ನುಡಿಯ ಬೇರು ನಾಡಿನ ಉಸಿರು
ಒಂದು ಭಾಷೆಯನ್ನು ಮಾತನಾಡಲು ಕಲಿತರೆ ಸಾಲದು; ಅದನ್ನು ಪ್ರೀತಿಸಬೇಕು. ಪ್ರೀತಿಯಿದ್ದಾಗ ಅದರ ಬಗ್ಗೆ ತಿಳಿಯುವ, ಕಲಿಯುವ, ಬೆಳೆಸುವ ಹಂಬಲ ಸಹಜವಾಗಿಯೇ ಮೊಳಕೆಯೊಡೆಯುತ್ತದೆ. ಕನ್ನಡ ಭಾಷೆಗೂ ಇಂದು ಬೇಕಾಗಿರುವುದು ಇಂತಹ ಪ್ರೀತಿಯೇ ಹೊರತು ಕೇವಲ ಅಭಿಮಾನದ ಘೋಷಣೆಗಳಲ್ಲ. ಪರಭಾಷೆಗಳನ್ನು ಪ್ರೀತಿಸಬಾರದೆಂದಲ್ಲ; ಆದರೆ ನಮ್ಮ ಮಾತೃಭಾಷೆಗೆ ಮೊದಲ ಆದ್ಯತೆ ಇರಬೇಕು. ಏಕೆಂದರೆ ಮಾತೃಭಾಷೆ ಕೇವಲ ಸಂವಹನದ ಸಾಧನವಲ್ಲ, ಅದು ನಮ್ಮ ಅಸ್ಮಿತೆ, ಸಂಸ್ಕೃತಿ, ಸಂಸ್ಕಾರ ಮತ್ತು ಬದುಕಿನ ಅವಿಭಾಜ್ಯ ಅಂಗ.

ತಾನು ಜನ್ಮವೆತ್ತಿದ ನಾಡಿಗೆ ಒಬ್ಬ ಸಾಹಿತಿ, ಕಲಾವಿದ ಅಥವಾ ಸಾಮಾನ್ಯ ನಾಗರಿಕನೂ ತನ್ನದೇ ಆದ ಕೊಡುಗೆಯನ್ನು ನೀಡಬಹುದು. ಅದಕ್ಕಾಗಿ ದೊಡ್ಡ ಹುದ್ದೆಯಲ್ಲಿರಬೇಕಿಲ್ಲ, ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರಬೇಕಿಲ್ಲ. ನಮ್ಮ ಮನೆಯೊಳಗೆ, ಸುತ್ತಮುತ್ತಲಿನ ಪರಿಸರದಲ್ಲಿ ಕನ್ನಡದಲ್ಲಿ ಮಾತನಾಡುವುದರಿಂದಲೇ ಕನ್ನಡ ಸೇವೆ ಆರಂಭವಾಗುತ್ತದೆ. ಮಕ್ಕಳಿಗೆ ಕನ್ನಡ ಕಲಿಸುವುದು, ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಇವೆಲ್ಲವೂ ಕನ್ನಡಮ್ಮನಿಗೆ ಸಲ್ಲಿಸುವ ಅಮೂಲ್ಯ ಸೇವೆಗಳೇ.
