ಕನಸಿನ ಕನ್ನಡಿ
ಹೀಗೆ ಕನಸು ಬೀಳುವುದಕ್ಕೂ ಪುಣ್ಯ ಮಾಡಿರಬೇಕು,
ವರ್ಷವಿಡೀ ಗದರುವ ಮಾಲೀಕ
ಹರುಷದಿ ನಗುತ ಸಂಬಳದ ಜೊತೆಗೆ
ಬೋನಸ್ ಒಂದನ್ನು ಅಡ್ವಾನ್ಸ್ ನೀಡಿದಂತೆ!
ತಿಂಗಳ ಸಂಬಳವು ಮನೆಯ ದಿನಸಿಗೆ ಸಾಲಿ,
ಖರ್ಚು-ವೆಚ್ಚಗಳನ್ನೆಲ್ಲ ತೂಗಿಸಿ ಹಿಡಿದು
ಕೈಯಲ್ಲಿ ಒಂದಷ್ಟು ಹಣವೂ ಉಳಿದಂತೆ!
ಹೀಗೆ ಕನಸುಗಳು ಬೀಳಲು ಪುಣ್ಯ ಮಾಡಿರಬೇಕು,
ಬೈಕು-ಕಾರುಗಳನ್ನು ಖರೀದಿಸುವಾಗ
ಇ.ಎಮ್.ಐ ಬದಲಿಗೆ ಇಡೀ ಗಂಟನ್ನೇ ಕೊಟ್ಟಂತೆ!
ಚಿಕ್ಕದೊಂದು ಸೈಟಿನ ಕನಸು ಕಂಡ ಮಧ್ಯವಯಸ್ಕನೊಬ್ಬ
ಮಹಡಿಯ ಮನೆಯನ್ನೇ ಖರೀದಿಸಿ ಸಂಭ್ರಮಿಸಿದಂತೆ!
ಹೀಗೆ ಕನಸುಗಳು ಬೀಳಲು ಪುಣ್ಯ ಮಾಡಿರಬೇಕು,
ಶಾಶ್ವತ ಕಾಯಿಲೆಯೊಂದು ಹೇಳ ಹೆಸರಿಲ್ಲದೆ ಕರಗಿ ಹೋದಂತೆ
ದೇಹದ ಊನವೊಂದು ಯಾರಿಗೂ ಕಾಣದಂತೆ ಮಾಯವಾದಂತೆ!
ಹೀಗೆ ಕನಸು ಬೀಳಲು ಪುಣ್ಯ ಮಾಡಿರಬೇಕು,
ಅಗಲಿದ ಪ್ರೇಯಸಿ ಬಂದು ಮನವ ಸಂತೈಸಿದಂತೆ
ದೂರ ತಳ್ಳಿ ಹೋದವರು ಮರಳಿ ಬಂದು ಮಾತನಾಡಿಸಿದಂತೆ!
ಹೀಗೆ ಕನಸು ಬೀಳಲು ಪುಣ್ಯ ಮಾಡಿರಬೇಕು,
ಯಾರಿಗಾಗಿ ಕನಸು ಕಂಡೆವೋ, ಜೀವದ ದಣಿವ ಅರಿಯದೆ
ಹಗಲಿರುಳೆನ್ನದೆ ಕಷ್ಟಪಟ್ಟು ದುಡಿದೆವೋ…
ಆ ಮಕ್ಕಳು ಉನ್ನತ ಹುದ್ದೆಗೇರಿ ನಮ್ಮನ್ನು ಜತನದಿಂದ ಕಾಯ್ದಂತೆ!
ಹೀಗೆ ಕನಸು ಬೀಳಲು ಪುಣ್ಯ ಮಾಡಿರಬೇಕು,
ಆರ್ಥಿಕ ಅಬಲನೊಬ್ಬ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವಷ್ಟು
ಹಣದ ಹೊಳೆಯೇ ಹರಿದು ಬಂದಂತೆ!
ಹೀಗೆ ಕನಸು ಬೀಳಲು ಪುಣ್ಯ ಮಾಡಿರಬೇಕು,
ಶತ್ರುಗಳ ಜೊತೆಗೆ ಸಾವೇ ಎದುರಾಗಿ ಬಂದರೂ
ನಾವು ಕದಲದೇ ಅವರ ಎದುರು ನಗುತ ನಿಂತಂತೆ!
ಹೀಗೆ ಕನಸುಗಳು ಬೀಳಲು ಪುಣ್ಯ ಮಾಡಿರಬೇಕು,
ದಣಿದ ಕೂಲಿ ಕಾರ್ಮಿಕನೊಬ್ಬ ಹೊಟ್ಟೆತುಂಬ ಉಂಡು
ನಿಶ್ಚಿಂತೆಯಿಂದ ಕಣ್ಣುಮುಚ್ಚಿ ಮಲಗಿದಂತೆ!
ಹೀಗೆ ಕನಸು ಬೀಳುವದಕ್ಕೂ ಪುಣ್ಯ ಮಾಡಿರಬೇಕು
ನನಸಾಗದ ಕನಸಿಗೆ ಕೊರಗುವ ಹೃದಯಗಳ ಎದುರು ಆ ದೇವರು ಪ್ರತ್ಯಕ್ಷವಾಗಿ ಅವರು ಬೇಡಿದ ಎಲ್ಲದಕ್ಕೂ ಅಸ್ತು ಅಂದಂತೆ!

ದೀಪಕ್ ಶಿಂಧೇ
9482766028