ನೀರು ನಾಯಿಗಳು – Otters

Photo taken in Dudley, United Kingdom

ನೀರು ನಾಯಿಗಳು ಮಾಂಸಹಾರಿ ಗಣದ ‘ಮುಸ್ಟಲಿಡೀ’ (mustelidae) ಕುಟುಂಬಕ್ಕೆ ಸೇರಿದ್ದು ವೀಸಲ್ ಗಳು (weasel), ಮಾರ್ಟೆನ್ಗಳು (Martens), ಬ್ಯಾಜರ್ (Badger) ಇನ್ನೂ ಅನೇಕ ಪ್ರಾಣಿಗಳು ಈ ಕುಟುಂಬದಲ್ಲಿ ಬರುತ್ತವೆ. ಈ ಗುಂಪುಗಳ ಪ್ರಾಣಿಗಳು ಒಂದಕ್ಕೊಂದು ವಿಭಿನ್ನವಾಗಿದ್ದರೂ ಕೆಲವೊಂದು ಲಕ್ಷಣಗಳಲ್ಲಿ ಸಾಮ್ಯತೆ ಇರುವುದರಿಂದ ಒಂದೇ ಕುಟುಂಬದಲ್ಲಿ ಇರಿಸಲಾಗಿದೆ. ಉದ್ದ ದೇಹ,ಗಿಡ್ಡ ಕಾಲು, ಬಾಲದ ಬುಡದಲ್ಲಿ ವಾಸನಾ ಗ್ರಂಥಿ, ಅಭಿವೃದ್ಧಿ ಹೊಂದಿದ ಮಾಂಸದ ಹಲ್ಲುಗಳು ಈ ಕುಟುಂಬದ ಪ್ರಾಣಿಗಳ ಲಕ್ಷಣಗಳಾಗಿವೆ.

ನಮ್ಮ ದೇಶದಲ್ಲಿ 3 ಜಾತಿಯ ನೀರು ನಾಯಿಗಳನ್ನು ಗುರುತಿಸಲಾಗಿದೆ.

  1. Smooth- coated otter
  2. Eurasian Otter
  3. Asian Small-Clawed otter

ವಿಶ್ವದಲ್ಲಿ 13 ಜಾತಿಯ ನೀರು ನಾಯಿಗಳಿವೆ. ಕೆಲವು ದೇಶಗಳಲ್ಲಿ ನೀರು ನಾಯಿಯನ್ನು ಸಾಕಿ ಮೀನು ಹಿಡಿಯಲು ಬಳಸುತ್ತಾರೆ.

ಸ್ಮೂತ್ – ಕೋಟೆಡ್ ಆಟರ್ – Smooth-Coated otter

ಇದು ಕಡು ಕಂದು ಬಣ್ಣದ ನುಣುಪಾದ ಮೈಯುಳ್ಳ ಪ್ರಾಣಿ ಬಯಲು ಸೀಮೆಯ ದೊಡ್ಡ ನದಿ ಜಲಾಶಯಗಳಲ್ಲಿ ಗುಂಪಾಗಿ ಕಂಡು ಬರುತ್ತದೆ. 7-11 ಕಿಲೋ ತೂಗುವ ಇವು 1.3 ಮೀಟರ್ ಉದ್ದವಿರುತ್ತವೆ, ಮೀನುಗಳು ಇವುಗಳ ಮುಖ್ಯ ಆಹಾರ .ಈ ಜಾತಿಯ ನೀರು ನಾಯಿಗಳನ್ನು ಸಂರಕ್ಷಣೆ ಮಾಡಲು ದೇಶದಲ್ಲೇ ಪ್ರಥಮವಾಗಿ ತುಂಗಭದ್ರ ನೀರುನಾಯಿ ಸಂರಕ್ಷಣಾ ಮೀಸಲು ಸ್ಥಾಪಿಸಲಾಗಿದೆ (Tungabhadra Otter Conservation Reserve) ಇವುಗಳನ್ನು ಭಾರತದ ಬಹುತೇಕ ಕಡೆ ಕಾಣಬಹುದು.

ಯುರೇಷಿಯನ್ ಆಟರ್- Eurasian Otter

ಇದು ತವುಡು ಕಂದು ಬಣ್ಣದಿಂದ ಕೂಡಿದ ದೇಹ ಹೊಂದಿದೆ, ನದಿ ಕೆರೆಗಳಲ್ಲಿ ವಾಸ ಮಾಡುವ ಇದರ ಹಿಂಗಾಲು ಮುಂಗಾಲಿನಲ್ಲಿ ಜಾಲವಿರುವುದರಿಂದ ನಿಪುಣ ಈಜುಗಾರ, ಮೀನು, ಪಕ್ಷಿಗಳನ್ನು ಬೇಟೆಯಾಡುತ್ತದೆ. 6-12 ಕಿಲೋ ತೂಗುವ ಇವು 1-2 ಮೀಟರ್ ಉದ್ದ ಬೆಳೆಯಬಲ್ಲವು, ಬೆಟ್ಟಗುಡ್ಡಗಳ ನದಿ ತೊರೆಗಳಲ್ಲಿ ಕಂಡುಬರುವ ಇವು ಗುಂಪು ಜೀವಿಗಳಲ್ಲ, ಭಾರತದ ಹಲವು ಪ್ರದೇಶಗಳಲ್ಲಿ ಕಾಣಬಹುದು.

ಸ್ಮಾಲ್ – ಕ್ಲಾವೆಡ್ ಆಟರ್ – Asian Small-Clawed otter

ಇದು ವಿಶ್ವದ ಅತೀ ಚಿಕ್ಕ ಜಾತಿಯ ನೀರು ನಾಯಿ, ಇದರ ಉಗುರುಗಳು ಅಷ್ಟಾಗಿ ಬೆಳೆದಿಲ್ಲ ಹಾಗಾಗಿ ಕ್ಲಾ ಲೆಸ್ ಆಟರ್ ಎಂದೂ ಕರೆಯುತ್ತಾರೆ. ನಮ್ಮಲ್ಲಿ ಕೊಡಗಿನ ಎತ್ತರದ ಶಿಖರಗಳು ಹಾಗು ನೆರೆಯ ನೀಲಗಿರಿಯ ಉನ್ನತ ಪರ್ವತ ಶ್ರೇಣಿಗಳ ತೊರೆಗಳಲ್ಲಿ ಕಾಣಬಹುದು. ಹೆಚ್ಚಾಗಿ ಏಡಿಗಳನ್ನು ತಿನ್ನುವ ಇವು 2-5 ಕಿಲೋ ತೂಗುತ್ತವೆ. ಸಣ್ಣ ಗುಂಪುಗಳಲ್ಲಿ ಕಾಣಬಹುದು.

ಅತಿಯಾದ ಮೀನುಗಾರಿಕೆ, ನದಿ ಕೆರೆಗಳ ಮಾಲಿನ್ಯ, ಜವುಗು ಪ್ರದೇಶಗಳ ನಾಶ, ಕಳ್ಳಬೇಟೆ, ನೀರು ನಾಯಿಗಳನ್ನು ಅಪಾಯದಂಚಿಗೆ ತರುತ್ತಿವೆ.

ನಾಗರಾಜ್ ಬೆಳ್ಳೂರು
ನಿಸರ್ಗ ಕನ್ಜರ್ವೇಶನ್ ಟ್ರಸ್ಟ್

Related post

Leave a Reply

Your email address will not be published. Required fields are marked *