ಕನ್ನಡ – ಕನ್ನಡಿಗ – ಕರ್ನಾಟಕ
ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು. ಎಲ್ಲರಿಗೂ ತಿಳಿದಂತೆ ಕರ್ನಾಟಕ ಎಂದು ನಮ್ಮ ರಾಜ್ಯ ನಾಮಕರಣಗೊಂಡ ದಿನ ಇಂದು. ಮೈಸೂರು ರಾಜ್ಯ ಎಂಬ ಚೆಂದದ ಹೆಸರನ್ನು ಕರ್ನಾಟಕ ಎಂದು ಮತ್ತೂಂದು ಸುಂದರ ಹೆಸರಿಗೆ ಬದಲಾಯಿಸಲಾಯಿತು.

ಸ್ವಾತಂತ್ರ್ಯ ಪೂರ್ವದಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯ ಆಳ್ವಿಕೆಯಲ್ಲಿದ್ದ ಮೈಸೂರು ಸಂಸ್ಥಾನ ನಂತರ ಮೈಸೂರು ರಾಜ್ಯ ಎಂದೇ ಪ್ರಚಲಿತದಲ್ಲಿತ್ತು ಆದರೆ ಅದಕ್ಕೂ ಪೂರ್ವದಲ್ಲಿ ಕರ್ನಾಟ, ಕರ್ನಾಟಕ, ಕರ್ಣಾಟಕ ಹೀಗೆ ಕರೆಸಿಕೊಳ್ಳುತ್ತಿತ್ತು.
ಕರ್ನಾಟಕ ಈ ಹೆಸರಿಗೆ ಮೂಲ, ಕನ್ನಾಡು, ಕರಿನಾಡು ಕೆಮ್ಮತ್ತುನಾಡು ಹೀಗೆ ನಾನಾ ಹೆಸರುಗಳು ದೊರಕುತ್ತವೆ. ನಮ್ಮ ಕರ್ನಾಟಕ ಕಪ್ಪು ಮಣ್ಣು ನೆಲವನ್ನು ಅತಿ ಹೆಚ್ಚಾಗಿ ಹೊಂದಿರುವುದು ಈ ಪ್ರಕಾರದ ಹೆಸರುಗಳು ಬರಲು ಬಹುಮುಖ್ಯ ಕಾರಣವಿರಬಹುದು.

ಇನ್ನು ನಮ್ಮ ಕನ್ನಡ ಭಾಷೆ, ಸಂಸ್ಕೃತ, ಪಾಲಿ, ಬ್ರಾಹ್ಮೀ, ತಮಿಳು ಹೀಗೆ ಅತ್ಯಂತ ಪ್ರಾಚೀನ ಭಾಷೆಗಳ ಸಾಲಿನಲ್ಲಿ ನಿಲ್ಲುತ್ತದೆ. “ಕುರಿತೋತುದಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್” ಎಂಬ ಅಮೋಘವರ್ಷ ನೃಪತುಂಗನ ಸಾಲುಗಳು ಕನ್ನಡ ಭಾಷೆಯು ಸಿರಿ ಸಮೃದ್ಧತೆಯನ್ನು ಒಳಗೊಂಡಿರುವುದನ್ನು ಸ್ಪಷ್ಟಗೊಳಿಸಿವೆ. ಹಲ್ಮಿಡಿ ಶಾಸನವು ಸದ್ಯಕ್ಕೆ ದೊರೆತಿರುವ ಅತ್ಯಂತ ಪುರಾತನ ಕನ್ನಡ ಶಾಸನವಾಗಿದ್ದು ಕನ್ನಡ ಭಾಷೆಯ ಮತ್ತು ಲಿಪಿಯ ಹಿನ್ನೆಲೆ ಇನ್ನೂ ಸಾಕಷ್ಟು ಹಳೆಯದು ಎಂಬುದಕ್ಕೆ ಪುಷ್ಟಿ ನೀಡಿವೆ.