ಸುಮಾರು ಎರಡು ಸಾವಿರ ವರ್ಷಗಳಿಗೂ ಮಿಗಿಲಾದ ಇತಿಹಾಸ ಮತ್ತು ಸಮೃದ್ಧ ಸಾಹಿತ್ಯ ಪರಂಪರೆಯನ್ನು ಹೊಂದಿರುವ ಕನ್ನಡ, ಭಾರತದ ಅತ್ಯಂತ ಪ್ರಾಚೀನ ಹಾಗೂ ಶ್ರೇಷ್ಠ ಭಾಷೆಗಳಲ್ಲಿ ಒಂದು. ಜಗತ್ತಿನಾದ್ಯಂತ ಸುಮಾರು 5.6 ಕೋಟಿ ಜನರು ಮಾತನಾಡುವ ಕನ್ನಡ ಭಾಷೆ, ಹೆಚ್ಚು ಮಾತನಾಡುವ ಭಾಷೆಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಮಹಾಭಾರತದಲ್ಲಿ ಕರ್ನಾಟಕದ ಉಲ್ಲೇಖವಿದೆ. ತಮಿಳಿನ ಪ್ರಾಚೀನ ಕೃತಿ “ಶಿಲಪ್ಪದಿಗಾರಂ” ನಲ್ಲಿಯೂ ಕರುನಾಡಿನ ಪ್ರಸ್ತಾಪ ಕಂಡುಬರುತ್ತದೆ. ಸಾಗರದಾಚೆಯ ಇಂಡೋನೇಷಿಯಾದ ಜಾವಾ ದ್ವೀಪದ ಹನ್ನೆರಡನೆಯ ಶತಮಾನದ ಶಾಸನದಲ್ಲಿಯೂ ಕರ್ನಾಟಕದ ಉಲ್ಲೇಖವಿರುವುದು ನಮ್ಮ ನಾಡಿನ ಪ್ರಾಚೀನತೆಯನ್ನು ಸಾರುತ್ತದೆ.

ಅಮೋಘವರ್ಷ ನೃಪತುಂಗನ ಆಸ್ಥಾನಕವಿ ಶ್ರೀವಿಜಯನ “ಕವಿರಾಜಮಾರ್ಗ” ದಲ್ಲಿ ಕಾವೇರಿಯಿಂದ ಗೋದಾವರಿಯವರೆಗೆ ವಿಸ್ತರಿಸಿದ್ದ ಕನ್ನಡ ನಾಡಿನ ಉಲ್ಲೇಖವಿದೆ. ಇದು ಕನ್ನಡ ಭಾಷೆಯ ಭೌಗೋಳಿಕ ವ್ಯಾಪ್ತಿಯನ್ನಷ್ಟೇ ಅಲ್ಲ, ಅಂದಿನ ಕನ್ನಡ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನೂ ಪರಿಚಯಿಸುತ್ತದೆ.
ಆದರೆ ಇತಿಹಾಸದ ಉದ್ದಕ್ಕೂ ಕನ್ನಡದ ನೆಲ ಒಂದೇ ಆಡಳಿತದ ಅಡಿಯಲ್ಲಿ ಇರಲಿಲ್ಲ. ಮುಂಬೈ, ಹೈದರಾಬಾದ್, ಮದರಾಸು ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರನ್ನು ಒಂದೇ ಆಡಳಿತದ ಅಡಿಯಲ್ಲಿ ತರಬೇಕೆಂಬ ಆಶಯದಿಂದ ಕನ್ನಡ ಏಕೀಕರಣದ ಚಳವಳಿ ರೂಪುಗೊಂಡಿತು. 1905 ರಲ್ಲಿ ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರು ಈ ಚಳವಳಿಗೆ ಹೊಸ ದಿಕ್ಕು ನೀಡಿದರು. ಅನೇಕ ಸಾಹಿತಿಗಳು, ಚಿಂತಕರು ಮತ್ತು ಹೋರಾಟಗಾರರು ತಮ್ಮ ಬರಹ, ಭಾಷಣ ಹಾಗೂ ಹೋರಾಟಗಳ ಮೂಲಕ ಕನ್ನಡಿಗರಲ್ಲಿ ನಾಡು-ನುಡಿಯ ಪ್ರಜ್ಞೆಯನ್ನು ಜಾಗೃತಗೊಳಿಸಿದರು.

