಾಚಿ ಕೆಂಪಾಗಿ, ಮುಸುಕನ್ನು ಹೊದ್ದು ಕುಳಿತಂತೆ ಭಾಸವಾಗುತ್ತದೆ. ಇದೊಂದು ಪ್ರಕೃತಿಯ ರಹಸ್ಯವಾಗಿದ್ದು, ಈ ಸಸ್ಯವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಅನುಸರಿಸುತ್ತಿರುವ ವಿಭಿನ್ನ ತಂತ್ರವಿದು. ಈ ಸಸ್ಯವು ಹಸಿರು ಹುಲ್ಲು ಮೇಯುವ ಪ್ರಾಣಿಗಳಿಗೆ ಉತ್ತಮ ಆಹಾರವಾಗಿದ್ದು, ಹಸಿರಿನಿಂದ ಕಂಗೊಳಿಸುವ ಈ ಸಸ್ಯವನ್ನು ನೋಡಿದಾಕ್ಷಣ ಹಸುಗಳು ಇದನ್ನು ತಿನ್ನಲು ಧಾವಿಸುತ್ತವೆ. ಆಗ ತನ್ನನ್ನು ರಕ್ಷಿಸಿಕೊಳ್ಳಲು ಈ ಸಸ್ಯವು ಮುದುರಲು ಆರಂಭಿಸುತ್ತದೆ ಮತ್ತು ತಕ್ಷಣ ಒಂದಕ್ಕೊAದು ತಗುಲುತ್ತಾ ಹೋಗಿ ಕ್ಷಣ ಮಾತ್ರದಲ್ಲಿ ವಿಶಾಲವಾದ ಪ್ರದೇಶದಲ್ಲಿ ಹರಡಿರುವ ಎಲ್ಲಾ ಸಸ್ಯಗಳು ಮುದುಡಿಕೊಳ್ಳುತ್ತದೆ. ಇದರಿಂದ ಮೇಯುವ ಪ್ರಾಣಿಗಳಿಗೆ ಅಲ್ಲಿ ಕೇವಲ ಒಣಗಿದ ಸಸ್ಯಗಳು ಇರುವಂತೆ ಕಂಡುಬರುವುದರಿAದ ಜಾನುವಾರುಗಳು ಈ ಗಿಡಗಳನ್ನು ತಿನ್ನದೇ ಬೇರೆಡೆಗೆ ಹೋಗುತ್ತವೆ. ದೀರ್ಘಾವಧಿ ಕಳೆ ಗಿಡವಾಗಿರುವ ಇದು ಬೇರುಗಳಿಂದ ಅಭಿವೃದ್ದಿ ಹೊಂದುವುದರಿAದ ಕಳೆನಾಶಕಗಳನ್ನು ಸಿಂಡಿಸಿದರೂ ಮೇಲಿನ ಭಾಗ ಒಣಗಿದಂತಾಗಿ ಮತ್ತೆ ಹದ ಸಿಕ್ಕಿದ ಕೂಡಲೇ ಬೆಳೆಯುತ್ತವೆ.

ಗಿಡವು ತಿಳಿ ನೇರಳೆ ಬಣ್ಣದ ಆಕರ್ಷಕ ಹೂವು ಬಿಡುವುದಲ್ಲದೇ ಇದರ ಹೂವು ಗಿಡದ ತುದಿಯಲ್ಲಿರುತ್ತದೆ. ಸಾಮಾನ್ಯವಾಗಿ ಈ ಹೂವಿನ ವ್ಯಾಸ 1-2 ಸೆಂ.ಮೀ ಮಾತ್ರ. ಈ ಸಸ್ಯದಲ್ಲಿ ಎರಡು ವಿಧಗಳಿದ್ದು ಒಂದು ಹೊರ ಮುದುಡುವ ಹೊರಮುಚಗ ಹಾಗೂ ಎರಡನೆಯದಾಗಿ ಒಳ ಮುದುಡುವ ಒಳಮುಚುಗ ಎಂಬ ಭೇದಗಳಿವೆ. ಮುಟ್ಟಿದರೆ ಮುನಿ ಗಿಡಕ್ಕೆ ಸಂಸ್ಕೃತದಲ್ಲಿ ‘ಅಂಜಲೀಕಾರಿಕೆ’ ಎಂದು ಹೆಸರು. ಆ ಗಿಡದ ಎಲೆಗಳನ್ನು ಗಮನಿಸಿದರೆ ಅದು ಬೊಗಸೆಯನ್ನೇ ಹೋಲುತ್ತದೆ. ಜೊತೆಗೆ ಕೈ ಮುಗಿಯುವ ಭಂಗಿಯಲ್ಲಿರುವ ವಿಗ್ರಹಗಳಿಗೆ ಶಿಲ್ಪಶಾಸ್ತ್ರದಲ್ಲಿ ಅಂಜಲಿಕಾರಿಕೆ ಎಂಬ ಹೆಸರಿದೆ.