ಇನ್ನು ಕನ್ನಡಿಗರಾದ ನಮಗೆ ಸಾಕಷ್ಟು ಮಹಿಮಾನ್ವಿತರು ಕಾಣಸಿಗುತ್ತಾರೆ. ಕನ್ನಡಿಗರ ಶೌರ್ಯ, ಸಾಹಸ, ಪ್ರೇಮ, ಸೌಮ್ಯತೆ ಹೀಗೆ ಹತ್ತಾರು ಪ್ರಕಾರಗಳಲ್ಲಿ ಕಾಣಸಿಗುತ್ತವೆ. ಉದಾಹರಣೆಗೆ “ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ ಭಾದಿಪ್ಪ ಕಲಿಗೆ ಕಲಿಯುಗ ವಿಪರೀತನ್
ಮಾಧವನೀತನ್ ಪೆರನಲ್ಲ” ಎಂಬ ಕಪ್ಪೆ ಅರಭಟ್ಟನ ಶಾಸನದ ಹೇಳಿಕೆಯಲ್ಲಿ ಕನ್ನಡಿಗರ ಹಿರಿಮೆ ಗರಿಮೆಗಳನ್ನು ಕೊಂಡಾಡಲಾಗಿದೆ.
ನವೆಂಬರ್ ಒಂದು ಕನ್ನಡ ರಾಜ್ಯೋತ್ಸವ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಮೈಸೂರು ಸಂಸ್ಥಾನವು ಬಹು ಹಿಂದೆಯೇ ಏಕೀಕರಣಗೊಂಡಿತು. ೧೯೭೩ರ ನವೆಂಬರ್ ೧ರಂದು ಮೈಸೂರು ರಾಜ್ಯ ಕರ್ನಾಟಕ ಎಂದು ಪುನರ್ ನಾಮಕರಣಗೊಂಡಿತು.
ಕರುನಾಡು, ಕರಿನಾಡು, ಕಮ್ಮತ್ತುನಾಡು ಎಂದೆಲ್ಲಾ ಕರೆಸಿಕೊಂಡಿಹ ಈ ಪ್ರದೇಶವು ಕರೆಸಿಕೊಂಡಿತ್ತು. ಈ ಮೂಲಗಳಿಂದಲೇ ತದನಂತರ ಕರ್ನಾಟಕ ಎಂಬ ಹೆಸರೂ ನಮ್ಮ ರಾಜ್ಯಕ್ಕೆ ಅನಾದಿಕಾಲದಿಂದಲೂ ಇತ್ತು.

ಮುನ್ನೂರೈವತ್ತು ಕಿಲೋಮೀಟರ್ಗಳ ಉದ್ದದ ಕರಾವಳಿ, ಪಶ್ಚಿಮಘಟ್ಟಗಳು, ವಿಶಾಲ ಬಯಲುಸೀಮೆ ಹೊಂದಿರುವ ಈ ನಾಡು ಅತಿ ಶ್ರೀಮಂತ ಭೌಗೋಳಿಕ ಹಿನ್ನಲೆಯನ್ನು ಒಳಗೊಂಡಿದೆ.
ಕೋಲಾರ ಮತ್ತು ಹಟ್ಟಿ ಪ್ರದೇಶಗಳಲ್ಲಿ ಚಿನ್ನದ ನಿಕ್ಷೇಪಗಳು, ಚಿತ್ರದುರ್ಗದಲ್ಲಿ ಮ್ಯಾಂಗನೀಸ್ ಮತ್ತು ತಾಮ್ರ, ಬಳ್ಳಾರಿಯಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್ ನಿಕ್ಷೇಪಗಳು ಹೇರಳವಾಗಿ ದೊರೆತಿವೆ.

ನಮ್ಮ ನಾಡಿನ ಜೀವನದಿ ಕಾವೇರಿ ನಾಡಿನ ಸಾಕಷ್ಟು ಜನರ ದಾಹ ತಣಿಸಿದ್ದಾಳೆ. ಕೃಷ್ಣೆ, ತುಂಗಾಭದ್ರಾ, ಶರಾವತಿ, ಅಘನಾಶಿನಿ, ಘಟಪ್ರಭ,ಮಲಪ್ರಭಾ, ವಾರಾಹಿ, ಸೌಪರ್ಣಿಕಾ, ಹೇಮಾವತಿ ನದಿಗಳ ಕೊಡುಗೆಯೂ ಅಪಾರ.
ಕರ್ನಾಟಕ ದೇವಭೂಮಿಯೂ ಹೌದು. ಪರಶುರಾಮ ಸೃಷ್ಟಿಯ ಕರಾವಳಿಯಲ್ಲಿ ಸಾವಿರಾರು ಗುಡಿಗೋಪುರಗಳು ಕಾಣಸಿಗುತ್ತವೆ. ಧರ್ಮಸ್ಥಳದ ಮಂಜುನಾಥ, ಉಡುಪಿಯ ಶ್ರೀಕೃಷ್ಣ, ಕೊಲ್ಲೂರು ಮೂಕಾಂಬಿಕೆ, ಕಟೀಲು ದುರ್ಗಾಪರಮೇಶ್ವರಿ, ಗೋಕರ್ಣದ ಮಹಾಬಲೇಶ್ವರ, ಆನೆಗುಡ್ಡೆಯ ಗಣಪತಿ ಶೃಂಗೇರಿ ಶಾರದೆ, ಹೊರನಾಡಿನ ಅನ್ನಪೂರ್ಣೇಶ್ವರಿ, ಇನ್ನುಳಿದಂತೆ ಮೈಸೂರಿನ ಆದಿಶಕ್ತಿ ಚಾಮುಂಡೇಶ್ವರಿ, ಬೆಂಗಳೂರಿನ ಬಸವಣ್ಣ, ಸೋಮೇಶ್ವರ, ಗವಿ ಗಂಗಾಧರೇಶ್ವರ, ಇಟಗಿ ಮಹಾರುದ್ರ ಹೀಗೇ ಸಾವಿರಾರು ಕ್ಷೇತ್ರಗಳಿವೆ.