ಕನ್ನಡದ ಏಕೀಕರಣದ ಹೋರಾಟಕ್ಕೆ ಕೇವಲ ರಾಜಕೀಯ ಚಳವಳಿಯ ಸ್ವರೂಪವಿರಲಿಲ್ಲ; ಅದಕ್ಕೊಂದು ಭಾವನಾತ್ಮಕ ಮತ್ತು ಸಾಹಿತ್ಯಿಕ ನೆಲೆಯೂ ಇತ್ತು. ‘ಹಚ್ಚೇವು ಕನ್ನಡದ ದೀಪ’ ಎಂಬ ಸಾಲುಗಳ ಮೂಲಕ ಕನ್ನಡಿಗರ ಮನೆಮನಗಳಲ್ಲಿ ನಾಡುನುಡಿಯ ಜ್ಯೋತಿಯನ್ನು ಬೆಳಗಿಸಿದ ಡಾ. ಡಿ.ಎಸ್. ಕರ್ಕಿ, ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಎಂದು ನಾಡಿನ ಉದಯವನ್ನು ಕನಸಿದ ಹುಯಿಲಗೋಳ ನಾರಾಯಣರಾಯರು, ‘ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು’ ಎಂದು ಹೊಸ ನಾಡಿನ ಕನಸು ಬಿತ್ತಿದ ಗೋಪಾಲಕೃಷ್ಣ ಅಡಿಗರು, ‘ತಾಯೆ ಬಾರ ಮೊಗವ ತೋರ’ ಎಂದು ಕನ್ನಡ ತಾಯಿಯನ್ನು ಆರಾಧಿಸಿದ ಗೋವಿಂದ ಪೈ, ‘ಹೊತ್ತಿತೋ ಹೊತ್ತಿತು ಕನ್ನಡದ ದೀಪ’ ಎಂದು ನಾಡಿನ ಜಾಗೃತಿಗೆ ಧ್ವನಿಯಾದ ಸಿದ್ದಯ್ಯ ಪುರಾಣಿಕರು ಕನ್ನಡದ ಇತಿಹಾಸದಲ್ಲಿ ಅಚ್ಚಳಿಯದ ಹೆಸರುಗಳು.
ಕನ್ನಡದ ಡಿಂಡಿಮವನ್ನು ವಿಶ್ವದಾದ್ಯಂತ ಮೊಳಗಿಸಿದ ರಾಷ್ಟ್ರಕವಿ ಕುವೆಂಪು, ‘ಬೆಂಕಿ ಬಿದ್ದಿದೆ ಮನೆಗೆ, ಓ ಬೇಗ ಬನ್ನಿ’ ಎಂದು ಗಡಿನಾಡ ಕನ್ನಡಿಗರ ಅಸ್ತಿತ್ವದ ಪ್ರಶ್ನೆಯನ್ನು ಎತ್ತಿದ ಕಯ್ಯಾರ ಕಿಞ್ಞಣ್ಣ ರೈ, ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿಯೇ ದೊರೆಯಬೇಕೆಂದು ಪ್ರತಿಪಾದಿಸಿದ ವಿ.ಕೃ. ಗೋಕಾಕ್ ಅವರ ಸೇವೆಯನ್ನು ಕನ್ನಡಿಗರು ಎಂದಿಗೂ ಮರೆಯಲಾಗದು.

ಕನ್ನಡ ಸಾಹಿತ್ಯದ ಇತಿಹಾಸವೆಂದರೆ ಅದು ಕೇವಲ ಕವಿಗಳ ಮತ್ತು ಕೃತಿಗಳ ಇತಿಹಾಸವಲ್ಲ; ಅದು ಹಲವು ತಲೆಮಾರುಗಳ ಸೃಜನಶೀಲತೆ, ಚಿಂತನೆ ಮತ್ತು ಜೀವನಾನುಭವಗಳ ಮಹಾಪಯಣ. ಕನ್ನಡವೇ ಮಾತೃಭಾಷೆಯಾಗಿರದಿದ್ದರೂ ಕನ್ನಡದಲ್ಲಿ ಸಾಹಿತ್ಯ ರಚಿಸಿ ಜನಮಾನಸದಲ್ಲಿ ಅಜರಾಮರರಾದ ದ.ರಾ. ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ನಾ. ಕಸ್ತೂರಿ ಹಾಗೂ ‘ಮಂಕುತಿಮ್ಮನ ಕಗ್ಗ’ದ ಮೂಲಕ ಬದುಕಿನ ತತ್ತ್ವವನ್ನು ಸರಳ ಪದಗಳಲ್ಲಿ ತೆರೆದಿಟ್ಟ ಡಿ.ವಿ. ಗುಂಡಪ್ಪನವರು ನಮ್ಮ ಪ್ರಾತಃಸ್ಮರಣೀಯರು.
