ನಾಡು – ನುಡಿಲಾಸ್ಯದ ಸೌರಭ
ನಮ್ಮ ನಾಡು ನಮ್ಮ ಜಲವಿದೆಂದು
ಸದಾ ಹೆಮ್ಮೆಪಡುವುದೇ ಒಂದು ಪುಣ್ಯ!
ನಮ್ಮ ಹೊಲ ನಮ್ಮ ನೆಲವಿದೆಂದು..
ಪ್ರಮಾಣ ನಾವು ಮಾಡಿದೆವಾದರೆ ಧನ್ಯ!!
ಕಾನನದುದ್ದಗಲಕೂ ನೋಟ ಹರಿಯಲು
ನಿತ್ಯ ಹಸಿರಲರಳಿ ನಗುತಿದೆ ಪ್ರಕೃತಿ!
ನಮ್ಮ ದೇಶ ನಮ್ಮ ಭಾಷೆಯೆನಲು…
ಪ್ರತಿಮನದಲೂ ಮಿಡಿದಿದೆ ಸಂಸ್ಕೃತಿ!!
ದೇಶ ನಮ್ಮದೆನಿಸಲು ಅಸಂಖ್ಯ ದೇಶಭಕ್ತರು
ಭೇದಭಾವರಿರದೆ ಚೆಲ್ಲಿದರು ತಮ್ಮ ರುಧಿರ!
ದ್ವೇಷಾಸೂಯೆಯ ಮೆಟ್ಟಿ ನಿಲ್ಲಲು..
ನಮ್ಮ ನಾಡಿದು ಚೆಲುವಿನ ಮಂದಿರ!!
ನಾಡನು ಅಧೀರಗೊಳಿಸಲು ಶತ್ರುಗಳು
ನೀಡಿಹರಿಲ್ಲಿ ಮನಮನಕೂ ನೋವು!
ನಾಡು-ನುಡಿಯಲಾಸ್ಯವ ಪಸರಿಸಲು…
ಆ ನೋವು ದಮನವಾದಾಗಲೇ ನಲಿವು!!
ನಮ್ಮ ಸವಿಗನ್ನಡವೆಂದೂ ನಿತ್ಯ ಅಮರ
ಕಾಲವದೆನಿತು ಸಾಗಿಯೂ ಇದು ಪವಿತ್ರ!
ನಮ್ಮ ನಾಡು ದೇಶದೊಲುಮೆಯೇ ಅಪಾರ…
ಕನ್ನಡಿಗರೆಲ್ಲರ ಹೃದಯದಿ ನೆಲೆಸಲಿ ಈ ಚಿತ್ರ!!

ಸುಮನಾ ರಮಾನಂದ ✍️
ಮುಂಬೈ