ಕನ್ನಡದ ಮೊದಲ ದೊರೆ ಮಯೂರ, ಅಮೋಘವರ್ಷ ನೃಪತುಂಗ, ಪುಲಕೇಶಿ, ವಿಷ್ಣುವರ್ಧನ, ಕೃಷ್ಣದೇವರಾಯ, ಮೈಸೂರು ಅರಸು ಮನೆತನ, ಚೆನ್ನಮ್ಮ, ಓಬವ್ವ, ಸಂಗೊಳ್ಳಿ ರಾಯಣ್ಣ, ವೆಂಕಟಪ್ಪ ನಾಯಕ, ಮದಕರಿ ನಾಯಕ ಹೀಗೆ ನೂರಾರು ರಾಜ ಮಹಾರಾಜರು, ಪಂಪ,ರನ್ನ, ಜನ್ನ, ಪೊನ್ನ, ಹರಿಹರ, ರಾಘವಾಂಕ, ಕುಮಾರವ್ಯಾಸ, ಮುದ್ದಣ, ಬಿ.ಎಂ.ಶ್ರೀ, ಕುವೆಂಪು, ಬೇಂದ್ರೆ,ಮಾಸ್ತಿ, ಕಾರಂತ, ಭೈರಪ್ಪನವರಂತಹ ಸಾಹಿತಿಗಳು, ಜಕ್ಕಣ, ಡಂಕಣ, ರಂಜಾಳ ಗೋಪಾಲ ಶೆಣೈ, ಕಾಶೀನಾಥ್ ಮೊದಲಾದ ಶಿಲ್ಪಿಗಳು, ಕಾರ್ಯಪ್ಪ, ಮಾಣೆಕ್ ಶಾ, ಹನುಮಂತಪ್ಪ ಮೊದಲಾದ ಸೇನಾನಿಗಳು, ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಅಶ್ವಥ್, ಪಂಢರಿಬಾಯಿ, ಮೊದಲಾದ ಕಲಾವಿದರು, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ರಾಹುಲ್ ದ್ರಾವಿಡ್, ಶಾಂತಾ ರಂಗಸ್ವಾಮಿ, ಸ್ಮೃತಿ ಮಂದಾನ ಮೊದಲಾದ ಕ್ರಿಕೆಟಿಗರು, ಅಶ್ವಿನಿ ಅಕ್ಕುಂಜಿ, ಆಶಾ ಪೂಜಾರಿ, ಅಶ್ವಿನಿ ನಾಚಪ್ಪ, ಮಾಲತಿ ಹೊಳ್ಳರಂತಹ ಸ್ಪರ್ಧಾಪಟುಗಳು, ಸುಧಾಮೂರ್ತಿ, ನಾರಾಯಣ ಮೂರ್ತಿ, ನಂದನ್ ನಿಲೇಕಣಿ, ಇಂದಿರಾ ನೂಯಿಯಂತಹ ಉದ್ಯೋಗಪತಿಗಳು ನಮ್ಮ ನಾಡಿನ ಕೀರ್ತಿ ಪತಾಕೆಯನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾರಾಡಿಸಿದ್ದಾರೆ. ( ಕೆಲವಷ್ಟೇ ಹೆಸರುಗಳನ್ನು ಪ್ರಸ್ತಾಪಿಸಿದ್ದೇನೆ )
ಹೀಗೆ ಈ ಪುಣ್ಯಭೂಮಿ ಕರ್ನಾಟಕದಲ್ಲಿ ಈ ಮಹಾಮಹಿಮರು ಜನಿಸಿದ ನಾಡಿನಲ್ಲಿ ನಾವಿರುವುದೇ ನಮ್ಮ ಪೂರ್ವ ಜನ್ಮದ ಸುಕೃತ ಎಂದು ಭಾವಿಸುತ್ತೇನೆ.

ಸಿ.ಎನ್. ಮಹೇಶ್