ನಿರರ್ಥಕ
ಒಂದು ಊರಿನಲ್ಲಿ ಸುಭದ್ರ ಎಂಬ ಒಬ್ಬ ಶ್ರೀಮಂತನಾದ ವಜ್ರದ ವ್ಯಾಪಾರಿಯು ವಾಸವಾಗಿದ್ದು, ದೇಶ ವಿದೇಶಗಳಿಗೂ ವಜ್ರದ ಹರಳುಗಳನ್ನು ಮಾರಾಟವನ್ನು ಮಾಡುತ್ತಿದ್ದನು. ಈತನು ತನ್ನ ವ್ಯಾಪಾರದ ಅಂಗಡಿಯನ್ನು ಮತ್ತು ತನ್ನ ಮನೆಯನ್ನು ಕಾಯಲು ಮತ್ತು ರಕ್ಷಣೆಗಾಗಿ ದೊಡ್ಡ ಜಾತಿಯ ಒಂದು ನಾಯಿಯನ್ನು ಸಾಕಿದ್ದನು.
ನಾಯಿಯನ್ನು ಪಕ್ಕದ ಪಟ್ಟಣದಿಂದ ಹೆಚ್ಚು ಬೆಲೆಯನ್ನು ಕೊಟ್ಟು ಖರೀದಿಸಿ ತಂದಿದ್ದನು. ನಾಯಿಯು ನೋಡಲು ಗಾತ್ರದಲ್ಲಿ ಬಹಳ ದೊಡ್ಡದಾಗಿದ್ದು, ನೋಡಲು ಅತ್ಯಂತ ಸುಂದರ ಮತ್ತು ಆಕರ್ಷಕವಾಗಿತ್ತು. ಆ ನಾಯಿಯೂ ಸುಭದ್ರನಿಗೆ ಅತ್ಯಂತ ಪ್ರೀತಿ ಪಾತ್ರವಾಗಿತ್ತು. ನಾಯಿಯ ಎತ್ತರವಾದ ನೋಟ ಮತ್ತು ಗಂಭೀರ ಮತ್ತು ಏರು ಧ್ವನಿಯ ಬೊಗಳುವ ಸದ್ದಿನಿಂದ ಸುತ್ತಮುತ್ತಲಿನ ಜನರೆಲ್ಲರೂ ಸುಭದ್ರನ ಮನೆಯ ಸುತ್ತ ಸುಳಿಯಲೂ ಹಿಂದೇಟು ಹಾಕುತ್ತಿದ್ದರು. ಸುಭದ್ರನು ತಾನು ಸಾಕಿದ ನಾಯಿಯ ಕುರಿತು ಒಳಗೊಳಗೆ ಹೆಮ್ಮೆಪಡುತ್ತಿದ್ದನು.
ತನ್ನ ವಿಶೇಷ ಜಾರಿಯ ನಾಯಿಗೆ ಸುಭದ್ರನು ತಿನ್ನಲು ಎರಡು ಹೊತ್ತು ಪೌಷ್ಟಿಕವಾದ ಆಹಾರ ಮತ್ತು ಒಂದು ಹೊತ್ತು ಮಾಂಸಹಾರವನ್ನು ನೀಡುತ್ತಿದ್ದನು. ನಾಯಿಯು ಚೆನ್ನಾಗಿ ತಿಂದು ದಷ್ಟಪುಷ್ಟವಾಗಿ ಬೆಳೆದಿತ್ತು. ನಾಯಿಯು ಯಜಮಾನನನ್ನು ಕಂಡರೆ ಪ್ರೀತಿಯಿಂದ ಬಾಲ ಅಲ್ಲಾಡಿಸುತ್ತಾ ಅವನೊಂದಿಗೆ ಆಟವಾಡುತ್ತಾ ಇದ್ದುದರಿಂದ ನಾಯಿಯು ಸುಭದ್ರನ ಅತ್ಯಾಪ್ತ ಗೆಳೆಯನಾಗಿತ್ತು ಮತ್ತು ಮನೆಯ ಒಬ್ಬ ಸದಸ್ಯನೂ ಆಗಿ ಗುರುತಿಸಿಕೊಂಡಿತ್ತು. ದಿನಗಳೆದಂತೆ ತನ್ನ ನಾಯಿಯ ಗುಣಧರ್ಮ ಮತ್ತು ಧೈರ್ಯದ ಬಗ್ಗೆ ಸುಭದ್ರನಿಗೆ ಅನುಮಾನ ಮೂಡಿ, ನಾಯಿಯನ್ನು ಪರೀಕ್ಷಿಸಬೇಕೆಂದು ಸುಭದ್ರನು ನಿರ್ಧರಿಸಿದನು. ಅದರಂತೆ ಒಂದು ದಿನ ರಾತ್ರಿ ತನ್ನ ಆಪ್ತ ಗೆಳೆಯರನ್ನು ಆಯ್ದುಕೊಂಡು ತನ್ನ ಮನೆಗೆ ದರೋಡೆಕೋರರಂತೆ ನುಗ್ಗಲು ತಿಳಿಸಿದನು. ಅದರಂತೆ ಒಂದು ದಿನ ತಡ ರಾತ್ರಿಯ ವೇಳೆಗೆ ಸುಭದ್ರನ ಗೆಳೆಯರು ಡಕಾಯಿತರ ವೇಷದಲ್ಲಿ ಮನೆಗೆ ನುಗ್ಗಿದರು.