‘ಮುಟ್ಟಿದರೆ ಮುನಿ’ಯು ಮುನಿಯುವುದು ಏಕೆಂದರೆ ‘ಮುಟ್ಟಿದರೆ ಮುನಿ’ ಗಿಡದ ಎಲೆಗಳ ಜೀವಕೋಶಗಳು ಸೂಕ್ಷ್ಮವಾಗಿದ್ದು, ಕಿಂಚಿತ್ ಒತ್ತಡ ವ್ಯತ್ಯಾಸವಾದರೂ ಮಡಚಿಕೊಂಡು ಬಿಡುತ್ತದೆ. ಸಸ್ಯಶಾಸ್ತ್ರಜ್ಞರು ಇದನ್ನು defence mechanism ಎಂದು ಶಂಕಿಸುತ್ತಾರೆ. ಹುಳು ಹುಪ್ಪಟೆಗಳಿಂದ, ಮೇಯಲು ಬಂದ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ಎಲೆಗಳನ್ನು ಮಡಚಿಕೊಂಡರೆ ತನ್ನಲ್ಲಿರುವ ಮುಳ್ಳು ಆ ಪ್ರಾಣಿಗೆ ಚುಚ್ಚಿ ಪಾರಾಗಬಹುದು. ಇದೊಂದು ಸಸ್ಯಲೋಕದ ವಿಸ್ಮಯ ಸಸ್ಯ. ಕೆಲವೇ ಕೆಲವು ಸಸ್ಯಗಳಲ್ಲಿ ಮಾತ್ರ ಇಂತಹ ಶಕ್ತಿಯು ಅಡಕವಾಗಿದೆ. ಇದು ಮನುಷ್ಯನ ಆರೋಗ್ಯ ಲಾಭಕ್ಕಾಗಿ ಪ್ರಕೃತಿಯ ಕೊಡುಗೆಯೆನ್ನಬಹುದು. ಅಂತಹ ಗಿಡಗಳಲ್ಲಿ ಮುಟ್ಟಿದರೆ ಮುನಿ ಇಂಗ್ಲೀಷಿನಲ್ಲಿ ಟಚ್ ಮಿ ನಾಟ್ ಅಂತ ಕರೆಸಿಕೊಳ್ಳುವ ಗಿಡವೂ ಒಂದು. ಒಂದು ಮುಟ್ಟಿದರೆ ಮುನಿ ಗಿಡ ಸಾವಿರಕ್ಕೂ ಅಧಿಕ ಬೀಜಗಳನ್ನು ಉತ್ಪತ್ತಿ ಮಾಡಿ ಅವು ಗಾಳಿಯಲ್ಲಿ ಹಾರಿಕೊಂಡು ಹೋಗಿ ಎಲ್ಲೆಡೆ ಬಿದ್ದು, ಮೊಳಕೆಯೊಡೆದು ಹುಲುಸಾಗಿ ಬೆಳೆಯುತ್ತದೆ.

ಇದರ ಕಾಂಡದ ಭಾಗವನ್ನು ಕತ್ತರಿಸಿದರೆ ಬೇರುಗಳು ಜೀವಂತವಾಗಿ ಉಳಿದು ಬಹುಬೇಗನೆ ಬೆಳೆದು ನಿಲ್ಲುವ ಸಸ್ಯ ಪ್ರಬೇಧ ಇದು. ಇದರ ಮುಳ್ಳುಗಳು ಚುಚ್ಚಿದ್ರೆ ಯಮಯಾತನೆ ಪಡುವಂತ ನೋವಿರುತ್ತದೆ. ಆದ್ರೆ ಆಯುರ್ವೇದದಲ್ಲಿ ಮಾತ್ರ ಮುಟ್ಟಿದರೆ ಮುನಿ ಸಸ್ಯಕ್ಕೆ ವಿಶೇಷ ಮಹತ್ವವಿದ್ದು, ಅದರಿಂದ ಹಲವು ಉಪಯೋಗಗಳು ಇವೆ.