ರನ್ನ, ಪೊನ್ನ, ಜನ್ನ, ರಾಘವಾಂಕ, ಕುಮಾರವ್ಯಾಸ, ಮುದ್ದಣ ಮೊದಲಾದ ಕವಿಗಳು ಹಳಗನ್ನಡ ಮತ್ತು ನಡುಗನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಬಸವಣ್ಣನವರು ಮತ್ತು ಇತರ ಶರಣರ ವಚನಗಳು, ಸರ್ವಜ್ಞನ ತ್ರಿಪದಿಗಳು ಹಾಗೂ ದಾಸರ ಕೀರ್ತನೆಗಳು ಕನ್ನಡ ಸಾಹಿತ್ಯವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿವೆ. ಇವು ಕೇವಲ ಸಾಹಿತ್ಯ ಕೃತಿಗಳಲ್ಲ; ಮಾನವೀಯತೆ, ಸಮಾನತೆ, ಭಕ್ತಿ, ವೈಚಾರಿಕತೆ ಮತ್ತು ಜೀವನಮೌಲ್ಯಗಳನ್ನು ಸಾರುವ ಜ್ಞಾನಭಂಡಾರಗಳು.
ರತ್ನನ ಪದಗಳ ಮೂಲಕ ಜನಸಾಮಾನ್ಯರ ಮನಸ್ಸನ್ನು ಗೆದ್ದ ಜಿ.ಪಿ. ರಾಜರತ್ನಂ, ಭಾರತೀಯ ಕಾವ್ಯಮೀಮಾಂಸೆಗೆ ಅಪಾರ ಕೊಡುಗೆ ನೀಡಿದ ಆಚಾರ್ಯ ತೀ.ನಂ. ಶ್ರೀಕಂಠಯ್ಯ, ‘ಕರುಣಾಳು ಬಾ ಬೆಳಕೆ’ ಎಂದು ಜ್ಞಾನದ ಬೆಳಕನ್ನು ಹಂಬಲಿಸಿದ ಬಿ.ಎಂ. ಶ್ರೀಕಂಠಯ್ಯ, ಶಿವರಾಮ ಕಾರಂತ, ಎಸ್.ಎಲ್. ಭೈರಪ್ಪ, ಕನ್ನಡ ಕಾದಂಬರಿ ಲೋಕದ ಪ್ರಮುಖ ಹೆಸರಾಗಿರುವ ಅ.ನ. ಕೃಷ್ಣರಾಯರು, ಟಿ.ಎಸ್. ವೆಂಕಣ್ಣಯ್ಯ, ಎ.ಆರ್. ಕೃಷ್ಣಶಾಸ್ತ್ರಿಗಳು, ತ.ಸು. ಶಾಮರಾಯರು, ವಿ. ಸೀತಾರಾಮಯ್ಯ, ಎಂ.ಆರ್. ಶ್ರೀ, ಸಿದ್ದವನಹಳ್ಳಿ ಕೃಷ್ಣಶರ್ಮ, ಗಳಗನಾಥರು ಹೀಗೆ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿದ ಮಹನೀಯರ ಪಟ್ಟಿ ಬಹುದೊಡ್ಡದು.