ಮನೆಯ ಹೊರಭಾಗದಲ್ಲಿ ಕಳ್ಳರು ಓಡಾಡುತ್ತಾ ಇದ್ದುದನ್ನು ಗಮನಿಸಿದ ನಾಯಿಯು ಮನೆಯ ಒಳಗಡೆ ಹೋಗಿ ಭಯದಿಂದ ಕುರ್ಚಿಯ ಅಡಿಯಲ್ಲಿ ಕುಳಿತುಕೊಂಡಿತ್ತು. ಸುಭದ್ರನ ಗೆಳೆಯರು ಮನೆಯ ಒಳಗೆ ನುಗ್ಗಿ ಸುಭದ್ರನು ಮೊದಲೇ ಸಿದ್ಧಪಡಿಸಿ ಇಟ್ಟಿದ್ದ ಚೀಲಗಳನ್ನು ಹೊತ್ತುಕೊಂಡು ಮನೆಯ ಕಿಟಕಿ ಮೂಲಕ ಜಿಗಿದು ಹೊರಗೆ ಓಡಿ ಹೋದರು. ಇದೆಲ್ಲವನ್ನೂ ಕುರ್ಚಿಯ ಅಡಿಯಲ್ಲಿ ಭಯದಿಂದ ಅಡಗಿ ಕುಳಿತು ನೋಡುತ್ತಿದ್ದ ನಾಯಿಯು ಕಳ್ಳರು ಹೊರಗೆ ಹೋದರು ಎನ್ನುವ ವಿಚಾರ ಖಾತ್ರಿ ಆಗುತ್ತಿದ್ದಂತೆ ಮನೆಯ ಸೋಫಾದ ಮೇಲೆ ಹತ್ತಿ ಬೆಚ್ಚಗೆ ನಿದ್ರಿಸಿತು.
ಬೆಳಗಾಗುತ್ತಿದ್ದಂತೆ ಎದ್ದ ಸುಭದ್ರನಿಗೆ ತನ್ನ ಮನೆಯೊಳಗೆ ತಾನೇ ಯೋಜಿಸಿ ರೂಪಿಸಿದ್ದ ಕಳ್ಳತನ ನಡೆದಿರುವುದು ಅರಿವಿಗೆ ಬಂದಿತು ಮತ್ತು ತಾನು ಹೆಚ್ಚು ದುಡ್ಡು ಕೊಟ್ಟು ತಂದಿದ್ದ ತನ್ನ ಪ್ರೀತಿ ಪಾತ್ರ ನಾಯಿಯು ಕಳ್ಳತನ ಅಥವಾ ಕಳ್ಳರ ಬಗೆಗಾಗಲೀ ಯಾವುದೇ ವಿಧದ ಸೂಚನೆಯನ್ನು ಕೊಡದೇ ಇದ್ದುದನ್ನು ತಿಳಿದು ಬಹಳ ಬೇಸರಗೊಂಡನು. ಕಳ್ಳರು ಮನೆಗೆ ನುಗ್ಗಿರುವುದನ್ನು ನೋಡಿದ ನಾಯಿಯು ಕಳ್ಳರ ಬಗೆಗಿನ ಸೂಚನೆಯನ್ನು ತನ್ನ ಯಜಮಾನನಿಗೆ ನೀಡುವ ಅಥವಾ ಕಳ್ಳರನ್ನು ಬೆದರಿಸುವ ಯಾವುದೇ ಕೆಲಸವನ್ನು ಮಾಡದೇ ತಾನು ಹೇಡಿಯಂತೆ ಕಳ್ಳರ ಕಣ್ಣಿಗೆ ಬೀಳದಂತೆ ಅವಿತು ಕುಳಿತಿತ್ತು. ನಾಯಿಯ ನಿಷ್ಕ್ರಿಯ ಮನೋಧರ್ಮವನ್ನು ಗಮನಿಸಿದ ಸುಭದ್ರನು ಈ ನಾಯಿಯು ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ ಎಂದು ನಿರ್ಧಾರವನ್ನು ಮಾಡಿದನು.