ಗಿಡದ ಔಷಧೀಯ ಉಪಯೋಗ

ಈ ಗಿಡವನ್ನು (ಹೂ ರಹಿತ) ಬೇರು ಸಮೇತವಾಗಿ ಕಿತ್ತು ಚೆನ್ನಾಗಿ ತೊಳೆದು ಜಜ್ಜಿ ಬಟ್ಟೆಯಲ್ಲಿ ಕಟ್ಟಿ ಗಂಜಿಯಲ್ಲಿ ಹಾಕಿ ತಿಂದರೆ ಅಥವಾ ಕಷಾಯಮಾಡಿ ಕುಡಿದರೆ, ಯಾವುದೇ ಶಸ್ತçಚಿಕಿತ್ಸೆ ಇಲ್ಲದೆ ಮೂಲವ್ಯಾದಿ (Piles) ಮಾಯವಾಗುತ್ತದೆ. ಮೂತ್ರ ಕೋಶದ ಕಲ್ಲು ನಿವಾರಣೆಯಲ್ಲಿ, ಮಹಿಳೆಯರ ಋತುಚಕ್ರ ಸಲೀಸಾಗುವಲ್ಲಿ, ಹಲ್ಲು ನೋವಿನ ನಿವಾರಣೆಯಾಗುತ್ತದೆ. ಈ ಸಸ್ಯದ ಎಲೆ, ಹೂವು, ಕಾಂಡ ಹಾಗೂ ಬೇರು ಎಲ್ಲವೂ ಔಷಧೀಯ ಗುಣವನ್ನು ಹೊಂದಿದೆ. ದೇಹದ ಯಾವುದೇ ಜಾಗದಲ್ಲಿ ಬಾವುಗಳಾಗಿದ್ದಲ್ಲಿ ಈ ಗಿಡವನ್ನು ಅರೆದು ಅದನ್ನು ಬಾವಿರುವ ಜಾಗದಲ್ಲಿ ಕಾಟನ್ ಬಟ್ಟೆಯಿಂದ ಸುತ್ತಿ ಕಟ್ಟಿದರೆ ಬಾವು ಕೂಡಲೇ ಶಮನವಾಗುತ್ತದೆ. ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ಮುಟ್ಟಿದರೆ ಮುನಿ ಗಿಡದ ಎಲೆ ಮತ್ತು ಬೇರುಗಳನ್ನು ಚೆನ್ನಾಗಿ ಅರೆದು ಎರಡರಿಂದ ಮೂರು ಚಮಚ ರಸವನ್ನು ಕುಡಿಯುವುದರಿಂದ ಉಪಶಮನವಾಗುತ್ತದೆ. ಬಾಣಂತನದಲ್ಲಿ ಬೊಜ್ಜನ್ನು ಕರಗಿಸುವುದು, ಮತ್ತೆ ಫಿಟ್ ಆಗಿ ಮೊದಲಿನ ರೀತಿಯೇ ಕಾಣಿಸಿಕೊಳ್ಳುವುದು ಪ್ರತಿ ಮಹಿಳೆಗೂ ಒಂದು ಸವಾಲು. ಬಾಣಂತಿಯರು ನಾಚಿಕೆ ಮುಳ್ಳಿನ ಗಿಡದ ಸೊಪ್ಪಿನ ರಸವನ್ನು ತಯಾರಿಸಿಕೊಂಡು ಅದನ್ನು ಕೈಗಳಿಗೆ ಹಚ್ಚಿಕೊಂಡು ನಂತ್ರ ಹೊಟ್ಟೆಯ ಭಾಗಕ್ಕೆ ಲೇಪಿಸಿ ಒಂದೆರಡು ನಿಮಿಷ ಮಸಾಜ್ ಮಾಡಿಕೊಂಡರೆ ದಪ್ಪಗಿರುವ ಹೊಟ್ಟೆ ಕರಗಿ ಮೊದಲಿನಂತೆ ಆಗಲು ಸಾಧ್ಯ.