ಕನ್ನಡ ಭಾಷೆಯ ಬೆಳವಣಿಗೆಗೆ ನಿಘಂಟು ರಚನೆ, ಸಂಶೋಧನೆ, ವ್ಯಾಕರಣ, ವಿಮರ್ಶೆ ಮತ್ತು ಸಾಹಿತ್ಯಿಕ ಚಟುವಟಿಕೆಗಳ ಮೂಲಕವೂ ಅನೇಕರು ದುಡಿದಿದ್ದಾರೆ. ಕನ್ನಡ ಸೇವೆಗೆ ತೀನಂಶ್ರೀ ಅವರಿಗೆ ಮಾತುಕೊಟ್ಟು ಆ ಕಾರ್ಯವನ್ನು ಜೀವನದ ಧ್ಯೇಯವನ್ನಾಗಿಸಿಕೊಂಡ ಜಿ. ವೆಂಕಟಸುಬ್ಬಯ್ಯನವರ ನಿಘಂಟು ಸೇವೆ ಅನನ್ಯವಾದುದು. ಮಲ್ಲಿಗೆಯ ಕವಿ ಕೆ.ಎಸ್. ನರಸಿಂಹಸ್ವಾಮಿ, ನಿತ್ಯೋತ್ಸವದ ಕವಿ ನಿಸಾರ್ ಅಹಮದ್, ಅ.ರಾ. ಮಿತ್ರ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಎ.ಎನ್. ಮೂರ್ತಿರಾಯರು ಹಾಗೂ ಶತಾವಧಾನಿ ಡಾ. ಆರ್. ಗಣೇಶ್ ಅವರ ಕೊಡುಗೆಗಳು ಕನ್ನಡದ ಸಾಹಿತ್ಯಿಕ ಸಂಪತ್ತನ್ನು ಮತ್ತಷ್ಟು ಶ್ರೀಮಂತಗೊಳಿಸಿವೆ.
ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ. ಸಂಚಿಯ ಹೊನ್ನಮ್ಮ, ವೀರವನಿತೆ ಬೆಳವಡಿ ಮಲ್ಲಮ್ಮ, ಅಕ್ಕಮಹಾದೇವಿ, ನಂಜನಗೂಡು ತಿರುಮಲಾಂಬ, ಎಂ.ಕೆ. ಇಂದಿರಾ, ತ್ರಿವೇಣಿ, ಅನುಪಮಾ ನಿರಂಜನ, ವೈದೇಹಿ, ಕಮಲಾ ಹಂಪನಾ ಮೊದಲಾದವರು ತಮ್ಮ ಬರಹ ಮತ್ತು ಬದುಕಿನ ಮೂಲಕ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಆಯಾಮವನ್ನು ನೀಡಿದ್ದಾರೆ. ಮಹಿಳಾ ಸಂವೇದನೆ, ಸಾಮಾಜಿಕ ಕಳಕಳಿ, ಬದುಕಿನ ಸಂಕೀರ್ಣತೆ ಮತ್ತು ಮಾನವೀಯ ಸಂಬಂಧಗಳನ್ನು ತಮ್ಮ ಕೃತಿಗಳಲ್ಲಿ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದ್ದಾರೆ.
ಕನ್ನಡದ ಬೆಳವಣಿಗೆ ಸಾಹಿತ್ಯದ ಪುಸ್ತಕಗಳಿಗಷ್ಟೇ ಸೀಮಿತವಾಗಿಲ್ಲ. ರಂಗಭೂಮಿ, ಚಲನಚಿತ್ರ ಮತ್ತು ಗೀತಸಾಹಿತ್ಯಗಳೂ ಕನ್ನಡದ ಜನಪ್ರಿಯತೆಯನ್ನು ಹೆಚ್ಚಿಸಿವೆ. ಚಲನಚಿತ್ರ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಕು.ರಾ. ಸೀತಾರಾಮಶಾಸ್ತ್ರಿ, ಹುಣಸೂರು ಕೃಷ್ಣಮೂರ್ತಿ, ಎಸ್.ಕೆ. ಕರೀಂಖಾನ್, ಆರ್.ಎನ್. ಜಯಗೋಪಾಲ್, ಚಿ. ಉದಯಶಂಕರ್, ದೊಡ್ಡರಂಗೇಗೌಡ, ಹಂಸಲೇಖ, ಜಯಂತ ಕಾಯ್ಕಿಣಿ, ಕಲ್ಯಾಣ್ ಮೊದಲಾದವರ ರಚನೆಗಳು ಕನ್ನಡಿಗರ ಬದುಕಿನ ಭಾವನೆಗಳೊಂದಿಗೆ ಬೆರೆತಿವೆ. ಕನ್ನಡದ ಹಾಡುಗಳು ತಲೆಮಾರುಗಳನ್ನು ದಾಟಿ ಇಂದಿಗೂ ನಮ್ಮ ಮನಸ್ಸಿನಲ್ಲಿ ಅನುರಣಿಸುತ್ತಿವೆ.