ಇದೇ ರೀತಿ ವ್ಯವಸ್ಥೆಯ ಒಳಗಡೆ ಎಲ್ಲರೊಂದಿಗೂ ಚೆನ್ನಾಗಿ ಬೆರೆಯುತ್ತಾ, ಎಲ್ಲರಿಗೂ ಒಳ್ಳೆಯವರಾಗಿ, ಅಲ್ಲಿನ ಮೂಲ ಉದ್ದೇಶ ಮತ್ತು ತನ್ನ ಜವಾಬ್ದಾರಿಗಳನ್ನು ಮರೆತು ದಿನ ಕಳೆಯುವ ಅದೆಷ್ಟೋ ಮಂದಿಯನ್ನು ನಾವು ಕಾಣುತ್ತೇವೆ. ಇಂತಹ ವ್ಯಕ್ತಿಗಳು ವ್ಯವಸ್ಥೆಗೆ ತನ್ನನ್ನು ನಿಯೋಜಿಸಿದ ಉದ್ದೇಶವನ್ನೂ ಮರೆತು ಎಲ್ಲರಿಗೂ ಕೇವಲ ಒಳ್ಳೆಯವರಾಗಿ ಮಾತ್ರ ಉಳಿದು ಬಿಡುತ್ತಾರೆ. ವ್ಯವಸ್ಥೆಯ ಉಳಿವಿಗಾಗಿ ಮತ್ತು ಅಭಿವೃದ್ಧಿಗಾಗಿ ಇವರು ಯಾವುದೇ ಕಠಿಣ ನಿರ್ಧಾರಗಳನ್ನೂ ತೆಗೆದುಕೊಳ್ಳುವುದಿಲ್ಲ. ಇಂತಹ ವ್ಯಕ್ತಿಗಳ ಸ್ಥಿತಿಯು ಸುಭದ್ರನು ಸಾಕಿದ್ದ ನಾಯಿಯ ಸ್ಥಿತಿಯೇ ಆಗಿರುತ್ತದೆ. ಸಮಯ ಸಂದರ್ಭಕ್ಕೆ ಅನುಗುಣವಾಗಿ ಆ ನಾಯಿಯು ಸುಭದ್ರನಿಗೆ ಪ್ರೀತಿ ನಾಯಿಯಾಗಿ ಮತ್ತು ತನ್ನ ಮನೆಯ ಅಳಿವು ಉಳಿವಿನ ಪ್ರಶ್ನೆ ಬಂದಾಗ ಕಳ್ಳರನ್ನು ಹಿಡಿಯುವ ಯಾ ಎಚ್ಚರಿಸುವ ಕೆಲಸವನ್ನು ಮಾಡಿದ್ದೇ ಆಗಿದ್ದಲ್ಲಿ, ಅದು ನಿಷ್ಕ್ರಿಯ ನಾಯಿ ಎನ್ನುವ ಹೆಸರನ್ನು ಪಡೆದುಕೊಳ್ಳುತ್ತಾ ಇರಲಿಲ್ಲ.
ಯುದ್ಧದ ಸಂದರ್ಭದಲ್ಲಿ ಯೋಧನು ಕೈಯಲ್ಲಿ ಹಿಡಿದಿರುವ ಖಡ್ಗವು ಹರಿತವಾಗಿದ್ದು ಅಗತ್ಯ ಸಂದರ್ಭದಲ್ಲಿ ಬಳಕೆಗೆ ಬಾರದೇ ಇದ್ದಲ್ಲಿ ಕೈಯಲ್ಲಿ ಹಿಡಿದುಕೊಂಡ ಖಡ್ಗವೂ ನಿರರ್ಥಕವಾಗುತ್ತದೆ. ಆದ್ದರಿಂದ ವ್ಯವಸ್ಥೆಯು ತಮಗೆ ನೀಡಿದ ಜವಾಬ್ದಾರಿಯ ಆಳವನ್ನು ಅರಿತು ಕೆಲಸ ಮಾಡಿದರೆ ಕ್ರಿಯಾಶೀಲರಾಗಿ ಉಳಿಯಬಹುದು.
ಬಳಕೆ ಮಾಡಲು ಸಾಧ್ಯವಿಲ್ಲದ ಖಡ್ಗ ಮತ್ತು ಉಪಯೋಗಕ್ಕೆ ಬಾರದ ಅಧಿಕಾರ ಮತ್ತು ಹುದ್ದೆ ಎರಡೂ ನಿರರ್ಥಕ.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160