ಮುಟ್ಟಿದರೆ ಮುನಿ ಸಸ್ಯದ ರಸವನ್ನು ಮೊಡವೆ ಕಲೆಗಳಿರುವ ಜಾಗಕ್ಕೆ ಲೇಪಿಸಿಕೊಂಡರೆ ಮೊಡವೆ ವಾಸಿಯಾಗುತ್ತದೆ. ಮುಟ್ಟಿದರೆ ಮುನಿ ಗಿಡವನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಂಡು ಒಂದು ಲೋಟ ನೀರಿಗೆ ಒಂದು ಚಮಚ ಪುಡಿಯನ್ನು ಬೆರೆಸಿ ಖಾಲಿ ಹೊಟ್ಟೆಗೆ ಸೇವಿಸಿದರೆ ಮೂಲವ್ಯಾಧಿ ಸಮಸ್ಯೆ ನಿವಾರಣೆಯಾಗುತ್ತೆ. ದೇಹಕ್ಕೆ ಗಾಯವಾಗಿ ರಕ್ತಸ್ರಾವವಾಗುತ್ತಿದ್ದಲ್ಲಿ ಮುಟ್ಟಿದರೆ ಮುನಿ ಸಸ್ಯವನ್ನು ಕತ್ತರಿಸಿ ಜಜ್ಜಿ ಗಾಯಕ್ಕೆ ಕಟ್ಟಿದರೆ ರಕ್ತಸ್ರಾವ ಕಡಿಮೆ ಆಗುತ್ತದೆ. ಚರ್ಮದ ತುರಿಕೆ ಮತ್ತು ಇತರೆ ಚರ್ಮ ಸಂಬಂಧಿ ಕಾಯಿಲೆಗಳಿರುವವರು ಮುಟ್ಟಿದರೆ ಮುನಿ ಗಿಡದ ರಸವನ್ನು ದೇಹಕ್ಕೆ ಹಚ್ಚಿಕೊಂಡರೆ ಚರ್ಮ ರೋಗ ನಿವಾರಣೆಯಾಗುತ್ತದೆ.

ಅಡ್ಡ ಪರಿಣಾಮಗಳು

ಬಹುಪಯೋಗಿ ಮುಟ್ಟಿದರೆ ಮುನಿ ಸಸ್ಯದ ಇದರ ಮುಳ್ಳುಗಳು ದೇಹಕ್ಕೆ ಚುಚ್ಚಿದರೆ ವಿಪರೀತ ನೋವು ಮಾತ್ರವಲ್ಲ, ದೇಹದಲ್ಲಿ ನಂಜು ಹೆಚ್ಚಾಗುವ ಅಪಾಯವೂ ಇದೆ.
ಪ್ರಕೃತಿಯಲ್ಲಿ ತನ್ನನ್ನು ತಾನು ಇತರ ಪ್ರಾಣಿಗಳಿಂದ ಮತ್ತು ಮನುಷ್ಯರಿಂದ ತಪ್ಪಿಸಿಕೊಂಡು ಬದುಕಿ ಉಳಿಯಲು ಗಿಡವೇ ವಿಭಿನ್ನವಾದ ತಂತ್ರವನ್ನು ಬಳಸುತ್ತಿರುವುದು ನಿಜಕ್ಕೂ ವಿಜ್ಞಾನಕ್ಕೆ ಒಂದು ಸವಾಲೇ ಸರಿ. ಇತರ ಗಿಡಗಳು ಕೃಷಿ ಜಮೀನುಗಳಲ್ಲಿ ಹೇರಳವಾಗಿ ಕಂಡು ಬರುತ್ತಿದ್ದವು. ಆದರೆ ಇಂದು ಈ ಗಿಡಗಳು ಸಂಪೂರ್ಣ ಅವನತಿಯತ್ತ ಸಾಗಿರುವುದು ವಿಪರ್ಯಾಸ.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ- 574198
ದೂ: 9742884160

Related post

Leave a Reply

Your email address will not be published. Required fields are marked *