ಇಷ್ಟೆಲ್ಲ ಶ್ರೀಮಂತ ಇತಿಹಾಸ, ಸಾಹಿತ್ಯ ಪರಂಪರೆ ಮತ್ತು ಮಹನೀಯರ ಕೊಡುಗೆಗಳನ್ನು ಹೊಂದಿರುವ ಕನ್ನಡಕ್ಕೆ ಇಂದು ಎದುರಾಗಿರುವ ಸವಾಲು ಬೇರೆಯದೇ ಸ್ವರೂಪದ್ದಾಗಿದೆ. ಜಾಗತೀಕರಣ, ತಂತ್ರಜ್ಞಾನ ಮತ್ತು ಉದ್ಯೋಗದ ಅನಿವಾರ್ಯತೆಗಳಿಂದಾಗಿ ಇಂಗ್ಲಿಷ್ ಸೇರಿದಂತೆ ಅನೇಕ ಭಾಷೆಗಳ ಕಲಿಕೆ ಅನಿವಾರ್ಯವಾಗಿದೆ. ಅದರಲ್ಲಿ ತಪ್ಪೇನಿಲ್ಲ. ಆದರೆ ಇತರ ಭಾಷೆಗಳನ್ನು ಕಲಿಯುವ ಭರದಲ್ಲಿ ನಮ್ಮ ಭಾಷೆಯನ್ನೇ ಮರೆಯುವ ಪರಿಸ್ಥಿತಿ ನಿರ್ಮಾಣವಾಗಬಾರದು. ಇಂಗ್ಲಿಷ್ ಮಾತನಾಡುವುದು ಜ್ಞಾನಕ್ಕೆ ದಾರಿಯಾಗಬಹುದು; ಆದರೆ ಕನ್ನಡವನ್ನು ಮಾತನಾಡುವುದು ನಮ್ಮ ಬೇರುಗಳೊಂದಿಗೆ ನಮ್ಮನ್ನು ಬೆಸೆಯುತ್ತದೆ.
ಇಂದು ಕನ್ನಡದ ಉಳಿವಿಗಾಗಿ ಕೇವಲ ಘೋಷಣೆಗಳನ್ನು ಕೂಗುವುದಕ್ಕಿಂತ ನಮ್ಮ ನಿತ್ಯಜೀವನದಲ್ಲಿ ಕನ್ನಡವನ್ನು ಅಳವಡಿಸಿಕೊಳ್ಳುವುದು ಮುಖ್ಯ. ಮನೆಯ ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡೋಣ. ಕನ್ನಡ ಪುಸ್ತಕಗಳನ್ನು ಓದೋಣ. ಕನ್ನಡದ ಲೇಖಕರನ್ನು ಪ್ರೋತ್ಸಾಹಿಸೋಣ. ನಮ್ಮ ವ್ಯವಹಾರಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ, ತಂತ್ರಜ್ಞಾನದ ಬಳಕೆಯಲ್ಲಿಯೂ ಕನ್ನಡಕ್ಕೆ ಅವಕಾಶ ಕಲ್ಪಿಸೋಣ. ಕನ್ನಡವನ್ನು ಬಲ್ಲವರು ಕನ್ನಡ ಕಲಿಯಲು ಆಸಕ್ತಿ ಹೊಂದಿರುವವರಿಗೆ ನೆರವಾಗೋಣ. ಕನ್ನಡವನ್ನು ಪ್ರೀತಿಸುವ ಮನಸ್ಸುಗಳನ್ನು ಬೆಳೆಸೋಣ.
ಒಂದು ಭಾಷೆಯ ಅಳಿವು ಅದರ ಅಕ್ಷರಗಳು ನಾಶವಾಗುವುದರಿಂದ ಆರಂಭವಾಗುವುದಿಲ್ಲ; ಆ ಭಾಷೆಯಲ್ಲಿ ಮಾತನಾಡುವ ಮನಸ್ಸುಗಳು ಕಡಿಮೆಯಾಗುವುದರಿಂದ ಆರಂಭವಾಗುತ್ತದೆ. ಹಾಗೆಯೇ ಒಂದು ಭಾಷೆಯ ಉಳಿವು ಕೇವಲ ಶಾಸನಗಳಿಂದಲೋ, ಕಾನೂನುಗಳಿಂದಲೋ ಸಾಧ್ಯವಿಲ್ಲ; ಅದು ಜನರ ಹೃದಯದಲ್ಲಿ ನೆಲೆಸಿದಾಗ ಮಾತ್ರ ಸಾಧ್ಯ.
ಕನ್ನಡ ನಮ್ಮ ಪೂರ್ವಜರು ನಮಗೆ ಬಿಟ್ಟುಹೋದ ಕೇವಲ ಭಾಷೆಯಲ್ಲ; ಮುಂದಿನ ಪೀಳಿಗೆಗೆ ನಾವು ಜತನದಿಂದ ತಲುಪಿಸಬೇಕಾದ ಅಮೂಲ್ಯ ಪರಂಪರೆ. ಕನ್ನಡದ ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆ ಸರ್ಕಾರದ ಅಥವಾ ಕನ್ನಡಪರ ಸಂಘಟನೆಗಳ ಮಾತ್ರವಲ್ಲ, ಪ್ರತಿಯೊಬ್ಬ ಕನ್ನಡಿಗನದ್ದೂ ಹೌದು.
ಈ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡದ ಬಗೆಗಿನ ನಮ್ಮ ಪ್ರೀತಿ ಒಂದು ದಿನದ ಸಂಭ್ರಮಕ್ಕೆ ಸೀಮಿತವಾಗದಿರಲಿ. ಅದು ನಮ್ಮ ಮಾತಿನಲ್ಲಿ, ನಡೆಯಲ್ಲಿ, ವ್ಯವಹಾರದಲ್ಲಿ ಮತ್ತು ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಪ್ರತಿಫಲಿಸಲಿ.
ಕನ್ನಡವನ್ನು ಉಳಿಸುವುದೆಂದರೆ ಕೇವಲ ಒಂದು ಭಾಷೆಯನ್ನು ಉಳಿಸುವುದಲ್ಲ; ನಮ್ಮ ಇತಿಹಾಸ, ಸಂಸ್ಕೃತಿ, ಅಸ್ಮಿತೆ ಮತ್ತು ಮುಂದಿನ ಪೀಳಿಗೆಯ ಬೇರುಗಳನ್ನು ಉಳಿಸುವುದು.
ಬನ್ನಿ, ಕನ್ನಡವನ್ನು ಕೇವಲ ಅಭಿಮಾನದ ಭಾಷೆಯಾಗಿಸದೆ, ಬದುಕಿನ ಭಾಷೆಯನ್ನಾಗಿಸೋಣ.
ಉಸಿರಾಗಲಿ ಕನ್ನಡ, ಹಸಿರಾಗಲಿ ಕರ್ನಾಟಕ!

— ಸುನೀಲ್ ಹಳೆಯೂರು